“ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ 24 ವರ್ಷದ ಹೆಣ್ಣು ಮಗಳನ್ನು ವಿದೇಶೀ ಪುಂಡರೊಂದಿಗೆ ಸೇರಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದು ನಿಮಗೆ ಗೊತ್ತಾ? ಅವರದ್ದೇ ಪಕ್ಷದ ಕಾರ್ಯಕರ್ತರ ಮಗಳು ಸುಕನ್ಯಾ ಎಂಬ ಮುಗ್ಧ ಹುಡುಗಿಯನ್ನು 2006ರಲ್ಲಿ ತನ್ನ ಸ್ನೇಹಿತರೊಂದಿಗೆ ಅತ್ಯಾಚಾರ ಮಾಡಿ ಅವರ ಕುಟುಂಬವನ್ನೇ ಸರ್ವನಾಶ ಮಾಡಿದ ರಾಹುಲ್ ಗಾಂಧಿಯ ರೋಚಕ ಕಥೆ” ಎಂಬ ಧೀರ್ಘ ಬರಹದೊಂದಿಗೆ ಪೋಸ್ಟ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ರಾಹುಲ್ ಗಾಂಧಿ ಅತ್ಯಾಚಾರ ಆರೋಪಿ ಎಂದು ಪ್ರತಿಪಾದಿಸಲಾಗಿದೆ.

ರಾಹುಲ್ ಗಾಂಧಿ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿ ‘ಹಿಂದೂ ಸಾಮ್ರಾಟ ಧರ್ಮಸೇನೆ’ ಎಂಬ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.
ಪ್ರತಿಪಾದನೆ: ಸುಕನ್ಯಾ ದೇವಿ ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ಭಾಗಿ.
ಸತ್ಯ: ರಾಹುಲ್ ಗಾಂಧಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ಸುಳ್ಳು. ರಾಹುಲ್ ಗಾಂಧಿ ವಿರುದ್ಧದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಹುಲ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮಾಜಿ ಶಾಸಕನಿಗೆ ಸುಪ್ರೀಂ ಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಬಗ್ಗೆ ಹುಡುಕಿದಾಗಿ, ಇದೇ ರೀತಿಯ ಪೋಸ್ಟ್‌ಅನ್ನು 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿಯೂ ಹಂಚಿಕೊಳ್ಳಲಾಗಿತ್ತು ಎಂಬುದು ಕಂಡುಬಂದಿದೆ. ಬಿಜೆಪಿ ಮತ್ತು ಬಲಪಂಥೀಯ ಕಾರ್ಯಕರ್ತರು ಈ ಪೋಸ್ಟನ್ನು ಹಂಚಿಕೊಳ್ಳುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಹುಡುಕಲಾಗಿದ್ದು, ಸತ್ಯ ಏನೆಂಬುದು ಗೊತ್ತಾಗಿದೆ. 2012ರಲ್ಲಿ ರಾಹುಲ್ ಗಾಂಧಿ ವಿರುದ್ಧದ ಅತ್ಯಾಚಾರ ಆರೋಪವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

“2006ರ ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಘಟನೆ ನಡೆದಿದೆ ಎಂದು ಹೇಳಲಾಗಿರುವ ಆ ದಿನ ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಲು ‘ಒಂದು ಸಣ್ಣ ಪುರಾವೆಯೂ ಕಂಡುಬಂದಿಲ್ಲ’ವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಸುಳ್ಳು ಪ್ರಕರಣ ದಾಖಲಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕಿಶೋರ್ ಸಮ್ರಿಟೆ ಅವರಿಗೆ ಸುಪ್ರೀಂ ಕೋರ್ಟ್ ಐದು ಲಕ್ಷ ದಂಡವನ್ನೂ ಕೂಡ ವಿಧಿಸಿತ್ತು” ಎಂದು 2012ರ ಅಕ್ಟೋಬರ್‌ನಲ್ಲಿ ‘ಇಂಡಿಯಾ ಟುಡೇ‘ ವರದಿ ಮಾಡಿದೆ.
ಇನ್ನೂ ಆ ಅತ್ಯಾಚಾರ ಪ್ರಕರಣದಲ್ಲಿ ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ರಾಹುಲ್ ಗಾಂಧಿ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ತನ್ನ ಲೇಖನದಲ್ಲಿ ತಿಳಿಸಿತ್ತು. ಆದ್ದರಿಂದ ರಾಹುಲ್ ಗಾಂಧಿಯವರು ಸುಕನ್ಯ ದೇವಿಯವರ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದರು ಎಂಬುದು ಸುಳ್ಳು.




