ಭಾರತದ ಒಕ್ಕೂಟ ಪ್ರಜಾಪ್ರಭುತ್ವದ ಮೂಲಾಧಾರಗಳೇ ಒತ್ತಡಕ್ಕೆ ಸಿಲುಕಿವೆ. ‘ಭಾರತ’ ಎಂಬ ಪರಿಕಲ್ಪನೆಯೇ ಇಂದು ಪರೀಕ್ಷೆಗೆ ಒಳಗಾಗುತ್ತಿದೆ. ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣವನ್ನು ಹೇರಲಾಗುತ್ತಿದೆ. ಆದರೆ, ರಾಜ್ಯಗಳು ದೆಹಲಿಯ ಮುನ್ಸಿಪಾಲಿಟಿಗಳಲ್ಲ. ಕೃಷಿ, ಆರೋಗ್ಯ, ಶಿಕ್ಷಣ, ನೀರು ಹಾಗೂ ಸಂಸ್ಕೃತಿ ರಾಜ್ಯದ ವಿಷಯಗಳು. ಆದರೂ, ಇಂದು ರಾಜ್ಯಗಳ ಜೊತೆಗಿನ ಸಮಾಲೋಚನೆಯೇ ಇಲ್ಲದೆ ನಿರ್ಧಾರಗಳನ್ನು ಹೇರಲಾಗುತ್ತಿದೆ. ಒಮ್ಮತವಿಲ್ಲದ ಶಿಕ್ಷಣ ನೀತಿ (NEP), ರಾಜ್ಯಗಳ ಒಪ್ಪಿಗೆಯಿಲ್ಲದ ಕೃಷಿ ಕಾಯ್ದೆಗಳು, ಪರಿಹಾರದ ಖಚಿತತೆಯಿಲ್ಲದ ಜಿಎಸ್‍ಟಿ – ಇವು ಸಾಂವಿಧಾನಿಕ ನೈತಿಕತೆಯನ್ನು ನಾಶ ಮಾಡುತ್ತಿವೆ. ಚುನಾಯಿತ ಸರ್ಕಾರಗಳ ಸಲಹೆಯಂತೆ ನಡೆಯಬೇಕಾದ ರಾಜ್ಯಪಾಲರನ್ನು ರಾಜ್ಯಗಳ ಆಡಳಿತಕ್ಕೆ ಅಡ್ಡಿಪಡಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ಸಮಾಜವಾದಿ ಸಮಾಗಮ ಸಂಸ್ಥೆ ಆಯೋಜಿಸಿದ್ದ, ‘ದಕ್ಷಿಣ ಭಾರತದ ಸಮಾಜವಾದಿಗಳ ಸಮಾಗಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಒಕ್ಕೂಟ ವ್ಯವಸ್ಥೆಯು ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು. ರಾಜ್ಯಗಳ ಹಕ್ಕು, ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ನ್ಯಾಯದ ರಕ್ಷಣೆಗಾಗಿ ಎಲ್ಲರೂ ಒಗ್ಗೂಟಬೇಕಿದೆ. ಹೋರಾಟ ನಡೆಸಬೇಕಿದೆ” ಎಂದರು.
“ಪ್ರಸ್ತುತ ಸಂದರ್ಭದಲ್ಲಿ ಅಧಿಕಾರದಷ್ಟೇ ವಿಚಾರಗಳೂ, ಆಡಳಿತದಷ್ಟೇ ಸಿದ್ಧಾಂತವೂ ಮುಖ್ಯವಾಗಿದೆ. ಭಾರತದಲ್ಲಿ ಸಮಾಜವಾದವು ಎಂದಿಗೂ ಆಮದು ಮಾಡಿಕೊಂಡ ಸಿದ್ಧಾಂತವಲ್ಲ. ಇದು ನಮ್ಮ ಸ್ವಾತಂತ್ರ್ಯ ಹೋರಾಟದಿಂದ ಉದ್ಭವಿಸಿದ್ದು. ಮಹಾತ್ಮ ಗಾಂಧಿಯವರ ನೈತಿಕ ಅರ್ಥಶಾಸ್ತ್ರ, ನೆಹರೂ ಅವರ ಸಾಮಾಜಿಕ ಪ್ರಜಾಪ್ರಭುತ್ವ, ಲೋಹಿಯಾರವರ ಒಕ್ಕೂಟ ದೃಷ್ಟಿಕೋನ ಹಾಗೂ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಪ್ರಜಾಪ್ರಭುತ್ವದ ಹಂಬಲದಿಂದ ಸಮಾಜವಾದ ರೂಪುಗೊಂಡಿದೆ” ಎಂದು ತಿಳಿಸಿದರು.
“ಸಮಾಜವಾದಿ ಸಂಪ್ರದಾಯವು ಯಾವಾಗಲೂ ರಾಜ್ಯಗಳು, ಹಿಂದುಳಿದ ಪ್ರದೇಶಗಳು, ಭಾಷಾ ಅಲ್ಪಸಂಖ್ಯಾತರು, ಕಾರ್ಮಿಕರು, ರೈತರು ಹಾಗೂ ಮಹಿಳೆಯರ ಪರವಾಗಿ ನಿಂತಿದೆ. ಅಧಿಕಾರವು ಅತಿಯಾಗಿ ಕೇಂದ್ರೀಕೃತವಾದಾಗ ಈ ಸಮುದಾಯಗಳು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತವೆ. ಸಮಾಜವಾದಿ ಚಿಂತನೆಗಳನ್ನು ಮುಂದಕ್ಕೆ ಕೊಂಡೊಯ್ಯಲು ‘ಸಹಕಾರಿ ಒಕ್ಕೂಟ ವ್ಯವಸ್ಥೆ’ ಒಂದು ಪ್ರಮುಖ ಸಾಧನವಾಗಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯು ಒಂದು ಆಯ್ಕೆಯಲ್ಲ, ಅದು ನಮ್ಮ ಸಂವಿಧಾನದ ಆತ್ಮ. ಭಾರತದ ಏಕತೆಯು ಏಕರೂಪತೆಯಲ್ಲಿಲ್ಲ. ಬದಲಾಗಿ ಅದರ ವೈವಿಧ್ಯಮಯ ಪ್ರದೇಶಗಳು, ಭಾಷೆಗಳು ಹಾಗೂ ಸಂಸ್ಕೃತಿಗಳನ್ನು ಗೌರವಿಸುವುದರಲ್ಲಿದೆ” ಎಂದು ವಿವರಿಸಿದರು.
“ಪ್ರಸ್ತುತ ಸಂದರ್ಭದಲ್ಲಿ ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯಿಂದ ‘ಬಲವಂತದ ಕೇಂದ್ರೀಕರಣ’ದತ್ತ (Coercive Centralism) ಅಪಾಯಕಾರಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ದೆಹಲಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಅವುಗಳನ್ನು ರಾಜ್ಯಗಳ ಮೇಲೆ ಹೇರಲಾಗುತ್ತಿದೆ. ಸ್ಥಳೀಯ ವಾಸ್ತವಗಳನ್ನು ಹತ್ತಿಕ್ಕಲಾಗುತ್ತಿದೆ. ಇದು ಕೇವಲ ನೀತಿಯ ವಿಷಯವಲ್ಲ; ಇದು ಹಣಕಾಸಿನ ನಿಯಂತ್ರಣ, ರಾಜಕೀಯ ಒತ್ತಡ ಹಾಗೂ ಸಾಂವಿಧಾನಿಕ ಕುತಂತ್ರಗಳ ಮೂಲಕ ಭಾರತೀಯ ಒಕ್ಕೂಟದ ರಚನೆಗೆ ಒಡ್ಡುತ್ತಿರುವ ಬೆದರಿಕೆಯಾಗಿದೆ” ಎಂದರು.

“ಭಾರತ ಎಂದರೆ ಒಂದು ಕೇಂದ್ರವು ಹಲವು ರಾಜ್ಯಗಳನ್ನು ಆಳುವುದು ಎಂದಲ್ಲ. ಬದಲಾಗಿ ಅನೇಕ ರಾಜ್ಯಗಳು ಸೇರಿ ಒಂದು ಒಕ್ಕೂಟವನ್ನು ಬಲಪಡಿಸುವುದು ಎಂದರ್ಥ. ‘ಭಾರತದ ಬಲವು ಏಕತೆ ಮತ್ತು ಸ್ವಾಯತ್ತತೆಯ ನಡುವಿನ ಸಮತೋಲನದಲ್ಲಿದೆ’ ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ನೆನಪಿಸಿದ್ದರು. ಆದರೆ ಇಂದು ಆ ಸಮತೋಲನವನ್ನು ಉದ್ದೇಶಪೂರ್ವಕವಾಗಿ ಅಸ್ಥಿರಗೊಳಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಐತಿಹಾಸಿಕವಾಗಿ, ಸಮಾಜವಾದವು ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವದ ಪ್ರತಿಕ್ರಿಯೆಯಾಗಿ ಹೊರಹೊಮ್ಮಿದೆ. ಇದು ಭಾರತದ ಪ್ರಜಾಪ್ರಭುತ್ವವು ಸಮಾಜವಾದದಿಂದ ಸರ್ವಾಧಿಕಾರಿ ಕೇಂದ್ರೀಕರಣದತ್ತ ವಾಲುತ್ತಿದೆ. ಈ ಕೇಂದ್ರೀಕರಣವು ಅಧಿಕಾರವನ್ನು ಕೇಂದ್ರೀಕರಿಸುತ್ತದೆ. ಸಮಾಜವಾದವು ಅಧಿಕಾರವನ್ನು ವಿಕೇಂದ್ರೀಕರಿಸುತ್ತದೆ. ಸಮಾಜವಾದವು ಜನಸೇವೆ ಮಾಡಲು ರಾಜ್ಯಗಳಿಗೆ ಶಕ್ತಿ ನೀಡುತ್ತದೆ. ಆದರೆ, ಕೇಂದ್ರೀಕರಣವು ರಾಜ್ಯಗಳನ್ನು ಕೇಂದ್ರದ ಏಜೆಂಟರನ್ನಾಗಿ ಮಾಡುತ್ತದೆ. ಕೇಂದ್ರ ಸರ್ಕಾರವು ಹಣವನ್ನು ತಡೆಹಿಡಿದಾಗ, ವಿಪತ್ತು ಪರಿಹಾರವನ್ನು ವಿಳಂಬಗೊಳಿಸಿದಾಗ ಮತ್ತು ಏಕರೂಪದ ನೀತಿಗಳನ್ನು ಹೇರಿದಾಗ, ಅದು ಕೇವಲ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಲ್ಲ, ಬದಲಾಗಿ ಸಂವಿಧಾನದ ಸಮಾಜವಾದಿ ಚೈತನ್ಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ” ಎಂದರು.
“ಕಾಂಗ್ರೆಸ್ ನೇತೃತ್ವದಲ್ಲಿ, ಭಾರತವು ಸಾಮಾಜಿಕ ನ್ಯಾಯ ಮತ್ತು ಒಕ್ಕೂಟದ ಸ್ವಾಯತ್ತತೆಯನ್ನು ಸಮತೋಲನಗೊಳಿಸುವ ಸಂವಿಧಾನವನ್ನು ಅಳವಡಿಸಿಕೊಂಡಿತು. ಹಿಂದಿನ ಕಾಂಗ್ರೆಸ್ ಸರ್ಕಾರಗಳು ಹಣಕಾಸು ಆಯೋಗವನ್ನು ಸ್ವತಂತ್ರ ಸಂಸ್ಥೆಯಾಗಿ ಗೌರವಿಸಿದ್ದವು. ಯೋಜನಾ ಆಯೋಗದಂತಹ ಸಂಸ್ಥೆಗಳನ್ನು ರಾಜ್ಯಗಳೊಂದಿಗೆ ಸಹಕರಿಸಲು ವೇದಿಕೆಯನ್ನಾಗಿ ಬಳಸಲಾಗಿತ್ತು. ಭೂ ಸುಧಾರಣೆ, ಸಾರ್ವಜನಿಕ ವಿತರಣೆ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯದಂತಹ ಪ್ರಮುಖ ಯೋಜನೆಗಳನ್ನು ರಾಜ್ಯಗಳ ಮೂಲಕವೇ ಜಾರಿಗೆ ತರಲಾಯಿತು. ಯುಪಿಎ ಅವಧಿಯಲ್ಲಿ ಉದ್ಯೋಗ ಖಾತರಿ, ಆಹಾರ ಭದ್ರತೆ ಮತ್ತು ಮಾಹಿತಿ ಹಕ್ಕಿನಂತಹ ಕಾನೂನುಗಳ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಯಿತು” ಎಂದು ಸಿದ್ದರಾಮಯ್ಯ ವಿವರಿಸಿದರು.
“ಆದರೆ, ಇಂದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಂಬಿಕೆಯ ಬದಲಿಗೆ ನಿಯಂತ್ರಣವನ್ನು ಮತ್ತು ಸಹಭಾಗಿತ್ವದ ಬದಲಿಗೆ ಶಿಕ್ಷೆಯನ್ನು ನೀಡುತ್ತಿದೆ. ತೆರಿಗೆ ಹಂಚಿಕೆಯನ್ನು ಕಡಿತಗೊಳಿಸುವ ಮೂಲಕ ಮತ್ತು ‘ಸೆಸ್’ ಹಾಗೂ ‘ಸರ್‌ಚಾರ್ಜ್’ಗಳ ಮೂಲಕ ಸಂಪನ್ಮೂಲಗಳನ್ನು ಕಬಳಿಸುತ್ತಿದೆ. ಆರ್ಥಿಕ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ರಾಜ್ಯಗಳನ್ನು ಅಧಿಕಾರವಿಲ್ಲದ ಕೇವಲ ‘ಅನುಷ್ಠಾನಕಾರ’ರನ್ನಾಗಿ ಮಾಡಲಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶಕ್ಕೆ ಮೂರು ಪ್ರಮುಖ ಬಿಕ್ಕಟ್ಟುಗಳನ್ನು ತರುತ್ತಿವೆ: ಕ್ಷೇತ್ರ ಮರುವಿಂಗಡಣೆ (Delimitation), ಸಾಂವಿಧಾನಿಕ ತತ್ವಗಳ ನಾಶ ಮತ್ತು ಆರ್ಥಿಕ ಒಕ್ಕೂಟ ತತ್ವದ ದಮನ” ಎಂದು ತಿಳಿಸಿದರು.
ಈ ಲೇಖನ ಓದಿದ್ದೀರಾ?: ಬೆಂಗಳೂರು – ಮೈಸೂರು ಕಾರಿಡಾರ್ | ಸರ್ಕಾರಕ್ಕೆ ಯೋಜನೆ ರದ್ದುಗೊಳಿಸಲು ಸೂಚಿಸಿದ ಹೈಕೋರ್ಟ್
“ಕರ್ನಾಟಕವು ಹಿಂದುಳಿದ ರಾಜ್ಯವಲ್ಲ. ಇದು ಭಾರತದ ಆರ್ಥಿಕತೆಗೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ನಾವು ಪ್ರತಿ ವರ್ಷ ಕೇಂದ್ರದ ಒಟ್ಟು ತೆರಿಗೆ ಆದಾಯಕ್ಕೆ ಸುಮಾರು 5 ಲಕ್ಷ ಕೋಟಿ ರೂ. ಕೊಡುಗೆ ನೀಡುತ್ತೇವೆ. ಕೇವಲ 5% ಜನಸಂಖ್ಯೆಯನ್ನು ಹೊಂದಿದ್ದರೂ, ಭಾರತದ ಜಿಡಿಪಿಗೆ (GDP) ನಮ್ಮ ಕೊಡುಗೆ 8.4% ಇದೆ. ನಾವು ಅತಿ ಹೆಚ್ಚು ಜಿಎಸ್‍ಟಿ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದ್ದೇವೆ. ಆದರೆ, ಕರ್ನಾಟಕವು ದೆಹಲಿಗೆ ಕಳುಹಿಸುವ ಪ್ರತಿಯೊಂದು ರೂಪಾಯಿಗೆ ಬದಲಾಗಿ ನಮಗೆ ವಾಪಸ್ ಬರುತ್ತಿರುವುದು ಕೇವಲ 13 ಪೈಸೆ ಮಾತ್ರ. ಇದು ನ್ಯಾಯವೇ? ಇದು ಸಾಧನೆ ಮಾಡಿದವರಿಗೆ ನೀಡುತ್ತಿರುವ ಶಿಕ್ಷೆಯಲ್ಲವೇ?” ಎಂದರು.
“ಯುಪಿಎ ಅವಧಿಯಲ್ಲಿ ರಚನೆಯಾದ 14ನೇ ಹಣಕಾಸು ಆಯೋಗವು ಕರ್ನಾಟಕದ ಕೊಡುಗೆಯನ್ನು ಗುರುತಿಸಿ ನಮಗೆ 4.72% ಪಾಲನ್ನು ನೀಡಿತ್ತು. ಆದರೆ, ಬಿಜೆಪಿ ರಚಿಸಿದ 15ನೇ ಹಣಕಾಸು ಆಯೋಗದಲ್ಲಿ ನಮ್ಮ ಪಾಲನ್ನು 3.64%ಗೆ ಇಳಿಸಲಾಗಿದೆ. ಈ ಒಂದೇ ನಿರ್ಧಾರದಿಂದ ಕರ್ನಾಟಕವು ಕಳೆದ ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಂಡಿದೆ. ಹಣಕಾಸು ಆಯೋಗ ಶಿಫಾರಸು ಮಾಡಿದ 5,495 ಕೋಟಿ ರೂ. ವಿಶೇಷ ಅನುದಾನ ಮತ್ತು 6,000 ಕೋಟಿ ರೂ. ರಾಜ್ಯ-ನಿರ್ದಿಷ್ಟ ಅನುದಾನವನ್ನು ಕೇಂದ್ರ ಕೊಟ್ಟಿಲ್ಲ. 2017 ರಿಂದ ಸೆಸ್ ಮತ್ತು ಸರ್‌ಚಾರ್ಜ್‌ಗಳ ಮೂಲಕ ಕರ್ನಾಟಕಕ್ಕೆ ಬರಬೇಕಿದ್ದ 53,000 ಕೋಟಿ ರೂ. ಹಣವನ್ನು ಕೂಡ ಬಿಡುಗಡೆ ಮಾಡಿಲ್ಲ” ಎಂದು ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
“ಕ್ಷೇತ್ರ ಮರುವಿಂಗಡಣೆ (Delimitation) ಎಂಬುದು ಕೇವಲ ತಾಂತ್ರಿಕ ಚುನಾವಣಾ ವಿಷಯವಲ್ಲ; ಇದು ಭಾರತದ ಒಕ್ಕೂಟ ವ್ಯವಸ್ಥೆಯ ಭವಿಷ್ಯವನ್ನು ನಿರ್ಧರಿಸುವ ರಾಜಕೀಯ ಪ್ರಶ್ನೆಯಾಗಿದೆ. ಬಿಜೆಪಿ ಉದ್ದೇಶಿಸಿರುವ ರೀತಿಯಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದರೆ, ದಕ್ಷಿಣ ಭಾರತದ ರಾಜಕೀಯ ಧ್ವನಿ ದುರ್ಬಲಗೊಳ್ಳುತ್ತದೆ. ನಮ್ಮ ರಾಜ್ಯಗಳು ಕ್ರಮೇಣ ಬಡವಾಗುತ್ತವೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳದಂತಹ ದಕ್ಷಿಣದ ರಾಜ್ಯಗಳು ರಾಷ್ಟ್ರದ ಕರೆಗೆ ಓಗೊಟ್ಟು ಜನಸಂಖ್ಯೆಯನ್ನು ನಿಯಂತ್ರಿಸಿದವು, ಆರೋಗ್ಯ ಮತ್ತು ಶಿಕ್ಷಣದಲ್ಲಿ ಹೂಡಿಕೆ ಮಾಡಿದವು. ಈಗ ‘ನೀವು ಯಶಸ್ವಿಯಾಗಿದ್ದೀರಿ, ಆದ್ದರಿಂದ ನಿಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುತ್ತೇವೆ’ ಎಂದು ನಮಗೆ ಹೇಳಲಾಗುತ್ತಿದೆ. ಅಧ್ಯಯನಗಳ ಪ್ರಕಾರ ಉತ್ತರ ಪ್ರದೇಶ ಮತ್ತು ಬಿಹಾರಗಳು 20 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬಹುದು, ಆದರೆ ತಮಿಳುನಾಡು ಮತ್ತು ಕೇರಳ ಒಟ್ಟಾಗಿ 16 ಸ್ಥಾನಗಳನ್ನು ಕಳೆದುಕೊಳ್ಳಬಹುದು. ಕರ್ನಾಟಕವೂ ತನ್ನ ರಾಜಕೀಯ ಪ್ರಭಾವವನ್ನು ಕಳೆದುಕೊಳ್ಳಲಿದೆ. ಇದು ಪ್ರಜಾಪ್ರಭುತ್ವವಲ್ಲ – ‘ಜನಸಂಖ್ಯಾಧಾರಿತ ಶಿಕ್ಷೆ’. ವೈಫಲ್ಯಕ್ಕೆ ಬಹುಮಾನ ಮತ್ತು ಯಶಸ್ಸಿಗೆ ದಂಡನೆ ನೀಡಬಾರದು” ಎಂದರು.
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಹಿರಿಯ ಸಮಾಜವಾದಿ ಚಿಂತಕ ಹಾಗೂ ಮಾಜಿ ಹಣಕಾಸು ಸಚಿವರಾದ ಕೇರಳ ರಾಜ್ಯದ ಐಸಾಕ್ ಥಾಮಸ್, ತೆಲಂಗಾಣ ಶಾಸಕ ವಂಶಿಕೃಷ್ಣ, ಮಾಜಿ ಸಂಸದ ಥಂಪನ್ ಥಾಮಸ್, ಕಾರ್ಮಿಕ ಮುಖಂಡೆ ಗೀತಾ ರಾಮಕೃಷ್ಣನ್, ಮಾಜಿ ಸಂಸದ ಎಲ್.ಹನುಮಂತಯ್ಯ, ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಸುಂದರ್ ಉಪಸ್ಥಿತರಿದ್ದರು.




