ಅತ್ಯಂತ ಪುಟ್ಟ ದ್ವೀಪರಾಷ್ಟ್ರ ಕ್ಯುರಸಾವೋದ ಶಿಸ್ತು ಶ್ರದ್ಧೆಗಳನ್ನು; ಸಮರ್ಥ ಫುಟ್ಬಾಲ್ ತಂಡ ಕಟ್ಟಿ ಜಗತ್ತಿಗೇ ಸ್ಫೂರ್ತಿಯಾಗಿದ್ದನ್ನು; ಜಾಗತಿಕ ಮಟ್ಟದಲ್ಲಿ ಎದೆಯುಬ್ಬಿಸಿ ನಿಂತಿದ್ದನ್ನು ಮೋದಿ ಮತ್ತು ಭಾರತ ಅರಿತು ಅಳವಡಿಸಿಕೊಳ್ಳಬೇಕಾಗಿದೆ.
ಕಳೆದವಾರ ಪುಟ್ಟ ಕೆರೀಬಿಯನ್ ದ್ವೀಪರಾಷ್ಟ್ರ ಕ್ಯುರಸಾವೋ ಸಂಭ್ರಮದಲ್ಲಿತ್ತು. ಇಡೀ ರಾಷ್ಟ್ರ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿತ್ತು. ಹೀಗೆ ಸಂಭ್ರಮಿಸಲು ಕಾರಣ, ಕಿಂಗ್‌ಸ್ಟನ್‌ನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಜಮೈಕಾ ಫುಟ್ಬಾಲ್ ತಂಡದೊಂದಿಗೆ ಸೆಣಸಿದ ಕ್ಯುರಸಾವೋ ಫುಟ್ಬಾಲ್ ತಂಡ ರೋಚಕ ಸಮಬಲ ಸಾಧಿಸಿದ್ದು. ಆ ಮೂಲಕ ಕ್ಯುರಸಾವೋ ಜಾಗತಿಕ ಫುಟ್ಬಾಲ್ ಇತಿಹಾಸದಲ್ಲಿ ತನ್ನ ಹೆಸರನ್ನು ಚಿರಸ್ಥಾಯಿಯಾಗಿಸಿತು. 2026ರ ಫಿಫಾ(ಫೆಡರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್) ವಿಶ್ವಕಪ್ ಪೈನಲ್‌ನಲ್ಲಿ ಭಾಗವಹಿಸಲು ಅರ್ಹತಾ ತಂಡವಾಗಿ ಹೊರಹೊಮ್ಮಿತು.
ಈ ಬಾರಿಯ 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಟೂರ್ನಿಗೆ ಉತ್ತರ ಅಮೆರಿಕಾದ ಮೂರು ದೇಶಗಳಾದ ಯುಎಸ್‌ಎ, ಕೆನಡಾ ಮತ್ತು ಮೆಕ್ಸಿಕೋ- ಒಟ್ಟಿಗೆ ಸೇರಿ ಆತಿಥ್ಯ ನೀಡುತ್ತಿವೆ. ಈ ಟೂರ್ನಿಯು ಜೂನ್ 11ರಿಂದ ಜುಲೈ 19, 2026ರವರೆಗೆ ನಡೆಯುತ್ತದೆ. 39 ದಿನಗಳ ಅತ್ಯಂತ ದೀರ್ಘ ಟೂರ್ನಿಯಾಗಿದ್ದು, ಒಟ್ಟು 104 ಪಂದ್ಯಗಳು ನಡೆಯುತ್ತವೆ. ಇದು ಫುಟ್ಬಾಲ್‌ನ ಅತಿ ದೊಡ್ಡ ಸಮಾವೇಶವಾದ್ದರಿಂದ ಪ್ರಪಂಚದಾದ್ಯಂತ ಅಭಿಮಾನಿಗಳು ಅಲ್ಲಿ ನೆರೆಯುತ್ತಾರೆ.
ಇದನ್ನು ಓದಿದ್ದೀರಾ?: ʼಮೀಸಲಾತಿ ಆಟಗಾರʼ ಎಂದು ಹಂಗಿಸಿದವರಿಗೆ ಗೆಲುವಿನ ಉತ್ತರ ಕೊಟ್ಟ ತೆಂಬಾ ಬವುಮಾ
ಇಂತಹ ಪ್ರತಿಷ್ಠಿತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಹುದೊಡ್ಡ ದೇಶವೆನಿಸಿಕೊಂಡ ನಮ್ಮ ಭಾರತವನ್ನು ಪ್ರತಿನಿಧಿಸುವ ಫುಟ್ಬಾಲ್ ತಂಡವಿಲ್ಲ. ಇದೇ ವಾರ ಫಿಫಾ ಶ್ರೇಯಾಂಕದಲ್ಲಿ 142ನೇ ಸ್ಥಾನದಲ್ಲಿರುವ ಭಾರತ, 180ನೇ ಸ್ಥಾನದ ಬಾಂಗ್ಲಾದೇಶದ ವಿರುದ್ಧ ಏಷ್ಯಾ ಕಪ್ ಪಂದ್ಯದಲ್ಲಿ ಸೋತಿದೆ. ವಿಶ್ವಕಪ್‌ಗೆ ಅರ್ಹತೆ ಗಳಿಸುವಲ್ಲಿ ಈ ಬಾರಿಯೂ ಹಿನ್ನಡೆ ಅನುಭವಿಸಿದೆ. ಆದರೆ ಅತ್ಯಂತ ಪುಟ್ಟ ರಾಷ್ಟ್ರ ಕ್ಯುರಸಾವೋ ಪ್ರವೇಶ ಪಡೆದಿದೆ.

ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಒಂದಾದ ವೆನಜುವೆಲಾದ ಉತ್ತರಕ್ಕಿರುವ ಕ್ಯುರಸಾವೋ, ಈ ಮೊದಲು ಡಚ್ಚರ ಅಧೀನದಲ್ಲಿತ್ತು. ಈಗ ಸ್ವಾಯತ್ತ ರಾಷ್ಟ್ರವಾಗಿದ್ದು, ನೆದರ್ಲೆಂಡ್ಸ್ ರಾಜ್ಯದ ಭಾಗವಾಗಿದೆ. ಕೇವಲ 444 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಈ ದ್ವೀಪರಾಷ್ಟ್ರ 1,58,000- ನಮ್ಮ ದೆಹಲಿಯ ಅರ್ಧಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದೆ. ಈಗ ಈ ದೇಶ, ನೆದರ್ಲೆಂಡ್ಸ್‌ನಲ್ಲಿ ಹುಟ್ಟಿಬೆಳೆದ ಆಟಗಾರರನ್ನೇ ಆಯ್ದು ತಂಡ ಕಟ್ಟಿಕೊಂಡಿದೆ. ಶಿಸ್ತಿನ ತರಬೇತಿ ನೀಡಿ ಪ್ರೋತ್ಸಾಹಿಸಿದೆ. ಪಕ್ಕದ ದೇಶಗಳಾದ ಜಮೈಕಾ, ಟ್ರಿನಿಡಾಡ್ – ಟೊಬ್ಯಾಗೊ ಮತ್ತು ಬರ್ಮುಡಾ ದೇಶಗಳ ಮೇಲೆ ಗೆದ್ದು ಅಗ್ರಸ್ಥಾನ ಗಳಿಸಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಜಮೈಕಾ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಳ್ಳುವ ಮೂಲಕ, ಫಿಫಾ ವಿಶ್ವಕಪ್ ಫೈನಲ್‌ಗೆ ಅರ್ಹತೆ ಗಳಿಸಿದ ರಾಷ್ಟ್ರಗಳ ಪೈಕಿ ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಎದೆಯುಬ್ಬಿಸಿ ನಿಂತಿದೆ.
ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ, 144 ಕೋಟಿ ಜನಸಂಖ್ಯೆ ಹೊಂದಿದ ಬೃಹತ್ ರಾಷ್ಟ್ರವಾದರೂ, 56 ಇಂಚಿನ ಎದೆಯುಳ್ಳ ನಾಯಕ ಪ್ರಧಾನಿಯಾಗಿದ್ದರೂ ಭಾರತ ಅರ್ಹತೆ ಗಳಿಸದೆ ಹಿಂದೆ ಬಿದ್ದಿದೆ. ಹೀಗೆ ಹಿಂದೆ ಬೀಳಲು ಮುಖ್ಯವಾಗಿ ಆಲ್ ಇಂಡಿಯಾ ಫುಟ್ಭಾಲ್ ಫೆಡರೇಷನ್(AIFF)ನ ಆಂತರಿಕ ರಾಜಕಾರಣ, ನಾಯಕತ್ವದ ಕೊರತೆ ಮತ್ತು ಭ್ರಷ್ಟಾಚಾರವೇ ಕಾರಣವಾಗಿದೆ. ಇಂತಹ ವಾತಾವರಣದಲ್ಲಿ ಫುಟ್ಬಾಲ್ ಆಟಗಾರರು ಬೆಳೆಯುವುದು, ಭಾರತವನ್ನು ಬೆಳಗುವುದು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ನಮ್ಮಲ್ಲಿ ಮೊದಲಿನಿಂದಲೂ ಪೋಷಕರಲ್ಲಿ ಮತ್ತು ಶಾಲಾ-ಕಾಲೇಜುಗಳ ಮಟ್ಟದಲ್ಲಿ ಕ್ರಿಕೆಟ್‌ಗೆ ಆದ್ಯತೆ ಇದೆ. ಕ್ರಿಕೆಟ್‌ಗೆ ಅತಿಯಾದ ಪ್ರೋತ್ಸಾಹ ಮತ್ತು ಪ್ರಚಾರವೂ ಸಿಗುತ್ತದೆ. ಕ್ರಿಕೆಟ್‌ಗೆ ಹೋಲಿಸಿದರೆ ಫುಟ್ಬಾಲ್‌ಗೆ ಸಿಗುವ ಹಣ, ಟಿವಿ ಹಕ್ಕು ಮತ್ತು ಪ್ರಾಯೋಜಕತ್ವ ತೀರಾ ಕಡಿಮೆಯಿದೆ. ಜೊತೆಗೆ ಫುಟ್ಬಾಲ್ ಆಟಗಾರರನ್ನು ತರಬೇತುಗೊಳಿಸುವ ಉತ್ತಮ ಅಕಾಡಮಿಗಳಿಲ್ಲ. ವರ್ಷಪೂರ್ತಿ ಸ್ಪರ್ಧಾತ್ಮಕ ಫುಟ್ಬಾಲ್ ಆಡುವ ಅವಕಾಶವಿಲ್ಲ, ಆಡುವವರೂ ಇಲ್ಲ. ಆಟಗಾರರಲ್ಲಿ ದೈಹಿಕ ಸಾಮರ್ಥ್ಯ- ಆಟದ ವೇಗ, ನಿರ್ಧಾರ ಕೈಗೊಳ್ಳುವಿಕೆ, ಒತ್ತಡದಲ್ಲಿ ಆಡುವ ಚತುರತೆ ಕಾಣುತ್ತಿಲ್ಲ. ಈಗಿರುವ ತಾಂತ್ರಿಕ ಮತ್ತು ದೈಹಿಕ ಸಾಮರ್ಥ್ಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾಕಾಗುತ್ತಿಲ್ಲ. ವಿದೇಶಿ ತರಬೇತುದಾರರಿಂದ ತರಬೇತಿ, ಸೌಲಭ್ಯಗಳಿಗೆ ಕೊಡುವ ಹಣ ಸಾಕಾಗುತ್ತಿಲ್ಲ. ಬೇರೆ ದೇಶಗಳ ಫುಟ್ಬಾಲ್ ತಂಡಗಳಿಗೆ ವಿದೇಶಿ ಆಟಗಾರರನ್ನು ಬಳಸಿಕೊಳ್ಳುವ ಪರಿಪಾಠವಿದೆ. ಆದರೆ ಭಾರತದಲ್ಲಿ ಅದಕ್ಕೆ ಪೌರತ್ವ ಕಾಯ್ದೆ ಅಡ್ಡಬರುತ್ತದೆ. ಫೆಡರೇಷನ್‌ನಲ್ಲಿ ಆಟಕ್ಕಿಂತ ಹೆಚ್ಚಾಗಿ ರಾಜಕಾರಣ ಮನೆ ಮಾಡಿದೆ.
1936ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಮೆರಿಕದ ಕಪ್ಪು ಜನಾಂಗದ ಅಥ್ಲೀಟ್ ಜೆಸ್ಸಿ ಓವೆನ್ಸ್ 100 ಮೀಟರ್, 200 ಮೀಟರ್, ರಿಲೇ ಮತ್ತು ಲಾಂಗ್ ಜಂಪ್- ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದಿದ್ದ. ಆದರೆ ಕಪ್ಪು ಜನಾಂಗವನ್ನು ದುರ್ಬಲರು ಎಂದು ನಂಬಿದ್ದ ಜರ್ಮನಿಯ ಹಿಟ್ಲರ್, ಓವೆನ್ಸ್ ಪದಕ ಗೆದ್ದಾಗ ಕೋಪಗೊಂಡ. ಆತನಿಗೆ ಪದಕ ತೊಡಿಸಿ, ಅಭಿನಂದನೆ ಸಲ್ಲಿಸದೆ ಸಾರ್ವಜನಿಕವಾಗಿ ಅವಮಾನಿಸಿದ.
ಇದರಿಂದ ಕ್ರೀಡಾಪಟು ಓವೆನ್ಸ್ ವ್ಯಕ್ತಿತ್ವಕ್ಕೇನೂ ಕುಂದುಂಟಾಗಲಿಲ್ಲ. ಆದರೆ, ಕ್ರೀಡೆಗಳು ದೊಡ್ಡ ದೇಶಗಳನ್ನು, ಶಕ್ತಿಶಾಲಿ ರಾಷ್ಟ್ರಗಳನ್ನು ತಲೆತಗ್ಗಿಸುವ ಶಕ್ತಿ ಹೊಂದಿವೆ ಎಂಬುದನ್ನು ಸಾಬೀತುಪಡಿಸಿತು. ಇವತ್ತಿಗೂ, ಜಾಗತಿಕ ಮಟ್ಟದ ಫುಟ್ಬಾಲ್ ಆಟದಲ್ಲಿ ಇದು ಇನ್ನೂ ಸ್ಪಷ್ಟವಾಗಿ ಕಂಡುಬರುತ್ತದೆ.
ಇದನ್ನು ಓದಿದ್ದೀರಾ?: ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ; ರೋಚಕತೆ, ದಾಖಲೆಗಳು ಮತ್ತು ಸವಾಲುಗಳು
ಭಾರತದಂತಹ ದೇಶಗಳಿಗೆ ಫುಟ್ಬಾಲ್ ಆಟವನ್ನು ಕರಗತ ಮಾಡಿಕೊಳ್ಳುವುದು ಕಷ್ಟವಲ್ಲ. ದೇಶದ ಗಾತ್ರ ಅಥವಾ ಜನಸಂಖ್ಯೆಯನ್ನು ಗಮನಿಸಿದರೆ, ಸೂಕ್ತ ತರಬೇತಿ ನೀಡಿ ಪ್ರೋತ್ಸಾಹಿಸಿದರೆ, ವಿಶ್ವಕಪ್‌ಗೆ ಅರ್ಹತೆ ಗಳಿಸುವುದು ಸಮಸ್ಯೆಯೇ ಅಲ್ಲ. ಅದಕ್ಕೆ ದೇಶದ ಕ್ರೀಡಾ ನೀತಿಯೂ ಬೇಕು. ನಾಯಕತ್ವವೂ ಸರಿ ಇರಬೇಕು.
ನರೇಂದ್ರ ಮೋದಿಯವರು, ದೇಶದ ಪ್ರಧಾನಿಯಾಗಿ ಹನ್ನೊಂದು ವರ್ಷಗಳಾಗುತ್ತಾ ಬಂದಿದೆ. ದೇಶವನ್ನು ವಿಶ್ವಗುರುವನ್ನಾಗಿಸುವ ಮಾತನಾಡುವ ಮೋದಿಯವರು, ವಿಶ್ವ ಮಟ್ಟದ ಒಂದು ಫುಟ್ಬಾಲ್ ತಂಡ ಕಟ್ಟಲು ಸಾಧ್ಯವಾಗಿಲ್ಲ. ಮಾತೆತ್ತಿದರೆ, ಮೇಕ್ ಇನ್ ಇಂಡಿಯಾ, ವಿಕಸಿತ ಭಾರತ, ಅಮೃತಕಾಲ ಎನ್ನುವ ಮೋದಿಯವರು, ಯುವಕರಿಗೆ ರೀಲ್ಸ್ ಮಾಡಿ ಎನ್ನುವುದು, ನಿರುದ್ಯೋಗಿಗಳಿಗೆ ಪಕೋಡ ಮಾರಿ ಎಂದು ಸಲಹೆ ಕೊಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ವಿರೋಧ ಪಕ್ಷಗಳು ದನಿ ಎತ್ತಿದರೆ, ನೆಹರೂ ಅವರನ್ನು ವಿನಾಕಾರಣ ಎಳೆದು ತರುತ್ತಾರೆ. ಅದನ್ನು ಬಿಟ್ಟರೆ, ಹಿಂದುತ್ವ, ರಾಮ, ಮುಸ್ಲಿಮರು ಮತ್ತು ಪಾಕಿಸ್ತಾನ ಎನ್ನುತ್ತಾರೆ.

ಈಗಲಾದರೂ ಮೋದಿ ಮತ್ತು ಭಾರತ, ಅತ್ಯಂತ ಪುಟ್ಟ ದ್ವೀಪರಾಷ್ಟ್ರ ಕ್ಯುರಸಾವೋದ ಶಿಸ್ತು ಶ್ರದ್ಧೆಗಳನ್ನು; ಸಮರ್ಥ ಫುಟ್ಬಾಲ್ ತಂಡ ಕಟ್ಟಿ ಜಗತ್ತಿಗೇ ಸ್ಫೂರ್ತಿಯಾಗಿದ್ದನ್ನು; ಜಾಗತಿಕ ಮಟ್ಟದಲ್ಲಿ ಎದೆಯುಬ್ಬಿಸಿ ನಿಂತಿದ್ದನ್ನು ಅರಿತು ಅಳವಡಿಸಿಕೊಳ್ಳಬೇಕಾಗಿದೆ.

ಲೇಖಕ, ಪತ್ರಕರ್ತ




