ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆ ಕಟ್ಟಿಕೊಂಡಿರುವ ಕೊಲೆ ಆರೋಪಿ, ಬಲಪಂಥೀಯ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಮತ್ತೊಂದು ಎಫ್ಐಆರ್ ದಾಖಲು ಮಾಡಲಾಗಿದೆ.
ಕ್ರಿಸ್ಮಸ್ ಹಬ್ಬದ ಅಲಂಕಾರದ ವಿಚಾರಕ್ಕೆ ಮಾಲ್ಗೆ ನುಗ್ಗಿ ಗಲಾಟೆ ಮಾಡಿರೋ ಆರೋಪ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ನಿನ್ನೆ(ಡಿ.23)ರಂದು ಬೆಂಗಳೂರಿನ ಹೆಬ್ಬಾಳದ ಸಮೀಪವಿರುವ ಮಾಲ್ ಆಫ್ ಏಷ್ಯಾ ಬಳಿ ಹೋಗಿದ್ದ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು, ಯಾಕೆ ಕ್ರಿಸ್ಮಸ್ ಟ್ರೀ ಗಳ ಅಲಂಕಾರ ಮಾಡಿದ್ದೀರಾ ಎಂದು ಮಾಲ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದರು.
ಕ್ರಿಸ್ಮಸ್ ಟ್ರೀ ಅಲಂಕಾರ ಮಾಡಿದ್ದಲ್ಲದೇ 200 ರೂ ಎಂಟ್ರಿ ಫೀಸ್ ಬೇರೆ ಇಟ್ಟಿದ್ದೀರಾ? ಇದಕ್ಕೆ ಕಾನೂನು ಇದ್ಯಾ? ಹಿಂದೂ ಹಬ್ಬಗಳಿಗೆ ನೀವು ಇದೇ ರೀತಿಯ ಅಲಂಕಾರ ಮಾಡ್ತೀರ? 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದೆ. ಅವತ್ತೂ ಕೂಡ ಹೀಗೆ ಅಲಂಕಾರ ಮಾಡಬೇಕು. ಮಾಡದಿದ್ರೆ ಮಾಲ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು.
ಇದನ್ನು ಓದಿದ್ದೀರಾ? ನಮ್ಮನ್ನು ಟಿಪ್ಪು ಸುಲ್ತಾನ್ ಪರ ಎನ್ನುವವರು ಬ್ರಿಟೀಷರ ಬೂಟು ನೆಕ್ಕುತ್ತಿದ್ದರು: ಬಿಕೆ ಹರಿಪ್ರಸಾದ್
ಈ ಬಗ್ಗೆ ಮಾಲ್ನ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು, ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರನ್ನುಯ ವಶಕ್ಕೆ ಪಡೆದುಕೊಂಡಿದ್ದರು. ಆ ಬಳಿಕ ಮಾಲ್ ಆಫ್ ಏಷ್ಯಾದ ಸೆಕ್ಯೂರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟರ್ ನೀಡಿದ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.





