ಮಹಾರಾಷ್ಟ್ರದಲ್ಲಿ ಮುಸ್ಲಿಂ ಮೀಸಲಾತಿಗೆ ‘ಅಂತಿಮ ಮೊಳೆ’? 2014ರ ನೀತಿಗೆ ಮಹಾಯುತಿ ಸರ್ಕಾರದ ಎಳ್ಳುನೀರು!

Date:

ಮಹಾರಾಷ್ಟ್ರದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸ್ಲಿಮರಿಗೆ 5% ಮೀಸಲಾತಿ ನೀಡುವ ನೀತಿಯನ್ನು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ರದ್ದುಗೊಳಿಸಿದೆ. ಸರ್ಕಾರದ ಧೋರಣೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ‘ಅಲ್ಪಸಂಖ್ಯಾತ ವಿರೋಧಿ’ ಕೃತ್ಯವೆಂದು ಆಕ್ರೋಶ ವ್ಯಕ್ತಪಡಿಸಿದರೆ, ಬಿಜೆಪಿ ಸಮರ್ಥನೆಗೆ ಇಳಿದಿದೆ. 2014ರಲ್ಲಿ ಚುನಾವಣೆಗೂ ಮುನ್ನ ಘೋಷಿಸಲಾಗಿದ್ದ, ಜಾರಿಯಾದ ಮುಸ್ಲಿಂ ಮತ ತುಷ್ಟೀಕರಣದ ತಂತ್ರವೆಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತ್ಯಾರೋಪ ಮಾಡಿದೆ.

ಮಹಾರಾಷ್ಟ್ರದಲ್ಲಿ ಮುಸ್ಲಿಂ ಮೀಸಲಾತಿಯ ಬೇಡಿಕೆಯು 2008ರಲ್ಲಿ ಸಾಂಸ್ಥಿಕ ರೂಪ ಪಡೆದಿತ್ತು. ಅಂದಿನ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರ್ಕಾರವು ರಾಜ್ಯದ ಮುಸ್ಲಿಮರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ಮೆಹಮೂದ್ ಉರ್ ರೆಹಮಾನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಐದು ವರ್ಷಗಳ ಅಧ್ಯಯನದ ನಂತರ, ಮಹಾರಾಷ್ಟ್ರದಲ್ಲಿರುವ ಮುಸ್ಲಿಮರಲ್ಲಿ ಸುಮಾರು 60%ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಸಮಿತಿ ವರದಿ ಮಾಡಿತ್ತು. ಸರ್ಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಕೇವಲ 4.4%ರಷ್ಟಿದೆ, ಸಮುದಾಯದ ಕೇವಲ 2.2%ರಷ್ಟು ಜನರು ಮಾತ್ರ ಪದವೀಧರರಾಗಿದ್ದಾರೆ. ಈ ರಚನಾತ್ಮಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ರಾಜ್ಯದ ಉದ್ಯೋಗ, ಶಿಕ್ಷಣ ಹಾಗೂ ವಸತಿಗಳಲ್ಲಿ 8%ರಷ್ಟು ಮೀಸಲಾತಿ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು ‘ವಿಶೇಷ ಹಿಂದುಳಿದ ವರ್ಗ’-ಎ (SBC-A) ಅಡಿಯಲ್ಲಿ ಗುರುತಿಸಲಾದ ಸುಮಾರು 50 ಮುಸ್ಲಿಂ ಸಮುದಾಯಗಳಿಗೆ 5% ಮತ್ತು ಮರಾಠ ಸಮುದಾಯಕ್ಕೆ 16% ಮೀಸಲಾತಿ ಒದಗಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಇದು, ಗುರುತಿಸಲಾದ 50 ಹಿಂದುಳಿದ ಮುಸ್ಲಿಂ ಪಂಗಡಗಳು ಶಿಕ್ಷಣದಲ್ಲಿ ಮೀಸಲಾತಿ ಹಕ್ಕು ಪಡೆಯಲು ಇದ್ದ ಕಟ್ಟಕಡೆಯ ಆಡಳಿತಾತ್ಮಕ ಮಾರ್ಗವೂ ಆಗಿತ್ತು.

ಈ ಮೀಸಲಾತಿಯು ಇಡೀ ಮುಸ್ಲಿಂ ಸಮುದಾಯಕ್ಕೆ ಅನ್ವಯವಾಗುತ್ತಿರಲಿಲ್ಲ. ಬದಲಾಗಿ, ಮುಸ್ಲಿಂ ಸಮುದಾಯದಲ್ಲಿರುವ ನೇಕಾರರು, ಕಸಾಯಿಖಾನೆ ಕಾರ್ಮಿಕರು, ಎಣ್ಣೆ ತೆಗೆಯುವವರು ಹಾಗೂ ಮೀನುಗಾರರಂತಹ ಸಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸುಮಾರು 50 ಸಮುದಾಯಗಳಿಗೆ ಅನ್ವಯವಾಗಿತ್ತು. ಈ ಸಮುದಾಯಗಳ ಜನರಿಗೆ ಜಾತಿ ಸಿಂಧುತ್ವ ಪ್ರಮಾಣಪತ್ರಗಳು ಅಗತ್ಯವಾಗಿದ್ದವು.

image 101

ಸರ್ಕಾರದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಕೆಲವರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ತನ್ನ 2014ರ ನವೆಂಬರ್‌ 14ರ ಆದೇಶದಲ್ಲಿ, ಮರಾಠ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿತು. ಜೊತೆಗೆ, ಉದ್ಯೋಗದಲ್ಲಿನ ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸಿದರೂ, ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ತತ್ವವನ್ನು ಎತ್ತಿ ಹಿಡಿದಿತ್ತು.

“ಸರ್ಕಾರಿ ಸ್ವಾಮ್ಯದ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ, 50%ರ ಮೀಸಲಾತಿ ಮಿತಿಯನ್ನು ಮೀರಿ ಇನ್ನೂ 5%ರಷ್ಟು ಹೆಚ್ಚುವರಿ ಮೀಸಲಾತಿ ನೀಡಲು ಅಗತ್ಯವಿರುವ ಅಸಾಧಾರಣ ಸಂದರ್ಭಗಳು ಇರುವುದರ ಬಗ್ಗೆ ನಮಗೆ ಮನವರಿಕೆಯಾಗಿದೆ. ಆದ್ದರಿಂದ, ಶಿಕ್ಷಣದಲ್ಲಿ ಮುಸ್ಲಿಮರಿಗೆ 5% ಮೀಸಲಾತಿ ನೀಡುವುದು ಅತ್ಯಗತ್ಯ” ಎಂದು ಹೈಕೋರ್ಟ್‌ ಹೇಳಿತ್ತು.

ವಂಚಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಸಾಂವಿಧಾನಿಕ ಗುರಿಯನ್ನು ಒತ್ತಿಹೇಳಿದ್ದ ನ್ಯಾಯಾಲಯ, “ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಮೀಸಲಾತಿ ಒದಗಿಸುವ ಸುಗ್ರೀವಾಜ್ಞೆಯ ನಿಬಂಧನೆಗಳಿಗೆ ತಡೆಯಾಜ್ಞೆ ನೀಡಿದರೆ, ಅದು ರಾಜ್ಯದ ಮುಸ್ಲಿಂ ಯುವಜನರನ್ನು ಜಾತ್ಯತೀತವಾಗಿ ಶಿಕ್ಷಣದಲ್ಲಿ ಮುಖ್ಯವಾಹಿನಿಗೆ ತರುವ ಪ್ರಕ್ರಿಯೆಗೆ ಖಂಡಿತವಾಗಿಯೂ ಅಡ್ಡಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.

ಆದರೂ ಆ ಸುಗ್ರೀವಾಜ್ಞೆಯ ಅವಧಿ ಮುಕ್ತಾಯಗೊಂಡ ಬಳಿಕ, ಮೀಸಲಾತಿಯು ಮೂಲೆಗುಂಪಾಗಿತ್ತು. 2014ರ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರವು ಆ ಸುಗ್ರೀವಾಜ್ಞೆಯನ್ನು ಸಾಂವಿಧಾನಿಕ ಕಾಲಮಿತಿಯೊಳಗೆ ಕಾಯಿದೆಯಾಗಿ ಪರಿವರ್ತಿಸಲಿಲ್ಲ. ಮರಾಠಾ ಮೀಸಲಾತಿಯನ್ನು ಮರುಸ್ಥಾಪಿಸಲು ಸರ್ಕಾರವು ಕಾನೂನು ಪರಿಹಾರಗಳನ್ನು ಅನುಸರಿಸಿದರೂ, ಮುಸ್ಲಿಂ ಮೀಸಲಾತಿ ಚೌಕಟ್ಟನ್ನು ಉಳಿಸಿಕೊಳ್ಳಲು ಯಾವುದೇ ಶಾಸನಾತ್ಮಕ ಪ್ರಯತ್ನಗಳು ನಡೆಯಲಿಲ್ಲ.

ಪರಿಣಾಮವಾಗಿ, ಮುಸ್ಲಿಮರಿಗೆ ಶಿಕ್ಷಣದಲ್ಲಿನ 5% ಮೀಸಲಾತಿಯು ಸ್ಥಗಿತಗೊಂಡಿತ್ತು. ಸುಗ್ರೀವಾಜ್ಞೆಯ ಅಡಿಯಲ್ಲಿ ಹೊರಡಿಸಲಾದ ಸರ್ಕಾರಿ ನಿರ್ಣಯವು ಕ್ರಮೇಣ ತನ್ನ ಪ್ರಭಾವವನ್ನು ಕಳೆದುಕೊಂಡಿತು.

2019ರಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿತ್ತು. 2020ರ ಫೆಬ್ರವರಿಯಲ್ಲಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ 5% ಮೀಸಲಾತಿ ನೀಡಲು ಸರ್ಕಾರ ಕಾನೂನು ತರಲಿದೆ ಎಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದರು. ಆದರೆ, ಒಂದು ವಾರದೊಳಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

image 101 1

ಇದೀಗ, ಮಹಾಯುತಿ ಸರ್ಕಾರವು ಶಿಕ್ಷಣದಲ್ಲಿ ಮುಸ್ಲಿಮರಿಗೆ 5% ಮೀಡಲಾತಿ ನೀಡುವ ಸರ್ಕಾರಿ ಆದೇಶವನ್ನು ಮಂಗಳವಾರ ಹಿಂಪಡೆದಿದೆ. ಮುಸ್ಲಿಂ ಸಮುದಾಯಗಳಿಗೆ SBC-A ಅಡಿಯಲ್ಲಿ ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರಗಳ ವಿತರಣೆ ಸೇರಿದಂತೆ ಹಿಂದಿನ ನೀತಿಗೆ ಸಂಬಂಧಿಸಿದ ಎಲ್ಲ ನಿರ್ದೇಶನಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಮುಸ್ಲಿಂ ಮೀಸಲಾತಿಗೆ ಅಂತಿಮ ಮೊಳೆ ಜಡಿದಿದೆ.

ಈ ಲೇಖನ ಓದಿದ್ದೀರಾ?: ವಿವಾದಿತ ‘ಗ್ರೇಟ್ ನಿಕೋಬಾರ್ ಯೋಜನೆ’ಗೆ NGT ಸಮ್ಮತಿ; ಪರಿಸರಕ್ಕೆ ಗಂಡಾಂತರ!

ಮಹಾಯುತಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಾಮಾಜಿಕ ನ್ಯಾಯ ಸಚಿವ ಸಂಜಯ್ ಶಿರ್ಸಾಟ್, “ಮತದಾರರನ್ನು ಓಲೈಸಲು 2014ರ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸರ್ಕಾರವು ಈ ಮೀಸಲಾತಿಯನ್ನು ಘೋಷಿಸಿತ್ತು. ಆದರೆ, ಅಗತ್ಯವಿರುವ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಎಂದಿಗೂ ಪೂರ್ಣಗೊಳಿಸಿರಲಿಲ್ಲ. ಯಾರೋ ವಿಧಾನಸಭೆಯಲ್ಲಿ ಎದ್ದು ನಿಂತು ಘೋಷಿಸಿದ ತಕ್ಷಣ ಮೀಸಲಾತಿ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಸರ್ಕಾರದ ಈ ನಡೆಯನ್ನು ಟೀಕಿಸರುವ ವಿಪಕ್ಷಗಳು, ಇದನ್ನು ‘ಅಲ್ಪಸಂಖ್ಯಾತ ವಿರೋಧಿ’ ಎಂದು ಕರೆದಿವೆ. ವರ್ಷಗಳ ಹಿಂದೆಯೇ ಅವಧಿ ಮುಗಿದಿದ್ದ ಮೀಸಲಾತಿ ಚೌಕಟ್ಟನ್ನು ಈಗ ಹಿಂಪಡೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿವೆ. ಎನ್‌ಸಿಪಿ (ಶರದ್ ಬಣ), ‘ಈ ನಿರ್ಧಾರವು ಬಿಜೆಪಿ ತನ್ನ ಪಕ್ಷದಲ್ಲಿರುವ ಮತ್ತು ಮಿತ್ರಪಕ್ಷಗಳಲ್ಲಿರುವ ಮುಸ್ಲಿಂ ನಾಯಕರಿಗೆ ಬೆಲೆ ನೀಡುವುದಿಲ್ಲ. ಮುಸ್ಲಿಮರಿಗೆ ಬಿಜೆಪಿಯಿಂದ ನ್ಯಾಯ ಸಿಗುವುದಿಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದೆ. ಎಐಎಂಐಎಂ ನಾಯಕ ಮತ್ತು ಮಾಜಿ ಸಂಸದ ಇಮ್ತಿಯಾಜ್ ಜಲೀಲ್ ಅವರು, “ಮುಸ್ಲಿಂ ಯುವಕರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಂತಹ ಉನ್ನತ ಸ್ಥಾನಕ್ಕೇರುವುದು ಆಡಳಿತ ಪಕ್ಷಕ್ಕೆ ಇಷ್ಟವಿಲ್ಲ” ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ

ಗಮನಾರ್ಹವಾಗಿ, ಕರ್ನಾಟಕದಲ್ಲಿಯೂ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಯ ಸ್ಥಿತಿ ಸಂಕೀರ್ಣವಾಗಿದೆ. ಕಾನೂನು-ಸಾಮಾಜಿಕ ನ್ಯಾಯ ಮತ್ತು ರಾಜಕೀಯ ನಡುವೆ ಸಿಲುಕಿ ತಿಣಕಾಡುತ್ತಿದೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯವನ್ನು ‘ಇತರ ಹಿಂದುಳಿದ ವರ್ಗ’ಗಳ (OBC) ಅಡಿಯಲ್ಲಿ 2ಬಿ ವರ್ಗವೆಂದು ವರ್ಗೀಕರಿಸಲಾಗಿದೆ. ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ 4% ಮೀಸಲಾತಿ ಜಾರಿಯಲ್ಲಿದೆ. ಈ ಮೀಸಲಾತಿ ಧರ್ಮ ಆಧಾರಿತವಲ್ಲದೆ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಕೆಯ ಆಧಾರದ ಮೇಲೆ ನೀಡಲಾಗಿರುವ ಮೀಸಲಾತಿಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಆದಾಗ್ಯೂ, 2023ರಲ್ಲಿ ಬಿಜೆಪಿ ಸರ್ಕಾರವು ಈ 4% ಮೀಸಲಾತಿಯನ್ನು ರದ್ದುಪಡಿಸಿ, ಆ ಪಾಲನ್ನು ಲಿಂಗಾಯತರು ಮತ್ತು ಒಕ್ಕಲಿಗರಂತಹ ಇತರ ಸಮುದಾಯಗಳಿಗೆ ಹಂಚಿಕೆ ಮಾಡಿತ್ತು. ಆದರೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ಹಸ್ತಕ್ಷೇಪದಿಂದಾಗಿ ಬಿಜೆಪಿ ಸರ್ಕಾರದ ಧೋರಣೆ ಫಲಿಸಲಿಲ್ಲ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 4% ಮೀಸಲಾತಿಯನ್ನು ಮತ್ತೆ ಮುಸ್ಲಿಂ ಸಮಯದಾಯಕ್ಕೆ ಪುನಃಸ್ಥಾಪಿಸಿದೆ.

ಸದ್ಯ, ರಾಜ್ಯದಲ್ಲಿ ಜಾತಿ ಗಣತಿ (ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆ) ನಡೆದಿದೆ, ಜಾತಿ ಗಣತಿಯ ವರದಿಯು ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ 12.87% ರಿಂದ 18.70% ವರೆಗೆ ಇದೆ ಎಂದು ಹೇಳಲಾಗಿದೆ. ವರದಿಯು ವರ್ಗ 2B ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗುವ 4% ಮೀಸಲಾತಿಯನ್ನು ಹೆಚ್ಚಿಸುವ ಶಿಫಾರಸನ್ನೂ ಮಾಡಿದೆ. ಆದರೆ, ವರದಿ ಮತ್ತು ವರದಿಯ ಶಿಫಾರಸುಗಳನ್ನು ಪರಿಪೂರ್ಣವಾಗಿ ಈವರೆಗೆ ಜಾರಿಗೆ ತರಲಾಗಿಲ್ಲ. ಸದ್ಯ, OBC ಮೀಸಲಾತಿಯನ್ನು 32%ರಿಂದ 51%ಗೆ ಹೆಚ್ಚಿಸುವ ಶಿಫಾರಸುಗಳೂ ಇವೆ. ಆದರೆ, ಈ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸರ್ಕಾರವು ಇಚ್ಛೆ ತೋರುತ್ತಿಲ್ಲ. 

ಈ ನಡುವೆ, ಸರ್ಕಾರಿ ಗುತ್ತಿಗೆಗಳು ಮತ್ತು ಕಾಮಗಾರಿಗಳಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡಲು  2025ರ ಮಾರ್ಚ್‌ನಲ್ಲಿ ಸರ್ಕಾರವು ‘ಕರ್ನಾಟಕ ಟ್ರಾನ್ಸ್‌ಪರೆನ್ಸಿ ಇನ್ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ಸ್ (ಅಮೆಂಡ್‌ಮೆಂಟ್) ಬಿಲ್’ ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಇದರಡಿ, 2 ಕೋಟಿ ರೂ.ವರೆಗಿನ ಕಾಮಗಾರಿಗಳು ಮತ್ತು 1 ಕೋಟಿ ರೂ. ವರೆಗಿನ ಸರಕು/ಸೇವೆಗಳ ಟೆಂಡರ್‌ಗಳಲ್ಲಿ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ 4% ಮೀಸಲಾತಿ ನೀಡುವುದನ್ನು ಪ್ರಸ್ತಾಪಿಸಿದೆ. ಇದು ಅಲ್ಪಸಂಖ್ಯಾತರ ಒಟ್ಟಾರೆ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಸರ್ಕಾರ ವಾದಿಸಿದೆ. ಆದರೆ, ಈ ಮಸೂದೆಗೆ ಅಂಕಿತ ಹಾಕಲು ಹಿಂದೇಟು ಹಾಕಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, 2025ರ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕೆ ಕಳುಹಿಸಿದ್ದಾರೆ. ರಾಷ್ಟ್ರಪತಿಗಳೂ ಕೂಡ ಈವರೆಗೆ ಮಸೂದೆಗೆ ಅಂಕಿತ ಹಾಕಿಲ್ಲ. ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...