ವಾರಣಾಸಿಯ ಐತಿಹಾಸಿಕ ಮಣಿಕರ್ಣಿಕಾ ಘಾಟ್‌ನಲ್ಲಿ ಪುನರಾಭಿವೃದ್ಧಿ ಕಾರ್ಯದ ಬಗ್ಗೆ ಎಐ-ರಚಿತ ಚಿತ್ರಗಳು, ವಿಡಿಯೋಗಳು, ಚಿತ್ರಗಳು ಮತ್ತು ತಪ್ಪು ಮಾಹಿತಿಯನ್ನು ಹಂಚಿದ ಆರೋಪದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್, ಸಂಸದ ಪಪ್ಪು ಯಾದವ್, ಕಾಂಗ್ರೆಸ್‌ನ ಜಸ್ವಿಂದರ್ ಕೌರ್ ಸೇರಿದಂತೆ ಹಲವರ ವಿರುದ್ಧ ಒಟ್ಟು ಎಂಟು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಈ ಘಾಟ್ ಹಿಂದೂ ಧರ್ಮದ ಅತ್ಯಂತ ಹಳೆಯ ಮತ್ತು ಅತ್ಯಂತ ಪವಿತ್ರವಾದ ಶವಾಗಾರಗಳಲ್ಲಿ ಒಂದಾಗಿದೆ.
ಇನ್ನು ತಮ್ಮ ವಿರುದ್ಧದ ಎಫ್‌ಐಆರ್ ಬಗ್ಗೆ ಪ್ರತಿಕ್ರಿಯಿಸಿದ ಎಎಪಿಯ ಸಂಜಯ್ ಸಿಂಗ್, ಮಣಿಕರ್ಣಿಕಾ ಘಾಟ್‌ನಲ್ಲಿ ಪುನರಾಭಿವೃದ್ಧಿ ಕಾರ್ಯವು ವಿನಾಶಕ್ಕೆ ಕಾರಣವಾಗಿದೆ. ದೇವಾಲಯಗಳು ಹಾನಿಗೊಳಗಾಗಿದ್ದವು ಮತ್ತು ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನು ಮುರಿದುಹಾಕಲಾಗಿದೆ. ಸಾಧುಗಳು ಮತ್ತು ಇತರರಿಂದ ಪ್ರತಿಭಟನೆ ವ್ಯಕ್ತವಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ನಾಚಿಕೆ ಇಲ್ಲದ ಮೋದಿ ಸರ್ಕಾರಕ್ಕೆ ಕುಸ್ತಿಪಟು ಸಾಕ್ಷಿ ಮಲಿಕ್ ಕಣ್ಣೀರೇ ಸಾಕ್ಷಿ: ರಣದೀಪ್ ಸಿಂಗ್ ಸುರ್ಜೇವಾಲ
ಆದರೆ ಈ ವಿಷಯದ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ಅಧಿಕಾರಿಗಳು ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ. ಆದರೆ ನನ್ನನ್ನು ಬೆದರಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.
ಈ ನಡುವೆ ಘಾಟ್‌ನ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಧ್ವಂಸ ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿವೆ, ಶತಮಾನಗಳಷ್ಟು ಹಳೆಯದಾದ ಅಹಲ್ಯಾಬಾಯಿ ಹೋಳ್ಕರ್ ಅವರ ವಿಗ್ರಹವನ್ನು ಹಾನಿಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಆರೋಪಿಸಿದ್ದಾರೆ. ಆದರೆ ಜಿಲ್ಲಾಡಳಿತವು ಈ ಆರೋಪವನ್ನು ನಿರಾಕರಿಸಿದೆ. ಹಾಗೆಯೇ “ತಪ್ಪು ಮಾಹಿತಿ ಹರಡಿದ ಆರೋಪದಲ್ಲಿ ಎಂಟು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸಾಲ್ ಹೇಳಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಎಐ-ರಚಿತ ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಲಾಗುತ್ತಿದೆ. ಈ ಚಿತ್ರಗಳನ್ನು ನೋಡಿದ ಜನರು, ಇದನ್ನೇ ಸತ್ಯವೆಂದು ನಂಬಿ ಗೊಂದಲ, ಅಸಮಾಧಾನಗೊಂಡಿದ್ದಾರೆ. ಆದರೆ ಇದು ಎಐ-ರಚಿತ ಚಿತ್ರಗಳು, ವಿಡಿಯೋಗಳು ಎಂಬುದು ತನಿಖೆಗಳು ಬಹಿರಂಗಪಡಿಸಿವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅತುಲ್ ಅಂಜನ್ ತ್ರಿಪಾಠಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್ ಹೆಸರು ದುರ್ಬಳಕೆ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ
₹17.56 ಕೋಟಿ ವೆಚ್ಚದಲ್ಲಿ ಆಧುನೀಕರಣ
ವಾರಣಾಸಿಯ ಐತಿಹಾಸಿಕ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್‌ಗಳನ್ನು ಅಂದಾಜು ₹17.56 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗುತ್ತಿದೆ. ಮಣಿಕರ್ಣಿಕಾ ಘಾಟ್‌ನಿಂದ ಸಿಂಧಿಯಾ ಘಾಟ್‌ವರೆಗೆ ವಿಶಾಲವಾದ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ಯೋಜನೆಯ ಭಾಗವಾಗಿ ಹಳೆಯ ಕಟ್ಟಡಗಳ ತೆರವು ಕಾರ್ಯ ಚುರುಕುಗೊಂಡಿದೆ. ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನೂ ತೆಗೆಯಲಾಗಿದೆ. ಈ ನಡುವೆ ವಿಗ್ರಹಕ್ಕೆ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯಂತಹ ವಿರೋಧ ಪಕ್ಷಗಳು ಈ ಯೋಜನೆಯು ಬಿಜೆಪಿ ಸರ್ಕಾರವು “ನಾಗರಿಕತೆಯ ಮೇಲೆ ನಡೆಸಿದ ದಾಳಿ” ಎಂದು ಕರೆದಿದ್ದು, ವಿಗ್ರಹ ಮೊದಲಾದವುಗಳಿಗೆ ಸಂರಕ್ಷಣೆಯಿಲ್ಲದೆ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿವೆ. ಆದರೆ ಜಿಲ್ಲಾಡಳಿತ ಮಾತ್ರ ಯಾವುದೇ ವಿಗ್ರಹಗಳಿಗೆ ಹಾನಿಯಾಗಿಲ್ಲ ಮತ್ತು ಪಾರಂಪರಿಕ ಕಲಾಕೃತಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ ನಂತರ ಮರುಸ್ಥಾಪಿಸಲಾಗುವುದು ಎಂದು ಹೇಳಿಕೊಂಡಿದೆ. ಇವೆಲ್ಲವುದರ ನಡುವೆ ಎಐ ರಚಿತ ಚಿತ್ರಗಳೂ ಹರಿದಾಡಿವೆ.





