ಕೋವಿಡ್-19 ಅಕ್ರಮದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಆಯೋಗದ ಮಧ್ಯಂತರ ವರದಿ ಮಾಹಿತಿ ಆಧಾರವಾಗಿಸಿಕೊಂಡು ಮುಂದಿನ ತನಿಖೆ ಹಾಗೂ ಕ್ರಮ ವಹಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ”ಮಧ್ಯಂತರ ವರದಿ ಪರಿಶೀಲಿಸಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಲು ತೀರ್ಮಾನಿಸಿದೆ. ವರದಿಯಲ್ಲಿನ ಆಧಾರಗಳು, ವಿಷಯ, ಮಾಹಿತಿಯನ್ನು ಆಧಾರವಾಗಿಸಿ ಮುಂದಿನ ತನಿಖೆ ಹಾಗೂ ಕ್ರಮಕ್ಕಾಗಿ ಎಸ್ಐಟಿ ರಚಿನೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ” ಎಂದು ತಿಳಿಸಿದರು.
ಅಗತ್ಯಬಿದ್ದರೆ ಎಫ್ಐಆರ್ ದಾಖಲಿಸಿ ಕ್ರಮ
”ಮೈಕಲ್ ಡಿ.ಕುನ್ಹಾ ಆಯೋಗದ ವರದಿ ಮೇಲೆ ಕಂಡು ಬಂದ ಅಕ್ರಮಗಳ ಬಗ್ಗೆ ತನಿಖೆ ಮಾಡಲಾಗುವುದು. ಐಜಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗುತ್ತದೆ. ಆಯೋಗದ ಮಾಹಿತಿ ಆಧಾರದಲ್ಲಿ ತನಿಖೆ ಮಾಡಲಾಗುವುದು. ಎಸ್ಐಟಿ ಆರ್ಥಿಕ ಅಂಶಗಳು ಸೇರಿದಂತೆ ಅಪರಾಧ ಪ್ರಕರಣಗಳನ್ನು ದಾಖಲಿಸಿ ಕ್ರಮ ತೆಗದುಕೊಳ್ಳಲಿದೆ. ಅಗತ್ಯಬಿದ್ದರೆ ವರದಿಯ ಮಾಹಿತಿ ಹೊರತಾಗಿ ಮತ್ತೆ ತನಿಖೆ ಮಾಡಿ, ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
”ಕೋವಿಡ್ ವೇಳೆ ರಾಜ್ಯದಲ್ಲಿ ಯಾರು ಅಕ್ರಮ ಮಾಡಿದ್ದಾರೆಯೋ ಅವರ ಮೇಲೆ ಎಫ್ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಸತ್ಯಾನ್ವೇಷಣೆ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದುವರೆದ ಕ್ರಮವಾಗಿ ಎಸ್ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಧ್ವಂಸ ಸಂಸ್ಕೃತಿಗೆ ಸುಪ್ರೀಂ ಸುತ್ತಿಗೆ ಏಟು
‘ಕೋವಿಡ್ ವೇಳೆ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ, ಬೇಜವಾಬ್ದಾರಿತನ, ವಂಚನೆ ನಡೆದಿತ್ತು. ಮಾಹಿತಿಗಳನ್ನು ಅದಿಮಿಟ್ಟುಕೊಂಡು, ಕಡತ ಸಿಗದಂತೆ ಮಾಡಲಾಗಿತ್ತು. ಪಿಎಸಿ ಕೆಲಸ ಮಾಡದಂತೆ ನಿಯಂತ್ರಣ ಮಾಡಿದ್ದರು. ಎಲ್ಲಾ ವಿಧಾನಮಂಡಲ ಸಮಿತಿಗಳು ಸಭೆ ಸೇರುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಪಿಪಿಇ ಕಿಟ್ 330-440 ರೂ. ಲಭ್ಯವಿದ್ದರೆ ಅದನ್ನು ಬಿಟ್ಟು 2,017 ರೂ.ಗೆ ಲಕ್ಷಾಂತರ ಕಿಟ್ ಖರೀದಿ ಮಾಡಲಾಗಿದೆ. ದುಪ್ಪಟ್ಟು ದರದಲ್ಲಿ ಹಾಗೂ ಬ್ಲ್ಯಾಕ್ ಲಿಸ್ಟ್ನಲ್ಲಿರುವ ಕಂಪನಿಗಳಿಂದ ಖರೀದಿ ಔಷಧಿ ಮಾಡಲಾಗಿದೆ” ಎಂದು ಆರೋಪಿಸಿದರು.
ಬ್ರಹ್ಮಾಂಡ ಭ್ರಷ್ಟಾಚಾರ
”ಕೋವಿಡ್ 19 ಅಕ್ರಮದ ಸಂಬಂಧ ತನಿಖಾ ಆಯೋಗ ನೇಮಕ ಮಾಡಿತ್ತು. 50,000 ಕಡತವನ್ನು ಆಯೋಗ ಪರಿಶೀಲನೆ ನಡೆಸಿ, ಮಧ್ಯಂತರ ವರದಿ ನೀಡಿದೆ. ಆ ವರದಿಯನ್ನು ಅಧ್ಯಯನ ಮಾಡಲು ಸಂಪುಟ ಉಪಸಮಿತಿ ರಚಿಸಲಾಗಿತ್ತು. ಸಂಪುಟ ಉಪಸಮಿತಿ ಸಭೆಯಲ್ಲಿನ ಚರ್ಚೆಗಳನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಯಿತು. ಕಂಡುಬಂದ ಬ್ರಹ್ಮಾಂಡ ಭ್ರಷ್ಟಾಚಾರ, ಹಲವಾರು ಅಮಾನವೀಯ ಸಂಗತಿ, ಅಧಿಕಾರಿಗಳು ರಾಜಕೀಯ ನಾಯಕರ ನಿರ್ದೇಶನದ ಮೇರೆಗೆ ತೆಗೆದುಕೊಂಡ ಕ್ರಮಗಳು ಎಂಥವರಿಗೂ ನಡುಕ ಹುಟ್ಟಿಸುವಂತಿದೆ. ಅಂದು ಸರ್ಕಾರ ನಡೆದುಕೊಂಡ ರೀತಿ, ಅಂದಿನ ಮಂತ್ರಿಗಳು, ಸಿಎಂ ತೆಗೆದುಕೊಂಡ ಕ್ರಮಗಳು ಸತ್ಯಾನ್ವೇಷಣೆಗೆ ಅಡ್ಡಿಯಾಗುವ ಕ್ರಮವಾಗಿದೆ” ಎಂದು ಹೆಚ್.ಕೆ.ಪಾಟೀಲ್ ದೂರಿದರು.





