ವ್ಯಕ್ತಿ ಚಿತ್ರ | ಸಿಟಿ ಮಾರ್ಕೆಟ್‌ನಿಂದ ವಿಧಾನಸೌಧದವರೆಗೆ ಆರ್.ವಿ. ದೇವರಾಜ್ ಪಯಣ

Date:

ಇವತ್ತಿನ ರಾಕ್ಷಸ ರಾಜಕಾರಣವನ್ನು ನೋಡಿದರೆ, ಆರ್.ವಿ. ದೇವರಾಜ್ ಅಪಾಯಕಾರಿಯಲ್ಲ. ಕಡು ಭ್ರಷ್ಟರೂ ಅಲ್ಲ. ಪೊರೆದ ಪಕ್ಷಕ್ಕೆ, ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಹೇಳಿಕೊಳ್ಳುವಂಥದ್ದನ್ನೂ ಮಾಡಲಿಲ್ಲ. 68 ಸಾಯುವ ವಯಸ್ಸಲ್ಲ. ಆದರೆ, ಹಠಾತ್ ಹೃದಯಾಘಾತ 'ದೇವಿ'ಯನ್ನೂ ಬಿಡಲಿಲ್ಲ.

ಡಿಸೆಂಬರ್ 3- ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ಜನ್ಮದಿನ. ದೇವರಾಜ್ ಅಭಿಮಾನಿಗಳು ಮತ್ತು ಅವರ ಪಕ್ಷದ ಕಾರ್ಯಕರ್ತರು ಪ್ರತಿವರ್ಷ ಚಾಮರಾಜಪೇಟೆ, ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಅವಿನ್ಯೂ ರೋಡ್, ಜೆಸಿ ರಸ್ತೆ, ಕಲಾಸಿ ಪಾಳ್ಯಗಳಲ್ಲಿ ಶುಭಾಶಯಗಳನ್ನು ಕೋರುವ ದೊಡ್ಡ ದೊಡ್ಡ ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳನ್ನು ನಿಲ್ಲಿಸುವುದು ರೂಢಿ. ಈ ವರ್ಷವೂ ಅದು ಸಹಜವಾಗಿಯೇ ನಡೆದಿತ್ತು. ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲರೂ ಡಿ.3ಕ್ಕಾಗಿ ಕಾಯುತ್ತಿದ್ದರು.

ಜನ್ಮದಿನಕ್ಕೂ ಮುಂಚೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ದೇವಿ ದರ್ಶನ ಪಡೆಯುವುದು ದೇವರಾಜ್ ಅವರಿಗೆ ಪ್ರತಿವ‍ರ್ಷ ರೂಢಿಸಿಕೊಂಡಿದ್ದ ಸಂಪ್ರದಾಯವಾಗಿತ್ತು. ಆದಕಾರಣ ಡಿಸೆಂಬರ್ 1ರಂದು ಚಾಮುಂಡಿ ಬೆಟ್ಟಕ್ಕೆ ಹೋಗಿ, ದರ್ಶನ ಮುಗಿಸಿಕೊಂಡು ವಾಪಸ್ ಬರುತ್ತಿರುವಾಗ ಆರ್.ವಿ. ದೇವರಾಜ್‌ರಿಗೆ ಕಾರಿನಲ್ಲಿಯೇ ಹೃದಯಾಘಾತವಾಗಿತ್ತು. ಆಸ್ಪತ್ರೆಗಳ ಓಡಾಟ, ಚಿಕಿತ್ಸೆಗಳ ಮುನ್ನವೇ ಇಹಲೋಕ ತ್ಯಜಿಸಿರುವುದಾಗಿ ವೈದ್ಯರು ಘೋಷಿಸಿದ್ದರು.

ರೋಣೂರು ವೆಂಕಟೇಶಪ್ಪ ದೇವರಾಜ್ ಅವರು ಜನಿಸಿದ್ದು ಡಿಸೆಂಬರ್ 3, 1957ರಂದು. ಬೆಂಗಳೂರು ನಗರದ ಹೃದಯ ಭಾಗವಾದ ಚಾಮರಾಜಪೇಟೆ, ಸಿಟಿ ಮಾರ್ಕೆಟ್, ಚಿಕ್ಕಪೇಟೆ ಮತ್ತು ಕಲಾಸಿ ಪಾಳ್ಯದಲ್ಲಿ ಆಡಿ ಬೆಳೆದ ದೇವರಾಜ್, ಓದುವುದನ್ನು ಅರ್ಧಕ್ಕೇ ಬಿಟ್ಟು ರಾಜಕೀಯದತ್ತ ಆಕರ್ಷಿತರಾಗಿದ್ದರು. 1970ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. 80ರ ದಶಕದಲ್ಲಿ ಚಾಮರಾಜಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದರು. ನಂತರ 1985-88ರಲ್ಲಿ ಬೆಂಗಳೂರು ನಗರ ಸೇವಾದಳದ ಅಧ್ಯಕ್ಷರಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ವ್ಯಕ್ತಿಚಿತ್ರ | KSCA ಕ್ರೀಡಾಂಗಣದ ಶಿಲ್ಪಿ- ಎಂ ಚಿನ್ನಸ್ವಾಮಿ

ರಾಜಕಾರಣದಲ್ಲಿ ಹಂತ ಹಂತವಾಗಿ ಬೆಳೆಯುತ್ತ ಹೋದ ದೇವರಾಜ್ ಮನೆಮಾತು ತೆಲುಗು. ಬೀದಿಯಲ್ಲಿ ತಮಿಳು ಮತ್ತು ಕನ್ನಡ ಮಾತನಾಡುವ ಜನರೊಂದಿಗೆ ಬೆರೆತು ಬೆಳೆದರು. ಅದರಲ್ಲೂ ಮಾರ್ಕೆಟ್ ಮತ್ತು ಕಲಾಸಿಪಾಳ್ಯದ ತಮಿಳರ ‘ನಾಯಗನ್’ ಆಗಿ ಹೊರಹೊಮ್ಮಿದರು. ನಿಧಾನವಾಗಿ ಸಿಟಿ ಮಾರ್ಕೆಟ್ ಅನ್ನು ಹಿಡಿತಕ್ಕೆ ತೆಗೆದುಕೊಂಡು- ‘ಮಾರ್ಕೆಟ್ ದೇವಿ’ ಎಂಬ ಹೆಸರು ಪಡೆದರು.

ಬಳಿಕ 1989ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿತ್ತು. ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದರು. ಈ ಮೂವರಲ್ಲಿ ಆರ್.ವಿ. ದೇವರಾಜ್ ಹತ್ತಿರವಾದದ್ದು ಬಂಗಾರಪ್ಪನವರಿಗೆ. ಬಂಗಾರಪ್ಪನವರಿಗೆ ಯುವಕರೊಂದಿಗೆ ಗುರುತಿಸಿಕೊಳ್ಳುವುದು ಬಹಳ ಇಷ್ಟವಾದ ಕೆಲಸವಾಗಿತ್ತು. ಅವರನ್ನು ಬೆಳೆಸಬೇಕು, ಭವಿಷ್ಯದ ನಾಯಕರನ್ನಾಗಿ ರೂಪಿಸಬೇಕೆಂಬ ಇರಾದೆ ಇತ್ತು. ಹಾಗಾಗಿ ದೇವರಾಜ್ ಅವರ ಗುಂಪಿನಲ್ಲಿ ಗುರುತಿಸಿಕೊಂಡರು.

ಆರ್.ವಿ.ದೇವರಾಜ್

ಆನಂತರ 1999ರಲ್ಲಿ ಮತ್ತೊಮ್ಮೆ ಚಾಮರಾಜಪೇಟೆಯಿಂದ ಸ್ಪರ್ಧಿಸಿ, ಮತ್ತೊಂದು ಸಲ ಶಾಸಕರಾಗಿ ಆಯ್ಕೆಯಾದರು. ಆಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಕೃಷ್ಣರ ಆಪ್ತ ಬಳಗದಲ್ಲಿ ದೇವರಾಜ್ ಗುರುತಿಸಿಕೊಂಡರು. ಅದರ ಫಲವಾಗಿ ಎಸ್.ಎಂ. ಕೃಷ್ಣರು, ದೇವರಾಜ್ ಅವರನ್ನು ಕೆಎಸ್ಆರ್​ಟಿಸಿ ಛೇರ್ಮನ್ ಮಾಡಿದರು. ಕೃಷ್ಣ ಅವರು ಒಂದು ಬಾರಿ ನೇಮಕ ಮಾಡಿದರೆ, ದೇವರಾಜ್ ತಮ್ಮ ರಾಜಕೀಯ ಸಂಪರ್ಕ ಬಳಸಿ ಎರಡು ಬಾರಿಗೆ- 2000ರಿಂದ 2007ರವರೆಗೆ ಅಧ್ಯಕ್ಷರಾದರು. ಅದೇ ಸಮಯದಲ್ಲಿ ಬಿಲಾಸ್​ಪುರದ ಗುರು ಘಾಸಿದಾಸ್ ವಿವಿಯಲ್ಲಿ ಬಿಎ ಪದವಿಯನ್ನೂ ಪಡೆದು, ಪದವೀಧರ ಎನಿಸಿಕೊಂಡರು.

ಆರ್.ವಿ. ದೇವರಾಜ್ ಕೆಎಸ್ಆರ್​ಟಿಸಿ ಛೇರ್ಮನ್ ಆಗಿದ್ದಾಗ, ‘ಅಗ್ನಿ’ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಗ್ನಿ ಸಂಪಾದಕರಾದ ಶ್ರೀಧರ್, ಆರ್.ವಿ. ದೇವರಾಜ್ ಬಗ್ಗೆ ಬರೆಯುವಾಗ ‘ಮಾರ್ಕೆಟ್ ದೇವಿ’ ಎಂದು ಬರೆಯುವ ಮೂಲಕ ಅವರ ಹೆಸರನ್ನು ಮತ್ತು ಪಾತ್ರವನ್ನು ಭೂಗತ ಲೋಕದೊಂದಿಗೆ ತಳಕು ಹಾಕುತ್ತಿದ್ದರು. ಅದೇ ಸಮಯದಲ್ಲಿ ತೆಲುಗಿನಲ್ಲಿ ‘ರೌಡಿ ಎಂಎಲ್ಎ’ ಎಂಬ ಚಿತ್ರ ಕೂಡ ಬಿಡುಗಡೆಯಾಗಿತ್ತು. ಆ ಚಿತ್ರವನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ರೀಮೇಕ್ ಮಾಡಿ, ಅಂಬರೀಷ್ ನಾಯಕನಟನಾಗಿ ನಟಿಸಿದ್ದು- ರೌಡಿಗಳೂ ಶಾಸಕರಾಗಬಹುದು, ಸಮಾಜ ಸೇವೆ ಸಲ್ಲಿಸಬಹುದು, ಬದಲಾಗಬಹುದು ಎಂಬ ಸಂದೇಶವನ್ನು ಸಾರುತ್ತಿತ್ತು.  

ಒಂದು ದಿನ ಅಗ್ನಿ ಶ್ರೀಧರ್ ಅವರು, ‘ಆರ್.ವಿ. ದೇವರಾಜ್ ಅವರನ್ನು ಮಾತನಾಡಿಸಿ, ಒಂದು ಸ್ಟೋರಿ ಮಾಡಿ’ ಎಂದರು. ಆರ್.ವಿ. ದೇವರಾಜ್ ಮತ್ತು ಶ್ರೀಧರ್ ಅವರ ಹಿನ್ನೆಲೆ ಗೊತ್ತಿತ್ತು. ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ನೋಡಿದ್ದೆ. ಆದರೆ, ಅದು ಅವರ ಆಯ್ಕೆ ಎಂದು, ದೇವರಾಜ್‌ರನ್ನು ಕಾಣಲು ಶಾಂತಿನಗರದ ಕೆಎಸ್ಆರ್​ಟಿಸಿ ಛೇರ್ಮನ್‌ರ ಕಚೇರಿಗೆ ಹೋದೆ. ಅವರ ಕಚೇರಿಯ ಸುತ್ತಮುತ್ತ ನಾಲ್ಕಾರು ಪತ್ರಕರ್ತರು ಸುಳಿದಾಡುತ್ತಿದ್ದರು. ಅವರೆಲ್ಲ ಸಣ್ಣಪುಟ್ಟ ಪತ್ರಿಕೆಗಳ ಪತ್ರಕರ್ತರು. ನಾನು ಹೋಗಿ, ಅವರ ಪಿಎಗೆ ತಿಳಿಸಿದಾಗ, ಅವರು ಕೊಂಚ ತಿರಸ್ಕಾರದಿಂದಲೇ, ಕೂತಿರಿ ಎಂದರು. ಕರೆದಾಗ ಹೋದೆ, ಬಹಳ ಆತ್ಮೀಯವಾಗಿಯೇ ಬನ್ನಿ, ಏನು ಎಂದರು. ನಾನು ಉತ್ತರಿಸುವ ಮೊದಲೇ ಕವರ್ ತೆಗೆಯಲು ನೋಡಿದರು. ಅದರ ನಡುವೆಯೇ ಯಾವ ಪತ್ರಿಕೆ ಅಂದರು. ‘ಅಗ್ನಿ’ ಎಂದಾಕ್ಷಣ ಅವರ ಮುಖದ ಚಹರೆಯೇ ಬದಲಾಯಿತು. ಕೊಂಚ ಗರಂ ಆದರು. ‘ನಾನಿನ್ನೂ ಅಲ್ಲೇ ಇಲ್ರಿ, ಪೊಲಿಟಿಷಿನ್, ಛೇರ್ಮನ್ನು, ನನ್ ಕೈ ಕೆಳಗೆ ಒಂದು ನಿಗಮ ಇದೆ, ಸಾವಿರಾರು ಜನ ಕೆಲಸ ಮಾಡ್ತರೆ, ಅಲ್ಲಿದ್ದೂ ಇಲ್ದಂಗ್ ಬರಿತರಲ್ಲ, ಅವರಿಗೆ ಹೇಳಿ’ ಎಂದು ಸರ್‍‌ಕ್ಯಾಸ್ಟಿಕ್ಕಾಗಿ ಹೇಳಿ ಅತ್ತ ತಿರುಗಿದರು.

ಆ ರೀತಿಯ ಅನುಭವ ಅದೇ ಮೊದಲು. ಕೊಂಚ ಸುಧಾರಿಸಿಕೊಂಡು ರಸ್ತೆಗೆ ಬಿದ್ದೆ. ತಲೆಯಲ್ಲಿದ್ದದ್ದು ರಸ್ತೆಯ ಚಿತ್ರಗಳಂತೆ ಚದುರಿಹೋಯಿತು. ಅದನ್ನು ಶ್ರೀಧರ್ ಅವರಿಗೂ ಹೇಳಲಿಲ್ಲ. ನನಗನ್ನಿಸುವ ಪ್ರಕಾರ, ಆರ್.ವಿ. ದೇವರಾಜ್‌ರಿಗೆ ಪತ್ರಕರ್ತರೆಂದರೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಯಾರಾದರೂ ಪತ್ರಕರ್ತರೆಂದು ಹೇಳಿಕೊಂಡು ಬಂದರೆ, ಸಿಟಿ ಮಾರ್ಕೆಟ್ ಶೈಲಿಯಲ್ಲಿಯೇ ವ್ಯವಹರಿಸುತ್ತಿದ್ದರು. ಅದಕ್ಕೊಂದು ಉದಾಹರಣೆಯಾಗಿ, ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯ ಮಾಜಿ ಸುದ್ದಿ ಸಂಪಾದಕರೊಬ್ಬರಿಗೆ ಹೃದಯಾಘಾತವಾಯಿತು. ಅವರು ನೆರವು ಕೇಳಲು, ಅವರಿಗೆ ಗೊತ್ತಿರುವ ರಾಜಕೀಯ ನಾಯಕರ ಬಳಿಗೆ ಮಗನನ್ನು ಕಳಿಸಿದರು. ಆ ಪುತ್ರ ಆರ್.ವಿ. ದೇವರಾಜ್‌ರಲ್ಲಿಗೆ ಬಂದು, ವಿನಯಪೂರ್ವಕವಾಗಿ ವಿಷಯ ಮುಟ್ಟಿಸಿದರು. ತಕ್ಷಣ ಸಿಟ್ಟಿಗೆದ್ದ ದೇವರಾಜ್, ‘ನಿಮ್ಮಪ್ಪನಿಗೆ, ನಿನಗೆ ಮತ್ತು ಹುಟ್ಟಲಿರುವ ನಿನ್ನ ಮಗನಿಗೂ ಕೊಟ್ಟಾಗಿದೆ, ಸುಮ್ನೆ ಹೋಗ್ತಾಯಿರು’ ಎಂದುಬಿಟ್ಟರು.

ಇಂತಹ ದೇವರಾಜ್, 2004ರಲ್ಲಿ, ವಿಧಾನಸಭೆಗೆ ಇನ್ನೂ ಆರು ತಿಂಗಳು ಇರುವಂತೆಯೇ ಬರ್ಖಾಸ್ತು ಮಾಡಿ ಚುನಾವಣೆಗೆ ಹೋದ ಎಸ್.ಎಂ. ಕೃಷ್ಣರಿಗೆ, ತಮ್ಮ ಚಾಮರಾಜಪೇಟೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಕೃಷ್ಣರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಾಡಿ, 13 ಸಾವಿರ ಚಿಲ್ಲರೆ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬಂದಿದ್ದರು. ಅವರ ಕೃಪಾಶೀರ್ವಾದಕ್ಕೆ ಒಳಗಾಗಿದ್ದರು. ಆದರೆ 2005ರಲ್ಲಿ ಎಸ್.ಎಂ.ಕೃಷ್ಣರು ರಾಜ್ಯ ತೊರೆದು ಕೇಂದ್ರದತ್ತ ಹೆಜ್ಜೆ ಹಾಕಿದಾಗ, ತಾವು ಗೆದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ತೆರವಾದ ಶಾಸಕ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ಜೆಡಿಎಸ್‌ನಿಂದ ಜಮೀರ್ ಅಹಮದ್ ಖಾನ್, ಕಾಂಗ್ರೆಸ್ಸಿನಿಂದ ಯಥಾಪ್ರಕಾರ ಆರ್.ವಿ. ದೇವರಾಜ್ ಸ್ಪರ್ಧಿಗಳಾದರು. ಅದೇ ಮೊದಲಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಜಮೀರ್ ಅಹಮದ್ ಖಾನ್, ಹೊಸ ತಂತ್ರಗಳ ಮೂಲಕ ಕಣಕ್ಕಿಳಿದಿದ್ದರು. ಅವರ ಎದುರು ಮಾರ್ಕೆಟ್ಟಿನ ಹಳೇ ಹುಲಿ ಆರ್.ವಿ. ದೇವರಾಜ್ ಕಳೆಗುಂದಿದಂತೆ ಕಾಣತೊಡಗಿದರು. ಅದು 3 ಸಾವಿರ ಮತಗಳ ಅಂತರದಿಂದ ಆರ್.ವಿ. ದೇವರಾಜ್ ಸೋಲುವ ಮೂಲಕ ಫಲಿತಾಂಶದಲ್ಲೂ ಕಂಡಿತ್ತು. ಆನಂತರ 2008ರ ಕ್ಷೇತ್ರ ವಿಂಗಡಣೆಯಲ್ಲಿ ಆರ್.ವಿ. ದೇವರಾಜ್ ಚಾಮರಾಜಪೇಟೆ ಕ್ಷೇತ್ರವನ್ನು ಕಳೆದುಕೊಂಡಿದ್ದರು. ಚಾಮರಾಜಪೇಟೆಯ ಕೆಲ ಭಾಗಗಳನ್ನು ಒಳಗೊಂಡಿದ್ದ ಚಿಕ್ಕಪೇಟೆಯಿಂದ ಸ್ಪರ್ಧಿಸಿ, 2013ರಲ್ಲಿ ಮತ್ತೊಮ್ಮೆ ಶಾಸಕರಾದರು.

ಇದನ್ನು ಓದಿದ್ದೀರಾ? ದೀಪಿಕಾ ಟಿ ಸಿ | ಅಂಧತ್ವದ ಗೆರೆಗಳನ್ನು ಮೀರಿ ಕ್ರಿಕೆಟ್‌ನಲ್ಲಿ ಬೆಳಗುತ್ತಿರುವ ನಕ್ಷತ್ರ

ಹೀಗೆ ಮೂರು ಬಾರಿ ನೇರವಾಗಿ ಜನರಿಂದ ಆಯ್ಕೆಯಾಗಿ ಶಾಸಕರಾದ ಆರ್.ವಿ. ದೇವರಾಜ್, ತಮ್ಮನ್ನು ನಂಬಿದ, ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಏನು ಮಾಡಿದರು ಎನ್ನುವುದನ್ನು ಚಾಮರಾಜಪೇಟೆಯ ಮತದಾರರೇ ಹೇಳಬೇಕು. ಆದರೆ ದೇವರಾಜ್‌ರಲ್ಲಿ ಮಂತ್ರಿಯಾಗಬೇಕೆಂಬ ಅದಮ್ಯ ಆಸೆ ಇತ್ತು. ಎಸ್.ಎಂ. ಕೃಷ್ಣರು ಅಧಿಕಾರದಿಂದ ದೂರ ಸರಿಯುತ್ತಿದ್ದಂತೆ, ದೇವರಾಜ್‌ರಿಗೂ ಗಾಡ್‌ಫಾದರ್‍‌ಗಳ ಕೊರತೆ ಕಾಡತೊಡಗಿತು. ಆದರೂ ಪಟ್ಟು ಬಿಡದ ದೇವರಾಜ್, ಹೈಕಮಾಂಡ್ ಮೇಲೆ ಪ್ರಭಾವ ಬೀರಿ, ಒಂದು ಸಲ ವಿಧಾನ ಪರಿಷತ್ತಿಗೆ ನೇಮಕಗೊಂಡರು. ಮಗನನ್ನು ಕಾರ್ಪೊರೇಷನ್ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡರು. ತಮ್ಮ ನಂತರ ಪುತ್ರ ರಾಜಕಾರಣದಲ್ಲಿ ನೆಲೆಯೂರುವಂತೆ ನೋಡಿಕೊಂಡರು. 2012ರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 2016ರಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.

rv devaraj 2025 12 02 08 50 17

ನಗರದಲ್ಲಿ ಹುಟ್ಟಿ ಬೆಳೆದು, ಕಾಸ್ಮೋ ಕಲ್ಚರ್ ಅನ್ನು ಅರಗಿಸಿಕೊಂಡಿದ್ದ ದೇವರಾಜ್ ಅವರಿಗೂ, ಬದಲಾದ ರಾಜಕಾರಣಕ್ಕೆ ತಕ್ಕಂತೆ ಬದಲಾಗಲು ಸಾಧ್ಯವಾಗಲಿಲ್ಲ. ಅಂದರೆ, ಬೆಂಗಳೂರಿನ ಹೃದಯಭಾಗದಲ್ಲಿದ್ದು, ನಗರದ ಜನರನ್ನು ಬಹಳ ನಾಜೂಕಾಗಿ ನಿಭಾಯಿಸುತ್ತ, ತಮಿಳು-ತೆಲುಗು-ಉರ್ದು ಮತ್ತು ಕನ್ನಡದಲ್ಲಿ ವ್ಯವಹರಿಸುತ್ತ, ಮತದಾರರ ಮನಸ್ಸು ಗೆದ್ದಿದ್ದ ದೇವರಾಜ್ ಅವರಿಗೆ, 2015ರ ನಂತರದ ಕೋಮುವಾದಿ ರಾಜಕಾರಣ ಕೊಂಚ ಕಷ್ಟವೆನಿಸಿತು. ಅದರ ಫಲವಾಗಿ 2018 ಮತ್ತು 2023ರಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಉದಯ ಗರುಡಾಚಾರ್ ವಿರುದ್ಧ ಸೋತರು. ನಿಧಾನವಾಗಿ ರಾಜಕೀಯ ಕ್ಷೇತ್ರದಿಂದ ಕಣ್ಮರೆಯಾಗಿ ನೇಪಥ್ಯಕ್ಕೆ ಸರಿದರು.

ಇವತ್ತಿನ ರಾಕ್ಷಸ ರಾಜಕಾರಣವನ್ನು ನೋಡಿದರೆ, ದೇವರಾಜ್ ಅಪಾಯಕಾರಿಯಲ್ಲ. ಕಡು ಭ್ರಷ್ಟರೂ ಅಲ್ಲ. ಪೊರೆದ ಪಕ್ಷಕ್ಕೆ, ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಹೇಳಿಕೊಳ್ಳುವಂಥದ್ದನ್ನೂ ಮಾಡಲಿಲ್ಲ. 68 ಸಾಯುವ ವಯಸ್ಸಲ್ಲ. ಆದರೆ, ಹಠಾತ್ ಹೃದಯಾಘಾತ ‘ದೇವಿ’ಯನ್ನೂ ಬಿಡಲಿಲ್ಲ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...