- ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರ ರೂ. 200 ಇಳಿಸಿದ ಕೇಂದ್ರ ಸರ್ಕಾರ
- ತಿಂಗಳ ಹಿಂದೆ ಆನ್ಲೈನ್ ತರಗತಿಯಲ್ಲಿ ಶಿಕ್ಷಕ ನೀಡಿದ್ದ ಹೇಳಿಕೆ ಕೂಡ ವೈರಲ್
2024ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಎಲ್ಲ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ₹200 ರೂಪಾಯಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ.
ಓಣಂ ಮತ್ತು ರಕ್ಷಾಬಂಧನ್ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಇದು ವಿಶೇಷ ಉಡುಗೊರೆಯಾಗಿ ದರ ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಹೇಳಿದೆಯಾದರೂ, ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿಯೇ ತೆಗೆದುಕೊಂಡಿರುವ ಈ ನಿರ್ಧಾರವು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕೇಂದ್ರದ ನಡೆಯನ್ನು ಟೀಕಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್, ‘ಇದು ಹೊಸ ಜುಮ್ಲಾ. ಸಾವಿರ ದರೋಡೆ ಮಾಡಿ, ಇನ್ನೂರು ಉಡುಗೊರೆಯಾಗಿ ಹಿಂತಿರುಗಿಸುವುದು’ ಎಂದು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
200 ರೂ ಕಡಿಮೆ ಮಾಡಿರುವ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದರು. ಈ ಹೇಳಿಕೆಯನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್, ‘ಇದು ಹೊಸ ಜುಮ್ಲಾ’ ಎಂದು ಟೀಕಿಸಿದ್ದಾರೆ.
ಈ ನಡುವೆ ಡಾ. ನಿಮೋ ಯಾದವ್ ಎಂಬ ಟ್ವಿಟರ್, ಅನ್ ಅಕಾಡೆಮಿ ಆನ್ಲೈನ್ ತರಗತಿ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರೊಫೆಸರ್ ಒಬ್ಬರು ಗ್ಯಾಸ್ ದರಕ್ಕೆ ಸಂಬಂಧಿಸಿ ಕಳೆದ ತಿಂಗಳು ನೀಡಿದ್ದ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ. ತಿಂಗಳ ಹಿಂದೆಯೇ ದರ ಇಳಿಕೆಯ ಬಗ್ಗೆ ಈ ಪ್ರೊಫೆಸರ್ ಭವಿಷ್ಯ ನುಡಿದಿದ್ದರು ಎಂದು ಬರೆದುಕೊಂಡಿದ್ದಾರೆ.
ಟ್ವೀಟ್ನಲ್ಲಿ, ‘ಇವರು ಅವಧ್ ಓಜಾ. ಅನ್ ಅಕಾಡೆಮಿ ಆನ್ಲೈನ್ ತರಗತಿಯ ಶಿಕ್ಷಕ. ವಿಶ್ವದ ಇತಿಹಾಸವನ್ನು ಕಲಿಸುತ್ತಾರೆ. 2024ರ ಚುನಾವಣೆ ಸಮೀಪ ಬರುತ್ತಿದ್ದಂತೆ, ಮುಂಬರುವ ತಿಂಗಳುಗಳಲ್ಲಿ ಸರ್ಕಾರವು ಎಲ್ಪಿಜಿ ಸಿಲಿಂಡರ್ ಮತ್ತು ಇಂಧನದ ಬೆಲೆಗಳನ್ನು ಕಡಿಮೆ ಮಾಡುವುದನ್ನು ನೀವು ನೋಡುತ್ತೀರಿ. ಸರ್ಕಾರವು ಜನರನ್ನು ಮೂರ್ಖರನ್ನಾಗಿ ಮಾಡುವುದು ಹೀಗೆ ಎಂದಿದ್ದರು. ಸರ್ಕಾರವು ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ ₹200 ರಷ್ಟು ಕಡಿಮೆ ಮಾಡಿದೆ. ಅವರ ಮಾತು ಇಂದು ನಿಜವಾಗಿದೆ” ಎಂದು ಬರೆದುಕೊಂಡಿದ್ದಾರೆ.





