ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪೂರ್ಣವಾಗದ ಕಾರಣ ಸಮೀಕ್ಷೆ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಹಾಗೆಯೇ ಸಮೀಕ್ಷೆ ಕಾರ್ಯದಿಂದ ಶಿಕ್ಷಕರನ್ನು ಕೈಬಿಡಲಾಗಿದೆ. ಇತರ ಇಲಾಖೆಯ ಸಿಬ್ಬಂದಿಯನ್ನು ಸಮೀಕ್ಷೆಗೆ ಬಳಸಿಕೊಳ್ಳುವ ನಿರ್ಧಾರವನ್ನು ಮಾಡಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆದಿದ್ದು ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ; ಶಾಲಾ ಸಮಯಯೂ ಬದಲಾವಣೆ
ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್ 18ರ ವರೆಗೆ ಜಾತಿ ಸಮೀಕ್ಷೆ ಕಾರ್ಯ ವಿಸ್ತರಣೆಗೊಂಡಿತ್ತು. ಆದರೆ ಇದೀಗ ಅಕ್ಟೋಬರ್ 31ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಈವರೆಗೆ ಬೆಂಗಳೂರು ಹೊರತುಪಡಿಸಿ ಶೇ.95-98ರಷ್ಟು ಸಮೀಕ್ಷೆ ಕಾರ್ಯ ಮುಗಿದಿದೆ. ಆದರೆ, ರಾಮನಗರ, ಬೀದರ್, ಧಾರವಾಡ ಮೂರು ಜಿಲ್ಲೆಗಳಲ್ಲಿ ಶೇ.86-89ಕ್ಕಿಂತ ಕಡಿಮೆ ಪ್ರಗತಿ ಕಂಡಿದೆ. ಬೆಂಗಳೂರಲ್ಲಿ ಅತಿ ಕಡಿಮೆ ಪ್ರಗತಿ ಕಂಡಿರುವ ಬಗ್ಗೆ ಚರ್ಚೆ ನಡೆದಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರದ ತನಕ ರಜೆ ಇದ್ದು, ಅ.23ರಿಂದ ಅ.31ರವರೆಗೆ ಸಮೀಕ್ಷೆ ನಡೆಸಿ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಮೀಕ್ಷೆ ಅವಧಿ ವಿಸ್ತರಣೆ ಮಾಡಿದ ಬಳಿಕ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಗಣತಿ ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಉಳಿದ ಸಮೀಕ್ಷೆಯನ್ನು ಇಲಾಖೆ ಸಿಬ್ಬಂದಿ ಬಳಸಿಕೊಂಡು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಹಾಗೆಯೇ ಸಮೀಕ್ಷೆಗೆ ಇನ್ನೂ ಅವಕಾಶ ನೀಡಲಾಗಿರುವ ಕಾರಣ ಯಾರು ಇನ್ನೂ ಸಮೀಕ್ಷೆಯಲ್ಲಿ ಭಾಗಿಯಾಗಿಲ್ಲವೋ ಅವರು ಸಮೀಕ್ಷೆಯಲ್ಲಿ ಭಾಗಿಯಾಗಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.





