ಗುರುವಾರದಿಂದ ರಾಜ್ಯ ವಿಶೇಷ ಅಧಿವೇಶನ ಆರಂಭವಾಗಿದ್ದು, ಅಧಿವೇಶನದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇವಲ ಎರಡೇ ನಿಮಿಷ ಮಾತ್ರವೇ ಭಾಷಣ ಮಾಡಿ ಹೊರನಡೆದಿದ್ದಾರೆ. ರಾಜ್ಯಪಾಲರ ನಡೆಯನ್ನು ಖಂಡಿಸಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, “ನನ್ನ ಸರ್ಕಾರವು ರಾಜ್ಯದ ಅರ್ಥಿಕ, ಸಾಮಾಜಿಕ, ಭೌತಿಕ ಅಭಿವೃದ್ಧಿಯನ್ನು ದ್ವಿಗುಣ ಮಾಡಲು ಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ” ಎಂದಷ್ಟೇ ಹೇಳಿ, ಭಾಷಣ ಮುಗಿಸಿದ್ದಾರೆ.
ರಾಜ್ಯಪಾಲರು ಭಾಷಣ ಪೀಠದಿಂದ ಕೆಳಗಿಳಿದು ಬಂದಾಗ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯಪಾಲರಿಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ನಡೆಯು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಮನರೇಗಾವನ್ನು ಕಿತ್ತು, ಹೊಸದಾಗಿ ವಿಬಿ ಜಿ ರಾಮ್ ಜಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ. ಆ ಮೂಲಕ, ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ. ಮನರೇಗಾ ಮರುಸ್ಥಾಪನೆಗೆ ಆಗ್ರಹಿಸಿ, ಹೊಸ ಮಸೂದೆಯ ವಿರುದ್ಧ ನಿರ್ಣಯ ಅಂಗೀಕರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ವಿಶೇಷ ಅಧಿವೇಶನ ಕರೆದಿದೆ. ಅಧಿವೇಶನದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸರ್ಕಾರವು ರಾಜ್ಯಪಾಲರಿಗೆ ಭಾಷಣವನ್ನು ಸಿದ್ದಪಡಿಸಿ ಕೊಟ್ಟಿತ್ತು. ಆದರೆ, ಅದರಲ್ಲಿ ಮನರೇಗಾ ಕುರಿತುನ ವಿಚಾರಗಳು ಉಲ್ಲೇಖವಾಗಿದ್ದರಿಂದ ಆ ಭಾಷಣವನ್ನು ಒದಲು ರಾಜ್ಯಪಾಲರು ಹಿಂದೇಟು ಹಾಕಿದ್ದರು. ಇದೀಗ, ತಮ್ಮದೇ ಎರಡು ಸಾಲುಗಳ ಭಾಷಣ ಮಾಡಿ, ವಿಧಾನಸೌಧದಿಂದ ಹೊರನಡೆದಿದ್ದಾರೆ.




