ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಮೋದಿ ಸರ್ಕಾರ ತನ್ನ ಅಸಮರ್ಥತೆಯ ಸತ್ಯ ಬಹಿರಂಗಗೊಳ್ಳುತ್ತದೆ ಎಂಬ ಭಯ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಟೀಕಿಸಿದೆ.
ಲೋಕಸಭೆಯಲ್ಲಿ ಲಡಾಖ್ ಗಡಿ ಸಂಘರ್ಷ ಮತ್ತು ಚೀನಾ ಸೇನೆಯ ಚಟುವಟಿಕೆಗಳ ಕುರಿತು ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ ಅವರ ಪುಸ್ತಕದಲ್ಲಿನ ಮಾಹಿತಿಯನ್ನು ಓದಲು ಮುಂದಾಗುತ್ತಿದ್ದಂತೆ, ರಾಹುಲ್ ಅವರನ್ನು ತಡೆಯಲಾಗಿದೆ. “ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ” ಎಂಬ ಅಪ್ರಕಟಿತ ಪುಸ್ತಕದ ಅಂಶಗಳು ಅದಾಗಿವೆ.
ಇದನ್ನು ಓದಿದ್ದೀರಾ? ಟ್ರಂಪ್‌ಗೆ ಭಯಪಡುವ ಮೋದಿ, ಅಂಬಾನಿ-ಅದಾನಿಯ ‘ರಿಮೋಟ್ ಕಂಟ್ರೋಲ್’ನಲ್ಲಿದ್ದಾರೆ: ರಾಹುಲ್ ಗಾಂಧಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ, ಈ ಪುಸ್ತಕವು ಇನ್ನೂ ಪ್ರಕಟಗೊಂಡಿಲ್ಲ, ಅಪ್ರಕಟಿತ ವಿಷಯಗಳನ್ನು ಸದನದಲ್ಲಿ ಉಲ್ಲೇಖಿಸುವುದು ನಿಯಮಗಳಿಗೆ ವಿರುದ್ಧ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಕೂಡ ಓದಲು ಅವಕಾಶ ನೀಡಿಲ್ಲ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು, “ಈ ನಕಲಿ ರಾಷ್ಟ್ರೀಯತಾವಾದಿ ಸರ್ಕಾರವು ತಮ್ಮ ಅಸಮರ್ಥತೆಯ ಸತ್ಯ ಹೊರಬರಬಹುದು ಎಂದು ಎಷ್ಟು ಹೆದರುತ್ತಿದೆಯೆಂದರೆ, ಅವರು ರಾಹುಲ್ ಗಾಂಧಿ ಮಾತನಾಡದಂತೆ ತಡೆಯಲು ಹಿರಿಯ ಸಚಿವರುಗನ್ನು ಇರಿಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಬರೆದ ಪುಸ್ತಕದ ಪ್ರಕಟಣೆಯನ್ನು ತಡೆಯಲು ಅವರು ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದರು. ಈಗ ಅವರ ರಾಷ್ಟ್ರೀಯತಾವಾದಿ ಬದ್ಧತೆಗಳನ್ನು ಬಹಿರಂಗಪಡಿಸುವ ಆಯ್ದ ಭಾಗಗಳು ಹೊರಬರುತ್ತವೆ ಎಂದು ತಿಳಿಯುತ್ತಿದ್ದಂತೆ ರಾಹುಲ್ ಅವರ ಬಾಯಿ ಮುಚ್ಚಿಸಿದರು” ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
“ನಿಯಮಗಳನ್ನು ಸ್ಪಷ್ಟವಾಗಿ ತಪ್ಪಾಗಿ ಪಾಲಿಸುತ್ತ ಸರ್ಕಾರವು ಚೀನಾ ವಿರುದ್ಧದ ಸಂಘರ್ಷದಲ್ಲಿ ತಮ್ಮ ಹಿಮಾಲಯನ್ ಪ್ರಮಾದಗಳ ಬಗ್ಗೆ ಸದನ ಮತ್ತು ಭಾರತದ ಜನರಿಗೆ ತಿಳಿಯದಂತೆ ಮಾಡುತ್ತಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.





