ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸುವ ಭರದಲ್ಲಿ ಮುಸ್ಲಿಂ ಸಮುದಾಯದ ಕುರಿತು ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ಮಾಸಿಕ 2,000 ರೂ. ನೀಡುವುದಾಗಿ ಘೋಷಿಸಿದೆ. ಪ್ರತಿ ಕುಟುಂಬದಲ್ಲೂ ಮನೆಯ ಯಜಮಾನಿ ಯಾರು ಎಂಬುದನ್ನು ಗುರುತಿಸಿ, ಅವರಿಗೆ ಈ ಯೋಜನೆಯ ಫಲಾನುಭವ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಈ ಯೋಜನೆಯ ಕುರಿತು ವ್ಯಂಗ್ಯವಾಡಿರುವ ಪ್ರತಾಪ್ ಸಿಂಹ, ಮುಸ್ಲಿಂ ಸಮುದಾಯ ಕುರಿತು ಹಗುರವಾಗಿ ಮಾತನಾಡಿದ್ದಾರೆ.
“ಗೃಹಲಕ್ಷ್ಮಿ ಯೋಜನೆಗೆ ಯಾರು ಫಲಾನುಭವಿ ಎಂದು ತೀರ್ಮಾನ ಮಾಡಬೇಕಂತೆ. ಯಾರು ತೀರ್ಮಾನ ಮಾಡ್ತಾರೆ. ಅತ್ತೆ-ಸೊಸೆ ತೀರ್ಮಾನ ಮಾಡಲು ಸಾಧ್ಯವಾ? ಸಾಬರ ಮನೆಗಳಲ್ಲಿ ಎರಡು-ಮೂರು ಹೆಂಡತಿಯರು ಇದ್ದಾರೆ. ಅವರಲ್ಲಿ ಮನೆ ಯಜಮಾನಿ ಯಾರಾಗುತ್ತಾರೆ? ಮನೆಯೊಳಗೆ ಬೆಂಕಿ ಹೊತ್ತಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
“ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲ ಭರವಸೆಗಳನ್ನು ಪೂರೈಸಲು ಕೇಂದ್ರ ಬಜೆಟ್ ಹಣ ತಂದರೂ ಸಾಕಾಗುವುದಿಲ್ಲ” ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ.




