ಇತ್ತೀಚೆಗೆ ಕೇಂದ್ರ ಸರ್ಕಾರವು ಜಿಎಸ್‌ಟಿ ದರ ಪತಿಷ್ಕರಣೆ ನಡೆಸಿದೆ. ಹಲವು ವಸ್ತುಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿದೆ. ಆದರೆ, ಜಿಎಸ್‌ಟಿ ದರ ಕಡಿತದ ಹೊರೆಯನ್ನು ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಹೇರಿದೆ. ಇದರಿಂದ, ರಾಜ್ಯಗಳ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹಲವು ರಾಜ್ಯಗಳು ಕಳವಳ ವ್ಯಕ್ಯಪಡಿಸಿವೆ. ರಾಜ್ಯಗಳ ಮೇಲಾಗುವ ಹೊರೆಯನ್ನು ತಗ್ಗಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.
ಜಿಎಸ್‌ಟಿ ಕಡಿತದ ಹೊರೆಯು ರಾಜ್ಯಗಳ ಮೇಲೆ ಬೀಳಲಿದೆ. ಪರಿಣಾಮ, ಕರ್ನಾಟಕಕ್ಕೆ 18,500 ಕೋಟಿ ರೂ. ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆಯೇ ಹೇಳಿದ್ದರು. ಜಿಎಸ್‌ಟಿ ದರ ಕಡಿತವನ್ನು ಖಂಡಿಸಿದ್ದರು. ಇದೀಗ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಸೆಸ್‌ನಿಂದ ಸಂಗ್ರಹವಾಗುವ ಆದಾಯದಲ್ಲಿ 50% ಹಣವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತಾವು ಬರೆದ ಪತ್ರದ ಚಿತ್ರಗಳನ್ನು ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, “ಜಿಎಸ್‌ಟಿ ದರ ಕಡಿತದಿಂದ ರಾಜ್ಯಗಳ ಆದಾಯಕ್ಕೆ ನಷ್ಟ ಉಂಟಾಗಿದೆ. GST ಕೌನ್ಸಿಲ್ ಸಭೆಯಲ್ಲಿ ನಾಗರಿಕರ ಹೊರೆ ಕಡಿಮೆ ಮಾಡಲು ರಾಜ್ಯಗಳು ಬೆಂಬಲ ಸೂಚಿಸಿವೆ. ಆದರೆ, ದೇಶದ GST ಸಂಗ್ರಹದಲ್ಲಿ ಭಾರಿ ಕುಸಿತ ಕಂಡಿದೆ” ಎಂದು ಹೇಳಿದ್ದಾರೆ.
“ಕಳೆದ ವರ್ಷ, 2024-25ರ ನವೆಂಬರ್‌ನಲ್ಲಿ GST 9.3% ಬೆಳವಣಿಗೆ ಆಗಿತ್ತು. 2025-26ರ ನವಂಬರ್‌ನಲ್ಲಿ GST ಸಂಗ್ರಹದಲ್ಲಿ 2% ಕುಸಿತವಾಗಿದೆ. ನಿವ್ವಳ ದೇಶೀಯ GST ಬೆಳವಣಿಗೆ ದರ ಇಳಿಕೆ ಕಂಡಿದೆ. ಜಿಎಸ್‌ಟಿ ದರ ಕಡಿತದ ಬಳಿಕ 3 ತಿಂಗಳಲ್ಲಿ 1.7% ಮಾತ್ರ ಬೆಳವಣಿಗೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8.9% ಬೆಳವಣಿಗೆ ಇತ್ತು. ಇದರಿಂದ ಕರ್ನಾಟಕದ ಬೊಕ್ಕಸಕ್ಕೆ 18,500 ಕೋಟಿ ರೂ. ನಷ್ಟವಾಗಿದೆ” ಎಂದು ವಿವರಿಸಿದ್ದಾರೆ.
“ಈ ವರ್ಷ, ಕರ್ನಾಕಟಕ್ಕೆ 9,000 ಕೋಟಿಗಳ ಆದಾಯ ಕೊರತೆ ಸಾಧ್ಯತೆ ಇದೆ. ವಿಲೀನಗೊಳಿಸದಿರುವಿಕೆಯಿಂದ 9,500 ಕೋಟಿ ರೂ. ನಷ್ಟವಾಗಲಿದೆ. ಈ ನಷ್ಟವನ್ನು ಕೇಂದ್ರವು ರಾಜ್ಯಗಳಿಗೆ ಸರಿದೂಗಿಸಬೇಕು. ಪಾನ್ ಮಸಾಲಾ ಸೆಸ್ ಆದಾಯವನ್ನು 50:50 ಆಧಾರದ ಮೇಲೆ ರಾಜ್ಯಗಳೊಂದಿಗೆ ಹಂಚಿಕೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.




