“ಜೆಡಿಎಸ್ ನಾಯಕರ ನಡೆಯಿಂದ ನನಗೆ ನೋವಾಗಿದೆ. ಅವರ ಮೇಲೆ ಅಸಮಾಧಾನವಿದೆ. ಆದರೆ, ನಾನು ಜೆಡಿಎಸ್‌ನಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ. ನಾನು ಜೆಡಿಎಸ್‌ನ ಯಾವುದೇ ಸಮಿತಿಗಳಲ್ಲಿ ಇಲ್ಲ. ಆದ್ದರಿಂದ, ಪಕ್ಷದ ಕಚೇರಿಯಲ್ಲಿ ನನಗೇನೂ ಕೆಲಸವಿಲ್ಲ. ಅಲ್ಲಿಗೆ ಹೋಗುವ ಅಗತ್ಯವಿಲ್ಲ. ನನ್ನ ಕ್ಷೇತ್ರದಲ್ಲಿ ಇದ್ದೇನೆ. ಕೆಲಸ ಮಾಡುತ್ತಿದ್ದೇನೆ” ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಡಿ ದೇವೇಗೌಡ ಹೇಳಿದ್ದಾರೆ.
ನ.14ರಿಂದ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ‘72ನೇ ಅಖಿಲ ಭಾರತ ಸಹಕಾರ ಸಪ್ತಾಹ’ ನಡೆಸುತ್ತಿರುವುದರ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ಪಾಂಡವಪುರದಲ್ಲಿ ಪಕ್ಷದ ಕಾರ್ಯಕ್ರಮ ನಡೆಯಿತು. ಆಗ, ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯನಾಗಿ ನನ್ನನ್ನು ಆಯ್ಕೆ ಮಾಡುವ ಕುರಿತು ಸೂಚನೆ ನೀಡಿದರು. ಅಂದೇ ನಡೆದ ಕಾವೇರಿ ನೀರಾವರಿ ಸಭೆಯಲ್ಲಿ ಆಡಳಿತ ಪಕ್ಷದವರೂ ನನ್ನನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನೆಂದೇ ನಡೆಸಿಕೊಂಡರು. ನಾನು ಶಾಸಕಾಂಗ ಪಕ್ಷದ ನಾಯಕನಾಗುತ್ತೇನೆಂದು ಕಚೇರಿಯನ್ನೂ ತೆರೆದಿದ್ದೆ. ಆದರೆ, ಕಡೆಕ್ಷಣದಲ್ಲಿ ನನ್ನ ಕೈಬಿಟ್ಟರು. ಇದರಿಂದ ನನಗೆ ನೋವಾಗಿದೆ” ಎಂದು ಹೇಳಿದ್ದಾರೆ.
“ಆದಾಗ್ಯೂ, ನನ್ನನ್ನು ಕೈಬಿಟ್ಟದ್ದು ಯಾಕೆಂದು ಅವರು ನನಗೆ ಸಣ್ಣ ಮಾಹಿತಿಯನ್ನೂ ನೀಡಲಿಲ್ಲ. ಈ ನಡೆಯಿಂದ ನನಗೆ ನೋವಾಯಿತು. ಅಂದಿನಿಂದ ನನ್ನಷ್ಟಕ್ಕೆ ನಾನು – ಅವರಷ್ಟಕ್ಕೆ (ಎಚ್‌ಡಿಕೆ) ಅವರು ಇದ್ದೇವೆ. ನಾನು ಪಕ್ಷದಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಜೊತೆ 25 ವರ್ಷ ಕೆಲಸ ಮಾಡಿದ್ದೇನೆ. ಅವರು ಪಕ್ಷ ತೊರೆದ ಬಳಿಕ, ಜಿದ್ದಾಜಿದ್ದಿಯಲ್ಲಿ ಅವರ ವಿರುದ್ಧವೂ ಕೆಲಸ ಮಾಡಿದ್ದೇನೆ. ತಪ್ಪನ್ನು ತಪ್ಪು ಅಂತ ಹೇಳಲು – ಸರಿಯನ್ನು ಸರಿ ಅಂತ ಹೇಳಿದ ಮಾತ್ರಕ್ಕೆ ಆಕಡೆ-ಈಕಡೆ ವಾಲಿದ್ದೇವೆ ಎಂದಲ್ಲ. ನಾನು ಜೆಡಿಎಸ್‌ನಲ್ಲಿ ಇದ್ದೇನೆ. ಪಕ್ಷದಲ್ಲಿಯೇ ಇರುತ್ತೇನೆ” ಎಂದು ಹೇಳಿದ್ದಾರೆ.
‘ಅಖಿಲ ಭಾರತ ಸಹಕಾರ ಸಪ್ತಾಹ’ದ ಕುರಿತು ಮಾತನಾಡಿದ ಜಿ.ಟಿ ದೇವೇಗೌಡ, “ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜನ್ಮದಿನಾಚರಣೆಯ ಅಂಗವಾಗಿ ನವೆಂಬರ್ 14ರಿಂದ 20ರವರೆಗೆ ‘ಅಖಿಲ ಭಾರತ ಸಹಕಾರ ಸಪ್ತಾಹ’ ನಡೆಸಲಾಗುತ್ತದೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ನೆಹರೂ ಅವರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆ ಮೂಲಕ, ಸಹಕಾರ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ಮತ್ತು ನೆರವು ನೀಡಿದ್ದರು. ಸಹಕಾರ ಕ್ಷೇತ್ರವನ್ನು ಬಲಗೊಳಿಸಿದ ನೆಹರು ಅವರ ಸ್ಮರಣಾರ್ಥ ಅಖಿಲ ಭಾರತ ಸಹಕಾರ ಸಪ್ತಾಹ ನಡೆಸಲಾಗುತ್ತಿದೆ” ಎಂದಿದ್ದಾರೆ.
“ನೆಹರು ಅವರ ಜನ್ಮದಿನವಾದ ನವೆಂಬರ್ 14ರಂದು ಸಪ್ತಾಹದ ಉದ್ಘಾಟನಾ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಸಹಕಾರ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ. ಅಂದು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಎದುರು ಸಹಕಾರ ಕ್ಷೇತ್ರದ ದುರೀಣ ಬಿ.ಎಸ್ ವಿಶ್ವನಾಥ್ ಅವರ ಪುತ್ಥಳಿಯನ್ನು ಅನಾವರಣ ಮಾಡಲಾಗುತ್ತದೆ. ಜೊತೆಗೆ, ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಸಹಕಾರ ಕ್ಷೇತ್ರಕ್ಕೆ ಕೊಡುಗೆ ನೀಡಿದವರಿಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.
“72ನೇ ಸಪ್ತಾಹ ನಡೆಯುತ್ತಿರುವುದರಿಂದ 72 ಮಂದಿಗೆ ಪ್ರಶಸ್ತಿ ನೀಡಲಾಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿದ ಅಧಿಕಾರಿಗಳು, ಸಾಹಿತಿಗಳು ಸೇರಿದಂತೆ ವಿವಿಧ ವಲಯಗಳಲ್ಲಿ ತೊಡಗಿರುವವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆಯುವವರ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ನ.13ರ ರಾತ್ರಿ ವೇಳೆಗೆ ಅಂತಿಮ ಪಟ್ಟಿ ದೊರೆಯಲಿದೆ” ಎಂದು ಹೇಳಿದ್ದಾರೆ.
“ಸಪ್ತಾಹದ ಮೊದಲ ದಿನ ನ.14ರಂದು ಬೆಂಗಳೂರಿನಲ್ಲಿ, ನ.15ರಂದು ರಾಯಚೂರಿನಲ್ಲಿ, ನ.16ರಂದು ಮಂಗಳೂರಿನಲ್ಲಿ, ನ.17ರಂದು ಹೊಸಪೇಟೆ (ಬಳ್ಳಾರಿ), ನ.18ರಂದು ಹಾವೇರಿ, ನ.19ರಂದು ಕೊಪ್ಪಳ ಹಾಗೂ ನ. 20ರಂದು ಚಾಮರಾಜನಗರದಲ್ಲಿ ಬೃಹತ್ ಕಾರ್ಯಕ್ರಮಗಳು ನಡೆಯಲಿವೆ. ಸಪ್ತಾಹವು ಮಹಾಮಂಡಳ, ಅಪೆಕ್ಸ್ ಸಹಕಾರ ಸಂಸ್ಥೆಗಳು ಮತ್ತು ಸಹಕಾರ ಇಲಾಖೆಯ ನೇತೃತ್ವದಲ್ಲಿ ನಡೆಯಲಿದೆ” ಎಂದು ಹೇಳಿದ್ದಾರೆ.
“ದೇಶದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳಿವೆ. ಕರ್ನಾಟಕದಲ್ಲಿ 47,000 ಸಹಕಾರ ಸಂಸ್ಥೆಗಳಿವೆ. ರೈತರ ಅಭಿವೃದ್ಧಿಗಾಗಿ ಈ ವರ್ಷ 36 ಲಕ್ಷ ರೈತರಿಗೆ 27,000 ಕೋಟಿ ರೂ. ಬೆಳೆ ಸಾಲ ವಿತರಿಸುವ ಗುರಿ ಇರಿಸಿಕೊಂಡಿದ್ದೇವೆ. ರಾಜ್ಯದಲ್ಲಿ ಸಹಕಾರ ಸಂಸ್ಥೆಯಡಿ 87,619 ಸ್ತ್ರೀಶಕ್ತಿ ಸಂಘಗಳಿದ್ದು, ಈವರೆಗೆ 6,958 ಸಂಘಗಳಿಗೆ ಒಟ್ಟು 342.37 ಕೋಟಿ ರೂ. ಸಾಲ ವಿತರಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಬಡ ಜನರಿಗೆ ಸಾಲಸೌಲಭ್ಯ ಒದಗಿಸಲಾಗಿದೆ” ಎಂದು ತಿಳಿಸಿದ್ದಾರೆ.
ಸಹಕಾರಿ ಮಹಾಮಂಡಳದ ಎದುರು ಬಿ.ಎಸ್ ವಿಶ್ವನಾಥ್ ಅವರ ಪುತ್ಥಳಿ ನಿರ್ಮಿಸಿರುವ ಕುರಿತು ಮಾತನಾಡಿದ ಜಿ.ಟಿ ದೇವೇಗೌಡ, “ಬಿ.ಎಸ್ ವಿಶ್ವನಾಥ್ ಅವರು 60 ವರ್ಷಗಳ ಕಾಲ ಸಹಕಾರಿ ಕ್ಷೇತ್ರದ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. 1960ರಲ್ಲಿ ತೀರ್ಥಹಳ್ಳಿ ಪ್ರಾಥಮಿಕ ಭೂ ಅಡಮಾನ ಬ್ಯಾಂಕ್‌ನ ಸದಸ್ಯತ್ವ ಪಡೆದ ವಿಶ್ವನಾಥ್, ಬ್ಯಾಂಕ್ ಅಧ್ಯಕ್ಷರಾಗಿ ಬ್ಯಾಂಕ್‌ನ ಅಭಿವೃದ್ಧಿಗಾಗಿ ದುಡಿದರು. 1966ರಲ್ಲಿ ರಾಜ್ಯ ಭೂ ಅಡಮಾನ ಬ್ಯಾಂಕ್‌ನ ಉಪಾಧ್ಯಕ್ಷರಾದ ಅವರು, 1968ರ ವೇಳೆಗೆ ಬ್ಯಾಂಕ್‌ನ ಅಧ್ಯಕ್ಷರಾದರು. 23 ವರ್ಷಗಳ ಕಾಲ ಅಧ್ಯಕ್ಷರಾಗಿ, ಎಲ್ಲ ರೀತಿಯ ಕೃಷಿ ಅಗತ್ಯಗಳಿಗೂ ಸಾಲ ಸೌಲಭ್ಯ ದೊರೆಯುವಂತೆ ಮಾಡಿದರು. ಗ್ರಾಮೀಣ ಅಭಿವೃದ್ಧಿ, ಗೃಹ ನಿರ್ಮಾಣ, ತೋಟಗಾರಿಕೆ, ಟ್ರಾಕ್ಟರ್ ಖರೀದಿಗೂ ಸಾಲ ಸೌಲಭ್ಯ ಒದಗಿಸಿದರು” ಎಂದು ತಿಳಿಸಿದ್ದಾರೆ.
“ಅಂತಾರಾಷ್ಟ್ರೀಯ ಸಹಕಾರಿ ಮೈತ್ರಿ ಸಂಸ್ಥೆ, ರೈಫಿಸನ್ ಯೂನಿಯನ್, ರೋಬೋ ಬ್ಯಾಂಕ್‌ಗಳೊಂದಿಗೆ ಸಂಪರ್ಕ ಸಾಧಿಸಿ, ಅವುಗಳ ಆಡಳಿತ ಮಂಡಳಿಯ ಸದಸ್ಯರಾಗಿ, ಭಾರತದ ಸಹಕಾರಿ ಚಳವಳಿಗೆ ಅಪಾರ ನೆರವು ತಂದರು. ಅವರು ಸಹಕಾರ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಅವರನ್ನು ಗೌರವಿಸುವ ಜವಾಬ್ದಾರಿ ನಮ್ಮದು” ಎಂದು ಹೇಳಿದ್ದಾರೆ.




