ಗುಜರಾತ್ ಬಿಜೆಪಿ ಸರ್ಕಾರಕ್ಕೆ ಬಹುದೊಡ್ಡ ‘ಸರ್ಜರಿ’ ನಡೆದಿದ್ದು, ಸಚಿವ ಸಂಪುಟದಲ್ಲಿ ಬೃಹತ್ ಪ್ರಮಾಣದ ಸಚಿವರನ್ನು ಹೊರಹಾಕಿ, ಹೊಸಬರಿಗೆ ಮಣೆ ಹಾಕಲಾಗಿದೆ. ಒಟ್ಟು 26 ಮಂದಿ ಸಚಿವರುಳ್ಳ ಸಂಪುಟದಲ್ಲಿ 19 ಮಂದಿ ಹೊಸಬರ ಸೇರ್ಪಡೆಯಾಗಿದೆ. ಅವರಲ್ಲಿ ಮೂವರು ಮಹಿಳೆಯರಿದ್ದಾರೆ. ಈ ಪೈಕಿ, ಭಾರತೀಯ ಕ್ರಿಕೆಟ್ ತಂಡದ ರವೀಂದ್ರ ಜಡೇಜಾ ಅವರ ಪತ್ನಿ, ಕಾಂಗ್ರೆಸ್ ಕುಟುಂಬದ ಹಿನ್ನೆಲೆಯುಳ್ಳ ರಿವಾಬಾ ಅವರಿಗೂ ಮಂತ್ರಿಗಿರಿ ದೊರೆತಿದೆ.
2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ ರಿವಾಬಾ ಅವರು ಶಾಸಕಿಯಾದ ಮೂರೇ ವರ್ಷದಲ್ಲಿ ಸಚಿವರಾಗಿ ಸಂಪುಟ ಸೇರಿಸಿದ್ದಾರೆ.
ರಿವಾಬಾ ಅವರು ಮೂತಃ ಕಾಂಗ್ರೆಸ್ ಕುಟುಂಬದ ರಾಜಕೀಯ ಹಿನ್ನೆಲೆ ಉಳ್ಳವರು. ಅವರ ಚಿಕ್ಕಪ್ಪ ಹರಿ ಸಿಂಗ್ ಸೋಲಂಕಿ ಅವರು ಈಗಲೂ ಕಾಂಗ್ರೆಸ್‌ನಲ್ಲಿದ್ದಾರೆ. ಮಾತ್ರವಲ್ಲ, ಅವರು ರಾಜ್‌ಕೋಟ್ ವಿಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ, ರಿವಾಬಾ ಅವರ ಪತಿ ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಕೂಡ ಜಾಮ್‌ನಗರ ಕಾಂಗ್ರೆಸ್ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದಾರೆ.
ಗಮನಾರ್ಹವೆಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಿವಾಬಾ ಮತ್ತು ನೈನಾ ಅವರು ಪರಸ್ಪರ ಎದುರಾಳಿಗಳಾಗಿ ರಾಜ್‌ಕೋಟ್‌ನಲ್ಲಿ ಸ್ಪರ್ಧಿಸಿದ್ದರು. ಅತ್ತಿಗೆ-ನಾದಿನಿಯರ ಚುನಾವಣಾ ಹೋರಾಟದಲ್ಲಿ ರವೀಂದ್ರ ಜಡೇಜಾ ಅವರು ರಿವಾಬಾ ಪರವಾಗಿ ಪ್ರಚಾರ ನಡೆಸಿದ್ದರು.
ಕಾಂಗ್ರೆಸ್ ಹಿನ್ನೆಲೆಯ ಕುಟುಂಬದಿಂದ ಬಂದ ರಿವಾಬಾ ಅವರಿಗೆ ಇಷ್ಟು ಬೇಗ ಬಿಜೆಪಿಯಲ್ಲಿ ಮಂತ್ರಿಗಿರಿ ದೊರೆತಿರುವುದು ಚರ್ಚೆಗೆ ಗ್ರಾಸವಾಗಿದೆ.




