ಗುಜರಾತ್‌ನಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ಗಾಗಿ (SIR) ನಿಯೋಜಿಸಲಾದ ಒಟ್ಟು ಬೂತ್ ಮಟ್ಟದ ಏಜೆಂಟ್‌ಗಳಲ್ಲಿ (BLA) ಸುಮಾರು ಮೂರನೇ ಎರಡರಷ್ಟು ಮಂದಿ ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಆರ್‌ಟಿಐ ವರದಿಯೊಂದು ಬಹಿರಂಗಪಡಿಸಿದೆ.
ಗುಜರಾತ್‌ನಾದ್ಯಂತ ಒಟ್ಟು 73,169 ಬಿಎಲ್‌ಎಗಳನ್ನು ನಿಯೋಜಿಸಲಾಗಿದೆ. ಅವರಲ್ಲಿ, 49,168 ಜನರು ಬಿಜೆಪಿಗೆ ಸೇರಿದವರಾಗಿದ್ದಾರೆ. 18,057 ಬಿಎಲ್‌ಎಗಳು ಮಾತ್ರವೇ ಕಾಂಗ್ರೆಸ್‌ನವರಿದ್ದರೆ, 5,893 ಮಂದಿ ಎಎಪಿಗೆ ಸೇರಿದವರಾಗಿದ್ದಾರೆ. ಇನ್ನು, ಬಿಎಸ್‌ಪಿಯಿಂದ ಕೇವಲ 49 ಮಂದಿ, ಸಿಪಿಐ(ಎಂ)ನ 25 ಮಂದಿ ಮಾತ್ರವೇ ಇದ್ದಾರೆ. ನ್ಯಾಷನಲ್ ಪೀಪಲ್ಸ್ ಪಾರ್ಟಿಯಿಂದ ಯಾರೊಬ್ಬರೂ ಬಿಎಲ್‌ಎಆಗಿ ನಿಯೋಜನೆಗೊಂಡಿಲ್ಲ ಎಂದು ವರದಿ ವಿವರಿಸಿದೆ.
ಬಿಎಲ್‌ಎಗಳ ನಿಯೋಜನೆಯಲ್ಲಿ ರಾಜಕೀಯ ಅಸಮತೋಲನವು ಎಸ್‌ಐಆರ್ ಪ್ರಕ್ರಿಯೆ ಮತ್ತು ಕರಡು ಪಟ್ಟಿಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಗುಜರಾತ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾಯಿತು. ಆ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು, ಕೂಲಿ ಕೆಲಸ ಮಾಡುವವರು, ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು ತಮ್ಮ ಹಳ್ಳಿಗಳಿಂದ ದೂರವಿದ್ದರು. ಅವರಾರೂ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಇದ್ದವರೂ, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ. ಯಾವ ಫಾರ್ಮ್ ಅನ್ನು ಭರ್ತಿ ಮಾಡಬೇಕು? ಯಾವ ದಾಖಲೆಗಳನ್ನು ಲಗತ್ತಿಸಬೇಕು? 2002ರ ಚುನಾವಣಾ ಮ್ಯಾಪಿಂಗ್ಅನ್ನು ಹೇಗೆ ಸಾಬೀತುಪಡಿಸುವುದು? ಎಂಬುದು ಅವರಿಗೆ ತಿಳಿಯಲಿಲ್ಲ ಎಂದು ಹೇಳಲಾಗಿದೆ.
ಇದೆಲ್ಲದರ ನಡುವೆ, ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಗಳು, ಪಕ್ಷಗಳು ಹಾಗೂ ಜನರೊಂದಿಗೆ ಸಮನ್ವಯ ಸಾಧಿಸಲು ಬಿಎಲ್‌ಒಗಳಿಗೆ ನೆರವು ನೀಡಲು ಬಿಎಲ್‌ಎಗಳನ್ನು ನಿಯೋಜಿಸಲಾಗಿತ್ತು. ಆದರೆ, ಅವರಲ್ಲಿ ಹೆಚ್ಚಿನವರು ಬಿಜೆಪಿಗರೇ ಆಗಿದ್ದು, ವಿಪಕ್ಷಗಳ ಮತದಾರರ ಮತಪಟ್ಟಿಯ ಮೇಲೆ ಅವರ ಪ್ರಭಾವ ಬೀರಿರಬಹುದು ಮತ್ತು ಪ್ರಕ್ರಿಯೆಯು ಪಕ್ಷಪಾತಿಯಾಗಿ ನಡೆದಿರಬಹುದಾದ ಸಾಧ್ಯತೆಗಳ ಕುರಿತು ಅನುಮಾನಗಳು ವ್ಯಕ್ತವಾಗಿವೆ.




