ಹಿರಿಗೌಡರು ಮೋದಿಯೊಂದಿಗೆ ಆಗಿದ್ದು ಎರಡನೇ ಮದುವೆ | ʼಮದುವೆ, ವಿಚ್ಛೇದನʼಗಳಲ್ಲಿ ಸೊರಗಿದ ಜೆಡಿಎಸ್‌!

Date:

ಎಲ್ಲೆಲ್ಲಾ ಅಧಿಕಾರ ಸಿಗುತ್ತದೆಯೋ ಅಲ್ಲೆಲ್ಲಾ ಹೋಗುವ ದೇವೇಗೌಡರ ಪಕ್ಷಕ್ಕೆ ʼಮದುವೆ, ವಿಚ್ಛೇದನʼ ಎಲ್ಲವೂ ಸಾಮಾನ್ಯ ಸಂಗತಿ ಎಂಬಂತಾಗಿದೆ. ಮತ್ತು ಈ ʼಮದುವೆ, ವಿಚ್ಚೇದನʼಗಳಲ್ಲೇ ಜೆಡಿಎಸ್‌ ತನ್ನ ಪ್ರಾದೇಶಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇದನ್ನೇ ಮಲ್ಲಿಕಾರ್ಜುನ್‌ ಖರ್ಗೆ ವಿಡಂಬನಾತ್ಮಕವಾಗಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಅಧಿಕಾರ ಮತ್ತು ಅಸ್ತಿತ್ವದ ಭಯ ಮನುಷ್ಯನ ಆಂತರಿಕ ಸಂಘರ್ಷ ಮತ್ತು ಅನಿಶ್ಚಿತತೆಯನ್ನು ಸೂಚಿಸುತ್ತದೆ. ಬಹುಶಃ ಇದೇ ದೇವೇಗೌಡರ ʼಮದುವೆ, ವಿಚ್ಛೇದನʼಕ್ಕೆ ಕಾರಣವಾಗಿರಬಹುದು.


ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಅವರು ತಮ್ಮ ವಿದಾಯ ಭಾಷಣವನ್ನು ಮಾಡುವ ಸಂದರ್ಭದಲ್ಲಿ ಜೆಡಿಎಸ್‌ ವರಿಷ್ಠ ದೇವೇಗೌಡರ ಕುರಿತಾಗಿ ಆಡಿದ ಮಾತು ಈಗ ಒಂದು ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ʼದೇವೇಗೌಡರು ನಮ್ಮನ್ನು ಪ್ರೀತಿಸಿದ್ದರು, ನಮ್ಮೊಂದಿಗೆ ಡೇಟಿಂಗ್‌ ಮಾಡಿದ್ದರು, ಆದರೆ ಮೋದಿ ಅವರೊಂದಿಗೆ ಮದುವೆ ಆದರುʼ ಎಂದು ರಾಜ್ಯಸಭೆಯಲ್ಲಿ ಖರ್ಗೆ ಹೇಳಿದ್ದು ನಿಜಕ್ಕೂ ನಗೆಪಾಟಲಿಗೀಡು ಮಾಡಿದರೂ ಅದರ ಜೊತೆಗೆ ದೇವೇಗೌಡರ ರಾಜಕೀಯ ಇತಿಹಾಸ ಕೆದಕುವ ಹಾಗೆ ಮಾಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ದೇವೇಗೌಡರು ಮೊದಲು ʼಮದುವೆʼ ಆಗಿದ್ದೇ ಕಾಂಗ್ರೆಸ್‌ ಪಕ್ಷವನ್ನು. 1953ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಗೌಡರು, 1962ರವರೆಗೆ ಕಾಂಗ್ರೆಸ್‌ ನ ಸದಸ್ಯರಾಗಿದ್ದರು. ಅವರ ರಾಜಕೀಯದ ಜೀವನದಲ್ಲಿ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಾ 70ರ ದಶಕದ ಮಧ್ಯ ಭಾಗದಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಹುಟ್ಟಿದ  ʼಜೆಪಿ ಚಳುವಳಿʼಯಿಂದ ಪ್ರೇರಿತಗೊಂಡರು. ಇಂದಿಗೂ ಅವರು ಜಯಪ್ರಕಾಶ್‌ ನಾರಾಯಣ್‌ ಅವರಿಂದ ಪ್ರೇರಿತರಾಗಿ ಬೆಳೆದಿದ್ದು ಎಂದು ಹೇಳಿಕೊಳ್ಳುತ್ತಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ರಾಜಧಾನಿ ಬೆಂಗಳೂರಿನಲ್ಲಿರುವ ಜನತಾ ದಳ (ಸೆಕ್ಯುಲರ್)‌ ಪಕ್ಷದ ಪ್ರಧಾನ ಕಚೇರಿಗೆ ʼಜೆಪಿ ಭವನʼ ಎಂದೇ ಹೆಸರಿಟ್ಟಿದ್ದಾರೆ. ಜನತಾ ದಳ (ಸೆಕ್ಯುಲರ್) ಪಕ್ಷದ ಬಹುತೇಕ ಎಲ್ಲಾ ಕಾರ್ಯಚಟುವಟಿಕೆಗಳು, ಸಭೆಗಳು ನಡೆಯುವುದು ಅಲ್ಲೆ. ಇಂದಿರಾಗಾಂಧಿ ಸರ್ಕಾರದ ನೀತಿಯನ್ನು ಖಂಡಿಸಿದ ಜಯಪ್ರಕಾಶ್‌ ನಾರಾಯಣ್‌ ಅವರಿಂದಲೇ ಜನನಾಯಕನಾಗಿ ತಾವು ಬೆಳೆದಿದ್ದು ಎಂದು ದೇವೇಗೌಡರಿಗೆ ಹೇಳುವುದಕ್ಕೆ ನರೇಂದ್ರ ಮೋದಿ ನೇತೃತ್ವದ ಎನ್‌.ಡಿ.ಎ ಮೈತ್ರಿಕೂಟಕ್ಕೆ ತಮ್ಮ ಪಕ್ಷವನ್ನು ಸೇರ್ಪಡಿಸಿದ ಮೇಲೆ ಯಾವ ನೈತಿಕತೆ ಇದೆ ? ಜಯಪ್ರಕಾಶ್‌ ನಾರಾಯಣರು ಇಂದಿರಾಗಾಂಧಿ ಸರ್ಕಾರವನ್ನು ಪ್ರಶ್ನಿಸಿದ ಹಾಗೆ ಮೋದಿ ಸರ್ಕಾರವನ್ನು ದೇವೇಗೌಡರು ಪ್ರಶ್ನಿಸಬೇಕಿತ್ತಲ್ಲವೇ ?   

ಇನ್ನು, ಜಯಪ್ರಕಾಶ್‌ ನಾರಾಯಣ್‌ ಅಂತಹ ನಾಯಕರು ತುರ್ತು ಪರಿಸ್ಥಿತಿಯನ್ನು ಖಂಡಿಸಿ ನಡೆಸಿದ ಚಳುವಳಿಯ ಕಾರಣಕ್ಕೆ 1977ರಲ್ಲಿ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಬರುವ ಹಾಗಾಯಿತು. ಜನತಾ ಪಕ್ಷ ಭಾರತದಾದ್ಯಂತ ತನ್ನ ಕವಲುಗಳನ್ನು ಹರಡಿತ್ತು. 1988ರಲ್ಲಿ ವಿ.ಪಿ ಸಿಂಗ್‌ ಜನತಾ ಪಕ್ಷದ ನಾನಾ ಕವಲುಗಳನ್ನು ಒಟ್ಟುಗೂಡಿಸಿ ಜನತಾ ದಳವನ್ನು ಸೃಷ್ಟಿಸಿದರು. 1994 ರಲ್ಲಿ ದೇವೇಗೌಡರು ಜನತಾ ದಳದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದರು. ಪಕ್ಷವನ್ನು ಗೆಲ್ಲಿಸಿ 1994 ರಿಂದ 1996 ರವರೆಗೆ ಮುಖ್ಯಮಂತ್ರಿಯೂ ಆದರು. 1996 ಲೋಕಸಭಾ ಚುನಾವಣೆಗಳ ಬಳಿಕ ದೇವೇಗೌಡರು ಪ್ರಧಾನಿಯಾದಾಗ ಕಾಂಗ್ರೆಸ್ ಅವರ ಸಂಯುಕ್ತ ರಂಗ ಸರ್ಕಾರವನ್ನು ಬೆಂಬಲಿಸಿತ್ತು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಗೌಡರ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಮೈತ್ರಿಕೂಟ ಗೆದ್ದ ಬಳಿಕ ಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ ಹಲವಾರು ಕಾಂಗ್ರೆಸ್‌ ಮತ್ತು ಜೆಡಿಎಸ್ ಶಾಸಕರು ಬಂಡೆದ್ದ ಬಳಿಕ 2019ರಲ್ಲಿ ಸರ್ಕಾರ ಪತನಗೊಂಡಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರದಲ್ಲಿ ಪಾಲನ್ನೂ ಪಡೆದರು. (ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರು). ಹೀಗೆ ಎಲ್ಲೆಲ್ಲಾ ಅಧಿಕಾರ ಸಿಗುತ್ತದೆಯೋ ಅಲ್ಲೆಲ್ಲಾ ಹೋಗುವ ದೇವೇಗೌಡರ ಪಕ್ಷಕ್ಕೆ ʼಮದುವೆ, ವಿಚ್ಛೇದನʼ ಎಲ್ಲವೂ ಸಾಮಾನ್ಯ ಸಂಗತಿ ಎಂಬಂತಾಗಿದೆ. ಮತ್ತು ಈ ʼಮದುವೆ, ವಿಚ್ಛೇದನʼಗಳಲ್ಲೇ ಜೆಡಿಎಸ್‌ ತನ್ನ ಪ್ರಾದೇಶಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇದನ್ನೇ ಮಲ್ಲಿಕಾರ್ಜುನ್‌ ಖರ್ಗೆ ವಿಡಂಬನಾತ್ಮಕವಾಗಿ ರಾಜ್ಯಸಭೆಯಲ್ಲಿ ಹೇಳಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ.  

ಇದನ್ನೂ ಓದಿ : ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ…

ʼಕಾಂಗ್ರೆಸ್‌ ಜೊತೆಗೆ ಬಲವಂತದ ಮದುವೆಯಾಗಿತ್ತು. ಹಿಂಸೆ ಹಾಗೂ ಕಿರುಕುಳ ಇತ್ತು. ಆ ಕಾರಣಕ್ಕಾಗಿ ಸುಸ್ಥಿರ ಮೈತ್ರಿಗಾಗಿ ವಿಚ್ಚೇದನ ನೀಡಿ ಹೊರಬರಬೇಕಾಯಿತುʼ ಎಂದು ಸ್ವತಃ ದೇವೇಗೌಡರೇ ಮಲ್ಲಿಕಾರ್ಜುನ್‌ ಖರ್ಗೆ ಅವರ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿದರು. ಹಾಗಾಗಿ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಜೊತೆಗೆ ಮಾಡಿಕೊಂಡ ಈ ಮೈತ್ರಿಯನ್ನು ಅಕ್ರಮ ಸಂಬಂಧ ಎನ್ನಬೇಕೋ ಅಥವಾ ಸಕ್ರಮ ಸಂಬಂಧ ಎನ್ನಬೇಕೋ ಎನ್ನುವುದನ್ನು ದೇವೇಗೌಡರೇ ಹೇಳಬೇಕಿದೆ. ಅಧಿಕಾರಕ್ಕಾಗಿ ತಾನು ನಡೆದುಕೊಂಡು ಬಂದ ಸಿದ್ಧಾಂತವನ್ನು ಸಂಪೂರ್ಣವಾಗಿ ಮರೆಯುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಇಲ್ಲಿ ಮೂಡದೆ ಇರುವುದಿಲ್ಲ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ಭಾರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ನಂತರ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರು 1996ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಆ ಬಳಿಕ ಬಿಜೆಪಿಯೇತರ ಪಕ್ಷವನ್ನು ಬೆಂಬಲಿಸಲು ಕಾಂಗ್ರೆಸ್ ನಿರ್ಧಾರಕ್ಕೆ ಬಂದಿತ್ತು.  ಲೋಕಸಭೆಯಲ್ಲಿನ ಒಟ್ಟು 545 ಸ್ಥಾನಗಳ ಪೈಕಿ 46 ಸಂಸದರ ಸಂಖ್ಯಾ ಬಲ ಹೊಂದಿದ್ದ ಜನತಾ ದಳ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಗೌಡರು ಆಯ್ಕೆಯಾಗಿದ್ದರು. ಕಾಂಗ್ರೆಸ್ ನ 140 ಸಂಸದರು, ಪ್ರಾದೇಶಿಕ ಪಕ್ಷಗಳ 100 ಮತ್ತು ಎಡ ಪಕ್ಷಗಳ 44 ಸಂಸದರ ಸಹಕಾರದೊಂದಿಗೆ ದೇವೇಗೌಡರು ಪ್ರಧಾನಿಯಾಗಿದ್ದರು. ತನ್ನ ಅಸ್ತಿತ್ವಕ್ಕಾಗಿ ತನ್ನೆಲ್ಲಾ ತತ್ವ, ಸಿದ್ದಾಂತಗಳನ್ನೆಲ್ಲಾ ಬದಿಗೆ ಸರಿಸಿ ಅಧಿಕಾರ ಹಿಡಿದ ದೇವೇಗೌಡರು ಇನ್ನೂ ಕೂಡ ʼಎಂತಹ ಪರಿಸ್ಥಿತಿಯಲ್ಲೂ ತಮ್ಮ ಸಿದ್ಧಾಂತಗಳ ವಿರುದ್ಧ ನಡೆದುಕೊಳ್ಳದ ವ್ಯಕ್ತಿತ್ವದವರೆಂದು ಜೆಡಿಎಸ್‌ ಬಿಂಬಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದವೇ ಸರಿ.   

ದೇವೇಗೌಡರು ತಮ್ಮನ್ನು ಜಾತ್ಯತೀತ ನಾಯಕ, ದೀನ ದಲಿತರು, ಬಡವರ ಪರ ಎಂದು ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ದೇವೇಗೌಡರ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಕಾರಣಕ್ಕೆ ಸರ್ಕಾರ ಅಳಿವಿನಂಚಿನಲ್ಲಿತ್ತು. ಅಟಲ್‌ ಬಿಹಾರಿ ವಾಜಪೇಯಿ ತಾವು ಬೆಂಬಲ ನೀಡುವುದಾಗಿ ಲೋಕಸಭೆಯ ಕಲಾಪದ ಸಂದರ್ಭದಲ್ಲೇ ಚೀಟಿ ಬರೆದು ಕಳುಹಿಸಿಕೊಟ್ಟಿದ್ದರಂತೆ, ಬಾಳಾ ಸಾಹೇಬ್‌ ಠಾಕ್ರೆ ಕೂಡ ಬೆಂಬಲಿಸುವುದಾಗಿ ಹೇಳಿದ್ದರಂತೆ, ದೆಹಲಿಯ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಹಿಬ್‌ ಸಿಂಗ್‌ ವರ್ಮಾ ಖುದ್ದು ದೇವೇಗೌಡರಿಗೆ ಬಿಜೆಪಿ ನಿಮ್ಮೊಂದಿಗೆ ಇರಲಿದೆ ಎಂದಿದ್ದರಂತೆ, ಶಿರೋಮಣಿ ಅಕಾಲಿ ದಳದ ಪ್ರಕಾಶ್‌ ಸಿಂಗ್‌ ಬಾದಲ್‌ ಕೂಡ ದೇವೇಗೌಡರನ್ನು ಬೆಂಬಲಿಸಲು ಸಿದ್ದರಾಗಿದ್ದರಂತೆ ಆದರೂ ದೇವೇಗೌಡರಿಗೆ ಈ ಬೆಂಬಲಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರುವ ಕಾರಣಕ್ಕಾಗಿ ನಯವಾಗಿ ಈ ಬೆಂಬಲಗಳನ್ನು ತೊರೆದಿದ್ದರಂತೆ. ಸಿದ್ಧಾಂತದ ಭಿನ್ನಮತದ ಕಾರಣಕ್ಕಾಗಿ ಅಧಿಕಾರದ ಆಸೆಯನ್ನು ತೊರೆದಿದ್ದ ದೇವೇಗೌಡರು, ಮೋದಿ ಅವರೊಂದಿಗೆ ಕೈ ಜೋಡಿಸಿದ್ದು ಯಾಕೆ !? ಇದೇ ಮೋದಿಯನ್ನು, ಆರ್‌.ಎಸ್.ಎಸ್ ಸಿದ್ಧಾಂತವನ್ನು ದೇವೇಗೌಡರು ಜರೆಯಲಿಲ್ಲವೇ ? ಆದರೂ ಮೈತ್ರಿ ಮಾಡಿಕೊಂಡಿದ್ದು ಯಾಕೆ ? ಮೋದಿಯ ಹಿಂದುತ್ವ ಸಿದ್ಧಾಂತ, ದೇವೇಗೌಡರ ಜಾತ್ಯತೀತ ಸಿದ್ದಾಂತ ಒಂದೆಯೇ !? ಎನ್ನುವ ಪ್ರಶ್ನೆಗಳಿಗೆ ದೇವೇಗೌಡರೇ ಉತ್ತರ ನೀಡಬೇಕು.

ಇದನ್ನೂ ಓದಿ : ಯುದ್ಧ | ರಸಗೊಬ್ಬರ ಕೊರತೆ: ಭಾರತೀಯ ಕೃಷಿ ಮತ್ತು ಕೃಷಿಕರ ಮೇಲೆ ದುಷ್ಪರಿಣಾಮ ಬೀರಲಿದೆ

ಇನ್ನು, 2014ರಿಂದ  ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ(ಎನ್‌.ಡಿ.ಎ ಒಕ್ಕೂಟ) ಅಧಿಕಾರಕ್ಕೆ ಬಂದಾಗಲಿಂದ ಅಲ್ಪಸಂಖ್ಯಾತರನ್ನೇ ಗುರಿ ಮಾಡಿಕೊಂಡು ಕಾಯ್ದೆಗಳನ್ನು, ಕಠಿಣ ನೀತಿ ನಿಯಮಗಳನ್ನು ಜಾರಿಗೆ ತಂದಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ), ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ವಕ್ಫ್ ತಿದ್ದುಪಡಿ ಕಾಯ್ದೆ ಮತ್ತು 2025ರ ವಲಸೆ ಮತ್ತು ವಿದೇಶಿಯರ ಮಸೂದೆಯನ್ನು ತಾನೊಬ್ಬ ಜಾತ್ಯತೀತ ನಾಯಕ ಎಂದು ಹೇಳಿಕೊಳ್ಳುವ ದೇವೇಗೌಡರು ಎಷ್ಟರ ಮಟ್ಟಿಗೆ ವಿರೋಧಿಸಿದ್ದರು ? ತಾನೊಬ್ಬ ರೈತರ ಪರವಾದ ರಾಜಕಾರಣಿ ಎಂದು ಹೇಳಿಕೊಳ್ಳುವ ದೇವೇಗೌಡರು ನರೇಂದ್ರ ಮೋದಿ ಸರ್ಕಾರ ಜಾರಿಗೆ ತರುವುದಕ್ಕೆ ಹೊರಟ್ಟಿದ್ದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಎಷ್ಟರ ಮಟ್ಟಿಗೆ ವಿರೋಧಿಸಿದ್ದರು !? ಬಲವಾಗಿಯೇ ವಿರೋಧಿಸಿದ್ದರು ಎಂದರೆ, ಮೋದಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಯಾಕೆ ಅಥವಾ ಮೈತ್ರಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ ? ಬಹುಶಃ ಮೋದಿಯಂತಹ ದ್ವೇಷ ರಾಜಕಾರಣ ಮಾಡುವ ಪ್ರಧಾನಿಯೊಂದಿಗೆ ತಮ್ಮ ಹಿತಾಸಕ್ತಿಗಾಗಿ, ತಮ್ಮ ಪಕ್ಷದ ಅಸ್ತಿತ್ವಕ್ಕಾಗಿ ಕೈ ಜೋಡಿಸದೆ ಇದ್ದಿದ್ದರೆ, ತಮ್ಮ ಸಿದ್ಧಾಂತಗಳ ವಿರುದ್ಧ ನಡೆದುಕೊಳ್ಳದ ನಾಯಕರಾಗಿಯೇ ದೇವೇಗೌಡರು ಉಳಿಯುತ್ತಿದ್ದರು. ಅಧಿಕಾರ ಮತ್ತು ಅಸ್ತಿತ್ವದ ಭಯ ಮನುಷ್ಯನ ಆಂತರಿಕ ಸಂಘರ್ಷ ಮತ್ತು ಅನಿಶ್ಚಿತತೆಯನ್ನು ಸೂಚಿಸುತ್ತದೆ. ಬಹುಶಃ ಇದೇ ದೇವೇಗೌಡರ ʼಮದುವೆ, ವಿಚ್ಛೇದನʼಕ್ಕೆ ಕಾರಣವಾಗಿರಬಹುದು.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...