ಎಪ್‌ಸ್ಟೀನ್ ಫೈಲ್‌ನಲ್ಲಿ ಎಪ್‌ಸ್ಟೀನ್‌ಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾಡಿರುವ ಇಮೇಲ್ ಕೂಡಾ ಬಹಿರಂಗವಾಗಿದ್ದು, ಈ ಮಾಹಿತಿಯನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಖುದ್ದು ಪುರಿ ಅವರೇ ಮೊಯಿತ್ರಾ ಅವರಿಗೆ ಕರೆ ಮಾಡಿ ಟ್ವೀಟ್ ಡಿಲೀಟ್ ಮಾಡುವಂತೆ ಒತ್ತಡ, ಬೆದರಿಕೆ ಹಾಕಿದ್ದಾರೆ!
ವಿಶ್ವದಾದ್ಯಂತ ಹಲವು ಗಣ್ಯರೆನಿಸಿಕೊಂಡ ವ್ಯಕ್ತಿಗಳು, ಮಕ್ಕಳ ಲೈಂಗಿಕ ಅಪರಾಧಿ, ಅತ್ಯಾಚಾರಿ ಜೆಫ್ರಿ ಎಪ್‌ಸ್ಟೀನ್ ಜತೆ ಇಮೇಲ್ ಮಾಡಿರುವ ದಾಖಲೆಗಳ ‘ಎಪ್‌ಸ್ಟೀನ್ ಫೈಲ್ಸ್’ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಚಿವರತ್ತ ಬೆರಳು ಮಾಡಿರುವುದು ಸದ್ಯ ರಾಜಕೀಯವಾಗಿ ಕೋಲಾಹಲಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? Epstein files | ಕಡತಗಳು ಬಿಚ್ಚಿಡುವ ಕರಾಳ ಸತ್ಯವೇನು? ಇದೆಯೇ ಇಸ್ರೇಲ್ ನಂಟು?
ಈ ಫೈಲ್ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ್ದ ಮೊಯಿತ್ರಾ, “ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಮತ್ತು ಸರಣಿಯಾಗಿ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದಾತನ ಜತೆ ಇಮೇಲ್‌ನಲ್ಲಿ ಮಾಜಿ ಭಾರತೀಯ ರಾಜತಾಂತ್ರಿಕ ಪುರಿ ಅವರು ಎಪ್‌ಸ್ಟೀನ್‌ಗೆ ‘ಭಾರತದಲ್ಲಿ ಆಸಕ್ತಿ ಮೂಡಿಸುವ’ ಬಗ್ಗೆ ಮಾತನಾಡಿದ್ದಾರೆ. ‘ಆನಂದಿಸಿ’ ಎಂದು ಶುಭ ಹಾರೈಸಿದ್ದಾರೆ. ಅಲ್ಲದೆ ಎಪ್‌ಸ್ಟೀನ್‌ನ ‘ಎಕ್ಸೋಟಿಕ್ ಐಲ್ಯಾಂಡ್’ ಬಗ್ಗೆ ಪುರಿ ಅವರಿಗೆ ತಿಳಿದಿತ್ತು” ಎಂದು ಪೋಸ್ಟ್ ಮಾಡಿದ್ದಾರೆ. ಜತೆಗೆ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನೂ ಹಂಚಿಕೊಂಡಿದ್ದಾರೆ.
ಇದಾದ ಬೆನ್ನಲ್ಲೇ ಪುರಿ ನೇರವಾಗಿ ಮೊಯಿತ್ರಾಗೆ ಕರೆ ಮಾಡಿ ಟ್ವೀಟ್ ಡಿಲೀಟ್ ಮಾಡುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಸಚಿವ ಪುರಿ ಅವರು ತಮಗೆ ಫೋನ್ ಮಾಡಿ ಎಪ್‌ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಟ್ವೀಟ್‌ಗಳನ್ನು ಅಳಿಸುವಂತೆ ಒತ್ತಡ ಹೇರಿದ್ದಾರೆ. ‘ಜನರು ನಿಮ್ಮ ಹಿಂದೆ ಬಿದ್ದರೆ ನಾನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಬೆದರಿಕೆಯನ್ನೂ ಹಾಕಿದ್ದಾರೆ” ಎಂದು ಮೊಯಿತ್ರಾ ಟ್ವೀಟ್ ಮಾಡಿ ಆರೋಪಿಸಿದ್ದಾರೆ. ಹಾಗೆಯೇ “ನಿಮ್ಮ ಥಗ್ ಆರ್ಮಿಗೆ (ಗುಂಡಾ ಪಡೆಗಳಿಗೆ) ನಾನು ಹೆದರುವುದಿಲ್ಲ, ನಾನು ಎದುರಿಸಲು ಸಿದ್ಧಳಿದ್ದೇನೆ” ಎಂದೂ ಮೊಯಿತ್ರಾ ಹೇಳಿದ್ದಾರೆ.
ಏನಿದು ಎಪ್‌ಸ್ಟೀನ್ ಫೈಲ್ಸ್?
ಅಮೆರಿಕದ ಕುಖ್ಯಾತ ಹಣಕಾಸು ತಜ್ಞ, ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ನ ಅಪರಾಧ ಜಾಲಕ್ಕೆ ಸಂಬಂಧಿಸಿದ ಲಕ್ಷಾಂತರ ಪುಟಗಳ ಗೌಪ್ಯ ದಾಖಲೆಗಳೇ ಎಪ್‌ಸ್ಟೀನ್ ಫೈಲ್ಸ್ (Epstein Files) ಆಗಿದೆ. ದಶಕಗಳ ಕಾಲ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ಮತ್ತು ಮಾನವ ಕಳ್ಳಸಾಗಣೆ ಜಾಲವನ್ನು ನಡೆಸುತ್ತಿದ್ದವ ಎಪ್‌ಸ್ಟೀನ್. 2019ರಲ್ಲಿ ಆತ ಜೈಲಿನಲ್ಲಿ ಇದ್ದಾಗಲೇ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ಕೋಲಾಹಲವೆಬ್ಬಿಸಿದ ಎಪ್‌ಸ್ಟೀನ್ ಫೈಲ್ಸ್, ಇಕ್ಕಟ್ಟಿನಲ್ಲಿ ಡೊನಾಲ್ಡ್ ಟ್ರಂಪ್
ಅಮೆರಿಕದ ನ್ಯಾಯಾಂಗ ಇಲಾಖೆಯು ‘ಎಪ್‌ಸ್ಟೀನ್ ಫೈಲ್ಸ್ ಪಾರದರ್ಶಕತೆ ಕಾಯಿದೆ’ ಅಡಿಯಲ್ಲಿ ಜನವರಿ 30ರಂದು 30 ಲಕ್ಷ ಪುಟಗಳ ದಾಖಲೆಗಳು, 2,000 ವೀಡಿಯೊಗಳು ಮತ್ತು 1.8 ಲಕ್ಷ ಚಿತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಇವುಗಳಲ್ಲಿ ಎಪ್‌ಸ್ಟೀನ್‌ನ ವಿಮಾನದ ಹಾರಾಟದ ದಾಖಲೆಗಳು (Flight Logs), ಇಮೇಲ್‌ಗಳು, ಫೋಟೋಗಳು, ವೀಡಿಯೊಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿವೆ.
ಈ ದಾಖಲೆಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉದ್ಯಮಿಗಳಾದ ಬಿಲ್ ಗೇಟ್ಸ್ ಮತ್ತು ಎಲಾನ್ ಮಸ್ಕ್, ಬ್ರಿಟನ್‌ನ ಪ್ರಿನ್ಸ್ ಆಂಡ್ರ್ಯೂ ಅವರಂತಹ ಅನೇಕ ಪ್ರಭಾವಿ ವ್ಯಕ್ತಿಗಳ ಹೆಸರುಗಳಿವೆ. ಪ್ರಧಾನಿ ನರೇಂದ್ರ ಮೋದಿ ಹೆಸರು, ಸಚಿವ ಹರ್ದೀಪ್ ಸಿಂಗ್ ಪುರಿ ಹೆಸರೂ ಕಾಣಿಸಿಕೊಂಡಿರುವುದು ಸದ್ಯ ದೇಶದಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಸರ್ಕಾರ ಮಾತ್ರ ಪ್ರಧಾನಿ ಮೋದಿ ಹೆಸರು ಇದೆ ಎಂಬುದು ಆಧಾರರಹಿತ ಎಂದು ಹೇಳಿಕೊಳ್ಳುತ್ತಿದೆ.





