ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹರಿಯಾಣ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ವರದಿಯಾಗಿದೆ. 55 ವರ್ಷದ ಶಾಸಕ ಪನ್ವಾರ್ ಅವರನ್ನು ಗುರುಗ್ರಾಮ್‌ನಲ್ಲಿ ಶನಿವಾರ ಮುಂಜಾನೆ ಬಂಧಿಸಲಾಗಿದೆ.
ಅವರನ್ನು ಅಂಬಾಲದ ವಿಶೇಷ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ತನ್ನ ಕಸ್ಟಡಿಗೆ ಪಡೆಯಲು ಇಡಿ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಹರಿಯಾಣದ ಯಮುನಾನಗರ ಪ್ರದೇಶದಲ್ಲಿ ‘ದೊಡ್ಡ ಪ್ರಮಾಣದ ಅಕ್ರಮ ಗಣಿಗಾರಿಕೆ’ ನಡೆಯುತ್ತಿದೆ ಎಂಬ ಆರೋಪದ ಮೇಲೆ ಇದೇ ವರ್ಷದ ಜನವರಿಯಲ್ಲಿ ಶಾಸಕರ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿತ್ತು. ಅಲ್ಲದೆ, ಇದೇ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್‌ಎಲ್‌ಡಿ) ಮಾಜಿ ಶಾಸಕ ದಿಲ್‌ಬಾಗ್ ಸಿಂಗ್ ಮತ್ತು ಅವರ ಸಹಚರ ಕುಲ್ವಿಂದರ್ ಸಿಂಗ್ ಅವರನ್ನು ಬಂಧಿಸಿತ್ತು.
ಯಮುನಾ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿಷೇಧ ವಿಧಿಸಿದ್ದರೂ, ನಮುನಾಗರದ ಬಳಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಜಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಆರೋಪಗಳ ಮೇಲೆ ಹಲವಾರು ಎಫ್‌ಐಆರ್‌ಗಳನ್ನು ಹರಿಯಾಣ ಪೊಲೀಸರು ದಾಖಲಿಸಿದ್ದಾರೆ. ಇದೀಗ, ಅದೇ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆಯೂ ನಡೆದಿದೆ ಎಂದು ಆರೋಪಿಸಲಾಗಿದ್ದು, ಆ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.
ಆಪಾದಿತ ಅಕ್ರಮ ಗಣಿಗಾರಿಕೆಯಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 400-500 ಕೋಟಿ ರೂ.ಗಳಷ್ಟು ಅಕ್ರಮ ಹಣ ಸಂಪಾದನೆ ಮಾಡಲಾಗಿದೆ ಎಂದು ಇಡಿ ಅಂದಾಜಿಸಿದೆ.
ಅಂದಹಾಗೆ, ಇದೇ ವರ್ಷದ ಕೊನೆಯಲ್ಲಿ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.




