ಇಡೀ ಕರ್ನಾಟಕವನ್ನಲ್ಲದೇ, ದೇಶವನ್ನೇ ಬೆಚ್ಚಿ ಬೀಳಿಸಿರುವ ಹಾಸನದ ಜೆಡಿಎಸ್ ಸಂಸದ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ(ಹಾಸನ ಪೆನ್‌ಡ್ರೈವ್ ಪ್ರಕರಣ)ದ ಬಗ್ಗೆ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.
ಎಸ್‌ಐಟಿ ತಂಡದ ಮುಖ್ಯಸ್ಥರನ್ನಾಗಿ ಸಿಐಡಿಯ ಎಡಿಜಿಪಿ(ಅಪರ ಪೊಲೀಸ್ ಮಹಾನಿರ್ದೇಶಕ)ಯಾಗಿರುವ, ಹಿರಿಯ ಐಪಿಎಸ್ ಅಧಿಕಾರಿ ಬಿಜಯ್ ಕುಮಾರ್ ಸಿಂಗ್ ಅವರನ್ನು ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ವಿಶೇಷ ತನಿಖಾ ತಂಡದ ಸದಸ್ಯರನ್ನಾಗಿ ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯ ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀಮತಿ ಸುಮನ್ ಡಿ ಪನ್ನೇಕರ್ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕಿಯಾಗಿರುವ ಶ್ರೀಮತಿ ಸೀಮಾ ಲಟ್ಕರ್ ಅವರನ್ನು ನೇಮಿಸಿ, ಸರ್ಕಾರ ಆದೇಶ ಹೊರಡಿಸಿದೆ.

ಅಶ್ಲೀಲ ವೀಡಿಯೋ ಪ್ರಕರಣವು ರಾಜ್ಯದ ಮೂಲೆಮೂಲೆಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಶನಿವಾರ ಮುಂಜಾನೆ ಮೂರು ಗಂಟೆಗೆ ಅಂದರೆ ಮತದಾನ ನಡೆದಿದ್ದ ಏ.26ರ ತಡರಾತ್ರಿಯೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೇವಣ್ಣ ಅವರು LH 755 ನಂಬರಿನ ಲುಫ್ತಾನ್ಸಾ ಏರ್‌ಲೈನ್ಸ್ ಮೂಲಕ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್ ಫರ್ಟ್‌ಗೆ ತೆರಳಿದ್ದಾರೆ. ಈ ಮಾಹಿತಿಯನ್ನು ಖುದ್ದು ಪೊಲೀಸರು ಕೂಡ ದೃಢೀಕರಿಸಿರುವ ಬಗ್ಗೆ ಸಿಎಂ ಕಚೇರಿಯವರೂ ಕೂಡ ಮಾಹಿತಿ ನೀಡಿದ್ದರು.
ಇಷ್ಟೆಲ್ಲ ಬೆಳವಣಿಗೆಯ ಮಧ್ಯೆ ಸೆಕ್ಸ್ ಹಗರಣ ಬಯಲಾಗುತ್ತಿದ್ದಂತೆ ಹೊಸ ಹೊಸ ವಿಷಯಗಳು ಅನಾವರಣಗೊಳ್ಳುತ್ತಿದ್ದು, ಪ್ರಜ್ವಲ್ ಅವರ ಐಫೋನ್ ಮೊಬೈಲ್‌ನಲ್ಲಿದ್ದ ವಿಡಿಯೋಗಳು ಹೇಗೆ ಹೊರಬಂದವು ಎಂಬ ವಿಚಾರ ಕೂಡ ಬೆಳಕಿಗೆ ಬರುತ್ತಿದೆ.
ಈ ಮಾಹಿತಿಯನ್ನು ಪ್ರಕರಣದ ಬಗ್ಗೆ ಮೊದಲು ವರದಿ ಪ್ರಕಟಿಸಿದ್ದ ಕನ್ನಡದ ವೆಬ್‌ಸೈಟ್ ‘ಕನ್ನಡ ಪ್ಲಾನೆಟ್.ಕಾಮ್‘ ಕೂಡ ವರದಿ ಮಾಡಿದ್ದು, ವಿಡಿಯೋ ಹೇಗೆ ಲೀಕ್ ಆಯ್ತು? ಎಂಬುದನ್ನು ವಿವರಿಸಿದೆ.

ತಾನು ನೂರಾರು ಮಹಿಳೆಯರೊಂದಿಗೆ ನಡೆಸಿದ್ದ ಲೈಂಗಿಕ ಚಟುವಟಿಕೆ, ದೌರ್ಜನ್ಯಗಳನ್ನು ತಾನೇ ತನ್ನ ಐಫೋನ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ, ಅದನ್ನು ಸಂತ್ರಸ್ತ ಮಹಿಳೆಯರೊಂದಿಗೆ ‘ಡಿಲೀಟ್’ ಮಾಡುವ ಭರವಸೆ ನೀಡಿದ್ದಾನೆ. ಆದರೆ, ಅದನ್ನು ಡಿಲೀಟ್ ಮಾಡದೆಯೇ, ಇಟ್ಟುಕೊಳ್ಳುವ ಅಭ್ಯಾಸ ಹೊಂದಿದ್ದ. ಹೀಗಿರುವಾಗ ಸ್ವಂತ ಮೊಬೈಲ್‌ನಲ್ಲಿದ್ದ ವಿಡಿಯೋಗಳು ಹೇಗೆ ಹೊರಬಂದವು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಈ ಪ್ರಶ್ನೆಗೆ ಉತ್ತರ ಹುಡುಕಿದಾಗ ಬೇನಾಮಿ ಆಸ್ತಿ, ದ್ರೋಹ, ಕಿಡ್ನಾಪ್, ಹಲ್ಲೆ ಘಟನೆಗಳು ಕಾರಣ ಎಂಬುದು ಎಂಬ ಬಗ್ಗೆ ವರದಿ ತಿಳಿಸಿದೆ.
ವರದಿಯಲ್ಲಿ ಇರುವ ಅಂಶಗಳೇನು?
ಕಾಮುಕ ವ್ಯಾಘ್ರನ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ, ಅವನಿಗೆ ನಿಷ್ಠಾವಂತನಾಗಿದ್ದ, ಸುಮಾರು ಹದಿನಾಲ್ಕು ವರ್ಷಗಳ ಕಾಲ ಆತನೊಂದಿಗೇ ಇದ್ದ ವ್ಯಕ್ತಿಯೇ ಆತನ ಮೊಬೈಲ್‌ನಿಂದ ಎಲ್ಲ ವಿಡಿಯೋ, ಫೋಟೋಗಳನ್ನು ವರ್ಗಾಯಿಸಿಕೊಂಡಿದ್ದ ಎಂಬ ಅಂಶ ಬಯಲಾಗಿದೆ. ಇದಕ್ಕೆ ದೊಡ್ಡ ಹಿನ್ನೆಲೆಯೂ ಇದೆ.
ಯುವ ರಾಜಕಾರಣಿ ಮತ್ತು ಆತನ ಜೊತೆ ಕೆಲಸ ಮಾಡುತ್ತಿದ್ದ ಯುವಕನ ನಡುವೆ ವಿಶ್ವಾಸ, ಗೆಳೆತನವಿತ್ತು. ಇಬ್ಬರೂ ಎಲ್ಲ ಕಡೆ ಒಟ್ಟೊಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಯುವ ರಾಜಕಾರಣಿಗೆ ಮಾದಕ ವಸ್ತುಗಳ ವ್ಯಸನ ಕೂಡಾ ಇತ್ತು. ಅದನ್ನೂ ಸಹ ಜೊತೆ ಕೆಲಸ ಮಾಡುತ್ತಿದ್ದ ಯುವಕನೇ ಪೂರೈಸುತ್ತಿದ್ದ. ಎಷ್ಟೋ ಸಂದರ್ಭದಲ್ಲಿ ಮಾದಕ ವಸ್ತುಗಳ ನಶೆಯಲ್ಲಿ ಆತ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿದ್ದ. ಇಂಥದ್ದೇ ಒಂದು ಸಂದರ್ಭದಲ್ಲಿ ಯುವ ರಾಜಕಾರಣಿಯ ಐಫೋನ್‌ನಲ್ಲಿದ್ದ ಎಲ್ಲ ವಿಡಿಯೋ, ಫೋಟೋಗಳನ್ನು ಯುವಕ ವರ್ಗಾಯಿಸಿಕೊಂಡಿದ್ದ. ಇದಕ್ಕಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜಕಾರಣಿಯ ಐಫೋನ್ ನ ‘ಫೇಸ್ ರೆಕಗ್ನಿಷನ್’ ಟೂಲ್ ಬಳಸಿದ್ದ.
ಯುವ ರಾಜಕಾರಣಿ ಮತ್ತು ಯುವಕನ ನಡುವಿನ ಸಂಬಂಧ ಹಳಸುತ್ತ ಬಂದಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ಆ ಯುವಕನ ಮದುವೆ. ಯುವ ರಾಜಕಾರಣಿಯ ತಾಯಿಯ ಕಚೇರಿಯಲ್ಲಿ ಒಬ್ಬ ಹುಡುಗಿ ಕೆಲಸ ಮಾಡುತ್ತಿದ್ದಳು. ಆಕೆಯನ್ನೇ ಯುವಕ ಮದುವೆಯಾದ. ಆದರೆ ಯುವ ರಾಜಕಾರಣಿಯ ತಾಯಿಗೆ ಇದು ಇಷ್ಟವಿರಲಿಲ್ಲ. ಮನಸ್ತಾಪಗಳು ಆಗಲೇ ಶುರುವಾಗಿದ್ದವು.

ಯುವ ರಾಜಕಾರಣಿ ಮತ್ತು ಅವರ ಕುಟುಂಬದವರು ತಮಗೆ ತುಂಬ ಆಪ್ತರಾದವರ ಹೆಸರುಗಳಲ್ಲಿ ಬೇನಾಮಿ ಆಸ್ತಿಯನ್ನು ಮಾಡುತ್ತಿದ್ದರು. ಪರಮಾಪ್ತನಾಗಿದ್ದ ಯುವಕನ ಹೆಸರಿನಲ್ಲೂ ಅರಸೀಕೆರೆಯಲ್ಲಿ ಹದಿಮೂರು ಎಕರೆ ಜಾಗ ಮಾಡಿದ್ದರು. ಆತನ ಮದುವೆಯ ನಂತರ ಆ ಜಾಗವನ್ನು ಮಾರಾಟ ಮಾಡಿ ಎಂಬ ಒತ್ತಡ ಯುವಕನಿಗೆ ಶುರುವಾಗಿತ್ತು. ಮನಸ್ತಾಪ ಇದ್ದಿದ್ದರಿಂದ ಆತನ ಹೆಸರಲ್ಲಿ ಜಮೀನು ಇರುವುದು ಬೇಡ ಎಂಬುದು ಕುಟುಂಬದವರ ನಿಲುವಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಯುವಕ ಬೇರೆಯದ್ದೇ ಯೋಚನೆ ಮಾಡಿದ್ದ. ಅವನು ತನ್ನ ಹೆಸರಿನಲ್ಲಿದ್ದ ಜಮೀನು ಮಾರಿ ಹಣ ಕೊಡಲು ಒಪ್ಪಲಿಲ್ಲ.
ಸಿಟ್ಟಿಗೆದ್ದ ಕುಟುಂಬ ತೋಳ್ಬಲ, ಪ್ರಭಾವ ಬಳಸಿ ಆತನನ್ನು ಬೆದರಿಸಲು ಯತ್ನಿಸಿತು. ಆತನನ್ನು ಕಿಡ್ನಾಪ್ ಮಾಡಿ ಥಳಿಸಲಾಯಿತು. ಹದಿಮೂರು ಎಕರೆ ಜಮೀನನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಸಿದ ನಂತರವೇ ಅವನನ್ನು ಬಂಧಮುಕ್ತಗೊಳಿಸಲಾಯಿತು. ಇದಾದ ಕೆಲವು ದಿನಗಳ ನಂತರ ಯುವ ರಾಜಕಾರಣಿ ಮತ್ತು ತಾಯಿಯ ವಿರುದ್ಧ ಈತ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ. ನನ್ನನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಆತ ಆರೋಪಿಸಿದ್ದ.
ಇದೆಲ್ಲ ಘಟನೆಗಳು ನಡೆದ ನಂತರ ಯುವಕ ಸೇಡಿಗೆ ಬಿದ್ದಿದ್ದ. ತನ್ನ ಬಳಿ ಇದ್ದ ಯುವ ರಾಜಕಾರಣಿ ತಾನೇ ರೆಕಾರ್ಡ್ ಮಾಡಿಕೊಂಡಿದ್ದ 2900ಕ್ಕೂ ಹೆಚ್ಚು ಅಶ್ಲೀಲ ದೃಶ್ಯಗಳ ವಿಡಿಯೋಗಳು, ಫೊಟೋಗಳನ್ನು ಒಂದು ಪೆನ್ ಡ್ರೈವ್‌ನಲ್ಲಿ ಹಾಕಿಕೊಂಡು ರಾಜ್ಯ ರಾಜಕಾರಣದಲ್ಲಿ ಪ್ರಭಾವಶಾಲಿಯಾಗಿರುವ ರಾಜಕಾರಣಿಯೊಬ್ಬರ ಬಳಿಗೆ ಹೋಗಿ, ವಿಡಿಯೋಗಳನ್ನು ತೋರಿಸಿದ್ದ. ಆದರೆ ಆ ಪ್ರಭಾವಿ ರಾಜಕಾರಣಿ ಅಷ್ಟಾಗಿ ಆಸಕ್ತಿ ವಹಿಸಲಿಲ್ಲ. ‘ನೋಡೋಣ ಬಿಡು’ ಎಂದು ಹೇಳಿ ಅವನನ್ನು ಸಾಗ ಹಾಕಿದ್ದರು.

ತನ್ನ ಮೇಲೆ ನಡೆದ ದೌರ್ಜನ್ಯದಿಂದ ರೋಸಿಹೋಗಿದ್ದ ಆತ ಹೊಳೆನರಸೀಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿ.ದೇವರಾಜೇಗೌಡ ಅವರನ್ನು ಸಂಪರ್ಕಿಸಿದ್ದ. ಅವರಿಗೆ ಪೆನ್ ಡ್ರೈವ್ ಕೊಟ್ಟ. ಅದನ್ನು ನೋಡಿದ ದೇವರಾಜೇಗೌಡ ನೇರವಾಗಿ ಕಳೆದ ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ “ತುರ್ತು ರಹಸ್ಯ ಪತ್ರ” ಎಂದು ಉಲ್ಲೇಖಿಸಿ, ಗಂಭೀರ ಪತ್ರವನ್ನೂ ಕೂಡ ಬರೆದಿದ್ದಾರೆ. ಪತ್ರದಲ್ಲಿ, ‘ಲೋಕಸಭಾ ಚುನಾವಣೆಯಲ್ಲಿ ಯುವ ರಾಜಕಾರಣಿಯ ಪ್ರತಿನಿಧಿಸುತ್ತಿರುವ ಪಕ್ಷದ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಬೇಡ. ಅದು ಪಕ್ಷಕ್ಕೆ ಸಮಸ್ಯೆ ಉಂಟು ಮಾಡಬಹುದು’ ಎಂದು ಉಲ್ಲೇಖಿಸಿದ್ದರು. ಆ ಪತ್ರದ ಪ್ರತಿ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಹಲವು ಪತ್ರಿಕಾಗೋಷ್ಠಿಗಳನ್ನು ನಡೆಸಿ ತನ್ನ ಬಳಿ ಯುವ ರಾಜಕಾರಣಿಯೇ ರೆಕಾರ್ಡ್ ಮಾಡಿಕೊಂಡಿರುವ ಅಶ್ಲೀಲ ದೃಶ್ಯಗಳ ವಿಡಿಯೋಗಳು ಇವೆ ಎಂದು ಹೇಳಿಕೊಂಡರು. ಈ ನಡುವೆ ಯುವ ರಾಜಕಾರಣಿ ತನ್ನ ಯಾವುದೇ ಅಶ್ಲೀಲ ವಿಡಿಯೋಗಳನ್ನು ಪ್ರಕಟಿಸದಂತೆ ತಡೆ ಕೋರಿ, ಮಾನಹಾನಿಕರ ಪೋಸ್ಟ್‌ಗಳನ್ನು ಎಲ್ಲಿಯೂ ಪ್ರಸಾರ ಮಾಡದಂತೆ ಕಳೆದ ಜೂನ್ 2023ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಆದೇಶ ಕೂಡಾ ಆಗಿತ್ತಲ್ಲದೇ, ಸೋಷಿಯಲ್ ಮೀಡಿಯಾ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲೂ ಪ್ರಕಟಿಸದಂತೆ ನ್ಯಾಯಾಲಯ ಕೂಡ ತಡೆಯಾಜ್ಞೆ ನೀಡಿತ್ತು.

ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ್ದ ದೇವರಾಜೇಗೌಡ ಅವರು, “ತಡೆಯಾಜ್ಞೆ ತೆರವುಗೊಳಿಸಲಿ, ದೊಡ್ಡ ಪರದೆಯ ಮೇಲೆ ಎಲ್ಲ ವಿಡಿಯೋ ತೋರಿಸುತ್ತೇನೆ” ಎಂದು ಮಾಧ್ಯಮಗಳ ಮೂಲಕ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಈ ನಡುವೆ ವಿಧಾನಸಭಾ ಚುನಾವಣೆ ಕೂಡ ಬಂದಿತ್ತು.
ಈ ಚುನಾವಣೆಯಲ್ಲಿ ಆದ ಸೋಲಿನಿಂದ ಜರ್ಝರಿತರಾಗಿರುವ ಪ್ರಭಾವಿ ನಾಯಕರೊಬ್ಬರ ಬಳಿಗೆ ತಡೆಯಾಜ್ಞೆ ತಂದಿದ್ದ ಪೆನ್‌ಡ್ರೈವ್ ತಲುಪಿತ್ತು. ಆದರೆ, ಅದೇ ಪೆನ್‌ಡ್ರೈವ್ ಅವರೇ ಇದನ್ನು ಹೊರಗೆ ತಂದರಾ? ಅಥವಾ ಎದುರಾಳಿಗಳು ತಂದರಾ? ಇಷ್ಟು ವ್ಯವಸ್ಥಿತವಾಗಿ ಈ ಪೆನ್‌ಡ್ರೈವ್‌ಗಳು ಹಾಸನ ಜಿಲ್ಲೆಯ ಮನೆಮನೆ ತಲುಪಿದ್ದು ಹೇಗೆ? ಎಂಬುದನ್ನು ಈಗ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವಷ್ಟೇ ಹೊರ ತರಬೇಕಿದೆ.
ಸಿಎಂಗೆ ಪತ್ರ ಬರೆದಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ
ಹಾಸನದ ಮನೆಮನೆ ತಲುಪಿದ್ದ ಪೆನ್‌ಡ್ರೈವ್ ಪ್ರಕರಣವು ರಾಜ್ಯಮಟ್ಟದಲ್ಲಿ ಸುದ್ದಿಗೆ ಕಾರಣವಾಯಿತು. ಅಲ್ಲದೇ, ಕೆಲವೊಂದು ಸ್ಥಳೀಯ ಪತ್ರಿಕೆಗಳು ಕೂಡ, ಪೆನ್‌ಡ್ರೈವ್ ಮೂಲಕ ಅಶ್ಲೀಲ ವಿಡಿಯೋಗಳು ಗುಸುಗುಸು ಹರಡುತ್ತಿರುವ ಬಗ್ಗೆಯೂ ಮುಖಪುಟದಲ್ಲಿ ವರದಿ ಮಾಡಿತ್ತು. ಆ ವರದಿಯಲ್ಲಿ ಸುಮಾರು 2976 ವಿಡಿಯೋಗಳು ಇರುವ ಬಗ್ಗೆಯೂ ಉಲ್ಲೇಖಿಸಿತ್ತು. ಅಲ್ಲದೇ, ವಿಡಿಯೋಗಳನ್ನು ಹಂಚಿಕೊಂಡು ಸಂತ್ರಸ್ತ ಮಹಿಳೆಯರ ಮಾನಹಾನಿ ಮಾಡಲಾಗಿದೆ ಎಂಬುದನ್ನೂ ಕೂಡ ಗಮನಿಸಿತ್ತು.
ಈ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಮಹಿಳಾ ದೌರ್ಜನ್ಯ ವೇದಿಕೆ ಮತ್ತು ಎಸ್‌ಡಿಪಿಐ ಪಕ್ಷದ ಕಾನೂನು ಘಟಕದ ಮುಖಂಡ ನೆಲಮಂಗಲ ಭಾಸ್ಕರ್ ಪ್ರಸಾದ್ ಅವರು ರಾಜ್ಯ ಮಹಿಳಾ ಆಯೋಗದ ಕದ ತಟ್ಟಿದ್ದಲ್ಲದೇ, ಒಬ್ಬ ಪ್ರಭಾವೀ ವ್ಯಕ್ತಿಯಿಂದಾಗಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ಈ ಬಗ್ಗೆ ಗಮನ ಹರಿಸಿ ಎಂದಿದ್ದರು. ಜೊತೆಗೆ, ಲಿಖಿತ ರೂಪದಲ್ಲಿ ಮನವಿ ಪತ್ರವನ್ನು ಕೂಡ ನೀಡಿ, ‘ಇದು ದೇಶದಲ್ಲಿಯೇ ಅತಿದೊಡ್ಡ ಸೆಕ್ಸ್ ಹಗರಣ ಆಗಿರಬಹುದು. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ’ ಎಂದು ಆಗ್ರಹಿಸಿದ್ದರು.

ಲಿಖಿತ ದೂರು ಸಂಘಟನೆಗಳಿಂದ ಬಂದಿದ್ದರೂ ಕೂಡ ಸಂತ್ರಸ್ತೆಯರು ಮಹಿಳಾ ಆಯೋಗಕ್ಕೆ ದೂರು ನೀಡಿರಲಿಲ್ಲ.
ಈ ನಡುವೆ ಮನವಿ ಸ್ವೀಕರಿಸಿದ್ದ ದಿನದಂದೇ(ಏಪ್ರಿಲ್ 25) ಪತ್ರಿಕಾಗೋಷ್ಠಿ ನಡೆಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, “ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಇರುವ ಪೆನ್ ಡ್ರೈವ್ ಮಹಿಳಾ ಆಯೋಗದ ಕಚೇರಿಗೂ ತಲುಪಿದೆ. ದೇಶದಲ್ಲೇ ತಲೆ ತಗ್ಗಿಸಲು ತಗ್ಗಿಸುವ ಘಟನೆ ಇದು. ಹೆದರಿಸಿ, ನಂಬಿಸಿ ಈ ವಿಡಿಯೋ ಮಾಡಲಾಗಿದೆ. ಈವರೆಗೆ ಮಹಿಳಾ ಆಯೋಗಕ್ಕೆ ಸಂತ್ರಸ್ತರು ಯಾರು ಕೂಡ ಬಂದಿಲ್ಲ. ಆದರೂ ಎರಡು ದೂರುಗಳು ಬಂದಿದೆ. ಈ ಬಗ್ಗೆ ಎಸ್ಐಟಿ ರಚಿಸಲು ಸಿಎಂಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದ್ದರು. ಅಲ್ಲದೇ, ಪತ್ರ ಕೂಡ ಬರೆದಿದ್ದರು.

ಸಂತ್ರಸ್ತರ ಸಂಖ್ಯೆ ಎಷ್ಟು?
ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಈದಿನ.ಕಾಮ್‌ನ ಪ್ರತಿನಿಧಿ, “ಈ ಪ್ರಕರಣದಲ್ಲಿ ನಿರ್ದಿಷ್ಟ ಸಂಖ್ಯೆಯ ಮಹಿಳಾ ಸಂತ್ರಸ್ತರಿದ್ದಾರೆಯೇ? ಎಷ್ಟು ವರ್ಷಗಳಿಂದ ಇದು ನಡೆದುಕೊಂಡ ಬಂದ ಪ್ರಕರಣ? ಎಲ್ಲಿ ನಡೆದಿರುವ ಬಗ್ಗೆ ಮಾಹಿತಿ ಇದೆಯೇ? ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಮಹಿಳಾ ಆಯೋಗದ ಅಧ್ಯಕ್ಷೆ,”ಸುಮಾರು ಜನ ಮಹಿಳೆಯರಿದ್ದಾರೆ ಅನ್ನೋದಷ್ಟೇ ನಮಗಿರುವ ಮಾಹಿತಿ. ಈವರೆಗೆ ದೂರು ನೀಡಲು ಸಂತ್ರಸ್ತರು ಯಾರು ಕೂಡ ಬಂದಿಲ್ಲ. ಸಂತ್ರಸ್ತರು ಮುಂದೆ ಬಂದು ದೂರು ನೀಡಿದರೆ ಪ್ರಕರಣಕ್ಕೆ ಇನ್ನಷ್ಟು ಬಲ ಸಿಗಲಿದೆ. ಯಾರೂ ಕೂಡ ಹೆದರಬಾರದು. ಜೊತೆಗೆ, ವೈರಲ್ ಮಾಡುತ್ತಿರುವವರ ವಿರುದ್ಧವೂ ಕಾನೂನು ಕ್ರಮಕ್ಕೆ ಸೂಚಿಸುತ್ತೇನೆ” ಎಂದಿದ್ದರು.
ಈಗ ಬಂದಿರುವ ಮಾಹಿತಿಯ ಪ್ರಕಾರ, ಸುಮಾರು 2976 ವಿಡಿಯೋಗಳು ಪೆನ್‌ಡ್ರೈವ್‌ನಲ್ಲಿದ್ದಾವೆ. ಇದರಲ್ಲಿ 12 ಮಹಿಳೆಯರು ಜೆಡಿಎಸ್ ಪಕ್ಷದ ಕಾರ್ಯಕರ್ತರಾದರೆ, ಇಬ್ಬರು ಬಿಜೆಪಿಯ ಹಿನ್ನೆಲೆ ಹೊಂದಿರುವ ಕುಟುಂಬದ ಸದಸ್ಯರು. ಓರ್ವ ಮಹಿಳೆ ಸರ್ಕಾರಿ ಅಧಿಕಾರಿಯೋರ್ವರ ಪತ್ನಿ, ಇಬ್ಬರು ಪೊಲೀಸ್ ಇಲಾಖೆಯಲ್ಲಿ ಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿರುವರು, ಒಬ್ಬರು ಸರ್ಕಾರಿ ಕಚೇರಿಯಲ್ಲಿ ಕೆಳ ಹಂತದಲ್ಲಿ ಸೇವೆಯಲ್ಲಿದ್ದರೆ, ಒಬ್ಬಾಕೆ ಮನೆ ಕೆಲಸದ ಮಹಿಳೆ ಹೀಗೆ ಒಟ್ಟು ಸುಮಾರು 300ಕ್ಕೂ ಅಧಿಕ ಮಹಿಳೆಯರು ಈ ಪ್ರಕರಣದಲ್ಲಿ ಸಂತ್ರಸ್ತರು ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಇದರ ಬಗ್ಗೆ ಎಸ್‌ಐಟಿ ತನಿಖಾಧಿಕಾರಿಗಳೇ ಪತ್ತೆ ಹಚ್ಚಬೇಕಾಗಿದೆ.
ಏಪ್ರಿಲ್ 22ರಂದು ವಿಡಿಯೋಗಳಿರುವ ಪೆನ್‌ಡ್ರೈವ್ ಬಹಿರಂಗಗೊಂಡಿದೆ. ಏಪ್ರಿಲ್ 25ರಂದು ಮಹಿಳಾ ಆಯೋಗ ಸಿಎಂಗೆ ಪತ್ರ ಬರೆದು, ಎಸ್‌ಐಟಿ ರಚಿಸುವಂತೆ ಕೇಳಿದೆ. ಏಪ್ರಿಲ್ 26ರಂದು ಮತದಾನ ನಡೆದಿದೆ. ಏಪ್ರಿಲ್ 27ರ ಬೆಳ್ಳಂಬೆಳಗ್ಗೆ ಮುಂಜಾನೆ ಆರೋಪ ಕೇಳಿ ಬಂದ ಸಂಸದ ಪ್ರಜ್ವಲ್ ರೇವಣ್ಣ ವ್ಯಕ್ತಿ ದೇಶ ಬಿಟ್ಟು, ಜರ್ಮನಿಗೆ ಹೋಗಿದ್ದಾನೆ.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ.
ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ…— Siddaramaiah (@siddaramaiah) April 27, 2024
ಏಪ್ರಿಲ್ 27ರ ಸಂಜೆ ಮಹಿಳಾ ಆಯೋಗದ ಪತ್ರವನ್ನು ಉಲ್ಲೇಖಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್‌ಐಟಿ ತನಿಖೆ ನಡೆಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಟ್ವೀಟ್ ಮಾಡುವಾಗ, “ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ” ಎಂದು ಉಲ್ಲೇಖಿಸಿದ್ದರಿಂದ ಹಾಸನದ ಗಲ್ಲಿಯಲ್ಲಿದ್ದ ಸುದ್ದಿಯು, ರಾಷ್ಟ್ರ ರಾಜಧಾನಿ ದಿಲ್ಲಿಯವರೆಗೂ ತಲುಪಿ, ರಾಷ್ಟ್ರಮಟ್ಟದ ಸುದ್ದಿಯಾಗಿದೆ.
ಇದನ್ನು ಓದಿದ್ದೀರಾ? ಹಾಸನ ಪೆನ್‌ಡ್ರೈವ್ | ಪ್ರಜ್ವಲ್ ರೇವಣ್ಣ ದೇಶಬಿಟ್ಟು ಓಡಿ ಹೋಗಲು ಮೋದಿ ಸಹಾಯ ಮಾಡಿದರಾ?
ಈ ನಡುವೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸಂತ್ರಸ್ತ ಮಹಿಳೆಯೋರ್ವರು ದೂರು ದಾಖಲಿಸಿದ್ದಾರೆ.
ಎಫ್‌ಐಆರ್‌ನಲ್ಲಿ ರೇವಣ್ಣ ಎ1 ಮತ್ತು ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ. 354 A, 354 D, 509 ಅಡಿ ಪ್ರಕರಣ ದಾಖಲಾಗಿದೆ. 2015 ರಲ್ಲಿ ಹೆಚ್.ಡಿ.ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ದೂರು ನೀಡಿದ್ದಾರೆ. ತಂದೆ ಮತ್ತು ಮಗನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಪ್ರಕರಣ ಮುಂದೆ ಏನೇನಾಗಲಿದೆ ಎಂದು ಕಾದು ನೋಡಬೇಕಿದೆ.





