ಹಾಸನ ಮಣ್ಣಿನ ಹೆಣ್ಣು ಬೇರುಗಳು | ಸಮುದಾಯದ ಜೀವನಾಡಿ ಅಂಗನವಾಡಿ ತಾಯಂದಿರು 

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಮಹಿಳೆಯರ, ಮಕ್ಕಳ ಪೌಷ್ಟಿಕ ಆಹಾರ ಮತ್ತು ಶಾಲಾಪೂರ್ವ ಶಿಕ್ಷಣದ ಬಗ್ಗೆ ಒತ್ತು ನೀಡುವ ಉದ್ದೇಶದಿಂದ 1975ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು(ಐಸಿಡಿಎಸ್) ಆರಂಭಿಸಲಾಯಿತು. ಇದನ್ನು ಜಾರಿಗೊಳಿಸಲು ತಳಮಟ್ಟಗಳಲ್ಲಿ 1000 ಜನಸಂಖ್ಯೆ ಇರುವ ಪ್ರತೀ ಹಳ್ಳಿ, ನಗರಪ್ರದೇಶಗಳಲ್ಲಿ ಸ್ಥಾಪನೆಗೊಂಡ ಅಂಗನವಾಡಿ ಕೇಂದ್ರಗಳಲ್ಲಿ ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ದುಡಿಯುತ್ತಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಅಂಗನವಾಡಿಗಳು: ಈ ಯೋಜನೆ ರಾಷ್ಟ್ರಮಟ್ಟದಲ್ಲಿ 1975ರಲ್ಲಿ ಆರಂಭವಾಗಿ, ರಾಜ್ಯದಲ್ಲಿ 3 ಕಡೆ ಪೈಲೆಟ್ ಕಾರ್ಯಕ್ರಮವಾಗಿ ಜಾರಿಯಾದರೂ ಹಾಸನ ಜಿಲ್ಲೆಯಲ್ಲಿ 1979ರಲ್ಲಿ ಹಾಸನ ಮತ್ತು ಅರಸೀಕೆರೆಯಲ್ಲಿ ಪೈಲೆಟ್ ಕಾರ್ಯಕ್ರಮವಾಗಿ ಮೊದಲು ಆರಂಭಗೊಂಡಿತು. ಆನಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಈ ಯೋಜನೆ ಹಂತಹಂತವಾಗಿ ಜಾರಿಯಾಯಿತು.
ಹಾಸನ ಜಿಲ್ಲೆಯಲ್ಲಿ ಒಟ್ಟು 2,691 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 4,338 (2,399 ಕಾರ್ಯಕರ್ತೆಯರು, 1,939 ಸಹಾಯಕಿಯರು) ಮಹಿಳೆಯರು ಕಾರ್ಯಕರ್ತೆಯಾಗಿ ಮತ್ತು ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಾರೆ. ಇವರನ್ನು ಈ ಸಮಾಜ ”ಅಂಗನವಾಡಿ ತಾಯಂದಿರು, ಅಂಗನವಾಡಿ ಅಮ್ಮಂದಿರು” ಎಂದೇ ಗುರ್ತಿಸಿದೆ. ಐಸಿಡಿಎಸ್ ಕಾರ್ಯಕ್ರಮವು 5 ಉದ್ದೇಶಗಳು ಮತ್ತು 6 ಸೇವೆಗಳನ್ನು ಹೊಂದಿದೆ. ಜಿಲ್ಲೆಯಲ್ಲ್ಲಿ 79,862 ಫಲಾನುಭವಿಗಳು (ಗರ್ಭಿಣಿ, ಬಾಣಂತಿಯರು) 66,770 ಮಕ್ಕಳು- ಅಂಗನವಾಡಿ ತಾಯಂದಿರಿಂದ ಪ್ರಸ್ತುತ ಸೇವೆ ಪಡೆಯುತ್ತಿದ್ದಾರೆ. (0-6 ವರ್ಷದ ಫಲಾನುಭವಿ ಮಕ್ಕಳು) ಈ ಮಕ್ಕಳೆಲ್ಲ ಮುಂದೆ ಈ ಸಮಾಜದಲ್ಲಿ ಈ ಜಿಲ್ಲೆಯಲ್ಲಿ ಒಂದಲ್ಲಾ ಒಂದು ರೀತಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಿ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲಿದ್ದಾರೆ. ಕಳೆದ 50 ವರ್ಷಗಳಿಂದ ಈ ಸೇವೆ ಪಡೆಯುವವರ ಸಂಖ್ಯೆಯು ಬೆಳೆಯುತ್ತಲೇ ಇದೆ.

ಇದನ್ನು ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕರ್ತೆಯರ ಮನದಾಳ: ಹಾಸನದಲ್ಲಿ ಯೋಜನೆಯು ಅಸ್ತಿತ್ವಕ್ಕೆ ಬಂದಾಗ ರಾಜ್ಯದಲ್ಲಿ ಅಂಗನವಾಡಿಗಳಿಗೆ ವ್ಯವಸ್ಥಿತವಾದ ಕಟ್ಟಡಗಳಿರಲಿಲ್ಲ. ಬಾಡಿಗೆ ಕಟ್ಟಡದಲ್ಲಿ, ಹಳೆಯ ಮನೆಗಳಲ್ಲಿ, ಸಮುದಾಯ ಕೇಂದ್ರದಲ್ಲಿ ಅಥವಾ ಮಹಿಳಾ ಮಂಡಳ/ಯುವಕ ಮಂಡಳಗಳಲ್ಲಿ ಕೇಂದ್ರಗಳನ್ನು ನಡೆಸಿರುವ ಉದಾಹರಣೆಗಳಿವೆ. ‘ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ತಯಾರಿಸಿ ಕೊಡಲು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರೇ ಅಗತ್ಯವಿರುವಷ್ಟು ಸೌದೆಗಳನ್ನು ಹೊಂದಿಸಿಕೊಂಡು ಅಡುಗೆ ಮಾಡಬೇಕಿತ್ತು(ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ವ್ಯವಸ್ಥೆಯಿದೆ). ಗರ್ಭಿಣಿ ಮತ್ತು ಬಾಣಂತಿಯರಿಗೆ ಆಹಾರವನ್ನು ಕೊಡಲು ಜಿಲ್ಲಾ ಕೇಂದ್ರಗಳಲ್ಲಿರುವ ಗೋಡೌನ್‌ಗೆ ಕಾರ್ಯಕರ್ತೆಯರೇ ಚೀಲಗಳನ್ನು ಹೊಂದಿಸಿಕೊಂಡು ಹೋಗಿ ಅಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಿಕೊಳ್ಳಬೇಕಿತ್ತು. ವಸ್ತು ಸಾಗಿಸಲು ಲಾರಿಗಳು ಇತರೇ ವಾಹನಗಳು ಬರದಿದ್ದರೆ ತಲೆ ಮೇಲೆ ಹೊತ್ತು ತರಬೇಕಾಗಿತ್ತು. ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ನಾವುಗಳು 1979ರಲ್ಲಿ ಕಾರ್ಯಕರ್ತೆಯಾಗಿ ಕೆಲಸಕ್ಕೆ ಸೇರಿದಾಗ ತಿಂಗಳಿಗೆ 75 ರೂಪಾಯಿ ಮತ್ತು ಸಹಾಯಕಿಯರಿಗೆ 50 ರೂಪಾಯಿ ಗೌರವಧನ ಸಿಗುತ್ತಿತ್ತು’ ಎಂದು- ಈಗ ನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆ ಮಂಜಮ್ಮ ಹೇಳುತ್ತಾರೆ.

”ಈ ಯೋಜನೆಯ ಮಹತ್ವ ಅರಿಯದ ಗ್ರಾಮೀಣ ಪ್ರದೇಶದ ಜನ ನಮ್ಮನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದರು, ನಮ್ಮನ್ನು ‘ಉಪ್ಪಿಟ್ ಮೇಡಂ’ ಎಂದೂ ಕರೆದು ಹೀಯಾಳಿಸುತ್ತಿದ್ದರು. ನಮ್ಮಗಳ ಸಾಮಾಜಿಕ ಹಿನ್ನೆಲೆಯಿಂದಾಗಿ (ವಿಧವೆ, ಅಂಗವಿಕಲೆ, ಪರಿಶಿಷ್ಟ ಜಾತಿ ಮತ್ತಿತರೆ ಕಾರಣಗಳಿಂದಾಗಿ) ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದು, ಯಾವ ಗೌರವವನ್ನೂ ನೀಡುತ್ತಿರಲಿಲ್ಲ. ನಮ್ಮಗಳ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದರು. ಸ್ವಂತ ಉದ್ಯೋಗವನ್ನು ಅರಸಿ ಮನೆಯಿಂದ ಹೊರಬಂದು ಮಹಿಳೆ ದುಡಿಯುವುದನ್ನು ಸಮಾಜ ಸಹಿಸುತ್ತಿರಲಿಲ್ಲ. ಇವನ್ನೆಲ್ಲಾ ಅನುಭವಿಸಿ ಕಷ್ಟಪಟ್ಟು ಅಂಗನವಾಡಿ ಕೇಂದ್ರಕ್ಕೆ ಬರುವ ಹತ್ತಾರು ಮಕ್ಕಳನ್ನು ನಮ್ಮ ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಂಡು, ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ಮತ್ತು ಪೌಷ್ಟಿಕತೆಗೆ ಮನೆಯ ಮಕ್ಕಳಂತೆ ಗಮನ ಕೊಡುತ್ತಿದ್ದರೂ ಮೇಲ್ಮಟ್ಟದ ಅಧಿಕಾರಿಗಳೂ ನಮಗೆ ಯಾವ ಬೆಲೆಯನ್ನೂ ಕೊಡುತ್ತಿರಲಿಲ್ಲ” ಎಂದು ಅನೇಕ ಹಿರಿಯ ಅಂಗನವಾಡಿ ತಾಯಂದಿರು ನೆನಪಿಸಿಕೊಳ್ಳುತ್ತಾರೆ. ಇಂತಹ ದಾರುಣ ಸ್ಥಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ಬಡತನದಿಂದಾಗಿ ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು, ಪೋಷಕರು ಮಕ್ಕಳನ್ನು ಸುಲಭವಾಗಿ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುತ್ತಿರಲಿಲ್ಲ. ಈ ಕುರಿತು ಈಗ ನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯರ್ತೆಯಾದ ಇಂದ್ರಮ್ಮನವರಲ್ಲಿ ಕೇಳಿದಾಗ ”ನಾವೇ ಮನೆಮನೆಗಳಿಗೆ ಹೋಗಿ ಮಕ್ಕಳನ್ನು ಕರೆದುಕೊಂಡು ಬರಬೇಕಾಗಿತ್ತು. ಯಾವ ಸ್ವಚ್ಛತೆಯೂ ಇಲ್ಲದಂತೆ ಬರುವ ಮಕ್ಕಳನ್ನು ಸ್ವಚ್ಛಗೊಳಿಸಿ ಅವರ ಹೇಲು ಉಚ್ಚೆ ಬಾಚಿ, ಅವರಿಗೆ ಅಡುಗೆ ತಯಾರಿಸಿ ಊಟಮಾಡಿಸಿ, ಆಟವಾಡಿಸಿ, ಅಕ್ಷರ ಕಲಿಸಿ, ತಿಂಗಳುಗಳ ಕಾಲ ಆಹಾರ ಪದಾರ್ಥಗಳನ್ನು ಕೆಡದಂತೆ ಸಂಸ್ಕರಿಸಿ, ಮನೆಮನೆಗಳಿಗೆ ಭೇಟಿ ನೀಡಿ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ತಿಳಿವಳಿಕೆ ನೀಡಬೇಕಾಗಿತ್ತು. ಕಾಲಕಾಲಕ್ಕೆ ಮಕ್ಕಳಿಗೆ ಕೊಡುವ ಲಸಿಕೆಗಳನ್ನು ಹಾಕಿಸಲು ಜನರು ಹಿಂಜರಿಯುತ್ತಿದ್ದರು, ಅವರನ್ನು ಕಾಡಿ ಬೇಡಿ, ಮನವೊಲಿಸಿ ಮಕ್ಕಳಿಗೆ ಲಸಿಕೆಗಳನ್ನು ಹಾಕಿಸಬೇಕಾಗಿತ್ತು. ಇಷ್ಟೊಂದು ಸಂಕಷ್ಟ, ಅವಮಾನ, ಅತ್ಯಂತ ಕಡಿಮೆ ಸಂಬಳ ಇವುಗಳಿಂದ ಬೇಸತ್ತಿದ್ದ ಅಂಗನವಾಡಿ ತಾಯಂದಿರಿಗೆ ಸಂಘಟನೆ ಎಂಬುದು ಆಶಾಕಿರಣದಂತೆ ಗೋಚರಿಸಿತು. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತಾವು ಸಂಘಟಿತರಾಗಬೇಕೆನ್ನುವ ಜಾಗೃತಿಯನ್ನು ಮೂಡಿಸಿಕೊಂಡು ಎಲ್ಲರೂ ಸಂಘಟಿತರಾಗಲು ಆರಂಭಿಸಿದರು. ಆರಂಭದಿಂದ ಇಲ್ಲಿಯವರೆಗೂ ನಡೆಸಿದ ನಿರಂತರ ಹೋರಾಟಗಳಿಂದಾಗಿ ಕಾರ್ಯಕರ್ತೆಯರಿಗೆ ತಿಂಗಳಿಗೆ 75 ರೂಪಾಯಿ ಇದ್ದ ಸಂಬಳ ಈಗ 12,000 ರೂಪಾಯಿಗಳಾಗಿದೆ. ಅದೇ ರೀತಿ ಸಹಾಯಕಿಯರಿಗೆ 50 ರೂಪಾಯಿದ್ದ ಸಂಬಳ, ಈಗ 6,750 ರೂಪಾಯಿಗೆ ಹೆಚ್ಚಾಗಿದೆ. ಪ್ರತಿ ಸಾರಿ ನಮ್ಮ ಸಂಬಳ ಹೆಚ್ಚಾಗಿರುವುದರ ಹಿಂದೆ ನಮ್ಮ ಹೋರಾಟವಿತ್ತೇ ಹೊರತು ನಮ್ಮ ಕೆಲಸವನ್ನು ಗುರುತಿಸಿ ಯಾವ ಸರ್ಕಾರಗಳು ನಮ್ಮ ಸಂಬಳವನ್ನು ಹೆಚ್ಚಳ ಮಾಡಲಿಲ್ಲ. ನಾವು ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಂಡಿದ್ದೇವೆ. ಮಾತ್ರವಲ್ಲ ನಮ್ಮ ಹೋರಾಟದಿಂದ ಸಂಬಳ ಹೆಚ್ಚಳವಾಗಿದ್ದು ಒಂದೆಡೆಯಾದರೆ ನಮಗೆಲ್ಲಾ ಆತ್ಮವಿಶ್ವಾಸ ಮೂಡಿತು, ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಅಧಿಕಾರಿಗಳು, ಸರ್ಕಾರಗಳನ್ನು ಕೇಳುವ ಧೈರ್ಯ ಬಂದಿತು, ನಮ್ಮ ಮೇಲಾಗುತ್ತಿದ್ದ ದಬ್ಬಾಳಿಕೆ ದೌರ್ಜನ್ಯಗಳನ್ನು ತಡೆಯಲು ಸಂಘಟನೆಯಿಂದ ಮಾತ್ರ ಸಾಧ್ಯ ಎಂಬುದು ಸಾಬೀತಾಯಿತು” ಎಂದು ನೆನಪಿಸಿಕೊಂಡರು.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ಕೆಲಸದಿಂದಾಗಿ ಜಿಲ್ಲೆಯ ಮಹಿಳೆಯರು ಅದರಲ್ಲೂ ಸಮಾಜಕ್ಕೆ ಮುಂದಿನ ಪೀಳಿಗೆಯನ್ನು ನೀಡುವ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ಹಾಗೂ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಶಾಲಾಪೂರ್ವ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ದೊರೆತಂತಾಗಿದೆ. ಇವರ ಕೆಲಸದ ಅಗಾಧತೆ ಮತ್ತು ಅವರ ಕೊಡುಗೆ ಅರ್ಥವಾಗಬೇಕಾದರೆ ಕಳೆದ 50 ವರ್ಷಗಳಲ್ಲಿ ಪ್ರತಿ ಅಂಗನವಾಡಿಗಳಲ್ಲಿ 0-6 ವರ್ಷದೊಳಗಿನ ಎಷ್ಟು ಸಂಖ್ಯೆಯ ಮಕ್ಕಳು ದಾಖಲಾಗಿ ಪೌಷ್ಟಿಕ ಆಹಾರ, ಶಿಕ್ಷಣ ಪಡೆದು, ಕಾರ್ಯಕರ್ತೆ ಮತ್ತು ಸಹಾಯಕಿಯರ ಲಾಲನೆಪಾಲನೆ ಪಡೆದು ಹೊರಹೋಗಿದ್ದಾರೆ. ಅವರೆಲ್ಲ ಈ ಸಮಾಜದ ಅಭಿವೃದ್ದಿಗೆ ಕೊಟ್ಟ ಕೊಡುಗೆಗಳನ್ನು ಅಧ್ಯಯನ ಮಾಡಿ ಲೆಕ್ಕ ಮಾಡಿಕೊಂಡರೆ ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಅಗಾಧತೆ ಮತ್ತು ಪರಿಣಾಮ ಅರ್ಥವಾಗುತ್ತದೆ. ಅದೇ ರೀತಿ ಎಷ್ಟು ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ಇವರು ಕಾಳಜಿ ವಹಿಸಿದ್ದಾರೆ ಎಂಬುದನ್ನು ಚಿತ್ರಿಸಿಕೊಳ್ಳಿ.

ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

ಕೆಲಸಗಳ ಮಾಹಿತಿ: ಅಂಗನವಾಡಿ ಕಾರ್ಯಕರ್ತೆಯರು ಎಂದರೆ ಕೇವಲ ಮಕ್ಕಳಿಗೆ ಆಹಾರ ಕೊಡುವುದು ಮಾತ್ರ ಎಂದು ತಿಳಿದವರ ಸಂಖ್ಯೆಯೇ ಹೆಚ್ಚಿದೆ. ಅಂಗನವಾಡಿ ನೌಕರರಿಗೆ ಐಸಿಡಿಎಸ್ ಯೋಜನೆಯ ಕೆಲಸಗಳ ಜೊತೆಗೆ ಯೋಜನೇತರ ಕೆಲಸದ ಹೊರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಹೊಸ ಯೋಜನೆಗಳು ಬಂದರೂ ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವುದು, ಅವುಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು, ಯಾವುದೇ ಸಮೀಕ್ಷೆಗಳು ಬಂದರೂ ಅವುಗಳಲ್ಲಿ ತೊಡಗುವುದು, ಪೋಲಿಯೋ ಲಸಿಕೆ, ಆರೋಗ್ಯ ಕಾರ್ಯಕ್ರಮಗಳು, ಸ್ವಸಹಾಯ ಸಂಘಗಳ ನಿರ್ವಹಣೆ, ಚುನಾವಣಾ ಕೆಲಸಗಳು ಹೀಗೆ ಹೇಳುತ್ತಾ ಹೋದರೆ ಅವು ಮುಗಿಯುವುದೇ ಇಲ್ಲ. ಇನ್ನು ಈ ಯೋಜನೆಯ ಕೆಲಸದಲ್ಲೇ ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ಒಟ್ಟು 33 ದಾಖಲೆಗಳನ್ನು ನಿರ್ವಹಿಸಬೇಕು. ‘ಒಂದೆಡೆ ಯೋಜನೆಯ ಕೆಲಸಗಳು ಹೆಚ್ಚು ಮತ್ತು ಅದರ ಜೊತೆಗೆ ಯೋಜನೇತರ ಕೆಲಸಗಳು ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣವನ್ನು ನೀಡಲು ಸಮಯವೇ ಸಾಕಾಗುತ್ತಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಬರೆದು ಮುಗಿಸಲಾಗದ ಕೆಲಸಗಳನ್ನು ಮನೆಗಳಲ್ಲೂ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ದೊಡ್ಡ ಪ್ರಮಾಣದ ಕೆಲಸದ ಹೊರೆಯಿಂದಾಗಿ ಕಾರ್ಯಕರ್ತೆಯರ ವೈಯಕ್ತಿಕ ಜೀವನದಲ್ಲಿ ಹಲವು ಏರುಪೇರುಗಳಾಗುತ್ತಿವೆ’ ಎಂದು ಹಾಲಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುವ ಎಂ.ಬಿ.ಪುಷ್ಪರವರು ಹೇಳುತ್ತಾರೆ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಮುಂದುವರೆದು ”ಇಷ್ಟೆಲ್ಲಾ ಕೆಲಸಗಳಿಗೆ ಇಲಾಖೆಯಿಂದ ಕಾಲಕಾಲಕ್ಕೆ ತರಬೇತಿಗಳನ್ನು ನೀಡುತ್ತಿಲ್ಲ, ಜಿಲ್ಲೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಅದರ ಹೊರೆಯೂ ಹೆಚ್ಚಾಗಿ, ಕೆಲಸ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲಸದ ಹೊರೆಯನ್ನು ಕಡಿತಗೊಳಿಸಬೇಕು ಇಲ್ಲದಿದ್ದರೆ ಕೆಲಸಕ್ಕೆ ತಕ್ಕಂತೆ ವೇತನವನ್ನೂ ಹೆಚ್ಚಿಸಬೇಕು” ಎಂದು ಆಗ್ರಹಿಸುತ್ತಾರೆ.

ಕೌಶಲ್ಯಭರಿತ ತಾಯಂದಿರು: ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೇವಲ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾಭ್ಯಾಸ ಮಾಡಿರುವವರು ಮಾತ್ರವಲ್ಲದೆ, ದೊಡ್ಡ ಸಂಖ್ಯೆಯಲ್ಲಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದವರು ಅಂಗನವಾಡಿ ಕಾರ್ಯಕರ್ತೆಯರಾಗಿ ಅತ್ಯಂತ ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಾಗಿದ್ದುಕೊಂಡೇ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕಿಯರು ನಮ್ಮ ಜಿಲ್ಲೆಯಲ್ಲಿದ್ದಾರೆ. ಬೇಲೂರು ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆ ಕಾಮಾಕ್ಷಿ ರಾಜುರವರು ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ರಾಜಕೀಯದಲ್ಲಿ ಸೇವೆ ಸಲ್ಲಿಸಿ ಈಗಲೂ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ಬೇಲೂರಿನ ಸವಾಸಿಹಳ್ಳಿ ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಗ್ರಾಮಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಇನ್ನು ಕ್ರೀಡಾ ಕ್ಷೇತ್ರದಲ್ಲಿ ಹಾಸನ ತಾಲ್ಲೂಕಿನ ಹೆಗ್ಗಡಿಹಳ್ಳಿ ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ ಮತ್ತು ಹೊಳೆನರಸೀಪುರ ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಹಾಗೂ ಕೆ.ವಿಜಯಕುಮಾರಿ ಅವರು ಅಂತಾರಾಷ್ಟ್ರೀಯ ಮಟ್ಟದ ಸಾಧನೆಯನ್ನು ಮಾಡಿದ್ದಾರೆ.

ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

ಆರೋಗ್ಯಪೂರ್ಣ ಸಮಾಜಕ್ಕಾಗಿ ಅಂಗನವಾಡಿಗಳನ್ನು ಉಳಿಸೋಣ: ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಉತ್ತಮ ಭವಿಷ್ಯ ಅಡಗಿರುವ ಇಂತಹ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನವನ್ನು ಹಂತಹಂತವಾಗಿ ಕಡಿತಗೊಳಿಸುತ್ತಾ ಬರುತ್ತಿದ್ದು, ಪ್ರಸ್ತುತ ಈ ಯೋಜನೆಯನ್ನೇ ಖಾಸಗೀಕರಿಸುವ ಹುನ್ನಾರ ನಡೆದಿದೆ. ಯಾವುದೇ ಒಂದು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮಾನವ ಅಭಿವೃದ್ಧಿ ಸೂಚ್ಯಂಕದ ಮಾನದಂಡದ ಆಧಾರದಲ್ಲಿ ಅಳತೆ ಮಾಡಲಾಗುತ್ತದೆ. ಇಂತಹ ಮಾನವ ಅಭಿವೃದ್ಧಿಗೆ ಐಸಿಡಿಎಸ್ ಯೋಜನೆಯ ಕೊಡುಗೆ ದೊಡ್ಡದು. ಇಂತಹ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪಾತ್ರ ಬಹಳ ದೊಡ್ಡದು. ಇಂತಹ ಉತ್ತಮ ಕೆಲಸದಲ್ಲಿ ತೊಡಗಿರುವ ಅಂಗನವಾಡಿ ತಾಯಂದಿರನ್ನು ಗೌರವಿಸುವುದು, ಅವರ ಕೆಲಸವನ್ನು ಪ್ರೋತ್ಸಾಹಿಸುವುದು ಮತ್ತು ಅವರ ಕೆಲಸಕ್ಕೆ ತಕ್ಕಂತ ಸಂಬಳ ಮತ್ತು ಸೌಲಭ್ಯಗಳನ್ನು ಒದಗಿಸುವುದು ಯಾವುದೇ ಒಂದು ಸರ್ಕಾರದ ಕರ್ತವ್ಯ. ಇದಕ್ಕಾಗಿ ಜವಾಬ್ದಾರಿಯುತ ನಾಗರಿಕರಾದ ನಾವುಗಳೆಲ್ಲಾ ಇಂತಹ ಯೋಜನೆಯನ್ನು ಉಳಿಸಿಕೊಳ್ಳಬೇಕು ಮತ್ತು ಅದರಲ್ಲಿ ದುಡಿಯುತ್ತಿರುವ ತಾಯಂದಿರ ಹೋರಾಟಕ್ಕೆ ಜೊತೆಯಾಗಿ ಹೆಜ್ಜೆಹಾಕಬೇಕು. ಆ ಮೂಲಕ ಒಂದು ಸ್ವಾಸ್ಥ್ಯ ಮತ್ತು ಆರೋಗ್ಯಪೂರ್ಣ ಸಮಾಜವನ್ನು ಕಟ್ಟಲು ಸಾಧ್ಯ. ಅದಕ್ಕಾಗಿ ಕೈಜೋಡಿಸೋಣ ನಮ್ಮನ್ನೆಲ್ಲಾ ಬೆಳೆಸಿದ ಅಂಗನವಾಡಿ ತಾಯಂದಿರ ಸೇವೆಯನ್ನು ಸ್ಮರಿಸೋಣ…

-ಹೆಚ್.ಆರ್.ನವೀನ್ ಕುಮಾರ್

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...