ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುದ್ದಿಗೋಷ್ಠಿಯನ್ನು ನಡೆಸದಂತೆ, ಮಾನಹಾನಿ ಹೇಳಿಕೆಯನ್ನು ನೀಡದಂತೆ ರಾಜ್ಯ ಹೈಕೋರ್ಟ್ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ಗೆ ನಿರ್ಬಂಧ ವಿಧಿಸಿದೆ. ಯಾವುದೇ ಮಾಧ್ಯಮಗಳ ಮೂಲಕ ಮಾನಹಾನಿ ಹೇಳಿಕೆ ಪ್ರಕಟಿಸದಂತೆ ಆದೇಶ ನೀಡಿದೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೆಲವು ದಿನಗಳ ಹಿಂದೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಆ ಸಂದರ್ಭದಲ್ಲಿ ಕೋರ್ಟ್ ಪ್ರತಾಪ್ ಸಿಂಹ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ತಡೆ ಹೇರಿತ್ತು. ಆದರೆ ಲಕ್ಷ್ಮಣ್ ಮೇಲ್ಮನವಿ ಸಲ್ಲಿಸಿದ ನಂತರ ತಡೆಯಾಜ್ಞೆ ತೆಗೆದುಹಾಕಲಾಗಿತ್ತು.
ಈ ತಡೆಯಾಜ್ಞೆಯನ್ನು ಕೋರ್ಟ್ ತೆಗೆದುಹಾಕಿರುವುದನ್ನು ಪ್ರಶ್ನಿಸಿ ಪ್ರತಾಪ್ ಸಿಂಹ ಮಿಸಲೇನಿಯಸ್ ಫಸ್ಟ್ ಅಪೀಲ್ (ಎಂಎಫ್‌ಎ) ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ನಟರಾಜ್ ನೇತೃತ್ವದ ಏಕಸದಸ್ಯ ಪೀಠವು ಮತ್ತೆ ತಡೆಯಾಜ್ಞೆಯನ್ನು ವಿಧಿಸಿದೆ.
ಪ್ರತಾಪ್ ಸಿಂಹರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ ಶ್ಯಾಮ್, “ಲಕ್ಷ್ಮಣ್ ಅವರು ಪ್ರತಾಪ್ ಸಿಂಹ ವಿರುದ್ಧ ದೋಷಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ವದಂತಿ ಎಬ್ಬಿಸುವ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದು, ಇದು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಈ ಆರೋಪಗಳು ಪ್ರತಾಪ್ ಘನತೆಗೆ ಧಕ್ಕೆ ಉಂಟು ಮಾಡುತ್ತದೆ, ಮಾನಹಾನಿ ಮಾಡುತ್ತದೆ,” ಎಂದಿ ವಾದಿಸಿದ್ದಾರೆ.
“ದೇಶದಲ್ಲಿ ಎಲ್ಲ ನಾಗರಿಕನಿಗೂ ವಾಕ್ ಸ್ವಾತಂತ್ರ್ಯವಿದ್ದು, ಅದನ್ನು ಬಳಸುವಾಗ ಸೂಕ್ತ ದಾಖಲೆಯಿಲ್ಲದೆ ಯಾರ ಘನತೆಗೆ ಹಾನಿ ಉಂಟು ಮಾಡಬಾರದು,” ಎಂದು ಹೇಳಿರುವ ಕೋರ್ಟ್ ಪ್ರತಾಪ್ ಸಿಂಹರ ಮಾನಹಾನಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆದೇಶಿಸಿದೆ.





