“ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಇನ್ನೂ ವಾಪಸ್ ಪಡೆದಿಲ್ಲ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಹಿಜಾಬ್ ನಿಷೇಧ ವಾಪಸ್ ವಿಚಾರ: ಸರ್ಕಾರದ ಮಟ್ಟದಲ್ಲಿ ಚರ್ಚೆ; ಸಿಎಂ ಸಿದ್ದರಾಮಯ್ಯ pic.twitter.com/pjRsJ8HRNv
— eedina.com (@eedinanews) December 23, 2023
ನಿನ್ನೆ(ಡಿ.22) ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಶನಿವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ಶುಕ್ರವಾರ ಕವಲಂದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾರೋ ಒಬ್ಬರು ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಬೇರೆ ಬೇರೆ ಸಮಸ್ಯೆಯ ಬಗ್ಗೆ ಮಾತನಾಡುವಾಗ ಹಿಜಾಬ್ ಬಗ್ಗೆನೂ ಹೇಳಿದ್ದೇನೆ. ಹಿಜಾಬ್ ನಿಷೇಧ ವಾಪಸ್ ಪಡೆಯುವ ಬಗ್ಗೆ ಯೋಚನೆ ಮಾಡಿದ್ದೀವಿ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಸಿಎಂ ಹೇಳಿದರು.
ಇದನ್ನು ಓದಿದ್ದೀರಾ? ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತೇವೆ ಅಂತ ಮತ್ತೆ ಹಠ ಹಿಡಿಯಲಿದ್ದಾರೆ: ಚಕ್ರವರ್ತಿ ಸೂಲಿಬೆಲೆ
ಮೈಸೂರು ಜಿಲ್ಲೆಯ ನಂಜನಗೂಡು ಸಮೀಪ ನಡೆದ ಕಾರ್ಯಕ್ರಮವೊಂದರ ವೇಳೆ ನಿನ್ನೆ ಸಿಎಂ ಸಿದ್ದರಾಮಯ್ಯನವರು ‘ಉಡುಪು ಅವರವರ ಇಷ್ಟ. ಹಿಜಾಬ್ ನಿಷೇಧ ವಾಪಸ್ ತಗೋತೇವೆ’ ಎಂದು ಮಹತ್ವದ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಂದ ಬಳಿಕ, ಇದರ ವಿರುದ್ಧ ಬಿಜೆಪಿ ಹಾಗೂ ಸಂಘಪರಿವಾರದವರು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ‘ಮತ ಗಳಿಸಲು ಮುಸ್ಲಿಮರ ಓಲೈಕೆ ಮಾಡುವ ಮೂಲಕ ತುಷ್ಟೀಕರಣ ಮಾಡುತ್ತಿದೆ’ ಎಂದು ಕಿಡಿಕಾರುತ್ತಿದ್ದಾರೆ.





