ಪೊಲೀಸರ ಅಂತರ ಜಿಲ್ಲಾ ವರ್ಗಾವಣೆ ಪೋರ್ಟಲ್ ಅರ್ಜಿ ಪ್ರಕಾರ ಆಗುತ್ತಿಲ್ಲ ಎಂಬ ಆರೋಪದ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಬುಧವರಾ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, “ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಶಿಸ್ತು ಬದ್ಧವಾಗಿ ನಿಯಮದ ಚೌಕಟ್ಟಿನಲ್ಲಿ ನಡೆಯಬೇಕಾಗುತ್ತದೆ” ಎಂದು ಹೇಳಿದರು.
“ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಾಡಿದ್ದಾರೆ. ಅದನ್ನು ಮೀರಿ ವರ್ಗಾವಣೆ ಮಾಡಲು ಬರುವುದಿಲ್ಲ. ಅಕಸ್ಮಾತ್ ಮಾಡಬೇಕಾದರೆ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ” ಎಂದರು.
“ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಒಂದು ವರ್ಷದ ನಿಯಮವಿತ್ತು. ಸದನದಲ್ಲಿ ಕಾನೂನು ಬದಕಾಯಿಸಿ ಎರಡು ವರ್ಷ ಮಾಡಲಾಗಿದೆ. ಈ ರೀತಿ ಕಾನೂನು ಬದಲಾವಣೆ ಮಾಡಬಹುದು. ಇರುವಂತಹ ನಿಯಮ ಉಲ್ಲಂಘನೆ ಮಾಡಿ, ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಡಿಜಿ ಅವರಾಗಲಿ, ನಾನು ಅಥವಾ ಮತ್ತೊಬ್ಬರು ಇರಬಹುದು. ಕಾನೂನು ನಿಯಮದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ” ಎಂದು ತಿಳಿಸಿದರು.
“ವರ್ಗವಾಣೆಗೆ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಏನಾದರು ಸಣ್ಣಪುಟ್ಟ ತೊಂದರೆಗಳು ಸಿಬ್ಬಂದಿಗಳಿಗೆ ಆಗಿದ್ದರೆ ಸರಿಪಡಿಸುವುದಕ್ಕೆ ಸೂಚನೆ ನೀಡುತ್ತೇನೆ. ಅವರಿಗೆ ಕುಟುಂಬಗಳಿವೆ. ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ” ಎಂದು ಹೇಳಿದರು.
“545 ಪಿಎಸ್ಐ ಹುದ್ದೆಗಳ ನೇಮಕಾತಿ ಕುರಿತು, ಎಲ್ಲರು ಕೋರ್ಟ್‌ಗಳಿಗೆ ಹೋಗಿ ಆದೇಶಗಳನ್ನು ತಂದಾಗ, ನಮ್ಮ ಕೈ ಕಟ್ಟಿ ಹಾಕಿದಂತಾಗುತ್ತದೆ. 545 ಪಿಎಸ್ಐ ಹುದ್ದೆಗಳ ನೇಮಕಾತಿ ಆದೇಶಗಳನ್ನು ಕೊಡಬೇಕು ಎಂಬ ಉದ್ದೇಶದಿಂದ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದೇವೆ. ಈ ಹಂತದಲ್ಲಿಯೇ ಯಾರೋ ಕೋರ್ಟ್‌ಗೆ ಹೋಗುತ್ತಾರೆ. ಇದನ್ನು ಮುಗಿಸಿದರೆ ಮುಂದಿನ ನೇಮಕಾತಿಗಳಿಗೆ ಅನುಕೂಲವಾಗುತ್ತದೆ. 545 ಹುದ್ದೆಗಳ ನೇಮಕಾತಿಯನ್ನು ಆದಷ್ಟು ಬೇಗ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿಳಿಸಿದರು.





