ಕಳೆದ 30 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ದಿನನಿತ್ಯ ಯಂತ್ರದಂತೆ ಜನರ ಕಲ್ಯಾಣಕ್ಕಾಗಿ ದುಡಿದಿದ್ದೇನೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿಕೊಂಡಿದ್ದಾರೆ.
ಅನ್ನಮಯ್ಯ ಜಿಲ್ಲೆಯ ರಾಜಂಪೇಟೆಯಲ್ಲಿ ನಡೆದ ಪಿಂಚಣಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1995ರ ಸೆಪ್ಟೆಂಬರ್ 1ರಂದು ಅಂದಿನ ಅಖಂಡ ಆಂಧ್ರಪ್ರದೇಶದಲ್ಲಿ ನಾಯ್ಡು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆ ಏರಿದ್ದರು. ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭವನ್ನು ಸ್ಮರಿಸಿದರು.
“30 ವರ್ಷಗಳ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಈವರೆಗೆ ಜನರ ಜೀವನದಲ್ಲಿ ಬೆಳಕು ತರಲು ಶ್ರಮಿಸುತ್ತಿದ್ದೇನೆ. ನಾನು ರಜೆ ತೆಗೆದುಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ? ನಾನು ಎಂದಾದರೂ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಕಂಡಿದ್ದೀರಾ? ನಾನು ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಯಂತ್ರದಂತೆ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.
“ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಅಭಿವೃದ್ಧಿಗಾಗಿ ಮತ್ತು ಆದಾಯವನ್ನು ಹೆಚ್ಚಿಸಲು ಆಡಳಿತ ಯಂತ್ರವು ಸಕ್ರಿಯವಾಗಿ ಕೆಲಸ ಮಾಡುವಂತೆ ಮಾಡುತ್ತೇನೆ. ಹೆಚ್ಚಿನ ಆದಾಯದೊಂದಿಗೆ ನಾನು ನಿಮಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ. ಇದರಿಂದ ನಿಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಾರೆ., ನಿಮಗೆ ಉದ್ಯೋಗಾವಕಾಶಗಳು ಸಿಗುತ್ತವೆ. ನಿಮಗೆ ಉತ್ತಮ ಭವಿಷ್ಯವಿದೆ” ಎಂದು ನಾಯ್ಡು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ ‘ಭಾಯಿ ಭಾಯಿ’ ಎನ್ನುತ್ತಿದ್ದಾರೆ ಮೋದಿ; ಇದು ಸಾಧ್ಯವೇ?
ನಾಯ್ಡು ಅವರು ಪತ್ನಿ ನಾರಾ ಭುವನೇಶ್ವರಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಶ್ರದ್ಧೆ ಮತ್ತು ಜನರ ಕಲ್ಯಾಣವೇ ಏಕೈಕ ಗುರಿಯಾಗಿಟ್ಟುಕೊಂಡು ನಡೆಸಿದ ಈ ಪ್ರಯಾಣವು ಅನೇಕರಿಗೆ ಸ್ಫೂರ್ತಿ ನೀಡಿದೆ. ನೀವು ತೆಗೆದುಕೊಂಡ ಪ್ರತಿಯೊಂದು ಹೆಜ್ಜೆ ಮತ್ತು ನೀವು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವು ಜನರ ಭವಿಷ್ಯವನ್ನು ಸುಧಾರಿಸುವ ನಿಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ಅಪರೂಪದ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಿಮ್ಮ ದೃಷ್ಟಿಕೋನ ಮತ್ತು ದೃಢಸಂಕಲ್ಪದೊಂದಿಗೆ ಯಾವಾಗಲೂ ನಿಮ್ಮೊಂದಿಗೆ ನಿಲ್ಲುವುದು ನನ್ನ ಅದೃಷ್ಟ” ಎಂದು ನಾಯ್ಡುಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸದ್ಯ, ರಾಜಕೀಯ ಜೀವನದಲ್ಲಿ ರಜೆಯನ್ನೇ ತೆಗೆದುಕೊಳ್ಳದೆ, 18 ಗಂಟೆ ಕೆಲಸ ಮಾಡುವ ಮೂಲಕ, ದೇಶವನ್ನು ಬಾನೆತ್ತರಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿ ಮೋದಿ ಅವರ ಸಾಲಿಗೆ ಚಂದ್ರಬಾಬು ನಾಯ್ಡು ಕೂಡ ಸೇರಿಕೊಂಡಿದ್ದಾರೆ.ಮೋದಿ ಅವರು ಬರೋಬ್ಬರಿ ಕಳೆದ 25 ವರ್ಷಗಳಿಂದ ರಜೆಯನ್ನೇ ತೆಗೆದುಕೊಂಡಿಲ್ಲ ಎಂದು ಅಮಿತ್ ಶಾ ಹೇಳಿದ್ದರು. ಈಗ ನಾಯ್ಡು ಕೂಡ ರಜೆ ಇಲ್ಲದೆ ದುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸಮಯದಲ್ಲಿ ಒಡಿಶಾದ ಮಯೂರಭಂಜ್ ಮತ್ತು ಜಾಜಪುರ ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಪ್ರಸಾರ ಸಮಾವೇಶದಲ್ಲಿ ಮಾತನಾಡಿದ್ದ ಅಮಿತ್ ಶಾ, “ಮೋದಿ ಜಿ ಕಠಿಣ ಪರಿಶ್ರಮಿ. ನಿಷ್ಠಾವಂತ ಮತ್ತು ಪ್ರಾಮಾಣಿಕರು. ಪ್ರಧಾನಿ ಅವರು ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಕಳೆದ 20 ವರ್ಷಗಳಲ್ಲಿ ಒಂದೇ ಒಂದು ದಿನವೂ ರಜೆಯನ್ನೂ ತೆಗೆದುಕೊಂಡಿಲ್ಲ, ಏಕೆಂದರೆ ಅವರು ರಾಷ್ಟ್ರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ” ಎಂದಿದ್ದರು.




