ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನೆ ಬಾಯಿಗೆ ಬಂದಂತೆ ಕಿರುಚುವುದನ್ನು ಕಲಿತಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಹೋಲಿಕೆ ಮಾಡುವ ವ್ಯಕ್ತಿ ಸಿದ್ದರಾಮಯ್ಯನದ್ದು ಅಲ್ಲ ಎಂದು ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದರು.
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆ. ಪ್ರಧಾನಿ ನರೇಂದ್ರ ಮೋದಿ ಸಮುದ್ರದಲ್ಲಿ ಈಜಿದ ಮನುಷ್ಯ. ಅವರಿಗೂ – ಇವರಿಗೂ ಹೋಲಿಕೆ ಎಲ್ಲಿದೆ” ಎಂದು ಪ್ರಶ್ನಿಸಿದರು.
“ಸಿದ್ದರಾಮಯ್ಯಗೂ – ಜಮೀರ್‌ಗೂ ಯಾವುದೇ ವ್ಯತ್ಯಾಸ ಇಲ್ಲ. ಇಬ್ಬರೂ ಸುಮ್ಮನೆ ಕೂಗುತ್ತಾರೆ. ಇವರು ಹೆರಿಗೆ ವಾರ್ಡ್‌ನಲ್ಲಿ ಕಿರುಚಿದರೆ ಹೆರಿಗೆಯೇ ಆಗಿಬಿಡುತ್ತದೆ. ಆ ರೀತಿಯಲ್ಲಿ ಕೂಗುವುದನ್ನು ಕಲಿತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ
“ನಮ್ಮ ತೆರಿಗೆ ನಮ್ಮ ಹಕ್ಕು ಎಂದೆಲ್ಲಾ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದಾರೆ. ಕೇಳುವ ರೀತಿಯಲ್ಲಿ ಕೇಳಿದರೆ ನಮ್ಮ ತೆರಿಗೆ ಬರುತ್ತದೆ. ಯಾವ ಸರ್ಕಾರವೂ ನಮಗೆ ಅನ್ಯಾಯ ಮಾಡುವುದಿಲ್ಲ. ನಾನು ಹಿಂದೆ ಕಂದಾಯ ಸಚಿವ ಆಗಿದ್ದಾಗ ಹೋಗಿ ಕೇಳಿದ್ದಕ್ಕೆ ನಮ್ಮ ಹಣ ನಮಗೆ ಬಂದಿತ್ತು” ಎಂದು ಕೇಂದ್ರ ಸರ್ಕಾರ ನಡೆಯನ್ನು ಸಮರ್ಥಿಸಿಕೊಂಡರು.
“ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ, ರಾಷ್ಟ್ರಪತಿ ಬಗ್ಗೆ ಬಾಯಿಗೆ ಬಂದಂತೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಇಂತಹ ಸಿದ್ದರಾಮಯ್ಯ ಬಗ್ಗೆ ಏನು ಹೇಳಲಿ? ಗ್ಯಾರಂಟಿಗಳಿಂದ ಗೆದ್ದು ಅದೇ ಗುಂಗಿನಲ್ಲಿ ಕಾಂಗ್ರೆಸ್‌ನವರು ಇದ್ದಾರೆ. ಮೋದಿ ಸರ್ಕಾರ ಮಾಡಿರುವ ಜನಪರ ಯೋಜನೆಗಳ ಮುಂದೆ ಕಾಂಗ್ರೆಸ್‌ನವರ ಆಟ ನಡೆಯುವುದಿಲ್ಲ” ಎಂದರು.





