ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ವಿತರಿಸುವ ಹಣವನ್ನು ಮತದಾರರು ಸ್ವೀಕರಿಸಿ. ಒಂದು ವೇಳೆ ಆ ಹಣವು ‘ಹರಾಮ್’ (ಅಕ್ರಮವಾಗಿ ಸಂಪಾದಿಸಿದ ಹಣ) ಎಂದೆನಿಸಿದರೆ ಆ ಹಣವನ್ನು ಶೌಚಾಲಯಗಳನ್ನು ನಿರ್ಮಿಸಲು ಬಳಸಬಹುದು ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮಂಗಳವಾರ ಹೇಳಿದ್ದಾರೆ.
ಜನವರಿ 15 ರಂದು ಲಾತೂರ್ ಮಹಾನಗರ ಪಾಲಿಕೆಗೆ ಚುನಾವಣೆ ನಿಗದಿಯಾಗಿದೆ. ಇದಕ್ಕೂ ಮುನ್ನ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, “ಎಐಎಂಐಎಂ ಕಣಕ್ಕೆ ಇಳಿದ ನಂತರವೇ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು ಮತದಾರರಲ್ಲಿ ಹಣವನ್ನು ವಿತರಿಸಲು ಪ್ರಾರಂಭಿಸಿದವು. ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೆ, ಹಣ ವಿತರಿಸುತ್ತಿರಲಿಲ್ಲ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ‘ನಮಗೆ ನಮಕ್ ಹರಾಮ್‌ಗಳ ಮತ ಬೇಡ’: ಮುಸ್ಲಿಮರ ವಿರುದ್ಧ ನಾಲಿಗೆ ಹರಿಬಿಟ್ಟ ಕೇಂದ್ರ ಸಚಿವ
ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಪ್ರತಿಯೊಂದು ಸಮುದಾಯಕ್ಕೂ ರಾಜಕೀಯ ಶಕ್ತಿ ಇದೆ. ಬಲವಾದ ರಾಜಕೀಯ ನಾಯಕತ್ವವನ್ನು ನಿರ್ಮಿಸಿ ಎಂದು ಓವೈಸಿ ಮುಸ್ಲಿಮರಿಗೆ ಕರೆ ನೀಡಿದರು. ಹಾಗೆಯೇ ದಲಿತರು ಮತ್ತು ಮುಸ್ಲಿಮರು ಬಡ ಜನಸಂಖ್ಯೆಯ ದೊಡ್ಡ ಭಾಗವಾಗಿದ್ದಾರೆ. ಅಭಿವೃದ್ಧಿ ಅವರು ಇರುವ ಪ್ರದೇಶಗಳನ್ನು ತಲುಪಿಲ್ಲ ಎಂದು ಹೇಳಿದರು.
“ಬಿಜೆಪಿ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತದೆ, ಆದರೆ ರೈತರು ಸಾಯುತ್ತಿದ್ದಾರೆ, ಯುವಕರು ನಿರುದ್ಯೋಗಿಗಳಾಗಿದ್ದಾರೆ, ಮತ್ತು ಅವರು ಮಾತನಾಡುತ್ತಿರುವುದು ಲವ್ ಜಿಹಾದ್ ಬಗ್ಗೆ ಮಾತ್ರ. ನನ್ನನ್ನು ಮೆಚ್ಚಿಸಲು ಮೋದಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ವಿಮಾನದಲ್ಲಿ ಹೇಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮೌನವಾಗಿವೆ” ಎಂದು ಆರೋಪಿಸಿದರು.
ಇನ್ನು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಟೀಕಿಸಿದ ಓವೈಸಿ, “ಅಜಿತ್ ಅವರು ತಮ್ಮ ಚಿಕ್ಕಪ್ಪ ಮತ್ತು ರಾಜಕೀಯ ಮಾರ್ಗದರ್ಶಕ ಶರದ್ ಪವಾರ್ ಅವರಿಗೆ ನಿಷ್ಠರಾಗಿ ಉಳಿದಿಲ್ಲ. ಅಂತಹ ವ್ಯಕ್ತಿ ಜನರಿಗೆ ಹೇಗೆ ನಿಷ್ಠರಾಗಿರಲು ಸಾಧ್ಯ” ಎಂದು ಪ್ರಶ್ನಿಸಿದರು.





