ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಂತ ಘಟನೆಗಳಲ್ಲಿ ಸುಲೇಮಾನ್ ಎಂಬ ಹೆಸರಿನ ವ್ಯಕ್ತಿ ಸಿಗಬೇಕೇ ವಿನಹಃ ಶಿವಪ್ಪ ಎಂಬವರು ಸಿಗಲ್ಲ. ಸುಲೇಮಾನ್, ಅಜರ್, ಅಹ್ಮದ್ ಇಂತವರೇ ಸಿಗಬೇಕಲ್ವಾ? ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುಲೇಮಾನ್ ಎಂಬಾತನನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದ ವಿಚಾರವಾಗಿ ವಿಜಯಪುರದಲ್ಲಿ ಯತ್ನಾಳ್ ಪ್ರತಿಕ್ರಿಯಿಸಿದರು.
“ಬಾಂಬ್ ಸ್ಫೋಟ ಪ್ರಕರಣದ ತನಿಖೆ ಆಳವಾಗಿ ನಡೆಯಬೇಕು. ಈ ಘಟನೆಯ ಗಂಭೀರತೆಯನ್ನು ವಿಧಾನಸಭೆಯಲ್ಲಿ ಹೇಳಿದರೂ ಸರ್ಕಾರ ಒಪ್ಪಲಿಲ್ಲ. ಈ ಘಟನೆ ಕುರಿತು ಕಾಂಗ್ರೆಸ್ಸಿನ ಕೆಲ ಸಚಿವರು ಅಪ್ರಬುದ್ಧ ಹೇಳಿಕೆ ಕೊಟ್ಟಿದ್ದಾರೆ. ಇಂದು ಅವರಿಗೆಲ್ಲ ಮುಖವಿಲ್ಲ” ಎಂದು ಹರಿಹಾಯ್ದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಗೃಹ ಮಂತ್ರಿಗಳೇ ಛೀಮಾರಿ ಹಾಕಿದ್ದಾರೆ. ಏನು ಗೊತ್ತಿಲ್ಲದೆ ಮಾಧ್ಯಮಗಳ ಮುಂದೆ ಖರ್ಗೆ ಹೇಳಿಕೆ ಕೊಡುತ್ತಾರೆ. ಖರ್ಗೆ ಅವರು ಇಂತಹ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಟ್ಟು ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೋರ್ಡ್ ಪರೀಕ್ಷೆ ರದ್ದು ಸ್ವಾಗತಾರ್ಹ; ಮೇಲ್ಮನವಿಗೆ ಹೋಗದಿರಲಿ ಸರ್ಕಾರ
ಲೋಕಸಭಾ ಚುನಾವಣೆಗಾಗಿ ಬೆಳಗಾವಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ರಾಜ್ಯದ ಮುಖಂಡರ ಸಭೆಯ ವಿಚಾರವಾಗಿ ಪ್ರತಿಕ್ರಿಯಿಸಿ, ನಡ್ಡಾ ಅವರು ನನ್ನ ಜೊತೆ 15 ನಿಮಿಷ ಮಾತನಾಡಿದರು. ಯಾವುದೇ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಲ್ಲ ಎಂದು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಪ್ರತ್ಯೇಕವಾಗಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಬೇಕೆಂದು ಕೇಳಿದ್ದೇನೆ” ಎಂದರು.
“ವಿಜಯಪುರ ಲೋಕಸಭಾ ಟಿಕೆಟ್ ಅನ್ನು ಯಾರಿಗೆ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕಾಗಿ ಕೆಲಸ ಮಾಡುತ್ತೇವೆ” ಎಂದರು.





