ಇಂದು ಇಂದಿರಾ ಗಾಂಧಿ ಅವರು ಹತ್ಯೆಯಾದ ದಿನ. 1984ರ ಅಕ್ಟೋಬರ್ 31ರಂದು ದೆಹಲಿಯಲ್ಲಿ ಅವರ ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರೇ ಇಂದಿರಾ ಗಾಂಧಿಯ ಹತ್ಯೆ ಮಾಡಿದ್ದಾರೆ. ಆಪರೇಷನ್ ಬ್ಲೂ ಸ್ಟಾರ್‌ಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿತ್ತು. ಅಮೆರಿಕಕ್ಕೆ ಸೆಡ್ಡು ಹೊಡೆದಿದ್ದರು ಉಕ್ಕಿನ ಮಹಿಳೆ
ದೃಢವಾದ ನಾಯಕತ್ವ ಮತ್ತು ಧೈರ್ಯಕ್ಕೆ ಹೆಸರುವಾಸಿಯಾದ ‘ಐರನ್ ಲೇಡಿ ಆಫ್ ಇಂಡಿಯಾ’ (ಭಾರತದ ಉಕ್ಕಿನ ಮಹಿಳೆ) ಇಂದಿರಾ ಗಾಂಧಿ ಅವರು ಭಾರತದ ಮೊದಲ ಮತ್ತು ಈವರೆಗಿನ ಏಕೈಕ ಮಹಿಳಾ ಪ್ರಧಾನಿ. ಮೊದಲ ಪ್ರಧಾನಿ ನೆಹರೂ ಮಗಳಾಗಿ ಅಪ್ಪನ ಗರಡಿಯಲ್ಲಿ ರಾಜಕೀಯ ಪಟುಗಳನ್ನು ಕಲಿತ ಇಂದಿರಾ ಪ್ರಿಯದರ್ಶಿನಿ ಮೊದಲ ಬಾರಿಗೆ 1966ರ ಜನವರಿಯಿಂದ, 1977ರ ಮಾರ್ಚ್‌ವರೆಗೆ, ಎರಡನೇ ಬಾರಿಗೆ 1980ರ ಜನವರಿಯಿಂದ 1984ರ ಅಕ್ಟೋಬರ್31ರವರೆಗೆ ಅಂದರೆ ಅವರ ಹತ್ಯೆಯಾಗುವವರೆಗೂ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಅಧಿಕಾರವಧಿಯಲ್ಲಿ ಇತರೆ ದೇಶಗಳ ವಿಶೇಷವಾಗಿ ಅಮೆರಿಕದ ಒತ್ತಡಕ್ಕೆ ಮಣಿಯದ ನಾಯಕಿ ಇಂದಿರಾ ಗಾಂಧಿ. ಸದ್ಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆರಿಗೆ, ವ್ಯಾಪಾರ ನಿರ್ಬಂಧ, ವೀಸಾ ನಿರ್ಬಂಧ, ತೈಲ ಆಮದಿನ ವಿಚಾರದಲ್ಲಿ ಅಡ್ಡಗಾಲು ಹಾಕುತ್ತಿದ್ದರೂ ಮೋದಿಯವರ ನಿರುತ್ತರರಾಗಿರುವುದು ನೋಡುವಾಗ ಇಂದಿರಾ ಪದೇ ಪದೇ ನೆನಪಾಗುತ್ತಾರೆ.
ಇಂದು ಇಂದಿರಾ ಗಾಂಧಿ ಅವರು ಹತ್ಯೆಯಾದ ದಿನ. 1984ರ ಅಕ್ಟೋಬರ್ 31ರಂದು ದೆಹಲಿಯಲ್ಲಿ ಅವರ ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರೇ ಇಂದಿರಾ ಗಾಂಧಿಯ ಹತ್ಯೆ ಮಾಡಿದ್ದಾರೆ. ಆಪರೇಷನ್ ಬ್ಲೂ ಸ್ಟಾರ್‌ಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿತ್ತು. ಸಿಖ್ ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಆತನ ಬೆಂಬಲಿಗರನ್ನು ಸಿಖ್ಖರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್‌ನಿಂದ ಹೊರಹಾಕುವ ಉದ್ದೇಶದಿಂದ ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಮೃತಪಟ್ಟಿರುವುದೇ ಈ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನು ಓದಿದ್ದೀರಾ? 1971ರ ಭಾರತ-ಪಾಕ್ ಯುದ್ಧ ಮತ್ತು ಇಂದಿರಾ ಗಾಂಧಿ ಪಾತ್ರ: ಜನ ಈಗ ಏಕೆ ನೆನಪು ಮಾಡಿಕೊಳ್ಳುತ್ತಿದ್ದಾರೆ?
ಇಂದಿರಾ ಗಾಂಧಿ ಅವರ ಅವಧಿಯಲ್ಲಿ ನಡೆದ ಪ್ರಮುಖ ಯುದ್ಧ ಭಾರತ- ಪಾಕಿಸ್ತಾನ ಯುದ್ಧ. ಇಂದಿನ ಬಾಂಗ್ಲಾದೇಶ ಅಂದಿನ ಪೂರ್ವ ಪಾಕಿಸ್ತಾನದಲ್ಲಿ ವಿಮೋಚನಾ ಯುದ್ಧ ನಡೆಯುತ್ತಿದ್ದ ಕಾಲವದು. ಅಲ್ಲಿನ ಜನರ ಮೇಲೆ ಪಶ್ಚಿಮ ಪಾಕಿಸ್ತಾನದ ಸೇನೆಯು ದೌರ್ಜನ್ಯ ನಡೆಸುತ್ತಿತ್ತು. ಇದರಿಂದಾಗಿ ಲಕ್ಷಾಂತರ ನಿರಾಶ್ರಿತರು ಭಾರತದೆಡೆ ಮುಖ ಮಾಡಿದ್ದರು. ಬಾಂಗ್ಲಾದೇಶದ ವಿಮೋಚನೆಗೆ ಬೆಂಬಲ ನೀಡಿದ್ದ ಇಂದಿರಾ ಗಾಂಧಿ ಅವರು, ನಿರಾಶ್ರಿತರ ಸಮಸ್ಯೆ ಮತ್ತು ಪೂರ್ವ ಪಾಕಿಸ್ತಾನದ ಬಿಕ್ಕಟ್ಟನ್ನು ಪರಿಹರಿಸಲು ಕ್ರಮಕೈಗೊಂಡರು. ಇದಾದ ಬೆನ್ನಲ್ಲೇ 1971ರ ಡಿಸೆಂಬರ್ 3ರಂದು ಪಾಕಿಸ್ತಾನವು ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದು, ಇಂದಿರಾ ಗಾಂಧಿ ಯುದ್ಧ ಘೋಷಿಸಿದ್ದರು.

1971ರ ಡಿಸೆಂಬರ್ 3 ರಿಂದ ಡಿಸೆಂಬರ್ 16ರವರೆಗೆ 13 ದಿನಗಳ ಕಾಲ ಯುದ್ಧ ನಡೆದಿದ್ದು, ಈ ಯುದ್ಧದಲ್ಲಿ ಭಾರತವು ನಿರ್ಣಾಯಕ ಗೆಲುವು ಸಾಧಿಸಿದೆ. ಪಾಕಿಸ್ತಾನ ಸೇನೆ ಶರಣಾಗಿದ್ದು, ಬಾಂಗ್ಲಾದೇಶ ಎಂಬ ರಾಷ್ಟ್ರದ ಉದಯವಾಯಿತು. ಈ ಯುದ್ಧದ ಗೆಲುವನ್ನು ಇಂದಿರಾ ಗಾಂಧಿ ಅವರ ನಾಯಕತ್ವದ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗುತ್ತದೆ. ಯುದ್ಧದ ನಂತರ, ವಶಪಡಿಸಿಕೊಂಡ ಭೂಮಿಯನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸಲಾಯಿತು ಮತ್ತು ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಅಮೆರಿಕದ ಒತ್ತಡಕ್ಕೆ ಮಣಿಯದ ಇಂದಿರಾ ಗಾಂಧಿ
1971ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧವನ್ನು ನಿಲ್ಲಿಸುವಂತೆ ಭಾರತದ ಮೇಲೆ ಅಮೆರಿಕ ತೀವ್ರ ಒತ್ತಡವನ್ನು ಹಾಕಿತ್ತು. ಯುದ್ಧದಲ್ಲಿ ಪಾಕಿಸ್ತಾನದ ಪರವಾಗಿ ಮಧ್ಯಪ್ರವೇಶಿಸುವ ಯತ್ನವನ್ನು ಅಮೆರಿಕ ಮಾಡಿತ್ತು. ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆಡಳಿತವು ಭಾರತದ ವಿರುದ್ಧ ರಾಜತಾಂತ್ರಿಕ ಮತ್ತು ಮಿಲಿಟರಿ ಬೆದರಿಕೆಗಳನ್ನು ಬಳಸಿತ್ತು. ಅಮೆರಿಕ ಭಾರತಕ್ಕೆ ಆರ್ಥಿಕ ನೆರವನ್ನೂ ಸ್ಥಗಿತಗೊಳಿಸಿತ್ತು. ಅಮೆರಿಕ ತನ್ನ 7ನೇ ನೌಕಾಪಡೆಯನ್ನು ಬಂಗಾಳಕೊಲ್ಲಿಗೆ ರವಾನಿಸಿತ್ತು. ಈ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಅಮೆರಿಕ ಪ್ರಯತ್ನಿಸಿತ್ತು.
ಆದರೆ ಅಮೆರಿಕದ ಯಾವುದೇ ಒತ್ತಡಕ್ಕೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮಣಿದಿರಲಿಲ್ಲ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಬಾಂಗ್ಲಾದೇಶದ ವಿಮೋಚನೆಗೆ ಸಂಬಂಧಿಸಿದ ತಮ್ಮ ನಿಲುವನ್ನು ಅಮೆರಿಕದ ಒತ್ತಡದಿಂದಾಗಿ ಬದಲಾಯಿಸದ ನಾಯಕಿ ಇಂದಿರಾ. ಹಾಗೆಯೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ವಿದೇಶಾಂಗ ನೀತಿಯನ್ನು ಸ್ವತಂತ್ರವಾಗಿ ನಿರ್ಧರಿಸುವ ಸಾಮರ್ಥ್ಯ ಭಾರತಕ್ಕಿದೆ ಎಂಬುದನ್ನು ತೋರಿಸಿದ್ದರು. “ಅಮೆರಿಕವನ್ನು ಭಾರತ ಸ್ನೇಹಿತ ದೇಶವಾಗಿ ನೋಡುತ್ತದೆಯೇ ಹೊರತು ಯಜಮಾನನಾಗಿ ಅಲ್ಲ” ಎಂಬ ಹೇಳಿಕೆಯನ್ನೂ ನೀಡಿದ್ದರು.

ಇದನ್ನು ಓದಿದ್ದೀರಾ? ಅಕ್ಕಿ, ಹಸಿವು, ಅಮೆರಿಕಾ ಮತ್ತು ಇಂದಿರಾಗಾಂಧಿ
ಆದರೆ ಇದಕ್ಕೆ ಭಿನ್ನವಾಗಿ ದೇಶ ಪ್ರಸ್ತುತ ಸಾಗುತ್ತಿದೆ. ನಮ್ಮ ವಿದೇಶಾಂಗ ನೀತಿ ಸ್ವತಂತ್ರವಾಗಿರದೆ ಕಾರ್ಪೋರೇಟ್ ದೊರೆಗಳ, ಇತರೆ ದೇಶಗಳ ಒತ್ತಡಕ್ಕೆ ತಕ್ಕುದಾಗಿ ಬದಲಾಗುತ್ತಿದೆ. ಪಾಕಿಸ್ತಾನ ಮೂಲದ ಉಗ್ರರು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಮಂದಿಯನ್ನು ಕೊಂದ ಬಳಿಕ ಭಾರತ ಆಪರೇಷನ್ ಸಿಂಧೂರ ನಡೆಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಟ್ಟು 9 ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ 100ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ. ಅದಾದ ಬಳಿಕ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಸಹಿ ಹಾಕಿದೆ.
ಈ ಕದನ ವಿರಾಮವನ್ನು ಮೊದಲು ಘೋಷಿಸಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುವಾಗ ಕದನ ವಿರಾಮದ ಘೋಷಣೆ ಮೊದಲು ಮಾಡಬೇಕಾಗಿದ್ದು, ಈ ಉಭಯ ದೇಶಗಳು. ಆದರೆ ಘೋಷಣೆ ಮಾಡಿದ್ದು ಅಮೆರಿಕ ಅಧ್ಯಕ್ಷ. ಅಷ್ಟು ಮಾತ್ರವಲ್ಲದೆ “ಈ ಕದನ ವಿರಾಮಕ್ಕೆ ನಾನೇ ಕಾರಣ, ಉಭಯ ದೇಶಗಳ ಮೇಲೆ ಒತ್ತಡ ಹೇರಿ ಈ ಯುದ್ಧ ನಿಲ್ಲಿಸಿದೆ. ಯುದ್ಧ ನಿಲ್ಲಿಸದಿದ್ದರೆ ವ್ಯಾಪಾರ ನಡೆಸುವುದಿಲ್ಲ ಎಂದು ಬೆದರಿಕೆ ಹಾಕಿದ್ದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಲೇ ಇದ್ದಾರೆ.
ಭಾರತ ಅಮೆರಿಕದ ನಿರ್ಧಾರವನ್ನು ತನ್ನ ನಿರ್ಧಾರವನ್ನಾಗಿಸಿತೇ ಎಂಬ ಪ್ರಶ್ನೆ ಇಲ್ಲಿ ಸಹಜ. ಇದಕ್ಕೆ ಉತ್ತರ ನೀಡಬೇಕಾದವರು, ನಮ್ಮ ವಿದೇಶಾಂಗ ನೀತಿಯನ್ನು ಸಮರ್ಥಿಸಿಕೊಳ್ಳಬೇಕಾದವರು ಯಾರು? ಪ್ರಧಾನಿ ನರೇಂದ್ರ ಮೋದಿ ಅಲ್ಲವೇ? ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್, ಕೆಲವು ಅಧಿಕಾರಿಗಳು ಟ್ರಂಪ್ ಹೇಳಿಕೆಯನ್ನು “ಆಧಾರರಹಿತ ಮತ್ತು ತಪ್ಪು ಮಾಹಿತಿ” ಎಂದು ಹೇಳಿಕೊಂಡಿದ್ದರೂ, ಪ್ರಧಾನಿ ಮಾತ್ರ ಈವರೆಗೂ ಭಾರತವನ್ನು ಸಮರ್ಥಿಸಲು ಬಾಯಿಬಿಟ್ಟಿಲ್ಲ. ಅಮೆರಿಕಕ್ಕೆ ನೇರವಾಗಿ ಪ್ರತ್ಯುತ್ತರ ನೀಡುವ ವಿಚಾರದಲ್ಲಿ ಇಂದಿರಾ ಗಾಂಧಿಗಿದ್ದ ದೃಢತೆ ಪ್ರಧಾನಿ ಮೋದಿಗೆ ಯಾಕಿಲ್ಲ? ನಾವಿಲ್ಲಿ ಯುದ್ಧವನ್ನು ಸಂಭ್ರಮಿಸಲಾಗದು. ಯುದ್ಧ ಸಾವಿರಾರು ಜೀವಗಳ, ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಪಾಸ್ತಿಗಳ ನಾಶಕ್ಕೆ ಕಾರಣ. ಆದರೆ ಇನ್ನೊಂದು ದೇಶದ ಒತ್ತಡಕ್ಕೆ ಮಣಿಯುವುದು ಎಷ್ಟು ಸರಿ? ಈ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ಪ್ರಧಾನಿ ಘನತೆಗೆ ಧಕ್ಕೆ ಅಲ್ಲವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




