ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

Date:

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ ವರದಿ ಆಧರಿಸಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ದಲಿತ ಸಮುದಾಯ ಹೋರಾಟ ನಡೆಸುತ್ತಿದೆ. ವರದಿಯಲ್ಲಿ ಕೆಲವು ಲೋಪಗಳಿವೆ ಎಂದು ಆಕ್ಷೇಪಣೆಗಳೂ ವ್ಯಕ್ತವಾಗುತ್ತಿವೆ. ಇದು, ಚರ್ಚೆಗೂ ಕಾರಣವಾಗಿದೆ. ಆಕ್ಷೇಪಗಳ ಕಾರಣಕ್ಕೆ ಒಳಮೀಸಲಾತಿ ಜಾರಿಯನ್ನು ಸರ್ಕಾರ ಮುಂದೂಡುವ ಆತಂಕವೂ ಇದೆ. ಈ ಆತಂಕ, ಚರ್ಚೆಗಳಿಗೆ ಪರಿಹಾರ ಸೂಚಿಸಿ ಮತ್ತು ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಿರಿಯ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ ಬರೆದಿದ್ದಾರೆ...

ಮಾನ್ಯ ಮುಖ್ಯಮಂತ್ರಿಗಳೇ– ನಾನು ಗೊಂದಲ, ಆತಂಕಗಳ ನಡುವೆ ತಮಗೆ ಈ ಪತ್ರ ಬರೆಯುತ್ತಿರುವೆ. ಒಳಮೀಸಲಾತಿ ವರದಿ ವಿವಾದಕ್ಕೊಳಗಾಗಿ, ಎಲ್ಲಿ ಮುಂದೂಡಲ್ಪಡುತ್ತದೊ ಎಂಬುದು ನನ್ನನ್ನು ತುಂಬಾ ಕಾಡುತ್ತಿದೆ. ಜೊತೆಗೆ, ಖಾಲಿ ಇರುವ ಉದ್ಯೋಗಗಳಿಗೂ ನೇಮಕಾತಿ ಇಲ್ಲದೆ ಏಗುತ್ತಿರುವ ತರುಣರು, ತಮ್ಮ ತಾರುಣ್ಯ ಕಳೆದುಕೊಂಡು ಮಧ್ಯ ವಯಸ್ಕರಾಗುತ್ತಿದ್ದಾರೆ. ಇದು ತುಂಬಾನೆ ದಯನೀಯ ಪರಿಸ್ಥಿತಿ.

ಇಂತಹ ಪರಿಸ್ಥಿತಿಯಲ್ಲಿ ನನಗೆ ತೋರುತ್ತಿರುವ ಪರಿಹಾರ ಇದು. ಒಂದು, ಜಸ್ಟೀಸ್ ನಾಗಮೋಹನ್‌ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು. ಇದರ ಜೊತೆಗೇನೆ, ಇಂದು ದಲಿತ ಸಮುದಾಯವೂ ದಿನದಿನಕ್ಕೂ ಚಲನಶೀಲತೆ ಪಡೆದುಕೊಂಡು ಬದಲಾವಣೆಯಾಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮೀಸಲಾತಿ ಪ್ರಾತಿನಿಧ್ಯವನ್ನು ಸಮತೋಲನ ಮಾಡುವುದಕ್ಕಾಗಿ ಹಾಗೂ ಕಾಲಕಾಲಕ್ಕೆ ಹೊಸ ದತ್ತಾಂಶಗಳಿಂದ ಒಳ ಮೀಸಲಾತಿಯ ಪ್ರಮಾಣವನ್ನು ಪರಿಷ್ಕರಿಸಲು, ಹಿಂದುಳಿದ ವರ್ಗಗಳಿಗೆ ಇರುವಂತೆಯೇ, ಪರಿಶಿಷ್ಟ ಜಾತಿಗಳ ಆಯೋಗಕ್ಕೂ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಒದಗಿಸಬೇಕು ಎಂಬುದು ನನ್ನ ಭಾವನೆ. ಈ ರೀತಿಯಾದರೆ ಆ ಆಯೋಗದ ಮುಂದೆ, ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯ ಬಗ್ಗೆ ಇರಬಹುದಾದ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಸಾಧ್ಯತೆ ಹೆಚ್ಚುತ್ತದೆ.

ಈ ಹಿಂದೆ, ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷರಾಗಿ ಜಸ್ಟೀಸ್ ನಾಗಮೋಹನ್ ದಾಸ್ ಅವರು ಸಲ್ಲಿಸಿದ ವರದಿಯಲ್ಲಿ ‘ಪರಿಶಿಷ್ಟ ಜಾತಿ ಸಮುದಾಯವು 17.98%, ಪರಿಶಿಷ್ಟ ಪಂಗಡವು 7.41% ಜನಸಂಖ್ಯೆ ಇರುವುದರಿಂದ ಎಸ್‌ಸಿಗೆ 18% ಹಾಗೂ ಎಸ್‌ಟಿಗೆ 7.50% ನೀಡುವುದು ಸೂಕ್ತ’ ಎಂದಿದ್ದರು. (ಆದರೆ, ಅಂದು ಆ ಆಯೋಗದ ಮುಂದೆ 17%ಗೆ ಏರಿಸುವ ವಿಚಾರವಷ್ಟೇ ಇದ್ದುದರಿಂದ, ಶಿಫಾರಸ್ಸು ಅಷ್ಟಕ್ಕೆ ಸೀಮಿತವಾಗಿತ್ತು). ತಾವು 1% ಹೆಚ್ಚಳದ ನಿರ್ಧಾರ ಕೈಗೊಂಡರೆ ಹೆಚ್ಚುವರಿಯಾಗಿ ಸಿಗುವ 1% ನಿಂದ ಇಂದಿನ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಇದು ಸರ್ಕಾರದ ಕೈಯಲ್ಲೇ ಇದೆ ಎಂದುಕೊಂಡಿದ್ದೇನೆ. ನೀವು ಈ ಕುರಿತು ಆಶ್ವಾಸನೆ ನೀಡಿದರೂ ದಲಿತ ಸಮುದಾಯ ನಂಬುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

01-08-2024ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳು ವೈವಿಧ್ಯಮಯ ಭಿನ್ನರೂಪತೆಯ (Heterogeneous) ಗುಂಪುಗಳಾಗಿವೆ ಎಂದು ಅಭಿಪ್ರಾಯ ನೀಡಿದೆ. ವರ್ಗೀಕರಣ ನಿರ್ಧರಿಸುವಾಗ ಸರ್ವಾಂಗೀಣ ಹಿಂದುಳಿದಿರುವಿಕೆಯನ್ನೂ ಪರಿಗಣಿಸಿ ನಿರ್ಧರಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಸ್ಟೀಸ್ ನಾಗಮೋಹನ್ ದಾಸ್‌ರವರ ವರದಿಯನ್ನು ಗಮನಿಸಿದರೆ ಅದು ಸುಪ್ರೀಂ ಕೋರ್ಟ್ ಆಶಯಕ್ಕೆ ತಕ್ಕಂತೆಯೇ ಇರುವಂತೆ ಕಾಣಿಸುತ್ತದೆ.

ಇದಲ್ಲದೆ, ಜಸ್ಟೀಸ್ ನಾಗಮೋಹನ್‌ ದಾಸ್ ವರದಿಯು ಸಮಗ್ರ ಸಮೀಕ್ಷೆ ಮಾಡುವ ಮೂಲಕವೇ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ವಿಸ್ತಾರವಾದ ಸಮೀಕ್ಷೆ ಮಾಡಿ 94% ರಷ್ಟು ಜನರ ಮಾಹಿತಿ ಸಂಗ್ರಹಿಸಿದೆ. ಮನೆ ಮನೆ ಸರ್ವೆ, ನಿಗಧಿತ ಕೇಂದ್ರಗಳಲ್ಲಿ ಸರ್ವೆ, Online ಸರ್ವೆ ಅವಕಾಶ ಹೀಗೆ ಸಮಗ್ರ ಪ್ರಯತ್ನ ಮಾಡಿದೆ. ಈ ರೀತಿ ಸಮೀಕ್ಷೆ ಅಪರೂಪ. ಮೊದಲು ಇದನ್ನು ಎಲ್ಲರೂ ಗೌರವಿಸಬೇಕಾಗಿದೆ. ಹಾಗೆಂದು ಈಗ ಎದ್ದಿರುವ ಆಕ್ಷೇಪಣೆಗಳನ್ನು ತಳ್ಳಿ ಹಾಕಬೇಕಿಲ್ಲ. ಅವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ತಾವು ಘೋಷಣೆ ಮಾಡುವುದಾದರೆ, ಅದು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಲಭ್ಯವಾಗುವ ಜಾತಿ/ಜನಗಣತಿಯ ದತ್ತಾಂಶಗಳ ಮೂಲಕ ಪರಿಷ್ಕರಣೆಯ ಮೂಲಕ ಸಮತೋಲನ ಮಾಡಲು ಅವಕಾಶವಾಗುತ್ತದೆ.

ಕೊನೆಯದಾಗಿ, 1) ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು 18% ಮತ್ತು 7.5% ಮಾಡುವ ಬಗ್ಗೆ ಆಶ್ವಾಸನೆ ನೀಡುವುದು. 2) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಕಾರ್ಯವ್ಯಾಪ್ತಿ ಹಾಗೂ ಅಧಿಕಾರದ ಘೋಷಣೆ ಮಾಡುವುದು. 3) ಮೀಸಲಾತಿಯನ್ನು ನೀಡದಿರುವುದಕ್ಕಾಗಿಯೇ ಹುಟ್ಟಿಕೊಂಡಿದೆಯೇನೋ ಎಂಬಂತಿರುವ ‘ಗುತ್ತಿಗೆ ಕೆಲಸ’ಗಳಲ್ಲೂ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು. ಅಷ್ಟೇ ಅಲ್ಲದೇ, 4) ಪರಿಶಿಷ್ಟ ಜಾತಿ/ಪಂಗಡಗಳ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರ ಪಡೆದುಕೊಂಡಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಗತ್ಯವಿರುವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಪ್ರಕಟಿಸುವುದು. ಇಂತಹ ನಿಲುವುಗಳು ಜಸ್ಟೀಸ್ ನಾಗಮೋಹನ್‌ ದಾಸ್ ವರದಿಯನ್ನು ತಕ್ಷಣವೇ ಅನುಷ್ಠಾನ ಮಾಡಲು ಪೂರಕ ವಾತಾವರಣ ಉಂಟು ಮಾಡಬಹುದು ಎಂದು ಭಾವಿಸುತ್ತೇನೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...