ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗ) ಯೋಜನೆಯನ್ನು ಕಳಚಿ ಬಿಸಾಡಿದ ಮೋದಿ ಸರ್ಕಾರದ ಕೃತ್ಯವು ಮುಂಬರುವ ದಿನಗಳಲ್ಲಿ ‘ಐತಿಹಾಸಿಕ ತಪ್ಪು’ ಎನಿಸಲಿದೆಯೆಂದು ಅಂತಾರಾಷ್ಟ್ರೀಯ ಖ್ಯಾತಿಯ ಆರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ಯೋಜನೆಯನ್ನು ತಕ್ಷಣವೇ ಪುನರ್ ಸ್ಥಾಪಿಸಿ ಮೂಲರೂಪದಲ್ಲಿ ಜಾರಿಗೊಳಿಸಬೇಕೆಂದೂ ಒತ್ತಾಯಪಡಿಸಿದ್ದಾರೆ. ಮೋದಿ ಸರ್ಕಾರಕ್ಕೆ ಈ ಕುರಿತು ಬರೆದಿರುವ ಬಹಿರಂಗ ಪತ್ರಕ್ಕೆ ಸಹಿ ಮಾಡಿರುವವರು- ನೊಬೆಲ್ ಪ್ರಶಸ್ತಿ ಪಡೆದ ವಿದ್ವಾಂಸ ಜೋಸೆಫ್.ಇ.ಸ್ಟಿಗ್ಲಿಟ್ಝ್, ಪಾವ್ಲಿನಾ ಆರ್.ಶೆರ್ನೇವ (ಅಧ್ಯಕ್ಷರು, ದಿ ಲೆವಿ ಎಕನಾಮಿಕ್ಸ್ ಇನ್ಸ್ಟಿಟ್ಯೂಟ್ ಅಮೆರಿಕಾ), ಪ್ರೊ.ಥಾಮಸ್ ಪಿಕೆಟಿ, ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್, ಪ್ರೊ.ಇಸಬೆಲ್ ಫೆರ್ರೆರಾಸ್, ಯೂನಿವರ್ಸಿಟಿ ಆಫ್ ಲೂವೇನ್ (ಬೆಲ್ಜಿಯಂ), ಪ್ರೊ.ಡ್ಯಾರಿಕ್ ಹ್ಯಾಮಿಲ್ಟನ್, ನ್ಯೂ ಸ್ಕೂಲ್ ಆಫ್ ಸೋಶಿಯಲ್ ರಿಸರ್ಚ್, ಅಮೆರಿಕಾ, ರ್ಯಾಂಡಲ್ ರೇ, ಹಿರಿಯ ವಿದ್ವಾಂಸ, ದಿ ಲೆವಿ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್, ಪ್ರೊ.ಜೇಮ್ಸ್ ಗಾಲ್ಬ್ರೇತ್, ದಿ ಯೂನಿವರ್ಸಿಟಿ ಆಫ್ ಟೆಕ್ಸಸ್, ಆಸ್ಟಿನ್, ಅಮೆರಿಕ.
ಇದನ್ನು ಓದಿದ್ದೀರಾ? ಮನರೇಗಾ ವೇತನ ಪರಿಷ್ಕರಣೆ | ದಿನಗೂಲಿಯಲ್ಲಿ ಹರಿಯಾಣ ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶದಲ್ಲಿ ಕನಿಷ್ಠ ಕೂಲಿ
ಬೇಡಿಕೆಯ ಪ್ರಕಾರ ಉದ್ಯೋಗ ನೀಡುವ ಮನರೇಗ ಜಗತ್ತಿನ ಮಹತ್ವದ ಹಕ್ಕುಗಳಲ್ಲಿ ಒಂದು. ಆರ್ಥಿಕ ಘನತೆಯನ್ನು ಮೂಲಭೂತ ಹಕ್ಕೆಂದು ಪರಿಗಣಿಸಿರುವ ಯೋಜನೆಯಿದು. ಈ ಯೋಜನೆಯ ಸಕಾರಾತ್ಮಕ ಪರಿಣಾಮವನ್ನು ಸಮರ್ಥಿಸಲು ಅಂಕಿಅಂಶಗಳ ದತ್ತಾಂಶ ಲಭ್ಯವಿದೆ. ಕೇವಲ ಗುಂಡಿ ಅಗೆದು, ಗುಂಡಿ ತುಂಬುವ ಅನುತ್ಪಾದಕ ಯೋಜನೆಯಿದು ಎಂಬುದು ಮಿಥ್ಯಾಸಂಗತಿ. ಹಿಂದೆಂದೂ ಇಲ್ಲದಷ್ಟು ಗ್ರಾಮೀಣ ವೇತನವೃದ್ಧಿಯು ಈ ಯೋಜನೆಯಡಿ ಆಗಿದೆ ಎಂದು ಬಹಿರಂಗ ಪತ್ರವು ವಾದಿಸಿದೆ.
ಸತತವಾಗಿ ಕಡಿಮೆ ಹಣ ಹಂಚಿಕೆ ಮತ್ತು ಉದ್ಯೋಗಿಗಳ ಕೂಲಿ ಹಣ ಪಾವತಿಯಲ್ಲಿ ತೀವ್ರ ವಿಳಂಬದ ಕಾರಣ ಈ ಯೋಜನೆ ಸೊರಗಿದೆ. ಆದರೆ ಆರ್ಥಿಕ ಹೊಣೆಯನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ವರ್ಗಾಯಿಸುವ ಉದ್ದೇಶದ ಹೊಸ ಮಸೂದೆಯು ಈ ಯೋಜನೆಯ ಅಸ್ತಿತ್ವವನ್ನೇ ಅಳಿಸಿ ಹಾಕಲಿದೆ. ಹಣಸಂಪನ್ಮೂಲವಿಲ್ಲದ ಬಡರಾಜ್ಯಗಳು ಅನಿವಾರ್ಯವಾಗಿ ಈ ಯೋಜನೆಯನ್ನು ಕೈಬಿಡಬೇಕಾಗುತ್ತದೆ ಎಂಬ ಅನುಮಾನವನ್ನು ಈ ಆರ್ಥಶಾಸ್ತ್ರಜ್ಞರು ಪ್ರಕಟಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮನರೇಗ ಆರ್ಥಿಕ ನೆರವನ್ನು ನಿಲ್ಲಿಸಿರುವ ಕೇಂದ್ರ ಸರ್ಕಾರದ ನಡೆಯು, ಅಧಿಕಾರದ ರಾಜಕೀಯ ದುರುಪಯೋಗದ ನಿದರ್ಶನ ಎಂದು ಟೀಕಿಸಿದ್ದಾರೆ.
ಮನರೇಗ ಯೋಜನೆಯು ಬಡವರಿಗೆ ದುಡಿಮೆಯ ಅವಕಾಶ ನೀಡುವುದು ಮಾತ್ರವಲ್ಲದೆ, ಬಾವಿ, ರಸ್ತೆ, ಕೊಳಗಳನ್ನು ನಿರ್ಮಿಸಿ ಸ್ಥಳೀಯ ಹಣಕಾಸಿಗೆ ರಭಸ ನೀಡುತ್ತಿತ್ತು. ಈ ಯೋಜನೆಯನ್ನು ರದ್ದುಗೊಳಿಸಿರುವ ನಡೆಯು ಬಡತನ ನಿವಾರಣೆ, ಸಾಮಾಜಿಕ ನ್ಯಾಯ ಒದಗಿಸುವಿಕೆ ಹಾಗೂ ಪರಿಸರ ಕಾಳಜಿಯ ಖಾತ್ರಿಯನ್ನು ಕೈ ಬಿಟ್ಟಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.





