ಅಮೆರಿಕ-ಇಸ್ರೇಲ್, ತಮ್ಮ ಸ್ವಾರ್ಥಕ್ಕಾಗಿ ಇರಾನ್ ಮೇಲೆ ದಾಳಿ ಮಾಡುತ್ತಿವೆ. ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಮುಚ್ಚಿದೆ. ಕಚ್ಚಾತೈಲ ಸರಬರಾಜು ಸ್ಥಗಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಇರಾನ್ ಇತಿಹಾಸ, ಕಚ್ಚಾತೈಲ ಮತ್ತು ಅಮೆರಿದ ಆಟದ ಸುತ್ತ ಒಂದು ನೋಟ...
ಪರ್ಷಿಯನ್ ಕೊಲ್ಲಿಯ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕ ಪ್ರಯಾಣಿಸುವ ಎರಡು ಹಡಗುಗಳ ಮೇಲೆ ಸೋಮವಾರ ಅಮೆರಿಕ-ಇಸ್ರೇಲ್ ಪಡೆಗಳ ದಾಳಿ ನಡೆದಿದೆ. ದಾಳಿಯಿಂದಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಈ ಜಲಸಂಧಿಯ ಮೂಲಕ ವಿಶ್ವದ ಇತರ ದೇಶಗಳಿಗೆ ಸರಬರಾಜು ಆಗುವ ಕಚ್ಚಾತೈಲ ಪೂರೈಕೆ ಸ್ಥಗಿತಗೊಂಡಿದೆ.
ಮಧ್ಯಪ್ರಾಚ್ಯ(ಇರಾನ್, ಇರಾಕ್, ಸೌದಿ ಅರೇಬಿಯಾ, ಯುಎಇ, ಕತಾರ್, ಬಹರೇನ್, ಕುವೈತ್) ದೇಶಗಳಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶಗಳು, ಈಗ ಬಿಕ್ಕಟ್ಟಿಗೆ ಸಿಲುಕಿವೆ. ಯುದ್ಧದಿಂದಾಗಿ ಕಚ್ಚಾ ತೈಲ ಪೂರೈಕೆ ಸ್ಥಗಿತಗೊಂಡಿದೆ. ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಲ್ಲಿ ಒಂದಾದ ಭಾರತ ಕೂಡ ಕಷ್ಟಕ್ಕೊಳಗಾಗಿದೆ. ಏಕೆಂದರೆ, ಭಾರತ ಕಚ್ಚಾತೈಲಕ್ಕಾಗಿ ನೆಚ್ಚಿಕೊಂಡಿರುವುದು ಮಧ್ಯಪ್ರಾಚ್ಯ ದೇಶಗಳನ್ನು ಮತ್ತು ಅಮೆರಿಕವನ್ನು. ಅಮೆರಿಕದ ಅತಿ ಸುಂಕದ ಭಯಕ್ಕೆ ಬಿದ್ದು ರಷ್ಯಾದಿಂದ ಖರೀದಿಸುವುದನ್ನು ಬಿಟ್ಟಿದೆ. ಈಗ ಯುದ್ಧದಿಂದಾಗಿ ಮಧ್ಯಪ್ರಾಚ್ಯ ದೇಶಗಳಿಂದ ಆಮದು ವಹಿವಾಟು ನಿಂತಿದೆ. ಹಾಗಾಗಿ ಅಮೆರಿಕ ಹೇಳಿದ ಬೆಲೆ ತೆತ್ತು, ವೆನಜುವೆಲಾದಿಂದ ಕಚ್ಚಾತೈಲ ತರಿಸಿಕೊಳ್ಳಬೇಕಾದ ದುಃಸ್ಥಿತಿಗೆ ಭಾರತ ಒಳಗಾಗಿದೆ.
ಯುದ್ಧಕ್ಕೂ ಮೊದಲು ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 50 ಡಾಲರ್ ಇತ್ತು. ಯುದ್ಧ ಆರಂಭವಾದ ನಂತರ 65 ಡಾಲರ್‍ನಿಂದ 77 ಡಾಲರ್‍ವರೆಗೆ ಏರಿದೆ. ಅಕಸ್ಮಾತ್ ಯುದ್ಧ ಮುಂದುವರೆದರೆ, ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 130ರಿಂದ 150 ಡಾಲರ್‍ವರೆಗೂ ಏರಿಕೆಯಾಗುವ ಸಂಭವವಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ತೀವ್ರ ಏರಿಕೆಯಿಂದ ಚಿಲ್ಲರೆ ಮಾರುಕಟ್ಟೆಯಲ್ಲೂ ತೈಲ ಬೆಲೆ ಹೆಚ್ಚಳವಾಗಲಿದೆ. ಇದರ ಪರಿಣಾಮವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಲಿದೆ. ಸಾಗಣೆ ವೆಚ್ಚ ಹೆಚ್ಚಾಗಲಿದೆ. ಅದು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ, ಹಣದುಬ್ಬರಕ್ಕೆ ದಾರಿಯಾಗಲಿದೆ. ದೇಶದ ಆರ್ಥಿಕ ಸ್ಥಿತಿ ಏರುಪೇರಾಗಲಿದೆ.
ಜಾಗತಿಕ ಮಟ್ಟದಲ್ಲಿ ಇಷ್ಟೆಲ್ಲ ಆರ್ಥಿಕ ಪಲ್ಲಟಗಳಿಗೆ ಕಾರಣವಾಗುವ ಕಚ್ಚಾತೈಲವೇ, ಇಂದಿನ ಯುದ್ಧಕ್ಕೂ ಕಾರಣವಾಗಿದೆ. ಇರಾನ್, ಇರಾಕ್, ಸೌದಿ ಅರೇಬಿಯಾ, ಯುಎಇ, ಕತಾರ್ ದೇಶಗಳಲ್ಲಿ ವಿಪುಲವಾಗಿ ಸಿಗುವ ಕಚ್ಚಾತೈಲವೇ ಆ ದೇಶಗಳ ಧೈರ್ಯ, ಸಂಪತ್ತು ಮತ್ತು ಅಹಂಕಾರಕ್ಕೆ ಕಾರಣವಾಗಿದೆ. ಮಧ್ಯಪ್ರಾಚ್ಯ ದೇಶಗಳ ಈ ಸಂಪದ್ಭರಿತ ಕಚ್ಚಾತೈಲವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿಯೇ ಅಮೆರಿಕ, ಇರಾನ್ ಮೇಲೆ ಬಿದ್ದಿದೆ. ಅದಕ್ಕೆ ಅಣ್ವಸ್ತ್ರ, ಸರ್ವಾಧಿಕಾರದ ನೆಪ ಮುಂದೆ ಮಾಡುತ್ತಿದೆ.

ಇದು ನಿಮಗೆ ಅರ್ಥವಾಗಬೇಕಾದರೆ, ಇಂದು ಅಮೆರಿಕ ಮತ್ತು ಇಸ್ರೇಲ್- ಇಬ್ಬರೂ ಸೇರಿ ಬಾಂಬ್‌ಗಳನ್ನು ಸುರಿಸುತ್ತಿರುವ ಇರಾನ್ ಎಂಬ ದೇಶದ ಇತಿಹಾಸವನ್ನೊಮ್ಮೆ ನೋಡಬೇಕು. 9 ಕೋಟಿ ಜನಸಂಖ್ಯೆಯನ್ನು ಹೊಂದಿರುವ, ಪರ್ಷಿಯನ್ ಭಾಷೆಯನ್ನಾಡುವ, ಹೆಚ್ಚಿನ ಸಂಖ್ಯೆಯಲ್ಲಿ ಶಿಯಾ ಮುಸ್ಲಿಮರಿರುವ ಇರಾನ್ ಅಧಿಕೃತ ಇಸ್ಲಾಮಿಕ್ ದೇಶ. ಇದು ಇರಾಕ್, ಟರ್ಕಿ, ಅಜರ್‍ಬೈಜಾನ್, ಅರ್ಮೇನಿಯಾ, ತುರ್ಕ್ಮೇನಿಸ್ತಾನ್, ಅಫಘಾನಿಸ್ತಾನ್, ಒಮನ್, ಪರ್ಷಿಯನ್ ಗಲ್ಫ್ ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ. ಮುಖ್ಯವಾಗಿ ಹಾರ್ಮುಜ್ ಜಲಸಂಧಿಯನ್ನು ಹೊಂದಿದೆ. ಈ ಜಲಸಂಧಿಯ ಮೂಲಕ ಪ್ರಪಂಚದ ನಾನಾ ದೇಶಗಳಿಗೆ ಶೇ. 23ರಷ್ಟು ಕಚ್ಚಾತೈಲವನ್ನು ರಫ್ತು ಮಾಡುತ್ತಿದೆ. ಸಂಪದ್ಭರಿತ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದೆ.
ಇರಾನ್ ಇತಿಹಾಸ
1906ರಲ್ಲಿ ಇರಾನ್ ಅನ್ನು ಮುಜಾಫರ್ ಶಾ ಎಂಬ ರಾಜ ಆಳುತ್ತಿದ್ದ. ಈತ ಮಾದಕವ್ಯಸನಿಯಾಗಿದ್ದ. ಜೊತೆಗೆ ಪುಕ್ಕಲ, ಅಂತರ್ಮುಖಿ, ಹಿಂಜರಿಕೆ ಸ್ವಭಾವದವನಾಗಿದ್ದ. ಈತನಿಗೆ ಮಾದಕವಸ್ತು ಸರಬರಾಜು ಮಾಡಿ, ಈತನ ಮೇಲೆ ಇಂಗ್ಲೆಂಡ್ ಹಿಡಿತ ಸಾಧಿಸಿತ್ತು. ಹಾಗೆಯೇ ಇರಾನಿನಲ್ಲಿ ಸಿಗುವ ಕಚ್ಚಾತೈಲದ ಮೇಲೆ ಕಣ್ಣಿಟ್ಟಿತ್ತು. ಆ ಸಂದರ್ಭದಲ್ಲಿ ರಾಜನ ಮನವೊಲಿಸಿ, ಕಚ್ಚಾತೈಲಕ್ಕೆ ಸಂಬಂಧಿಸಿ ಅವರಿಗೆ ಅನುಕೂಲವಾಗುವಂತೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿತ್ತು. ಅದರ ಪ್ರಕಾರ, ಇರಾನಿನಲ್ಲಿ ಸಿಗುವ ಕಚ್ಚಾತೈಲದಲ್ಲಿ ಶೇ. 14 ಭಾಗ ಇರಾನಿಗೆ ಸೇರಿದರೆ, ಶೇ. 86ರಷ್ಟು ಇಂಗ್ಲೆಂಡ್‌ದಾಗಿತ್ತು.
ಮುಜಾಫರ್ ಶಾ ನಂತರ ಇರಾನ್‌ಗೆ, 1921ರ ವೇಳೆಗೆ ರಜ್ಹಾ ಪಹ್ಲವಿ ಅಧಿಕಾರಕ್ಕೆ ಬರುತ್ತಾನೆ. 1945ರ ಸಂದರ್ಭದಲ್ಲಿ, ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅಧಿಕಾರದಿಂದ ಕೆಳಗಿಳಿಯುತ್ತಾನೆ. ಈ ಅವಧಿಯಲ್ಲಿ ಇರಾನಿನಲ್ಲಿ ಯಾವುದೇ ವ್ಯತ್ಯಾಸಗಳಾಗುವುದಿಲ್ಲ. ಆದರೆ, 1951ರಲ್ಲಿ ಮೊದಲ ಬಾರಿಗೆ ಪ್ರಜಾತಾಂತ್ರಿಕ ಚುನಾವಣೆಗಳು ನಡೆಯುತ್ತವೆ. ಮೊಹಮ್ಮದ್ ಮೊಸಡೆಕ್ ಎಂಬ ವ್ಯಕ್ತಿ ಜನರಿಂದ ಆಯ್ಕೆಯಾದ ಪ್ರಧಾನಿ ಅಧಿಕಾರಕ್ಕೆ ಬರುತ್ತಾನೆ. ಈತ ಮಾಡುವ ಮೊದಲ ಕೆಲಸವೆಂದರೆ, ಬ್ರಿಟಿಷ್ ಎಂಬೆಸಿ ಎತ್ತಂಗಡಿ. ಏಕೆಂದರೆ, ಎಂಬೆಸಿಗಳು ಆ ಸಂದರ್ಭದಲ್ಲಿ ಮಾಡುತ್ತಿದ್ದ ಬಹುಮುಖ್ಯ ಕೆಲಸಗಳೆಂದರೆ, ಗೂಢಾಚಾರಿಕೆ, ಬೇಹುಗಾರಿಕೆ. ಇರಾನಿನ ಒಳಗೆ ನಡೆಯುವ ವಿದ್ಯಮಾನಗಳನ್ನು ಇಂಗ್ಲೆಂಡಿಗೆ ರವಾನಿಸುತ್ತಿದ್ದವು. ಅದು ಇರಾನ್ ಮೇಲೆ ಪರಿಣಾಮ ಬೀರುತ್ತಿತ್ತು. ಇದನ್ನು ಮನಗಂಡ ಮೊಸಡೆಕ್, ಬ್ರಿಟಿಷ್ ಎಂಬೆಸಿಯನ್ನು ತೆರವುಗೊಳಿಸುತ್ತಾನೆ. ಅದಕ್ಕಿಂತಲೂ ಮುಖ್ಯವಾಗಿ ಕಚ್ಚಾ ತೈಲವನ್ನು ರಾಷ್ಟ್ರೀಕರಣಗೊಳಿಸುತ್ತಾನೆ.
ಇದರಿಂದ ಘಾಸಿಗೊಂಡ ಇಂಗ್ಲೆಂಡ್, ಎರಡನೇ ಮಹಾಯುದ್ಧದಿಂದ ಜರ್ಜರಿತಗೊಂಡಿದ್ದರಿಂದ, ತಾನೇ ಮುಂದೆ ನಿಂತು ಇರಾನ್ ಅನ್ನು ಎದುರಿಸಲಾಗದೆ, ಅಮೆರಿಕದ ಮೊರೆ ಹೋಗುತ್ತದೆ. ಒಂದು ರೀತಿಯಲ್ಲಿ ಮೊಸಡೆಕ್ ಮುಗಿಸಲು ಇಂಗ್ಲೆಂಡ್ ಅಮೆರಿಕಕ್ಕೆ ಸುಪಾರಿ ಕೊಡುತ್ತದೆ. ಅದಕ್ಕಾಗಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಥಿಯೋಡರ್ ರೂಸ್ವೆಲ್ಟ್‌ನ ಮಗನಾದ ಕಿರ್‍ಮಿಟ್ ರೂಸ್ವೆಲ್ಟ್ ಎಂಬುವವನಿಗೆ ಆ ಜವಾಬ್ದಾರಿ ವಹಿಸಿಕೊಡಲಾಗುತ್ತದೆ. ಆತ 1953ರಲ್ಲಿ ಮೊಸಡೆಕ್‌ನ ಮೇಲೆ ಸುಳ್ಳು ಆಪಾದನೆಗಳನ್ನು ಹೊರಿಸಿ, ಮಿಲಿಟರಿ ಸೇನಾಧಿಕಾರಿಗಳನ್ನು ಬಳಸಿಕೊಂಡು, ಮೊಸಡೆಕ್‌ನನ್ನು ಅಧಿಕಾರದಿಂದ ಕೆಳಗಿಳಿಸುತ್ತಾನೆ.
ಮೊಸಡೆಕ್ ಕೆಳಗಿಳಿಸಲು ಇಂಗ್ಲೆಂಡ್, ಅಮೆರಿಕದ ಸಹಕಾರ ಪಡೆದಿದ್ದರೂ, ಮೊಸಡೆಕ್ ಇಳಿದ ನಂತರ, ಇರಾನ್ ಅಮೆರಿಕದವರ ಕೈವಶವಾಗುತ್ತದೆ. ಅಮೆರಿಕ ಹೇಳಿದವರು ಅಧಿಕಾರಕ್ಕೇರುತ್ತಾರೆ. ಆ ಬದಲಾವಣೆಯ ಫಲವಾಗಿ ಹಿಂದಿನ ರಾಜ ರಜ್ಹಾ ಪೆಹ್ಲವಿಯವರ ಮಗ, ಮೊಹಮ್ಮದ್ ರಜ್ಹಾ ಪೆಹ್ಲವಿ ಅಧಿಕಾರಕ್ಕೇರುವಂತಾಗುತ್ತದೆ. 1953ರಿಂದ 1979ರವರೆಗೆ ಆಡಳಿತ ನಡೆಸಿದ ಈತ ಅಮೆರಿಕದ ಕೈಗೊಂಬೆಯಾಗಿರುತ್ತಾನೆ. ಸರ್ವಾಧಿಕಾರಿಯಾಗಿ ವಿಲಾಸಿ ಜೀವನಕ್ಕೆ ಒಗ್ಗಿಹೋಗಿರುತ್ತಾನೆ. ಅಮೆರಿಕನ್ ಶಾಪಿಂಗ್ ಮಾಲ್‌ನಂತೆ, ಇರಾನನ್ನು ಏಷ್ಯಾ ಶಾಪಿಂಗ್ ಮಾಲ್ ಮಾಡುವ ಇಚ್ಛೆ ಹೊಂದಿರುತ್ತಾನೆ. ಐಷಾರಾಮಿ ಬಿಲ್ಡಿಂಗ್‌ಗಳನ್ನು ಕಟ್ಟಿ ವೈಭವೋಪೇತ ಜೀವನ ನಡೆಸುತ್ತಿರುತ್ತಾರೆ. ಆದರೆ, ಇರಾನಿನ ಸಾಮಾನ್ಯ ಜನರ ಬದುಕು ಮೂರಾಬಟ್ಟೆಯಾಗಿರುತ್ತದೆ. ಕಚ್ಚಾತೈಲದಂತಹ ಸಂಪದ್ಭರಿತ ಗಣಿಯಿದ್ದರೂ, ಅದರ ಬಿಡಿಗಾಸು ಜನರಿಗೆ ಸಿಗದಂತಾಗಿರುತ್ತದೆ.

ಇದರಿಂದ ಬೇಸತ್ತ ಇರಾನಿನ ಜನ ದಂಗೆ ಏಳುತ್ತಾರೆ. ಆ ದಂಗೆ 1978ರಿಂದ 1979ರವರೆಗೆ ನಡೆದು, ಇರಾನ್ ಆಂತರಿಕ ಕ್ಷೋಭೆಗೊಳಗಾಗುತ್ತದೆ. ಆ ಜನಕ್ರಾಂತಿಗೆ ಬೆದರಿ ಮೊಹಮ್ಮದ್ ರಜ್ಹಾ ಪಹ್ಲವಿ ದೇಶ ತೊರೆದು ಓಡಿಹೋಗುತ್ತಾನೆ. ಆತ ಹೋದನಂತರ, ರಹೊಲ್ಲಾ ಖೊಮೇನಿ ಮುನ್ನಲೆಗೆ ಬರುತ್ತಾನೆ. ಇರಾನ್ ಕಚ್ಚಾತೈಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಅತ್ಯಂತ ಕಠಿಣ ನಿರ್ಬಂಧಗಳನ್ನು ಹೇರುತ್ತಾನೆ. ದುರದೃಷ್ಟಕ್ಕೆ ಅದೇ ಸಂದರ್ಭದಲ್ಲಿ ಜಗತ್ತು ತೈಲ ಬಿಕ್ಕಟ್ಟಿಗೆ ಸಿಲುಕುತ್ತದೆ. ಅಮೆರಿಕದಿಂದ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಇರಾನ್ ಒಂದೇ ಅಲ್ಲ, ಮಧ್ಯಪ್ರಾಚ್ಯ ದೇಶಗಳು ಕೂಡ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುತ್ತವೆ.
ಅಂತಹ ಸಂದರ್ಭಕ್ಕಾಗಿಯೇ ಕಾದಿದ್ದ ಅಮೆರಿಕ, ಮಧ್ಯಪ್ರಾಚ್ಯ ದೇಶಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ದೊಡ್ಡಣ್ಣನಂತೆ ಪ್ರವೇಶ ಪಡೆಯುತ್ತದೆ. ಸಣ್ಣ ಸೌದಿ, ಇರಾಕ್, ಕತಾರ್, ಕುವೈತ್, ಬಹರೇನ್, ಯುಎಇ ದೇಶಗಳನ್ನು ಒಟ್ಟಿಗೆ ಸೇರಿಸಿ, ಜಗತ್ತಿನ ಯಾವುದೇ ದೇಶದೊಂದಿಗೆ ಯಾರೇ ಕಚ್ಚಾತೈಲ ವ್ಯಾಪಾರ-ವಹಿವಾಟು ನಡೆಸಿದರೂ, ಅವರೆಲ್ಲರೂ ಡಾಲರ್ ಮೂಲಕವೇ ವ್ಯವಹರಿಸತಕ್ಕದ್ದು ಎಂಬ ಒಪ್ಪಂದ ಕುದುರಿಸುತ್ತದೆ. ಅದಕ್ಕೆ ಪ್ರತಿಯಾಗಿ, ಆ ದೇಶಗಳು ಯಾರ ಹೆದರಿಕೆಯಿಲ್ಲದೆ ಸ್ವತಂತ್ರವಾಗಿರಲು, ಸುರಕ್ಷಿತವಾಗಿರಲು ಬೇಕಾದ ಭದ್ರತೆಯನ್ನು ಅಮೆರಿಕ ಒದಗಿಸಲಿದೆ ಎಂಬ ಭರವಸೆ ನೀಡುತ್ತದೆ. ಜೊತೆಗೆ ಬಹುದೊಡ್ಡ ರಾಷ್ಟ್ರವಾದ ಇರಾನ್, ನಿಮ್ಮನ್ನು ಹೊಡೆದುಹಾಕುತ್ತದೆ ಎಂಬ ವ್ಯವಸ್ಥಿತ ಭಯ ಬಿತ್ತುತ್ತದೆ.
ಇದರ ಪರಿಣಾಮವಾಗಿ, ಆ ಒಪ್ಪಂದಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳು ಸಹಿ ಹಾಕುತ್ತವೆ. ಒಪ್ಪದ ಇರಾನ್ ಒಂಟಿಯಾಗುತ್ತದೆ. ಇರಾನ್ ವಿರುದ್ಧ ಸಣ್ಣ ರಾಷ್ಟ್ರಗಳನ್ನು ಎತ್ತಿಕಟ್ಟಿದ ಅಮೆರಿಕ ಕಚ್ಚಾತೈಲದ ಬೆಲೆ ಹೆಚ್ಚಾಗುವಂತೆ ಮಾಡಿ, ವಹಿವಾಟಿನಿಂದ ಅಪಾರ ಹಣ ಗಳಿಸುವ ಸುಲಭದ ದಾರಿಯನ್ನು ಹುಡುಕಿಕೊಳ್ಳುತ್ತದೆ. ಕಣ್ಣೊರೆಸುವ ತಂತ್ರವಾಗಿ ಆ ಸಣ್ಣ ದೇಶಗಳ ರಕ್ಷಣೆಗಾಗಿ ಅಮೆರಿಕನ್ ಸೇನಾ ನೆಲೆಗಳನ್ನು ಸ್ಥಾಪಿಸುತ್ತದೆ. ಇಂತಹ 30ಕ್ಕೂ ಹೆಚ್ಚು ಸೇನಾನೆಲೆಗಳು ಇಂದು ಆ ದೇಶಗಳಲ್ಲಿವೆ.
1979ರಿಂದ ಇರಾನ್ ರಾಜಪ್ರಭುತ್ವವನ್ನು ಕಳಚಿಕೊಂಡು, ಮತ್ತೆ ಧಾರ್ಮಿಕ ಪ್ರಭುತ್ವಕ್ಕೆ ಒಳಪಡುತ್ತದೆ. ರಹೊಲ್ಲಾ ಖೊಮೇನಿ ಅಧಿಕಾರಕ್ಕೇರುತ್ತಾನೆ. ಇರಾನನ್ನು ಸ್ವತಂತ್ರ ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸಿ, ಕಚ್ಚಾ ತೈಲದಿಂದ ಬರುವ ಹಣ ಬಳಸಿಕೊಂಡು ದೇಶದ ಅಭಿವೃದ್ಧಿಯತ್ತ ಗಮನ ಹರಿಸುತ್ತಾನೆ.
ಇದನ್ನು ಓದಿದ್ದೀರಾ?: ಇರಾನ್‌ನ ‘ಉಕ್ಕಿನ ಮನುಷ್ಯ’ ಆಯತೊಲ್ಲಾ ಅಲಿ ಖಮೇನಿ
ಇರಾನ್ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುದನ್ನು ಕಂಡು ಸಹಿಸದಾದ ಅಮೆರಿಕ, ಪಕ್ಕದ ಇರಾಕ್‌ನೊಂದಿಗೆ ಸಖ್ಯ ಬೆಳೆಸುತ್ತದೆ. ಇರಾಕಿನ ಸದ್ದಾಂ ಹುಸೇನ್‌ಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿ ಕುಮ್ಮಕ್ಕು ನೀಡುತ್ತದೆ. ಅದಕ್ಕೆ ಸರಿಯಾಗಿ ಇರಾನ್ ಮತ್ತು ಇರಾಕ್‌ಗಳ ನಡುವೆ ಶತ್ತ್ ಅಲ್-ಅರಬ್ ಜಲಮಾರ್ಗದ ವಿವಾದ ತಳಕು ಹಾಕಿಕೊಳ್ಳುತ್ತದೆ. ಪ್ರಾದೇಶಿಕ ಪ್ರಭುತ್ವವೂ ನುಸುಳುತ್ತದೆ. ಇರಾಕ್ ಮುಂದಾಗಿ ಇರಾನ್ ಮೇಲೆ ದಾಳಿ ಮಾಡುತ್ತದೆ. ಈ ಯುದ್ಧ ಸತತವಾಗಿ 8 ವರ್ಷಗಳ ಕಾಲ ನಡೆದು, ಎರಡೂ ದೇಶಗಳ ಸುಮಾರು 5ರಿಂದ 10 ಲಕ್ಷದವರೆಗೆ ಜನ ಸಾವಿಗೀಡಾಗುತ್ತಾರೆ. ಎರಡೂ ದೇಶಗಳ ತೈಲ ಉತ್ಪಾದನೆ ಸ್ಥಗಿತಗೊಂಡು, ರಫ್ತು ವಹಿವಾಟು ಏರುಪೇರಾಗುತ್ತದೆ. ಎರಡೂ ದೇಶಗಳು ಆರ್ಥಿಕವಾಗಿ ಜರ್ಜರಿತಗೊಳ್ಳುತ್ತವೆ. 8 ವರ್ಷದ ನಂತರ ಒಪ್ಪಂದಕ್ಕೆ ಬರುತ್ತವೆ. ಅದರ ಮಧ್ಯಸ್ಥಿಕೆಯನ್ನು ಮತ್ತೆ ಅಮೆರಿಕವೇ ವಹಿಸುತ್ತದೆ.

ಏತನ್ಮಧ್ಯೆ, 1989ರಲ್ಲಿ ರಹೊಲ್ಲಾ ಖೊಮೇನಿ ನಿಧನರಾಗಿ, ಅವರ ಪುತ್ರ ಅಯಾತೊಲ್ಲಾ ಖಮೇನಿ ಅಧಿಕಾರಕ್ಕೇರುತ್ತಾನೆ. ಈ ಖಮೇನಿ 1978-79ರ ಇರಾನಿನ ಕ್ರಾಂತಿಯಲ್ಲಿ ಮುಖ್ಯವಾಹಿನಿಯ ವ್ಯಕ್ತಿಯಾಗಿದ್ದರು ಮತ್ತು ಅದರ ಯಶಸ್ಸಿನ ನಂತರ, ಹೊಸದಾಗಿ ಸ್ಥಾಪಿತವಾದ ಇಸ್ಲಾಮಿಕ್ ಗಣರಾಜ್ಯ ಇರಾನ್‌ನಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. 1989ರಲ್ಲಿ ಖೊಮೇನಿ ಮರಣದ ನಂತರ, ಅಯಾತೊಲ್ಲಾ ಖಮೇನಿ ಅವರನ್ನು ತಜ್ಞರ ಸಭೆಯು ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡುತ್ತದೆ. ಅಂದಿನಿಂದ ಇರಾನ್ ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವಾಗುತ್ತದೆ. ಹಾಗೆಯೇ ಗೊಡ್ಡು ಸಂಪ್ರದಾಯಗಳ ಸಂಕೋಲೆಗಳೊಳಗೆ ಬಂಧಿಸಲ್ಪಡುತ್ತದೆ.
ಇರಾಕ್ ಅನ್ನು ಇರಾನ್ ಮೇಲೆ ಎತ್ತಿಕಟ್ಟಿ ಸದ್ದಾಂ ಹುಸೇನ್ ನೇತೃತ್ವದಲ್ಲಿ ಯುದ್ಧ ಮಾಡಿಸಿದ ಅಮೆರಿಕ, ಆ ನಂತರ ಸದ್ದಾಂ ಹುಸೇನ್ ಸರ್ವಾಧಿಕಾರಿ ಎಂಬ ನೆಪವನ್ನು ಜಗತ್ತಿನ ಮುಂದಿಟ್ಟು, ತೀರಾ ಕೆಟ್ಟ ರೀತಿಯಲ್ಲಿ ಬೇಟೆಯಾಡಿ ಕೊಂದುಹಾಕುತ್ತದೆ. ಇದನ್ನು ನೋಡಿಯೂ ಬುದ್ಧಿ ಕಲಿಯದ ಮಧ್ಯ ಪ್ರಾಚ್ಯ ದೇಶಗಳು, ಇವತ್ತಿಗೂ ಅಮೆರಿಕದ ಅಡಿಯಾಳಾಗಿಯೇ ಮುಂದುವರೆದಿವೆ. ಸೇನಾ ನೆಲೆ ಸ್ಥಾಪಿಸಲು ಅನುವು ಮಾಡಿಕೊಟ್ಟ ಕಾರಣಕ್ಕೆ, ಇಂದು ಇರಾನ್ ದಾಳಿಗೆ ತತ್ತರಿಸಿಹೋಗುತ್ತಿವೆ.
ಖಮೇನಿ ಕಾಲ
1989ರಲ್ಲಿ ಅಧಿಕಾರಕ್ಕೇರಿದ ಅಯಾತೊಲ್ಲಾ ಖಮೇನಿ, ಅಮೆರಿಕದಿಂದ ಅಂತರ ಕಾಯ್ದುಕೊಂಡರು. ಅಮೆರಿಕ ಇಸ್ರೇಲ್ ಪರ ನಿಂತಾಗ, ಪ್ಯಾಲಸ್ತೀನ್ ಪರ ವಹಿಸಿದರು. ಹಾಗೆಯೇ ಕಚ್ಚಾತೈಲ ವ್ಯಾಪಾರ ಒಪ್ಪಂದದಲ್ಲಿ ಹಲವಾರು ದೇಶಗಳೊಂದಿಗೆ ವ್ಯವಹಾರ ಕುದುರಿಸಿ, ಆಯಾಯ ದೇಶಗಳ ಕರೆನ್ಸಿಯಲ್ಲಿಯೇ ಕೊಡು-ಕೊಳ್ಳುವಿಕೆ ಮಾಡತೊಡಗಿದರು.
ಅದೇ ರೀತಿ ಭಾರತ ದೇಶದೊಂದಿಗೆ ಕೂಡ 2016ರಲ್ಲಿ ಭಾರತ, ಇರಾನ್ ಮತ್ತು ಅಫಘಾನಿಸ್ತಾನ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡರು. ಮುಂದುವರೆದು 2024ರಲ್ಲಿ ಭಾರತವು ದೀರ್ಘಾವಧಿ(10 ವರ್ಷ) ನಿರ್ವಹಣಾ ಒಪ್ಪಂದಕ್ಕೆ ಸಹಿ ಹಾಕಿತು. ಇದರಿಂದ ಭಾರತಕ್ಕೆ ಪಾಕಿಸ್ತಾನವನ್ನು ಬಿಟ್ಟು ಅಫಘಾನಿಸ್ತಾನ ಹಾಗೂ ಮಧ್ಯ ಏಷ್ಯಾ ದೇಶಗಳಿಗೆ ಪ್ರವೇಶ ಸಾಧ್ಯವಾಯಿತು. ಇನ್ನು ಪ್ರಮುಖವಾಗಿ ಕಚ್ಚಾತೈಲ ಪೂರೈಕೆ ಮಾಡಿ, ಅದಕ್ಕೆ ಪ್ರತಿಯಾಗಿ ರೂಪಾಯಿಯಲ್ಲಿ ಹಣ ಪಡೆಯಲು ಮುಂದಾಯಿತು. ಭಾರತದ ಅಕ್ಕಿ ಇರಾನ್‌ನಲ್ಲಿ ಸಿಗುವಂತಾಯಿತು. ಅದು ಇರಾನ್-ಭಾರತ ದೇಶಗಳ ಆರ್ಥಿಕ ಪ್ರಗತಿಗೆ ಕಾರಣವಾಯಿತು.
ಇದನ್ನು ಓದಿದ್ದೀರಾ?: ಯುದ್ಧದ ಜಾಗತೀಕರಣ: ಅಂತಾರಾಷ್ಟ್ರೀಯ ಸಂಘರ್ಷಗಳಲ್ಲಿ ಶಸ್ತ್ರಾಸ್ತ್ರ ವ್ಯಾಪಾರದ ಪಾತ್ರ
ಇಷ್ಟೆಲ್ಲ ಸಹಕಾರ-ಬಾಂಧವ್ಯ ಹೊಂದಿದ್ದ ಇರಾನ್-ಭಾರತ ಇಂದು ತದ್ವಿರುದ್ಧ ದಿಕ್ಕಿನಲ್ಲಿವೆ. ಶತ್ರು ಪಾಳೆಯದಲ್ಲಿ ಗುರುತಿಸಿಕೊಂಡಿವೆ. ಅಮೆರಿಕದ ಒತ್ತಡದ ಕಾರಣಕ್ಕೆ ಕಚ್ಚಾತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಅಮೆರಿಕ-ಇಸ್ರೇಲ್, ತಮ್ಮ ಸ್ವಾರ್ಥಕ್ಕಾಗಿ ಇರಾನ್ ಮೇಲೆ ದಾಳಿ ಮಾಡಿದರೆ, ಭಾರತ, ಅವರೊಂದಿಗೆ ಕೈಜೋಡಿಸಿ, ಕಚ್ಚಾತೈಲವನ್ನು ಮತ್ತು ಇಲ್ಲಿಂದ ಅಲ್ಲಿಗೆ ರಫ್ತಾಗುತ್ತಿದ್ದ ಬಾಸುಮತಿ ಅಕ್ಕಿ ವಹಿವಾಟನ್ನು ಕಳೆದುಕೊಂಡಿದೆ.

ಭಾರತಕ್ಕೆ ಈ ಮೊದಲು ರಷ್ಯಾದಿಂದ, ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ಮತ್ತು ಅಮೆರಿಕದಿಂದ ಕಚ್ಚಾತೈಲ ಆಮದಾಗುತ್ತಿತ್ತು. ಈಗ ಟ್ರಂಪ್ ಕಾರಣಕ್ಕೆ, ಅತಿ ಸುಂಕದ ಬೆದರಿಕೆಗೆ ರಷ್ಯಾದಿಂದ ಸರಬರಾಜು ಸ್ಥಗಿತಗೊಂಡಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಂದ- ಇರಾನ್‌ನಿಂದ ಶೇ. 15, ಇರಾಕ್‌ನಿಂದ ಶೇ. 20, ಸೌದಿಯಿಂದ ಶೇ. 14 ಬರುತ್ತಿದ್ದ ಕಚ್ಚಾತೈಲ ಯುದ್ಧದ ಕಾರಣದಿಂದಾಗಿ ಸಂಪೂರ್ಣವಾಗಿ ನಿಂತಿದೆ. ಉಳಿದಿರುವುದು ಅತಿ ಹೆಚ್ಚು ಸುಂಕ ನೀಡಿ ಖರೀದಿಸಬೇಕಾದ ವೆನಜುವೆಲಾ ಕಚ್ಚಾ ತೈಲವೊಂದೇ. ಇದೊಂದರಿಂದ ಭಾರತ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವೇ? ಯುದ್ಧ ಇನ್ನಷ್ಟು ದಿನಗಳ ಕಾಲ ಮುಂದುವರೆದರೆ, ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‌ಗೆ 70 ಡಾಲರ್ ಇರುವ ಕಚ್ಚಾ ತೈಲದ ಬೆಲೆ, 150 ಡಾಲರ್ ಆದರೆ, ಇಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುವುದಿಲ್ಲವೇ? ಸರಕು-ಸಾಗಣೆ ವೆಚ್ಚ ಹೆಚ್ಚಾಗಿ ಬೆಲೆ ಏರಿಕೆ ಉಂಟಾಗುವುದಿಲ್ಲವೇ? ಬಡವರು ಬದುಕಲು ಸಾಧ್ಯವೇ? ಹಣದುಬ್ಬರ ತಲೆದೋರುವುದಿಲ್ಲವೇ? ದೇಶದ ಆರ್ಥಿಕ ಸ್ಥಿತಿ ಅಲ್ಲೋಲ ಕಲ್ಲೋಲವಾಗುವುದಿಲ್ಲವೇ?
ಪ್ರಧಾನಿ ಮೋದಿಯವರು ದೂರದೃಷ್ಟಿ ಇರುವ ನಾಯಕರೇ? ಅಥವಾ ಅಮೆರಿಕದ ಅಧ್ಯಕ್ಷ ಟ್ರಂಪ್ ಆಡಿಸಿದಂತೆ ಆಡುವ ಗೊಂಬೆಯೇ?

ಲೇಖಕ, ಪತ್ರಕರ್ತ




