ಮೀಸಲಾತಿ ಕಾಯ್ದೆಗಳನ್ನು ಶೆಡ್ಯೂಲ್ 9ಕ್ಕೆ ಸೇರಿಸಲು ಸಾಧ್ಯವಾದೀತೇ? 

Date:

ಭಾಜಪ ಪಕ್ಷದ ಸರ್ಕಾರವೇ ಇರುವ ಕೆಲವು ರಾಜ್ಯಗಳು ಮೀಸಲಾತಿ ಕೋಟಾವನ್ನು ಶೇ.50ಕ್ಕಿಂತ ಹೆಚ್ಚಿಸಿ, ಕಾಯ್ದೆಯನ್ನು ರೂಪಿಸಿ ಕೇಂದ್ರ ಸರ್ಕಾರದತ್ತ ಮುಖ ಮಾಡಿದ್ದರೂ, ಕೇಂದ್ರ ಸರ್ಕಾರವು ಸೊಪ್ಪು ಹಾಕಲಿಲ್ಲ. ವಿಷಯ ಹೀಗಿರುವಲ್ಲಿ ವಿರೋಧ ಪಕ್ಷಗಳ ಕೈಯಲ್ಲಿ ಸರ್ಕಾರ ಇದ್ದ ರಾಜ್ಯಗಳ ಗತಿ ಏನು?

ಸರ್ಕಾರ ಯಾವ ಪಕ್ಷದ್ದೇ ಇರಲಿ, ಯಾವುದಾದರೂ ವಿಷಯದಲ್ಲಿ ಸಂದಿಗ್ಧತೆಗೆ ಸಿಕ್ಕಿಕೊಂಡಾಗ ಸಲಹೆ-ಸೂಚನೆ ನೀಡಲು ಆಳುವ ಪಕ್ಷದ ಹುರಿಯಾಳುಗಳು ತಾಮುಂದು ನಾಮುಂದು ಎಂದು ಮುಗಿಬೀಳುವುದು ಸಾಮಾನ್ಯ. ಅದಕ್ಕೊಂದು ನಿಚ್ಚಳ ನಿದರ್ಶನ ಎಂದರೆ- ಇತ್ತೀಚೆಗೆ ರಾಜ್ಯ ಉಚ್ಚ ನ್ಯಾಯಾಲಯ ಶೇಕಡಾವಾರು ಮೀಸಲಾತಿ ವಿಷಯದಲ್ಲಿ ನೀಡಿರುವ ಮಧ್ಯಂತರ ಆದೇಶ. ಮಧ್ಯಂತರ ಆದೇಶದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಮೀಸಲಾತಿ ಕೋಟಾ ಶೇ.50ರ ಮಿತಿ ಮೀರದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಗಳನ್ನು ಮಾಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂಬುದು. ಸರ್ಕಾರ ಈಗಾಗಲೇ ಮೀಸಲಾತಿ ಕೋಟಾದ ಮಿತಿಯನ್ನು ಶೇ.56ಕ್ಕೆ ಹೆಚ್ಚಿಸಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿಯೇ ಇದೆ. ಹೀಗೆ ಹೆಚ್ಚಿಸಿರುವ ಮೀಸಲಾತಿ ಕೋಟಾವನ್ನು ಮತ್ತೆ ಕೆಳಗಿಳಿಸುವುದು ಸರ್ಕಾರಕ್ಕೆ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಆಂತರಿಕ ವಲಯದಲ್ಲಿ ಆಗಾಗ್ಗೆ ಮಿಂಚಿ ಮರೆಯಾಗುತ್ತಿರುವ ಮಾಜಿ ವಿಧಾನ ಪರಿಷತ್ ಸದಸ್ಯರೊಬ್ಬರು ಮೀಸಲಾತಿ ಕೋಟಾವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಶೇ.56ಕ್ಕೆ ಹೆಚ್ಚಿಸಿರುವುದನ್ನು ಸಂವಿಧಾನದ ಶೆಡ್ಯೂಲ್ (ಅನುಸೂಚಿ) 9ಕ್ಕೆ ಸೇರಿಸಲೂ ಉಗ್ರವಾಗಿ ಆಗ್ರಹಿಸಿದ್ದಾರೆ.

ಅನುಸೂಚಿ 9 ಅನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡಂದಿನಿಂದ ನಡೆದ ಬಂದ ದಾರಿಯನ್ನೊಮ್ಮೆ ಅವಲೋಕಿಸೋಣ: ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಂತೂ ಸರಕಾರದ ಮುಂದಿತ್ತು. ಕ್ರೂರ ಜಮೀನ್ದಾರಿ ಪದ್ಧತಿಯನ್ನು ನಿರ್ಮೂಲನೆ ಮಾಡಿ ಭೂಸುಧಾರಣಾ ಕಾನೂನುಗಳನ್ನು ಜಾರಿಗೆ ತಂದು ಸಮತೋಲಿತ ಸಮಾಜವನ್ನು ಕಟ್ಟಬೇಕೆಂಬ ಕನಸನ್ನು ನನಸಾಗಿಸಲು ಸರ್ಕಾರ ಮುಂದಾದಾಗ ಅನೇಕ ಸಮಸ್ಯೆಗಳು ಎದುರುಗೊಂಡವು. ಈ ದಿಸೆಯಲ್ಲಿ ಜಾರಿಗೆ ತಂದ ಭೂಶಾಸನಗಳು ನ್ಯಾಯಾಲಯಗಳಲ್ಲಿ ಪ್ರಶ್ನಿಸಲ್ಪಟ್ಟು ಸರ್ಕಾರಗಳಿಗೆ ಹಿನ್ನಡೆ ಉಂಟಾಯಿತು. ಬಿಹಾರ ರಾಜ್ಯದಲ್ಲಿ ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯನ್ನು ಪಾಟ್ನಾ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ(ಕಾಮೇಶ್ವರ ಸಿಂಗ್ vs ಬಿಹಾರ, ಎಐಆರ್ 1951 ಪಾಟ್ನಾ 246), ನ್ಯಾಯಾಲಯ ವಿಧಿ 14ರ ಉಲ್ಲಂಘನೆ ಎಂದು ಕಾಯ್ದೆಯನ್ನೇ ರದ್ದುಗೊಳಿಸಿತು. ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಮೇಲ್ಮನವಿ ವಿಚಾರಣೆಗೆ ಬಾಕಿ ಇದ್ದ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿಗೆ ಮುಂದಾಯಿತು.

ಇದನ್ನು ಓದಿದ್ದೀರಾ?: GBA ಚುನಾವಣೆ | ಸುಪ್ರೀಂ ಕೋರ್ಟ್ ‘ಟ್ರಿಪಲ್ ಟೆಸ್ಟ್’ ಆದೇಶ ಉಲ್ಲಂಘಿಸಿ ಉದ್ಧಟತನ ಮೆರೆಯಿತೇ ಸರ್ಕಾರ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂವಿಧಾನ ತಿದ್ದುಪಡಿ 
ಸಂವಿಧಾನ ತಿದ್ದುಪಡಿಯ ಮೂಲಕ ಎಸ್ಟೇಟು ಮುಂತಾದವುಗಳ ಅರ್ಜನೆಗೆ ನಿರ್ಬಂಧಿಸುವ ಕಾನೂನುಗಳನ್ನು ಉಳಿಸುವುದಕ್ಕಾಗಿ 31ಎ ಮತ್ತು 31ಬಿ ಎಂಬ ಎರಡು ಹೊಸ ವಿಧಿಗಳನ್ನು ಅಳವಡಿಸಲಾಯಿತು. ವಿಧಿ 31ಬಿ ಪ್ರಕಾರ 9ನೇ ಅನುಸೂಚಿ ಸಂವಿಧಾನದ ಅನುಸೂಚಿಗಳಲ್ಲಿ ಒಂದಾಗಿ ಸೇರ್ಪಡೆಯಾಗಿದೆ. 9ನೇ ಅನುಸೂಚಿಯಲ್ಲಿ ಸೇರಿಸಲಾಗಿರುವ ಭೂಸುಧಾರಣೆ ಕಾನೂನುಗಳನ್ನು ಸಂರಕ್ಷಣೆ ಮಾಡಲು ಮತ್ತು ನಿರ್ದಿಷ್ಟ ಪಡಿಸಿದ ಯಾವುದೇ ಕಾಯ್ದೆ ಹಾಗೂ ನಿಬಂಧನೆಗಳನ್ನು ನ್ಯಾಯಾಲಯದ ವಿಚಾರಣಾ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಾಗುವಂತೆ 1951ರಲ್ಲಿ ಹೊಸದಾಗಿ ಎರಡು ವಿಧಿಗಳನ್ನು ಸೇರ್ಪಡೆ ಮಾಡಲಾಗಿದೆ. ಇದು ಸಂವಿಧಾನಕ್ಕೆ ತಂದ ಮೊದಲನೇ ತಿದ್ದುಪಡಿಯೂ ಹೌದು.

ಅನಂತರದಲ್ಲಿ 8 ತಿದ್ದುಪಡಿಗಳನ್ನು ತರುವುದರ ಮೂಲಕ 9ನೇ ಅನುಸೂಚಿಗೆ ಕೆಲವು ಭೂಸುಧಾರಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ಸೇರಿಸಲಾಗಿದೆ. ಇದಕ್ಕೆ ಅಪವಾದವೆಂಬಂತೆ ಸಂವಿಧಾನದ 40ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಮೋಟಾರ್ ವಾಹನ ಕಾಯ್ದೆಯ ಕೆಲಭಾಗ ಮತ್ತು 76ನೇ ತಿದ್ದುಪಡಿಯಲ್ಲಿ ತಮಿಳುನಾಡು ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಿರುವುದು. 9ನೇ ಅನುಸೂಚಿಗೆ ಸೇರಿಸಿದ್ದರೂ ಸಹ, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಅನೂಹ್ಯ ಕಾರಣಗಳಿಂದ ವಿಚಾರಣೆಗೆ ತಮಿಳುನಾಡು ಮೀಸಲಾತಿ ಕಾಯ್ದೆ ಇಂದಿಗೂ ಬಾಕಿ ಇದೆ. ಹಾಗೆಯೇ ಬೇರೆ ರಾಜ್ಯದ ಯಾವುದೇ ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಿದ ಪಕ್ಷದಲ್ಲಿ ಅದು ಪ್ರಶ್ನಾತೀತವೇನೂ ಅಲ್ಲ ಎಂಬುದನ್ನು ಗಮನಿಸಬೇಕು. ಅದಕ್ಕಿರುವ ಕಾರಣ ಮುಂದೆ ಹೇಳಲಾಗುವುದು.

sup 1

ಈ ಲೇಖನದ ಉದ್ದೇಶಕ್ಕೆ ಸಂಬಂಧಪಟ್ಟಂತೆ 76ನೇ ತಿದ್ದುಪಡಿಗೆ ಮಾತ್ರ ವಿಶೇಷತೆ ಇದೆ. ಆ ತಿದ್ದುಪಡಿಗೆ ಕಾರಣವಾದ ಕಾಯ್ದೆಯೊಂದನ್ನು ತಮಿಳುನಾಡು ಸರ್ಕಾರ 1993ರಲ್ಲಿ ಎಲ್ಲಾ ವರ್ಗಗಳಿಗೂ ಅನ್ವಯಿಸುವಂತೆ ಮೀಸಲಾತಿ ಕೋಟಾವನ್ನು ಶೇ.69ರಷ್ಟಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ತಂದಿರುವುದೇ ಆಗಿದೆ. ಈ ಕಾಯ್ದೆಯನ್ನು ರೂಪಿಸಬೇಕಾದ ಹಿಂದಿನ ಅನಿವಾರ್ಯತೆ ಎಂದರೆ- ಎಂ.ಜಿ .ರಾಮಚಂದ್ರನ್ ಅವರ ಮುಖ್ಯಮಂತ್ರಿ ಅವಧಿಯಲ್ಲಿ(1980), ಹಿಂದುಳಿದ ವರ್ಗಗಳ ಮೀಸಲಾತಿ ಕೋಟಾವನ್ನು ಶೇ.31ರಿಂದ ಶೇ. 50ರಷ್ಟಕ್ಕೆ ಹೆಚ್ಚಿಸಲಾಯಿತು. ಈ ಹೆಚ್ಚಿಸುವಿಕೆಯಿಂದಾಗಿ ಪರಿಶಿಷ್ಟ ವರ್ಗಗಳೂ ಸೇರಿ ಒಟ್ಟು ಕೋಟಾ ಶೇ. 68ರಷ್ಟಾಯಿತು. ಹಾಗೂ ಅದು ಜಾರಿಗೂ ಬಂದಿತು. 1990ರಲ್ಲಿ ಎಂ.ಕರುಣಾನಿಧಿ ಅವರು ಪರಿಶಿಷ್ಟ ಪಂಗಡಗಳ ಮೀಸಲಾತಿ ಕೋಟಾವನ್ನು ಶೇ.1ರಷ್ಟಕ್ಕೆ ನಿಗದಿ ಪಡಿಸಿದ ಪ್ರಯುಕ್ತ ಅದು ಶೇ. 69ರಷ್ಟಕ್ಕೇರಿತು. ಸರ್ಕಾರದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ಸಂಭವನೀಯ ಪ್ರತಿಕೂಲ ಆದೇಶವನ್ನು ನಿರೀಕ್ಷಿಸಿ, ತಮಿಳುನಾಡು ಮುಂದಾಗುವ ಹಾನಿಯನ್ನು ತಪ್ಪಿಸಲು ಸೂಕ್ತ ಕಾಯ್ದೆ ರಚಿಸುವ ಕ್ರಮಕ್ಕೆ ಮೊರೆ ಹೋಯಿತು.

ಆ ಕಾರಣದಿಂದ ತಂದ ಕಾಯ್ದೆಯೇ- “ತಮಿಳುನಾಡು ಹಿಂದುಳಿದ ವರ್ಗಗಳ, ಅನುಸೂಚಿತ ಜಾತಿಗಳ, ಅನುಸೂಚಿತ ಬುಡಕಟ್ಟುಗಳ (ರಾಜ್ಯಾಧೀನ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳ ಮತ್ತು ಸೇವೆಗಳಲ್ಲಿ ನೇಮಕಗಳ ಅಥವಾ ಹುದ್ದೆಗಳ ಮೀಸಲಾತಿ) ಕಾಯ್ದೆ, 1993”. ತದನಂತರ ವಿಧಿ 31ಬಿ ಪ್ರಕಾರ 76ನೇ ತಿದ್ದುಪಡಿ ತರುವುದರ ಮೂಲಕ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಲಾಯಿತು. ಕಾಯ್ದೆಯು ಯಾವುದಾದರೂ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡಿದೆ ಎಂಬ ಕಾರಣದಿಂದ ನ್ಯಾಯಾಲಯದಿಂದ ಅದು ಅಸಿಂಧುಗೊಳ್ಳುವುದನ್ನು ತಪ್ಪಿಸುವುದೇ 9ನೇ ಅನುಸೂಚಿಗೆ ಸೇರಿಸಲಿರುವ ಉದ್ದೇಶ.

ಸೇರಲು ಹಿಂದಿರುವ ರಾಜಕಾರಣ
ಈ ವಿಶೇಷ ಶಾಸನವನ್ನು ಸಂರಕ್ಷಿಸಲು, ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತ ಮತ್ತು ಅಂದಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಹಾಗೂ ಅಂದಿನ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮ ಕಾರಣರು. ಪಿ.ವಿ. ನರಸಿಂಹ ರಾವ್ ಸರ್ಕಾರ ತಮಿಳುನಾಡಿನ ಎಐಡಿಎಂಕೆ ಪಕ್ಷದ ವತಿಯಿಂದ ಗೆದ್ದಿದ್ದ ಲೋಕಸಭಾ ಸದಸ್ಯರ ಬೆಂಬಲವಿತ್ತು. ಆ ಬೆಂಬಲದ ಮೇಲೆಯೇ ನರಸಿಂಹರಾವ್ ಸರ್ಕಾರ ಉಳಿದಿತ್ತು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಆ ಬೆಂಬಲವನ್ನೇ ಮುಖ್ಯಮಂತ್ರಿ ಜಯಲಲಿತಾ ತನ್ನ ಚಾಣಾಕ್ಷತನದಿಂದ ತನ್ನ ರಾಜ್ಯದ ಹಿತಕ್ಕೆ ಬಳಸಿಕೊಂಡು, ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಯಲ್ಲಿ ಸೇರಿಸಲು ಸಫಲರಾದರು. ಮೀಸಲಾತಿಗಾಗಿ ದೃಢ ಸಂಕಲ್ಪ ತೊಟ್ಟು ಪ್ರಬಲ ಹೋರಾಟ ಹಮ್ಮಿಕೊಂಡಲ್ಲಿ ಜನತಂತ್ರ ವ್ಯವಸ್ಥೆಯ ಸರ್ಕಾರದಲ್ಲಿ ಯಾವ ಪಕ್ಷದ ಕೈಯಲ್ಲೇ ಆಡಳಿತವಿದ್ದರೂ ಜನ ಸಮುದಾಯದ ಇಚ್ಛೆಯನ್ನು ಕಡೆಗಣಿಸಲಸಾಧ್ಯ ಎಂಬ ಸತ್ಯ ಇದರ ಹಿಂದಿದೆ. ತಮಿಳುನಾಡು ಮೀಸಲಾತಿ ಕೋಟಾ ಶೇ.50ರಷ್ಟನ್ನು ಮೀರಿ ಹೋಗುವುದರ ಮೂಲಕ ಸಾಮಾಜಿಕ ನ್ಯಾಯ ವಿತರಣೆಯಲ್ಲಿ ಇತಿಹಾಸ ನಿರ್ಮಿಸಿದೆ. ಮಾತ್ರವಲ್ಲ, ಅದು ಇಂದಿಗೂ ಮುಂದುವರೆದಿದೆ ಎಂಬುದೇ ವಾಸ್ತವ.

ಇದನ್ನು ಓದಿದ್ದೀರಾ?: ಶೇ.50ರ ಮೀಸಲಾತಿ ಅನ್ವಯವೇ ನೇಮಕ:  ಸರ್ಕಾರಕ್ಕೆ ಬಿಸಿ ತುಪ್ಪವಾದ ಹೈಕೋರ್ಟ್ ಆದೇಶ

ಇಷ್ಟಾದರೂ, ಯಾವುದೇ ಮೀಸಲಾತಿ ಕಾಯ್ದೆಯು 9ನೇ ಅನುಸೂಚಿಯಲ್ಲಿ ಸೇರಲ್ಪಟ್ಟಿದೆ ಎಂದ ಮಾತ್ರಕ್ಕೆ ಅದು ನ್ಯಾಯಾಲಯದ ವಿಚಾರಣಾ ವ್ಯಾಪ್ತಿಯಿಂದ ಮುಕ್ತಗೊಂಡಿದೆ ಎಂದು ಹೇಳಲಾಗುವುದಿಲ್ಲ(I.R.Coelho vs T.N- 2007(1) SCJ 694). ಯಾಕೆಂದರೆ ಅಂತ ಕಾಯಿದೆ ಮೂಲಭೂತ ಹಕ್ಕಿಗೆ ಹಾನಿ ಉಂಟುಮಾಡಿದೆ ಅಥವಾ ಸಂವಿಧಾನದ ಮೂಲ ರಚನೆಗೆ ವಿರುದ್ಧವಿದೆ ಎಂದಾಗ ನ್ಯಾಯಾಲಯ ವಿಚಾರಣೆ ಮೂಲಕ ಅದನ್ನು ಅಸಿಂಧು ಎಂದು ಘೋಷಿಸಬಹುದು.

ಮೀಸಲಾತಿ ಮೂಲಭೂತ ಹಕ್ಕೇ?
ಸಂವಿಧಾನದ 16(4)ನೇ ವಿಧಿಯು ಮೀಸಲಾತಿಗೆ ಮೂಲಭೂತ ಹಕ್ಕನ್ನು ಖಾತರಿ ಪಡಿಸುತ್ತದೆಯೇ ಅಥವಾ ಶಕ್ತಗೊಳಿಸುವ (enabling) ನಿಬಂಧನೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸರ್ವೋಚ್ಚ ನ್ಯಾಯಾಲಯ ಸಿ.ಎ. ರಾಜೇಂದ್ರನ್ vs ಭಾರತ ಒಕ್ಕೂಟ (AIR 1968 SC 507) ಪ್ರಕರಣದಲ್ಲಿ, 16(4)ನೇ ವಿಧಿಯು ಹಿಂದುಳಿದ ವರ್ಗಗಳಿಗೆ ಮೂಲಭೂತ ಹಕ್ಕನ್ನು ನೀಡುವುದಿಲ್ಲ ಎಂದು ಆಜ್ಞಾಪಿಸಿದೆ. ಅದು ಕೇವಲ ಶಕ್ತಗೊಳಿಸುವ ನಿಬಂಧನೆಯಾಗಿದೆ.

ಒಂದು ವೇಳೆ ವಿಧಿ 16 (4) ಮೂಲಭೂತ ಹಕ್ಕಿಗೆ ಒಳಪಟ್ಟಿದ್ದಲ್ಲಿ, ಕೇಂದ್ರ ಸರ್ಕಾರ ಇತರ ಹಿಂದುಳಿದ ವರ್ಗಗಳಿಗೆ (OBC) ಮೀಸಲಾತಿ ಕಲ್ಪಿಸುವುದನ್ನು 1993ವರೆಗೂ ಎಳೆದೊಯ್ಯ ಬೇಕಾಗಿರಲಿಲ್ಲ. ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದಲ್ಲಿ ಮೀಸಲಾತಿ ದಕ್ಕಲು 43 ವರ್ಷ ಕಾಯಬೇಕಾಯಿತು. ಕರ್ನಾಟಕದಲ್ಲಿಯೂ 27 ವರ್ಷ ಕಾಯುವ ಸಂದರ್ಭ ಬಂತು. ಈ ವಿಧಿ ಮೂಲಭೂತ ಹಕ್ಕಿಗೆ ಒಳಪಟ್ಟಿದ್ದಲ್ಲಿ, ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿ, ಆಜ್ಞಾಪತ್ರ(mandamus) ತರಲು ಸಾಧ್ಯವಿತ್ತು ಎಂಬುದನ್ನೂ ನಾವು ಮನಗಾಣಬೇಕು.

parliament sc

ಇಂಥಾ, ಸಂದಿಗ್ಧ ಸ್ಥಿತಿಯಲ್ಲಿಯೂ, ಜಾರ್ಖಂಡ್, ಛತ್ತೀಸಗಡ, ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ, ತೆಲಂಗಾಣ, ಕರ್ನಾಟಕ ಮುಂತಾದ ರಾಜ್ಯಗಳು ಮೀಸಲಾತಿಯನ್ನು ಸಮರ್ಥಿಸಿಕೊಳ್ಳಲು ಕಾಯ್ದೆ ಹೊರಡಿಸಿವೆ. ಅವುಗಳಲ್ಲಿ ಕೆಲವು ನ್ಯಾಯಾಲಯದಿಂದ ರದ್ದು ಮಾಡಲ್ಪಟ್ಟಿವೆ ಕೂಡಾ. ಇದೊಂದು ಕ್ಲಿಷಕರ ಪ್ರಶ್ನೆಯಾಗಿ ಉಳಿದು ರಾಜ್ಯಗಳನ್ನು ಕಾಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರವೇ ಮುಂದೆ ಬಂದು ಸಾಂವಿಧಾನಿಕ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ಭಾಜಪ ಪಕ್ಷದ ಸರ್ಕಾರವೇ ಇರುವ ಕೆಲವು ರಾಜ್ಯಗಳು ಮೀಸಲಾತಿ ಕೋಟಾವನ್ನು ಶೇ.50ಕ್ಕಿಂತ ಹೆಚ್ಚಿಸಿ, ಕಾಯ್ದೆಯನ್ನು ರೂಪಿಸಿ ಕೇಂದ್ರ ಸರ್ಕಾರದತ್ತ ಮುಖ ಮಾಡಿದ್ದರೂ, ಕೇಂದ್ರ ಸರ್ಕಾರವು ಸೊಪ್ಪು ಹಾಕಲಿಲ್ಲ. ವಿಷಯ ಹೀಗಿರುವಲ್ಲಿ ವಿರೋಧ ಪಕ್ಷಗಳ ಕೈಯಲ್ಲಿ ಸರ್ಕಾರ ಇದ್ದ ರಾಜ್ಯಗಳ ಗತಿ ಏನು? ಕಾನೂನಿನ ತೊಡಕೇ ಇದಕ್ಕೆಲ್ಲ ಕಾರಣ.

ರಾಜ್ಯಗಳು ಅಪೇಕ್ಷೆ ಪಟ್ಟ ರೀತಿಯಲ್ಲಿ, ಮೀಸಲಾತಿಗಾಗಿ ಅವುಗಳು ಹೊರಡಿಸುವ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಬೇಕೆಂದರೂ, ಅಂಥಾ ಕಾಯ್ದೆ ಸಂಸತ್ತಿನ ಎರಡು ಸದನಗಳಲ್ಲಿ ಅಂಗೀಕರಿಸಿ, ರಾಷ್ಟ್ರಪತಿಗಳ ಮುದ್ರೆ ಬಿದ್ದು ಸಂವಿಧಾನ ತಿದ್ದುಪಡಿಯಾಗಲೇಬೇಕು. ಇದು ಕಡು ಕಷ್ಟ. ಒಂದು ವೇಳೆ ಈ ಪ್ರಕ್ರಿಯೆ ಪೂರ್ಣಗೊಂಡರೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆಗೆ ಒಳಗಾಗುವುದನ್ನು ತಪ್ಪಿಸಲಾಗುವುದಿಲ್ಲ.

ಇಂತಹ ಜಟಿಲ ಪರಿಸ್ಥಿತಿಯಲ್ಲಿ, ಮೀಸಲಾತಿ ಕಾಯ್ದೆಯನ್ನು ಅನುಸೂಚಿ 9ಕ್ಕೆ ಸೇರಿಸಲು ಸುಲಭ ಸಾಧ್ಯವೇ ಎಂಬುದನ್ನೂ ಅರಿಯಬೇಕಿದೆ.

KN Lingappa
ಕೆ.ಎನ್. ಲಿಂಗಪ್ಪ
+ posts

ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...