77ರ ಹರೆಯದ ನವೀನ್ ಪಟ್ನಾಯಕ್, ದೇಶ ಕಂಡ ಅತ್ಯಂತ ಸರಳ ರಾಜಕಾರಣಿ. ಈ ಮಟ್ಟದ ಸರಳತೆಯನ್ನು ಸದ್ಯದ ರಾಜಕಾರಣದಲ್ಲಿ, ಯಾವ ಪಕ್ಷದ ನಾಯಕನಲ್ಲೂ ನೋಡಲು ಸಾಧ್ಯವಿಲ್ಲ. ಒಡಿಶಾದಲ್ಲಿ ಮೂರನೇ ಸ್ಥಾನದಲ್ಲಿರುವ ಬಿಜೆಪಿ, ಪಟ್ನಾಯಕ್ ಆರೋಗ್ಯ ಸರಿ ಇಲ್ಲ, ಪಾಂಡ್ಯನ್ ಎಂಬ ಅಧಿಕಾರಿಯನ್ನು ಉತ್ತರಾಧಿಕಾರಿಯನ್ನಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದೆ. ಪಾಂಡ್ಯನ್ ಯಾರು? ಪಟ್ನಾಯಕ್ ನಂತರ ಒಡಿಶಾದ ಉತ್ತರಾಧಿಕಾರಿಯಾಗುತ್ತಾರೆಯೇ? ಇಲ್ಲಿದೆ ಓದಿ…
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರಿಗೆ ಈಗ 77ರ ಹರೆಯ. ಐದು ಬಾರಿ ಮುಖ್ಯಮಂತ್ರಿಯಾಗಿ ಅವಧಿ ಪೂರೈಸಿರುವ ಪಟ್ನಾಯಕ್, ಆರನೇ ಬಾರಿಗೆ ಸಿಎಂ ಆಗಲು ಸಜ್ಜಾಗುತ್ತಿದ್ದಾರೆ. ಆದರೆ ಅವರ ವಯಸ್ಸು ಮುನ್ನೆಲೆಗೆ ಬಂದಿದೆ, ಅನಾರೋಗ್ಯದ ಮಾತುಗಳು ಕೇಳಿಬರುತ್ತಿವೆ. ಇದರೊಂದಿಗೆ ನವೀನ್ ಪಟ್ನಾಯಕ್ ನಂತರ ಯಾರು ಎಂಬುದು ಚರ್ಚೆಯ ಮುಖ್ಯ ವಸ್ತುವಾಗಿದೆ.
ಲೋಕಸಭೆಯ ಜೊತೆಗೆ ವಿಧಾನಸಭಾ ಚುನಾವಣೆಯೂ ನಡೆಯುತ್ತಿರುವ ಒಡಿಶಾದಲ್ಲಿ, ನವೀನ್ ಪಟ್ನಾಯಕ್ ಅವರ ಬಿಜೆಡಿ(ಬಿಜು ಜನತಾದಳ) ಪಕ್ಷ ಈ ಬಾರಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಿದೆ. ಆ ಸ್ಪರ್ಧೆಗೆ ಕಾರಣ ಅವರ ಆತ್ಮವಿಶ್ವಾಸ, ದಕ್ಷ ಆಡಳಿತ ಮತ್ತು ಜನಬೆಂಬಲ.
ಈ ನಡುವೆ, ಚುನಾವಣಾ ರ್‍ಯಾಲಿಗಾಗಿ ಒಡಿಶಾಗೆ ಹೋಗಿದ್ದ ಬಿಜೆಪಿ ನೇತಾರ ನರೇಂದ್ರ ಮೋದಿ, ‘ನವೀನ್ ಪಟ್ನಾಯಕ್ ಅವರಿಗೆ ಅನಾರೋಗ್ಯ ಇದ್ದು, ಇದರ ಹಿಂದೆ ಪಿತೂರಿ ನಡೆಯುತ್ತಿದೆ. ಬಿಜೆಪಿ ಸರ್ಕಾರ ಒಡಿಶಾದಲ್ಲಿ ಅಸ್ತಿತ್ವಕ್ಕೆ ಬಂದಲ್ಲಿ ಈ ಪಿತೂರಿ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲಾಗುವುದು’ ಎಂದಿದ್ದಾರೆ.
ಪ್ರಧಾನಿಯ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ನವೀನ್ ಪಟ್ನಾಯಕ್, ‘ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಅವರ ಉತ್ತಮ ಸ್ನೇಹಿತ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಈ ರೀತಿ ಇದ್ದಾಗ ತಮಗೆ ಅವರು ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಬಹುದಿತ್ತು. ಹೀಗೆ ಸಾರ್ವಜನಿಕವಾಗಿ ಹೇಳುವ ಅಗತ್ಯವಿರಲಿಲ್ಲ. ಅಷ್ಟಕ್ಕೂ ನಾನು ಆರೋಗ್ಯವಾಗಿದ್ದೇನೆ, ಈ ಬಗ್ಗೆ ಚಿಂತೆ ಬೇಡ’ ಎಂದಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಬಿಜೆಪಿ ನಾಯಕರು ಇದನ್ನೇ ಕೆದಕಿ ದೊಡ್ಡದು ಮಾಡುತ್ತಿದ್ದಾರೆ. ಅದರಲ್ಲೂ ಅಮಿತ್ ಶಾ, ‘ಒಡಿಶಾದಲ್ಲಿ ಈಗ ಇರುವುದು ಬಾಬುಶಾಹಿ(ಬ್ಯೂರೋಕ್ರಾಟ್) ಆಡಳಿತ. ಪಾಂಡ್ಯನ್ ಎಂಬ ತಮಿಳುನಾಡಿನ ವ್ಯಕ್ತಿ ಈಗ ಡಿಫ್ಯಾಕ್ಟೋ ಸಿಎಂ, ಪುರಿ ಜಗನ್ನಾಥ ದೇವಸ್ಥಾನದ ಸಂಪತ್ತು ಇನ್ನುಮುಂದೆ ತಮಿಳುನಾಡಿನ ಪಾಲು ಆಗುವುದರಲ್ಲಿ ಅನುಮಾನವಿಲ್ಲ’ ಎಂದು ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಪಟ್ನಾಯಕ್ ಎರಡು(ಇಂಜ್ಲಿ-ಕಂತಬಂಜಿ) ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದು, ಅದರಲ್ಲಿ ಒಂದನ್ನು ಪಾಂಡ್ಯನ್‌ಗೆ ಬಿಟ್ಟುಕೊಡಲಿಕ್ಕಾಗಿಯೇ ಎಂಬ ಅನುಮಾನದ ಬೀಜ ಬಿತ್ತಲಾಗಿದೆ.
ಇದಕ್ಕೂ ಉತ್ತರಿಸಿರುವ ನವೀನ್ ಪಟ್ನಾಯಕ್, ‘ಪಾಂಡ್ಯನ್ ನನ್ನ ಉತ್ತರಾಧಿಕಾರಿಯಲ್ಲ. ನನ್ನ ನಂತರ ಯಾರು ಎನ್ನುವ ವಿಚಾರ ಈಗ ಅನಗತ್ಯ. ಆ ಕುರಿತು ಪಕ್ಷ ಮತ್ತು ಒಡಿಶಾ ಜನ ನಿರ್ಧರಿಸಲಿದ್ದಾರೆ. ಇದೆಲ್ಲ ವಿರೋಧಿಗಳ ಹತಾಶ ಹೇಳಿಕೆ. ನನ್ನ ಬಗೆಗಿನ ಅಪಪ್ರಚಾರ. ಇದು ಹೊಸದಲ್ಲ, ಹಳೇ ಆರೋಪ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ಒಂದಂತೂ ಸ್ಪಷ್ಟ. ಒಡಿಶಾದಲ್ಲಿ ನವೀನ್ ಪಟ್ನಾಯಕ್ ಆಡಳಿತ ಕುರಿತು ಮೋದಿ ಮತ್ತು ಅಮಿತ್ ಶಾಗೆ ಮಾತನಾಡಲು ಏನೂ ಇಲ್ಲ. ಪಟ್ನಾಯಕ್ ವಿರುದ್ಧ ಮಾತನಾಡಿದರೆ, ಬರುವ ಮತಗಳೂ ಬರುವುದಿಲ್ಲ. ಮುಸ್ಲಿಂ, ಮೊಘಲ್, ಮಂಗಳಸೂತ್ರ ಮತ್ತು ಮಾಂಸ ಎಂದರೆ, ಕೇಳುವವರಿಲ್ಲ. ಹಾಗಾಗಿ, ನವೀನ್ ಪಟ್ನಾಯಕ್ ವಯಸ್ಸು, ಆರೋಗ್ಯ, ಉತ್ತರಾಧಿಕಾರಿಯ ಬಗ್ಗೆ ಮಾತನಾಡಿದ್ದಾರೆ. ಇದು ಬಿಜೆಪಿ ನಾಯಕರ ದಿಕ್ಕೆಟ್ಟ ಸ್ಥಿತಿಯ ದ್ಯೋತಕವೇ ಹೊರತು ಬೇರೇನಿಲ್ಲ.
ನವೀನ್ ಪಟ್ನಾಯಕ್, ದೇಶ ಕಂಡ ಅತ್ಯಂತ ಸರಳ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ನರೆತ ಕೂದಲು, ಕ್ಲೀನ್ ಶೇವ್‌ನ ನಗುಮುಖ, ಬಿಳಿ ಜುಬ್ಬಾ, ಪೈಜಾಮ ಮತ್ತು ಕಾಲಿಗೆ ಸಾಧಾರಣ ಚಪ್ಪಲಿ. ಓಡಾಡಲು ಅಂಬಾಸಿಡರ್ ಕಾರು. ಈ ಮಟ್ಟದ ಸರಳತೆಯನ್ನು ಸದ್ಯದ ರಾಜಕಾರಣದಲ್ಲಿ, ಯಾವ ಪಕ್ಷದ ನಾಯಕನಲ್ಲೂ ನೋಡಲು ಸಾಧ್ಯವಿಲ್ಲ.
ದಿನಕ್ಕೆ ನಾಲ್ಕು ಸಲ ಬಟ್ಟೆ ಬದಲಾಯಿಸುವ; ಅಡಿಯಿಂದ ಮುಡಿಯವರೆಗೆ ಬ್ರಾಂಡೆಡ್ ವಸ್ತುಗಳನ್ನು ಬಳಸುವ; ಕೆಲವೇ ನಿಮಿಷಗಳ ಗಣ್ಯರ ಭೇಟಿಗೆ 10 ಲಕ್ಷ ಬೆಲೆಬಾಳುವ ಸೂಟ್ ಧರಿಸುವ; ಒಂದು ಹೊತ್ತಿನ ಊಟಕ್ಕೆ ಸಾವಿರಾರು ರೂ.ಗಳ ಬೆಲೆಯ ತೈವಾನ್ ಅಣಬೆ ತಿನ್ನುವ; ದೇವರ ದರ್ಶನಕ್ಕೆ ಏರೋಪ್ಲೇನ್ ಏರುವ; ವಾಕ್ ಮಾಡಲು ಪಂಚತಾರಾ ಹೋಟೆಲ್ ಲಾನ್ ಬೇಕೆನ್ನುವ; ಸದಾ ಜೊತೆಯಲ್ಲಿ ಹತ್ತಾರು ಕ್ಯಾಮರಾಮನ್‌ಗಳನ್ನು ಕರೆದುಕೊಂಡು ಓಡಾಡುವ ರಾಜಕಾರಣಿಗಳ ನಡುವೆ ನವೀನ್ ಪಟ್ನಾಯಕ್- ನಿಜವಾದ ಜನನಾಯಕ. ಮುಖ್ಯಮಂತ್ರಿಯಾದವರು ಹೀಗೂ ಇರಬಹುದಾ, ಎಂಬುದನ್ನು ಆಚರಣೆಯಲ್ಲಿ ತೋರಿದ ಅಪರೂಪದ ರಾಜಕಾರಣಿ.
ಹಾಗೆ ನೋಡಿದರೆ ನವೀನ್ ಪಟ್ನಾಯಕ್ ಬಡವರಲ್ಲ, ಕಷ್ಟ-ಕೊರತೆಯಲ್ಲಿ ಬೆಳೆದವರಲ್ಲ, ಹಸಿವು-ಅವಮಾನಗಳನ್ನು ಅನುಭವಿಸಿದವರಲ್ಲ. ಅಪ್ಪ ಬಿಜು ಪಟ್ನಾಯಕ್ ಆ ಕಾಲಕ್ಕೇ ಒಡಿಶಾದ ಮುಖ್ಯಮಂತ್ರಿಯಾಗಿದ್ದವರು. ನೆಹರೂಗೆ ಆಪ್ತರಾಗಿದ್ದವರು. ರಕ್ಷಣಾ ಇಲಾಖೆ ಹಾಗೂ ಕೇಂದ್ರ ಸರಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು. ಇಂತಹವರ ಮಗನಾಗಿ 1946ರಲ್ಲಿ ಜನಿಸಿದ ನವೀನ್ ಪಟ್ನಾಯಕ್ ಬಾಲ್ಯದಲ್ಲಿಯೇ ಇಂಗ್ಲಿಷ್ ಸ್ಕೂಲು, ಪ್ರತಿಷ್ಠಿತ ಕಾಲೇಜುಗಳ ಓದು ವಿದ್ಯಾಭ್ಯಾಸಕ್ಕೆಂದು ಒಡಿಶಾದಿಂದ ದೂರವೇ ಉಳಿದವರು. ಹಾಗೆಯೇ ತನ್ನ ಸೌಮ್ಯ ಸ್ವಭಾವಕ್ಕೆ, ಒಂಟಿ ಬದುಕಿಗೆ ಒಗ್ಗುವ ಕತೆ, ಕವಿತೆ ಬರೆದುಕೊಂಡು(ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ) ತನ್ನದೇ ಸಾಹಿತ್ಯ ಲೋಕದಲ್ಲಿ ವಿಹರಿಸುತ್ತಿದ್ದವರು.
1997ರಲ್ಲಿ ಬಿಜು ಪಟ್ನಾಯಕ್ ಆಕಸ್ಮಿಕ ಸಾವನಪ್ಪಿದಾಗ ಅನಿವಾರ್ಯವಾಗಿ ಒಡಿಶಾಗೆ ಬಂದ ನವೀನ್, ಒಲ್ಲದ ಮನಸ್ಸಿನಿಂದಲೇ ರಾಜಕಾರಣಕ್ಕಿಳಿದರು. ಅಪ್ಪನ ಅನುಕಂಪದ ಅಲೆಯ ಮೇಲೆ ಗೆದ್ದು ಮೊದಲ ಬಾರಿಗೆ ಸಂಸದರಾದರು. ವಾಜಪೇಯಿ ಸರಕಾರದಲ್ಲಿ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದರು. 2000ದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆದಾಗ, ತನ್ನದೇ ಆದ ಬಿಜು ಜನತಾದಳ ಎಂಬ ಪ್ರಾದೇಶಿಕ ಪಕ್ಷ ಕಟ್ಟಿ ಪೂರ್ಣಪ್ರಮಾಣದ ರಾಜಕಾರಣಿಯಾದರು. ಮೊದಲಿಗೆ ಬಿಜೆಪಿಯ ಮಿತ್ರಕೂಟದಲ್ಲಿ ಗುರುತಿಸಿಕೊಂಡಿದ್ದ ನವೀನ್, ಎರಡನೇ ಅವಧಿ ಮುಗಿಯುವಷ್ಟರಲ್ಲಿ, 2008ರಲ್ಲಿ, ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರ ಹತ್ಯೆಯಲ್ಲಿ ಬಜರಂಗದಳ ಭಾಗಿಯಾಗಿದ್ದರಿಂದ, ಎನ್‌ಡಿಎ ಸಖ್ಯ ತೊರೆದು ಸ್ವತಂತ್ರವಾಗಿ ಸ್ಪರ್ಧೆಗಿಳಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು
ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ನವೀನ್ ಪಟ್ನಾಯಕ್ ದೇಶದ ವೃತ್ತಿರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಹಣ, ಹಣಕ್ಕಾಗಿ ಅಧಿಕಾರ ಎಂಬ ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗದೆ ಇರುವುದು. ಬಡವರ ಪರ ಮತ್ತು ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟವನ್ನು ಚಾಲ್ತಿಯಲ್ಲಿಟ್ಟಿರುವುದು. ಅಧಿಕಾರ ಇರುವಷ್ಟು ದಿನ ಅಭಿವೃದ್ಧಿಯತ್ತ ಗಮನ ಹರಿಸಿ ಜನರ ಬದುಕನ್ನು ಹಸನುಗೊಳಿಸುವುದು. ಈ ಹಾದಿಯಲ್ಲಿ, ಕಳೆದ 24 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಮಾಡಿದ ಜನಪರ ಕೆಲಸಗಳು; ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿವರ್ಗವನ್ನು ಬಳಸಿಕೊಂಡ ಬಗೆ; ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಾದ ಬದಲಾವಣೆ ಒಡಿಶಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಸ್ವಚ್ಛ-ದಕ್ಷ ಆಡಳಿತ, ಪ್ರಾಮಾಣಿಕ ನಡೆ-ನುಡಿ ನವೀನ್ ಪಟ್ನಾಯಕ್ ಮತ್ತು ಜನರ ನಡುವೆ ಭಾವನಾತ್ಮಕ ಬೆಸುಗೆಯನ್ನು ಬಿಗಿಗೊಳಿಸಿದೆ.
ಕಳೆದ 24 ವರ್ಷಗಳಿಂದ ನವೀನ್ ಪಟ್ನಾಯಕ್‌ರ ಬದುಕಿನೊಂದಿಗೆ ಬೆಸೆದುಕೊಂಡಿರುವ ಒಡಿಶಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಮೋದಿ, ಅಮಿತ್ ಷಾ ಮತ್ತು ದೇವೇಂದ್ರ ಪ್ರಧಾನ್ ಭಾರೀ ರಣತಂತ್ರಗಳನ್ನೇ ಹೆಣೆದಿದ್ದರು. ಆ ತಂತ್ರಗಳು ಕೆಲಸಕ್ಕೆ ಬಾರದಿದ್ದಾಗ, ಮೈತ್ರಿ ಮಾಡಿಕೊಂಡು ಪ್ರಾದೇಶಿಕ ಪಕ್ಷ ಮುಗಿಸಲು ಯತ್ನಿಸಿದ್ದರು. ಮೈತ್ರಿಗೆ ನವೀನ್ ಒಪ್ಪದಿದ್ದಾಗ, ಆರೋಗ್ಯ-ವಯಸ್ಸು ಎಂದು ರಾಗ ಎಳೆಯುತ್ತಿದ್ದಾರೆ. ಅದು ಗಿಟ್ಟುವುದಿಲ್ಲ ಎಂದಾಗ, ಮಾಜಿ ಐಎಎಸ್ ಅಧಿಕಾರಿ, ಹಾಲಿ ನವೀನ್ ಪಟ್ನಾಯಕ್ ಆಪ್ತ ಕಾರ್ಯದರ್ಶಿ ವಿ.ಕೆ. ಪಾಂಡ್ಯನ್ ಬಗ್ಗೆ ‘ತಮಿಳುನಾಡಿನ ವ್ಯಕ್ತಿಯ ಕೈಯಲ್ಲಿ ಅಧಿಕಾರ, ಸಂಪತ್ತಿನ ಲೂಟಿ, ಡಿಫ್ಯಾಕ್ಟೋ ಸಿಎಂ, ಕೈಗೊಂಬೆ ಸರ್ಕಾರ, ಹೊರಗಿನವರು’ ಎಂಬ ಕತೆ ಕಟ್ಟುತ್ತಿದ್ದಾರೆ.

2000 ಬ್ಯಾಚಿನ ಪಂಜಾಬ್ ಕೇಡರಿನ ಐಎಎಸ್ ಅಧಿಕಾರಿ ವಿ.ಕೆ. ಪಾಂಡ್ಯನ್ ಮೂಲತಃ ತಮಿಳುನಾಡಿನವರು. 2000ದಲ್ಲಿ ಒಡಿಶಾ ಮೂಲದ ಐಎಎಸ್ ಅಧಿಕಾರಿ ಸುಜಾತಾ ಅವರನ್ನು ವಿವಾಹವಾದರು. 2005ರಲ್ಲಿ ಮಯೂರ್ಬಂಜ್ ಜಿಲ್ಲೆಗೆ ಜಿಲ್ಲಾಧಿಕಾರಿಯಾಗುವ ಮೂಲಕ ಒಡಿಶಾ ಪ್ರವೇಶಿಸಿದರು. ಪಾಂಡ್ಯನ್ ಅವರ ದಕ್ಷತೆ, ಪ್ರಾಮಾಣಿಕತೆ ಮತ್ತು ಜನಪರ ಕಾರ್ಯಕ್ರಮಗಳು ನವೀನ್ ಪಟ್ನಾಯಕ್ ಗಮನಕ್ಕೆ ಬಂದವು. ಅವರನ್ನು ಆಪ್ತವಯಲದ ಅಧಿಕಾರಿಯನ್ನಾಗಿಸಿದವು. ಅಷ್ಟೇ ಅಲ್ಲ, 2011ರಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡರು. ಅಲ್ಲಿಂದ ಇಲ್ಲಿಯವರೆಗೆ, ನವೀನ್ ಪಟ್ನಾಯಕ್‌ರ ದಿನನಿತ್ಯದ ಕೆಲಸ ಕಾರ್ಯಗಳು ಮತ್ತು ಸರ್ಕಾರದ ಆಗುಹೋಗುಗಳಲ್ಲಿ ಪಾಂಡ್ಯನ್ ಗಮನಕ್ಕೆ ಬರದೇ ಇರುವ ಸಂಗತಿಗಳೇ ಇಲ್ಲ. ಪಟ್ನಾಯಕ್‌ರೊಂದಿಗೆ ಸಂಪುಟ ಸಚಿವರು ಮಾತನಾಡುವಾಗಲೂ ಪಾಂಡ್ಯನ್ ಇದ್ದೇ ಇರಬೇಕು. ಅಷ್ಟರಮಟ್ಟಿಗೆ ಪಾಂಡ್ಯನ್ ಆವರಿಸಿಕೊಂಡಿದ್ದಾರೆ. ಪಟ್ನಾಯಕ್‌ರ ನಂಬಿಕಸ್ಥ ವ್ಯಕ್ತಿ ಎನಿಸಿಕೊಂಡಿದ್ದಾರೆ. ಹೊರಗಿನ ಪ್ರಪಂಚಕ್ಕೆ ಅದು ಒಡಿಶಾದ ಉತ್ತರಾಧಿಕಾರಿಯಾಗಿ ಕಂಡರೆ ಅಚ್ಚರಿಯೇನಲ್ಲ.
ಇದಷ್ಟೇ ಅಲ್ಲ, ಪಾಂಡ್ಯನ್ ಪತ್ನಿ ಸುಜಾತಾ ಒಡಿಶಾದವರಾದ್ದರಿಂದ, ಕಳೆದ 20 ವರ್ಷಗಳಿಂದ ಪತಿ-ಪತ್ನಿ ಒಡಿಶಾದಲ್ಲಿಯೇ ಉದ್ಯೋಗದಲ್ಲಿದ್ದು ಅಲ್ಲಿಯವರೇ ಆಗಿಹೋಗಿದ್ದಾರೆ. ಜೊತೆಗೆ ನವೀನ್ ಪಟ್ನಾಯಕ್ ಸರ್ಕಾರ ಪತ್ನಿ ಸುಜಾತಾಗೆ ಪ್ರತಿಷ್ಠಿತ ಸ್ತ್ರೀಶಕ್ತಿ ಯೋಜನೆಯ ಉಸ್ತುವಾರಿ ವಹಿಸಿರುವುದು, ಅದರಲ್ಲಿ ಅವರು ಉತ್ತಮ ಕೆಲಸ ಮಾಡುತ್ತಿರುವುದು, ಒಡಿಶಾ ಮಹಿಳೆಯರಲ್ಲಿ ವಿಶ್ವಾಸ ಮೂಡಿಸಿದೆ. ಹಾಗೆಯೇ ಪಾಂಡ್ಯನ್ ಕೂಡ ಒಡಿಶಾದ ಒಳಿತಿಗಾಗಿ ಶ್ರಮಿಸುತ್ತಿರುವುದು, ಪಟ್ನಾಯಕ್‌ರ ಸರಳತೆಯನ್ನು ರೂಢಿಸಿಕೊಂಡಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ಎಲ್ಲ ಕಾರಣದಿಂದಾಗಿಯೇ ಪಾಂಡ್ಯನ್ ಕಳೆದ ಆರು ತಿಂಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಡಿ ಸೇರಿ ರಾಜಕಾರಣಿಯಾಗಿದ್ದಾರೆ. ಪಟ್ನಾಯಕ್‌ರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಇದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬೆಂಕಿ ಉಗುಳುತ್ತಿದೆ.
2019ರ ಚುನಾವಣೆಯಲ್ಲಿ ಮೋದಿಯವರ ಅಲೆ ಗಮನಿಸಿದ ನವೀನ್ ಪಟ್ನಾಯಕ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಮೈತ್ರಿಯ ಫಲವಾಗಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಎರಡನೇ ಸ್ಥಾನಕ್ಕೆ ಜಿಗಿದಿತ್ತು. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದನ್ನರಿತ ನವೀನ್ ಪಟ್ನಾಯಕ್, ಈ ಬಾರಿ ಮೈತ್ರಿಗೆ ಮನಸ್ಸು ಮಾಡದೇ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆ ಮೂಲಕ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಅಕಸ್ಮಾತ್, ಮೈತ್ರಿಗೆ ಒಪ್ಪಿದ್ದರೆ, ಬಿಜೆಡಿ ಭವಿಷ್ಯಕ್ಕೆ ಕಂಟಕವಾಗುತ್ತಿತ್ತು. ಪ್ರಾದೇಶಿಕತೆಗೆ ಪೆಟ್ಟು ಬೀಳುತ್ತಿತ್ತು.
ಕಲೆ, ಸಂಸ್ಕೃತಿ ಮತ್ತು ಭಾಷೆಯ ವಿಷಯಕ್ಕೆ ಬಂದರೆ, ಒಡಿಶಾದ ಜನ ಕೊಂಚ ಹೆಚ್ಚೆನ್ನಿಸುವ ಪ್ರಾದೇಶಿಕ ಪ್ರೀತಿಯುಳ್ಳವರು. ಕುತೂಹಲಕರ ವಿಷಯವೆಂದರೆ, ನವೀನ್ ಪಟ್ನಾಯಕ್‌ಗೆ ಒಡಿಯಾ ಭಾಷೆಯೇ ಬರುವುದಿಲ್ಲ. ಅದು ಅವರ ರಾಜಕೀಯ ಬದುಕಿಗೆ ಸಮಸ್ಯೆಯೇ ಆಗಿಲ್ಲ. ಇವತ್ತಿಗೂ ಇಂಗ್ಲಿಷ್‌ನಲ್ಲಿ ಬರೆದುಕೊಂಡು ಒಡಿಯಾ ಭಾಷೆಯಲ್ಲಿ ಭಾಷಣ ಮಾಡುವ ನವೀನ್, ಅಲ್ಲಿಯ ಜನಕ್ಕೆ ಪರಕೀಯರಾಗಿ ಕಂಡಿಲ್ಲ. ಮೆದು ಮಾತಿನ, ಮೃದು ಸ್ವಭಾವದ ನಿಗರ್ವಿ ನವೀನ್‌ರನ್ನು ಇಷ್ಟಪಡಲು ಒಡಿಶಾ ಜನರಿಗೆ ನೂರಾರು ಕಾರಣಗಳಿವೆ. ಸಿಟ್ಟು ತೋರದ, ಸರಳ ಬ್ರಹ್ಮಚಾರಿ ಬದುಕು; ವಿರೋಧಿಗಳನ್ನೂ ಘನತೆ-ಗೌರವದಿಂದ ಕಾಣುವ ವಿಶಾಲ ಹೃದಯವಂತಿಕೆ; ಹಳ್ಳಿಗಾಡಿನ ಜನ, ಅದರಲ್ಲೂ ಬಡ ಆದಿವಾಸಿಗಳು, ರೈತರು, ಮಹಿಳೆಯರಿಗಾಗಿ ಜಾರಿಗೆ ತಂದಿರುವ ಹತ್ತಾರು ಯೋಜನೆಗಳು, 7 ಲಕ್ಷ ಸ್ತ್ರಿ ಸ್ವಸಹಾಯ ಕೇಂದ್ರಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿರುವುದು… ನವೀನ್ ಪಟ್ನಾಯಕ್ ಜನಪ್ರಿಯ ವ್ಯಕ್ತಿಯಾಗಿ ಜನಮಾನಸದಲ್ಲಿ ನೆಲೆಗೊಳಿಸಿವೆ.

ಕಟ್ಟುವ ಕೆಲಸದಲ್ಲಿ, ಸಹಕಾರ ತತ್ವದಲ್ಲಿ ನಂಬಿಕೆ ಇಟ್ಟಿರುವ ನವೀನ್ ಪಟ್ನಾಯಕ್, ‘ಒಡಿಶಾ ರಾಜ್ಯದ ಸಮಗ್ರ ಅಭಿವೃದಿಯೇ ನನ್ನ ಗುರಿ, ನನ್ನನ್ನು ಮತ್ತೆ ಮತ್ತೆ ಹರಸಿ ಆರಿಸಿ ಕಳುಹಿಸುತ್ತಿರುವುದು ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತಿದೆ, ಇದಕ್ಕಾಗಿ ನಾನು ನನ್ನ ರಾಜ್ಯದ ಜನತೆಗೆ ಕೃತಜ್ಞನಾಗಿರಬೇಕು’ ಎಂದಿದ್ದಾರೆ. ಕಳೆದ 24 ವರ್ಷಗಳಿಂದ ನುಡಿದಂತೆ ನಡೆದಿದ್ದಾರೆ. ಬೆಂಕಿಯುಗುಳುವ ಬಿಜೆಪಿಗೆ, ಜಡತ್ವದ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದಿದ್ದಾರೆ. ಸಂತೆಯೊಳಗಿದ್ದೂ ಸಂತನಂತಿರುವ ನವೀನ್ ಪಟ್ನಾಯಕ್‌ರಂತಹ ಪ್ರಾದೇಶಿಕ ಪೈಲ್ವಾನರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ, ರಾಜಕಾರಣಕ್ಕೆ ಬೆಲೆ ಬರಲಿ.




