ಮೋದಿ ಮಸಲತ್ತು | ರೈಲ್ವೇ ಅಪಘಾತಗಳ ಹಿಂದಿದೆಯೇ ಖಾಸಗೀಕರಣದ ಕರಿ ನೆರಳು?

Date:

ಭಾರತದಲ್ಲಿ ಈವರೆಗೂ ಸಂಪೂರ್ಣ ಸರ್ಕಾರಿ ಸ್ವಾಮ್ಯದಲ್ಲಿರುವ ಏಕೈಕ ಸಾರಿಗೆ ವ್ಯವಸ್ಥೆ ರೈಲ್ವೇ. ರೈಲುಗಳಲ್ಲಿ ಸಾಮಾನ್ಯರು ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ರೈಲುಗಳನ್ನು ಕಡಿಮೆ ಮಾಡಲಾಗಿದೆ. ಅಸಮರ್ಪಕ ನಿರ್ವಹಣೆಯ ಮೂಲಕ, ಅಪಘಾತಗಳನ್ನು ಮುಂದಿಟ್ಟುಕೊಂಡು ರೈಲ್ವೇಯನ್ನು ನಮ್ಮಿಂದ ನಡೆಸಲು ಸಾಧ್ಯವಿಲ್ಲ. ಖಾಸಗಿಯವರ ಮೂಲಕ ನಿರ್ವಹಣೆ ಮಾಡಿಸುತ್ತೇವೆಂದು ನಿಧಾನವಾಗಿ ಖಾಸಗೀಕರಣ ಮಾಡಲು ಯತ್ನಗಳು ನಡೆಯುತ್ತಿವೆಯೇ? ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮೋದಿ ಸರ್ಕಾರ ಹಳಿ ತಪ್ಪಿಸುತ್ತಿದೆಯೇ?

ಇತ್ತೀಚೆಗೆ ದೇಶದಲ್ಲಿ ರೈಲು ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 13 ದಿನಗಳಲ್ಲಿ ಏಳು ರೈಲುಗಳು ಹಳಿ ತಪ್ಪಿ, ಅಪಘಾತಕ್ಕೀಡಾಗಿವೆ. ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ನಾನಾ ಭಾಗಗಳಲ್ಲಿ ಭೀಕರ ರೈಲು ಅಪಘಾತಗಳೂ ಸಂಭವಿಸಿವೆ. ಹಲವರು ಸಾವನ್ನಪ್ಪಿದ್ದಾರೆ. ಪ್ರಪಂಚದಲ್ಲೇ ಅತೀ ಹೆಚ್ಚು ರೈಲ್ವೇ ಜಾಲ ಹೊಂದಿರುವ ದೇಶಗಳ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ಭಾರತ, ರೈಲ್ವೇ ಅಪಘಾತಗಳಲ್ಲಿ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಲ್ಲ, ಭಾರತ ರೈಲ್ವೇ ಅಪಘಾತಗಳ ರಾಜಧಾನಿಯಾಗುತ್ತಿದೆ. ಇದು, ರೈಲು ಪ್ರಯಾಣಿಕರು ಮತ್ತು ರೈಲ್ವೆ ಕಾರ್ಮಿಕರನ್ನ ಆತಂಕಕ್ಕೀಡುಮಾಡಿದೆ. ರೈಲ್ವೆಯ ಅಸಮರ್ಪಕ ನಿರ್ವಹಣೆಯು ಖಾಸಗೀಕರಣದ ಹಿಂದಿನ ಹುನ್ನಾರವನ್ನೂ ಒತ್ತಿ ಹೇಳುತ್ತಿದೆ.

ಅಂದಹಾಗೆ, ಭಾರತೀಯ ರೈಲ್ವೇಯಲ್ಲಿ ಘರ್ಷಣೆಗಳು, ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಲೇ ಇವೆ. ಅದರಲ್ಲೂ ಕಳೆದ ಕೆಲವು ದಿನಗಳಲ್ಲಿ ರೈಲ್ವೇ ಅಪಘಾತಗಳು ಸಮರೋಪಾದಿಯಲ್ಲಿ, ಸರಣಿಯಾಗಿ ನಡೆಯುತ್ತಿವೆ. ಅಪಾರ ಸಾವು-ನೋವುಗಳು ಸಂಭವಿಸುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ನಷ್ಟವಾಗುತ್ತಿದೆ. ಈ ಅಪಘಾತಗಳಿಗೆ ನಿಜವಾದ ಕಾರಣಗಳನ್ನ ನಿರ್ಧರಿಸುವ ಮೊದಲೇ ಲೊಕೊ ಪೈಲಟ್‌ಗಳು, ಸ್ಟೇಷನ್‌ ಮಾಸ್ಟರ್‌ಗಳು, ರೈಲು ನಿರ್ವಾಹಕರು, ಸಿಗ್ನಲಿಂಗ್ ಸಿಬ್ಬಂದಿ ಸೇರಿದಂತೆ ರೈಲ್ವೇ ನೌಕರರ ಮೇಲೆ ಸಚಿವರು, ಅಧಿಕಾರಿಗಳು ಗೂಬೆ ಕೂರಿಸಿ, ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ದೂಷಿಸುತ್ತಿದ್ದಾರೆ.

ರೈಲು ಕಾಂಚನಜುಂಗಾ

2024ರ ಜೂನ್ 17ರಂದು ನಡೆದ ಪಶ್ಚಿಮ ಬಂಗಾಳದ ರಂಗಪಾಣಿ ರೈಲು ನಿಲ್ದಾಣದ ಬಳಿ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಢಿಕ್ಕಿ ಹೊಡೆಯಿತು. ದುರ್ಘಟನೆಯಲ್ಲಿ ಗೂಡ್ಸ್ ರೈಲಿನ ಲೋಕೋ ಪೈಲಟ್ (ಎಲ್‌ಪಿ), ಎಕ್ಸ್‌ಪ್ರೆಸ್ ರೈಲಿನ ರೈಲು ನಿರ್ವಾಹಕ ಮತ್ತು 14 ಪ್ರಯಾಣಿಕರು ಸಾವನ್ನಪ್ಪಿದರು ಮತ್ತು ಸುಮಾರು 50 ಮಂದಿ ಗಾಯಗೊಂಡರು. ಅಪಘಾತದ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರು (CRS) ತನ್ನ ಅಧಿಕೃತ ವರದಿ ನೀಡುವ ಮೊದಲೇ, ರೈಲ್ವೆ ಮಂಡಳಿಯ ಅಧ್ಯಕ್ಷರು ದುರ್ಘಟನೆಗೆ ಗೂಡ್ಸ್‌ ರೈಲಿನ ಮೃತ ಲೋಕೋ ಪೈಲಟ್‌ಅನ್ನು ದೂಷಿಸಿದರು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2023ರ ಅಕ್ಟೋಬರ್ 29ರಂದು ಆಂಧ್ರಪ್ರದೇಶದ ವಿಜಯನಗರಂನಲ್ಲಿ ಎರಡು ಪ್ಯಾಸೆಂಜರ್ ರೈಲುಗಳು ಡಿಕ್ಕಿ ಹೊಡೆದವು. ಆಗ, ಘಟನೆಗೆ ಲೋಕೋ ಪೈಲೆಟ್ ಮತ್ತು ಅಸಿಸ್ಟೆಂಟ್ ಲೊಕೊ ಪೈಲಟ್ ಕ್ರಿಕೆಟ್ ನೋಡುತ್ತಿದ್ದದ್ದೇ ಕಾರಣ ಎಂದು ರೈಲ್ವೆ ಸಚಿವರು ಹೇಳಿಕೆ ನೀಡಿದರು. ಆದ್ರೆ, ನಂತರ ಬಂದ ಅಧಿಕೃತ ವರದಿ ಸಚಿವರ ಹೇಳಿಕೆಯನ್ನು ಅಲ್ಲಗಳೆದವು.

ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತಕ್ಕೀಡಾದಾಗ ಆ ಭಾಗದ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಹಾಳಾಗಿತ್ತು. ಆ ಸಿಗ್ನಲಿಂಗ್‌ ಸಿಸ್ಟಮ್‌ಅನ್ನು ಸೀಮೆನ್ಸ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಿರ್ವಹಿಸುತ್ತಿತ್ತು. ಆದರೆ, ಆ ಕಂಪನಿಯ ಪ್ರಮಾದದಿಂದ ದುರ್ಘಟನೆ ನಡೆಯಿತು ಅಂತ ರೈಲ್ವೇ ಸಚಿವರು ಹೇಳಲು ಧೈರ್ಯ ಮಾಡಲಿಲ್ಲ. ಇಂತಹ ಅನೇಕ ಅಪಘಾತಗಳು ವ್ಯವಸ್ಥಿತ ವೈಫಲ್ಯಗಳಿಂದ ಸಂಭವಿಸಿವೆ ಅನ್ನೋದು ನೈಜ ಸಂಗತಿ. ಆದರೆ ಘಟನೆಗಳಿಗೆ ಅಧೀನ ಉದ್ಯೋಗಿಗಳ ದೂಷಿಸಲಾಗುತ್ತಿದೆ. ಇಂತಹ ಸುಳ್ಳು ಹೇಳಿಕೆಗಳು, ದೂಷಣೆಗಳು ಶಿಕ್ಷಾರ್ಹ ಅಪರಾಧವಾಗಬೇಕು. ಆಗ ಮಾತ್ರ, ಸತ್ಯ ಬಯಲಾಗಲಿಕ್ಕೆ ಸಾಧ್ಯ.

ರೈಲು ಸಿಗ್ನಲ್

ಇನ್ನು, ಈ ಹೊಸ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ. ಹೊಸ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ದೋಷ ಉಂಟಾದಾಗ ಹೇಗೆ ಕಾರ್ಯನಿರ್ವಹಿಸಬೇಕು ಅನ್ನೋದರ ಬಗ್ಗೆ ಲೋಕೋ ಪೈಲಟ್ ಮತ್ತು ಅಸಿಸ್ಟಂಟ್ ಲೋಕೋ ಪೈಲಟ್‌ಗಳಿಗೆ ತರಬೇತಿ ನೀಡಬೇಕು. ಆದರೆ, ಅಂತಹ ತರಬೇತಿ ನೀಡಲಾಗಿಲ್ಲ. ಕೇವಲ, ದಕ್ಷಿಣ ರೈಲ್ವೇಯಲ್ಲಿ ಮಾತ್ರ ವಿಶೇಷ ಓರಿಯಂಟೇಶನ್ ಕೋರ್ಸ್ ಅನ್ನು ಮೂರು ದಿನಗಳ ಕಾಲ ನಡೆಸಲಾಗುತ್ತಿದೆ. ಈ ತರಬೇತಿ ಕೂಡ, ಕರ್ತವ್ಯದ ಸಮಯದಲ್ಲಿ ಲೋಕೋ ಪೈಲಟ್‌ ಸೂಚನೆಗಳನ್ನು ನೀಡುವುದಕ್ಕೆ ತರಬೇತಿಯು ಸೀಮಿತವಾಗಿದೆ. ಪರಿಣಾಮವಾಗಿ, ಲೋಕೋ ಪೈಲಟ್‌ಗಳು ಮತ್ತು ಅಸಿಸ್ಟಂಟ್ ಲೋಕೋ ಪೈಲಟ್‌ಗಳು ಹೊಸ ಸಿಗ್ನಲಿಂಗ್ ಸಿಸ್ಟಮ್ ಮತ್ತು ಸಿಗ್ನಲಿಂಗ್ ಸಿಸ್ಟಮ್ ವಿಫಲವಾದಾಗ ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಜ್ಞಾನದ ಕೊರತೆ ಇದೆ. ಸಿಗ್ನಲಿಂಗ್ ವ್ಯವಸ್ಥೆಯು ವಿಫಲವಾದಾಗ, ಲೋಕೋ ಪೈಲಟ್‌ಗೆ ಮಾರ್ಗದರ್ಶನ ನೀಡಲು T/A912, T/912, T/D 912, T/B409 ಇತ್ಯಾದಿ ಬಹು ವಿಧದ ಫಾರ್ಮ್‌ಗಳನ್ನು ನೀಡಲಾಗುತ್ತದೆ. ಆದರೆ, ಈ ಫಾರ್ಮ್‌ಗಳಲ್ಲಿ ಯಾವುದನ್ನು ಯಾವ ಸಂದರ್ಭದಲ್ಲಿ ಬಳಸಬೇಕು ಮತ್ತು ಸ್ವೀಕರಿಸಬೇಕು ಎಂಬುದರ ಬಗ್ಗೆ ಸ್ಟೇಷನ್ ಮಾಸ್ಟರ್‌ಗಳು ಮತ್ತು ಲೋಕೋ ಪೈಲಟ್‌ಗಳಿಗೆ ಸ್ಪಷ್ಟತೆ ಇಲ್ಲ ಎಂದು ಹೇಳಲಾಗಿದೆ.

ಆಶ್ಚರ್ಯಕರ ಸಂಗತಿ ಎಂದರೆ, ಅತ್ಯುನ್ನತ ರೈಲ್ವೇ ಅಧಿಕಾರಿಗಳು ಕೂಡ ರೈಲುಗಳ ಸಂಚಾರಕ್ಕೆ ಅಗತ್ಯವಿರುವ ವಿವಿಧ ನಿಯಮಗಳನ್ನು ಅರ್ಥಮಾಡಿಕೊಂಡಿರುವುದಿಲ್ಲ. ಆ ಕಾರಣದಿಂದಲೇ ಕಾಂಚನಜುಂಗಾ ರೈಲು ಅಪಘಾತವಾದಾಗ, ಜೂನ್ 19ರಂದು ನಡೆದ ಪೂರ್ವ ರೈಲ್ವೇಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ‘T/A912 ಫಾರ್ಮ್‌ ವಿತರಣೆಯನ್ನು ಅಮಾನತುಗೊಳಿಸಲಾಗುವುದು’ ಎಂದು ಸುತ್ತೋಲೆ ಹೊರಡಿಸಲಾಯಿತು. ಆದರೆ, ಮರುದಿನ, ಜೂನ್ 20ರಂದು T/A-912ಅನ್ನು ಅಮಾನತುಗೊಳಿಸಿದ ಆದೇಶ ತಪ್ಪಾಗಿದೆ. ಆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಹೊಸ ಸುತ್ತೋಲೆ ಪ್ರಕಟವಾಯಿತು.

ರೈಲ್ವೇ ಸಿಗ್ನಲಿಂಗ್

ಇನ್ನು, ರೈಲ್ವೇ ಅಪಘಾತಗಳಿಗೆ ಸಿಗ್ನಲಿಂಗ್ ವ್ಯವಸ್ಥೆಯು ಬಹುಮುಖ್ಯ ಕಾರಣವಾಗಿದ್ದರೂ, ಅದರ ಜೊತೆಗೆ ಬೆಸೆದುಕೊಂಡಂತೆ ಇನ್ನೂ ನಾನಾ ಕಾರಣಗಳಿವೆ. ಅದರಲ್ಲಿ, ರೈಲ್ವೇ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದು ಮತ್ತು ಇರುವ ಉದ್ಯೋಗಿಗಳಿಗೆ ಅತಿಯಾದ ಕೆಲಸ ನೀಡುವುದು ಪ್ರಮುಖವಾದದ್ದು. ರೈಲ್ವೇ ಇಲಾಖೆಯಲ್ಲಿ 10 ಲಕ್ಷ ಹುದ್ದೆಗಳು ಖಾಲಿ ಇವೆ ಎನ್ನಲಾಗಿದೆ. ಅವುಗಳಲ್ಲಿ, 1.52 ಲಕ್ಷ ಸುರಕ್ಷತಾ ವರ್ಗದ ಹುದ್ದೆಗಳು ಮತ್ತು 18,799 ಅಸಿಸ್ಟಂಟ್ ಲೋಕೋ ಪೈಲಟ್‌ ಹುದ್ದೆಗಳು.

ಈ ಪ್ರಮಾಣದ ಉದ್ಯೋಗಿಗಳ ಕೊರತೆಯ ಪರಿಣಾಮವಾಗಿ ಇರುವ ಉದ್ಯೋಗಿಗಳು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದೆ. ಲೋಕೋ ಪೈಲಟ್‌ಗಳು ವಾರದಲ್ಲಿ 104 ಗಂಟೆಗಳ ಬದಲಾಗಿ, 124 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದೆ.

ಕಾಂಚನಜುಂಗಾ ಅಪಘಾತವನ್ನೇ ನೋಡಿ, ಅಪಘಾತಕ್ಕೀಡಾದ ಗೂಡ್ಸ್‌ ರೈಲಿನ ಲೋಕೋ ಪೈಲಟ್ ಸತತ ಮೂರು ರಾತ್ರಿ ಕರ್ತವ್ಯ ನಿರ್ವಹಿಸಿ, ನಾಲ್ಕನೇ ರಾತ್ರಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆದರೆ, ಅವರನ್ನು ಮಧ್ಯರಾತ್ರಿ 2 ಗಂಟೆಗೆ ಎಬ್ಬಿಸಿ, ಆ ಗೂಡ್ಸ್‌ ರೈಲಿನ ಉಸ್ತುವಾರಿ ನೋಡಿಕೊಳ್ಳುವಂತೆ ಹೇಳಲಾಗಿತ್ತು. ಬಲವಂತಕ್ಕೆ ಮಣಿದು ಅವರು ಎಂಜಿನ್ ಏರಬೇಕಾಯಿತು. ಅಂತೆಯೇ, 2024ರ ಜೂನ್ 3ರಂದು ಪಂಜಾಬ್‌ನ ಅಂಬಾಲಾದಲ್ಲಿ ಎರಡು ಗೂಡ್ಸ್‌ ರೈಲುಗಳ ನಡುವೆ ಅಪಘಾತವಾಗಿತ್ತು. ಅದರಲ್ಲಿ ಒಂದು ಗೂಡ್ಸ್‌ ರೈಲಿನ ಲೋಕೋ ಪೈಲಟ್ ಸತತ 4ನೇ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಲೋಕೋ ಪೈಲಟ್

ಬಹು ಸುರಕ್ಷತಾ ಸಮಿತಿಯ ಶಿಫಾರಸ್ಸುಗಳ ಪ್ರಕಾರ, ಲೋಕೋ ಪೈಲಟ್‌ಗಳನ್ನು ಸತತ ಎರಡು ರಾತ್ರಿ ಕರ್ತವ್ಯ ನಿರ್ವಹಿಸುವಂತೆ ಕೇಳಬಾರದು. ಆದರೆ, ರೈಲ್ವೇ ಅಧಿಕಾರಿಗಳು ಈ ಶಿಫಾರಸುಗಳನ್ನು ನಿರ್ಲಕ್ಷಿಸಿ, ಲೋಕೋ ಪೈಲಟ್‌ಗಳು ಮತ್ತು ಅಸಿಸ್ಟಂಟ್‌ ಲೋಕೋ ಪೈಲಟ್‌ಗಳಿಂದ ಸತತ ಎರಡಕ್ಕಿಂತ ಹೆಚ್ಚು ರಾತ್ರಿ ಕೆಲಸ ಮಾಡಿಸುತ್ತಿದ್ದಾರೆ. ಇದು, ಅವರಿಗೆ ಅಗತ್ಯ ವಿಶ್ರಾಂತಿ ದೊರೆಯದೆ, ಅಪಘಾತಗಳಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ, ವಿಶ್ರಾಂತಿ ಕೊಡದೆ ಕೆಲಸ ಮಾಡಿಸುವುದನ್ನು ವಿರೋಧಿಸಿ ಆಲ್ ಇಂಡಿಯಾ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಷನ್ ​​(AILRSA) 2024ರ ಜೂನ್ 1ರಿಂದ 30ರವರೆಗೆ ಹೋರಾಟ ನಡೆಸಿತು. ಈ ಪ್ರತಿಭಟನೆಯನ್ನು ಪ್ರಕಟಿಸದಂತೆ ರೈಲ್ವೇಯ ಉನ್ನತ ಅಧಿಕಾರಿಗಳು ಮಾಧ್ಯಮಗಳ ಮೇಲೆ ಒತ್ತಡ ಹಾಕಿದರು ಎಂಬ ಆರೋಪವೂ ಇದೆ.

ಇದಲ್ಲದೆ, ರೈಲ್ವೇ ಅಪಘಾತಗಳನ್ನು ತಡೆಯಲು ‘ಕವಚ್’ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ, ಈ ತಂತ್ರಜ್ಞಾನದ ಅನುಷ್ಠಾನದಲ್ಲಿ ಪ್ರಗತಿ ಕುಂಠಿತಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಈ ತಂತ್ರಜ್ಞಾನವನ್ನು ಭಾರತೀಯ ರೈಲ್ವೇಯ 92,952 ಕಿ.ಮೀಗಳ ಪೈಕಿ ಕೇವಲ 1,500 ಕಿಮೀ ಮತ್ತು 14,500 ಇಂಜಿನ್‌ಗಳ ಪೈಕಿ ಕೇವಲ 65 ಇಂಜಿನ್‌ಗಳಲ್ಲಿ ಮಾತ್ರ ಅಳವಡಿಸಲಾಗಿದೆ. ಹೀಗೆಯೇ ಮುಂದುವರೆದರೆ, ಇಡೀ ದೇಶಾದ್ಯಂತ ಈ ತಂತ್ರಜ್ಞಾನವನ್ನು ಅಳವಡಿಸಲು ಕನಿಷ್ಠ 46 ವರ್ಷಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ.

kavach 1

ಅಂದಹಾಗೆ, ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, ಈ ಹಿಂದೆ ರೈಲ್ವೇಗಾಗಿಯೇ ಪತ್ರೇಕ ಬಜೆಟ್‌ ಮಂಡಿಸಲಾಗುತ್ತಿತ್ತು. ಆದರೆ, ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ, 2016 ಸೆಪ್ಟೆಂಬರ್ 12ರಂದು ರೈಲ್ವೇ ಬಜೆಟ್‌ಅನ್ನು ರದ್ದುಗೊಳಿಸಿತು. ರೈಲ್ವೆ ಬಜೆಟ್‌ಅನ್ನೂ ಸಾಮಾನ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸಿತು. ಆ ಮೂಲಕ, ರೈಲ್ವೇಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿಶೇಷ ಪ್ರಾತಿನಿಧ್ಯವನ್ನು ಕಸಿದುಕೊಂಡಿತು.

ಪ್ರತ್ಯೇಕ ಬಜೆಟ್‌ ರದ್ದು, ಅಸಮರ್ಪಕ ಸಿಗ್ನಲಿಂಗ್, ಹೆಚ್ಚು ಹುದ್ದೆಗಳನ್ನು ಖಾಲಿ ಉಳಿಸಿರುವುದು, ಇರುವ ಉದ್ಯೋಗಿಗಳ ಮೇಲೆ  ಹೆಚ್ಚಿನ ಕೆಲಸಕ್ಕೆ ಒತ್ತು ಕೊಡುವುದು ಹಾಗೂ ಕವಚ್ ತಂತ್ರಜ್ಞಾನದ ಅನುಷ್ಠಾನದಲ್ಲಿ ವಿಳಂಬ – ಇದೆಲ್ಲವೂ ಏನನ್ನು ಸೂಚಿಸುತ್ತದೆ. ಕೇಂದ್ರವು ಉದ್ದೇಶಪೂರ್ವಕವಾಗಿಯೇ ರೈಲ್ವೇಯನ್ನು ನಿರ್ಲಕ್ಷಿಸುತ್ತಿದೆ ಎಂದು ಒತ್ತಿ ಹೇಳುತ್ತದೆ.

ಸದ್ಯ, ಭಾರತದಲ್ಲಿ ಈವರೆಗೂ ಸಂಪೂರ್ಣ ಸರ್ಕಾರಿ ಸ್ವಾಮ್ಯದಲ್ಲಿರುವ ಏಕೈಕ ಸಾರಿಗೆ ವ್ಯವಸ್ಥೆ ರೈಲ್ವೇ. ಈ ರೈಲ್ವೇಯನ್ನೂ ಖಾಸಗೀಕರಣ ಮಾಡುವ ಹುನ್ನಾರವನ್ನು ಮೋದಿ ಅವರ ಬಿಜೆಪಿ ಸರ್ಕಾರ ಹೆಣೆಯುತ್ತಲೇ ಇದೆ ಎಂಬ ಆರೋಪಗಳೂ ಇವೆ. ಹಾಗಾಗಿಯೇ, ರೈಲುಗಳಲ್ಲಿ ಸಾಮಾನ್ಯರು ಪ್ರಯಾಣಿಸುತ್ತಿದ್ದ ಸಾಮಾನ್ಯ (ಜನರಲ್) ಬೋಗಿಗಳನ್ನು ಕಡಿತಗೊಳಿಸಿ, ಪ್ಯಾಸೆಂಜರ್ ರೈಲುಗಳನ್ನು ಕಡಿಮೆ ಮಾಡಿ, ರೈಲ್ವೇಯನ್ನೂ ಹಣದ ಉದ್ದಿಮೆಯನ್ನಾಗಿ ಮಾಡಲಾಗುತ್ತಿದೆ. ಜೊತೆಗೆ, ಇಂತಹ ಅಸಮರ್ಪಕ ನಿರ್ವಹಣೆಯ ಮೂಲಕ, ಅಪಘಾತಗಳ ಮೂಲಕ ರೈಲ್ವೆಯನ್ನು ನಮ್ಮಿಂದ ನಡೆಸಲು ಸಾಧ್ಯವಿಲ್ಲ. ಇದನ್ನು ಖಾಸಗಿಯವರ ಮೂಲಕ ನಿರ್ವಹಣೆ ಮಾಡಿಸುತ್ತೇವೆಂದು ನಿಧಾನವಾಗಿ ಖಾಸಗೀಕರಣ ಮಾಡಲು, ಸಾಮಾನ್ಯರ ಕೈಗೆಟುಕದಂತೆ ಮಾಡಲು ನಿರಂತರ ಯತ್ನಗಳು ನಡೆಯುತ್ತಿವೆ.

ಅದರ ಭಾಗವಾಗಿ, ಈಗಾಗಲೇ, ರೈಲ್ವೇ ತನ್ನದೇ ಆದ ದೊಡ್ಡ ಮತ್ತು ಆಧುನಿಕ ಸಿಗ್ನಲಿಂಗ್ ಕಾರ್ಯಾಗಾರಗಳನ್ನು ಮುಚ್ಚಲು ಮತ್ತು ಎಲ್ಲ ಕೆಲಸವನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲು ಪ್ರಯತ್ನಿಸುತ್ತಿದೆ. ಸಿಗ್ನಲಿಂಗ್ ಕೆಲಸವನ್ನು ಹೊರಗುತ್ತಿಗೆಗೆ ನೀಡಲಾಗುತ್ತಿದೆ. ಈ ಸಿಗ್ನಲಿಂಗ್ ಸಿಸ್ಟಮ್‌ಗಳನ್ನು ಸ್ಥಾಪಿಸುವಲ್ಲಿ ಹಲವಾರು ಕಂಪನಿಗಳು ತೊಡಗಿಸಿಕೊಂಡಿವೆ. ಜೊತೆಗೆ, ಈಗಾಗಲೇ ಒಂದು ಖಾಸಗೀ ರೈಲು ಕೂಡ ಭಾರತೀಯ ರೈಲ್ವೇ ಹಳಿಗಳ ಮೇಲೆ ಓಡುತ್ತಿದೆ. ಹೀಗೆಯೇ ಮುಂದುವರೆದರೆ, ಮುಂದಿನ ದಿನಗಳಲ್ಲಿ ಎಲ್ಲ ರೈಲುಗಳು ಖಾಸಗಿ ಉದ್ದಿಮೆದಾರರ ರೈಲುಗಳಾಗಿ ಮಾರ್ಪಡುತ್ತವೆ. ನಾವೆಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಬಡವರು, ಮಧ್ಯಮ ವರ್ಗದವರು ತಮ್ಮ ಪ್ರಯಾಣಕ್ಕಾಗಿ ಹೆಚ್ಚಾಗಿ ಅವಲಂಬಿಸಿರುವ ರೈಲ್ವೇಯನ್ನು ಸಾರ್ವಜನಿಕ ಉದ್ದಿಮೆಯಾಗಿಯೇ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅಗತ್ಯ, ಅನಿವಾರ್ಯತೆ ಎದುರಾಗುತ್ತಿದೆ. ಅದಕ್ಕೆ ನಾವೆಲ್ಲರೂ ಸಿದ್ದರಾಗಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...