18 ಶಾಸಕರ ಅಮಾನತು ವಾಪಸು ಸಂಸದೀಯ ವಿರೋಧಿ ನಡೆಯೇ?

Date:

ಸಭಾಧ್ಯಕ್ಷರಿಗೆ ರೂಲಿಂಗ್ ಅಧಿಕಾರವಿದೆ. ಸದನದ ಗಮನಕ್ಕೆ ತಾರದೆ ಬದಲಾವಣೆ ಮಾಡಲು ಅಧಿಕಾರವಿಲ್ಲ. ಸದನದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸದನದ ಹೊರಗೆ ಹಿಂಪಡೆಯಲು ಯಾರಿಗೂ ಅಧಿಕಾರವಿಲ್ಲ.

ಕರ್ನಾಟಕ ಬಜೆಟ್‌ ಅಧಿವೇಶನದ ಕೊನೆ ದಿನ(ಮಾರ್ಚ್‌ 21) ಕಲಾಪಗಳಿಗೆ ಅಡ್ಡಿಪಡಿಸಿದ ಕಾರಣಕ್ಕೆ ಬಿಜೆಪಿಯ 18 ಮಂದಿ ಶಾಸಕರನ್ನು ಆರು ತಿಂಗಳು ಅಮಾನತು ಮಾಡಿ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಆದೇಶಿಸಿದ್ದರು. ವಿರೋಧ ಪಕ್ಷದ ನಾಯಕ ಆರ್‌ ಅಶೋಕ ಮತ್ತು ಅಮಾನತುಗೊಂಡಿದ್ದ ಬಿಜೆಪಿ ಶಾಸಕರು ಅಮಾನತು ವಾಪಸಿಗೆ ಆಗ್ರಹಿಸಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಮಾನತು ರೂಲಿಂಗ್‌ಅನ್ನು ಹಿಂಪಡೆಯಲಾಗಿದೆ. ಸಭಾಧ್ಯಕ್ಷರು ಅಮಾನತು ಆದೇಶವನ್ನು ಹಿಂಪಡೆದಿರುವುದು ಸಂಸದೀಯ ವಿರೋಧಿ ನಡೆಯೆಂದು ಮಾಜಿ ಸಂಸದ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.

6 ತಿಂಗಳವರೆಗೆ 18 ಮಂದಿ ಶಾಸಕರ ಅಮಾನತು ಆಗಿದೆ. ಸಂವಿಧಾನದ ಸೆಕ್ಷನ್ 348ರ ಪ್ರಕಾರ ಕಾನೂನು ಮತ್ತು ಸಂಸದೀಯ ಸಚಿವರು ಪ್ರಸ್ತಾವನೆಯನ್ನು ಸದನಕ್ಕೆ ಮಂಡಿಸಬೇಕು. ಸದನದಲ್ಲಿ ಚರ್ಚೆಯಾಗಿ ಅಭಿಪ್ರಾಯ ಕ್ರೋಡೀಕರಿಸಿ ಶಾಸಕರ ಅಮಾನತು ವಾಪಸು ಪಡೆಯಬೇಕಿತ್ತು. ಆದರೆ, ಸಭಾಧ್ಯಕ್ಷರು, ಸಿಎಂ, ಡಿಸಿಎಂ, ಕಾನೂನು ಮತ್ತು ಸಂಸದೀಯ ಸಚಿವರು, ವಿಪಕ್ಷ ನಾಯಕರು ಇವರೇ ನಾಲ್ಕೈದು ಜನ ಸೇರಿ ಅಮಾನತು ಆದೇಶವನ್ನು ವಾಪಸ್ ಪಡೆದಿರುವುದು ನಿಯಮ‌ ಉಲ್ಲಂಘನೆಯಾಗಿದೆ. ಸೆಕ್ಷನ್ 348ರ ನಿಯಮದ ಅಡಿ ಅಮಾನತು ಮಾಡಲಾಗಿತ್ತು. ಇದೀಗ ಯಾವ ಕಾನೂನು ಅಡಿ ವಾಪಸ್ ಪಡೆಯಲಾಗಿದೆ? ಸದನದಲ್ಲಿ ಆದ ಅಮಾನತನ್ನು ಹೊರಗಡೆ ಕೂತು ವಾಪಸ್ ಹೇಗೆ ಪಡೆಯುತ್ತಾರೆ ಎಂದು ಆಯನೂರು ಪ್ರಶ್ನಿಸಿದ್ದಾರೆ.

ಸಭಾಧ್ಯಕ್ಷರಿಗೆ ರೂಲಿಂಗ್ ಅಧಿಕಾರವಿದೆ. ಸದನದ ಗಮನಕ್ಕೆ ತಾರದೆ ಬದಲಾವಣೆ ಮಾಡಲು ಅಧಿಕಾರವಿಲ್ಲ. ಸದನದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸದನದ ಹೊರಗೆ ಹಿಂಪಡೆಯಲು ಯಾರಿಗೂ ಅಧಿಕಾರವಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಎಚ್ಚರಿಕೆಯಿಂದ ಇರಬೇಕಿತ್ತು. ಆದರೆ ಇಲ್ಲಿ ಇವರೆಲ್ಲ ಎಡವಿದ್ದಾರೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯದರ್ಶಿಗಳು ಸದನದ ಒಳಗೆ ಅಮಾನತು ವಾಪಸ್ ಪಡೆಯಬೇಕೆಂದು ಹೇಳಿದರೂ ಓವರ್ ರೂಲಿಂಗ್ ಮಾಡಿ ಅಮಾನತು ವಾಪಸ್ ಪಡೆದಿರುವುದು ಸರಿಯಾದ ನಡೆಯಲ್ಲ. ಅಶೋಕ್, ಸಿಎಂ, ಕಾನೂನು ಸಚಿವರು ನಾವಿದ್ದೇವೆ ಮಾಡಿ ಎಂದಿದ್ದಾರೆ. ಸದನದ ಭಾಗ ಆದವರು ಸದನಕ್ಕಿಂತ ಹೆಚ್ಚಾಗಿ ಹೇಗೆ ನಡೆದುಕೊಂಡಿದ್ದಾರೆ. ಇವರು ಸದನದಿಂದ ಉತ್ಪತ್ತಿಯಾದವರು, ಇವರಿಂದ ಸದನವಲ್ಲ. ಹಾಗಾಗಿ ಸೋಮವಾರ ತೆಗೆದುಕೊಂಡ ತೀರ್ಮಾನ ಸದನಕ್ಕೆ, ಸಂವಿಧಾನಕ್ಕೆ ಮಾಡಿರುವ ಅವಮಾನ.‌

ಆಯನೂರು ಮಂಜುನಾಥ್ 2
ಮಾಜಿ ಸಂಸದ ಆಯನೂರು ಮಂಜುನಾಥ್

ಅರ್ಜೆಂಟಾಗಿ ಯಾಕೆ ತೀರ್ಮಾನಿಸಲಾಯಿತು? ಸದನ ಕರೆಯಲಾಗಿದೆಯಾ? ಶಾಸಕರಾಗಿ ಕರ್ತವ್ಯ ನಿರ್ವಹಿಸಬಹುದಾಗಿತ್ತು‌. ಸದನದ ಕಾರ್ಯಕಲಾಪಕ್ಕೆ ಅಮಾನತಾಗಿತ್ತು. ತುಟ್ಟಿಭತ್ಯೆ ಮಾತ್ರ ಅಮಾನತು ಶಾಸಕರಿಗೆ ನಷ್ಟವಾಗಿತ್ತು. ವಿಪಕ್ಷ ನಾಯಕರ ಒತ್ತಡಕ್ಕೆ ಮಣಿದು ಸರ್ಕಾರ ಶಾಸಕರ ಅಮಾನತು ವಾಪಸ್ ಪಡೆಯಲಾಗಿದೆ. ಕ್ರಮ ಅನುಸರಿಸದೆ ಅಪಚಾರವಾಗಿದೆ. ಬ್ಯಾಡ್ ಪ್ರೊಸಿಡಿಂಗ್ ಆಗಿ ಮುಂದುವರೆಯಲಿದೆ. ಕೊನೆಯ ಸಾಲಿನಲ್ಲಿ ‘ಘಟನೋತ್ತರ ಅನುಮತಿ ಪಡೆಯಲಾಗುವುದು’ ಎಂದು ಉಲ್ಲೇಖಿಸಲಾಗಿದೆ. ಆದರೆ ಹೀಗೆ ಮಾಡಲು ಬರುವುದಿಲ್ಲ. ಇದನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ತಂದರೆ ಅಪಚಾರವಾಗಲಿದೆ.  

ಸಂವಿಧಾನದ ಆಶಯಕ್ಕೆ ಚ್ಯುತಿ ಬಾರದಂತೆ ಅಮಾನತುಗೊಂಡ ಶಾಸಕರ ಕರ್ತವ್ಯವನ್ನು ಜಾರಿ ಮಾಡಲು ಸಡಿಲ ಮಾಡಬಹುದಿತ್ತು. ಮುಂದಿನ ಸದನದಲ್ಲಿ ಅಮಾನತನ್ನು ಕೈಗೆ ತೆಗೆದುಕೊಂಡು ವಾಪಸ್ ಪಡೆಯಬೇಕಿತ್ತು. ಶಾಸಕರು ಕಾನೂನುಬದ್ಧ ಅಮಾನತು ವಾಪಸ್ ಪಡೆಯುವರೆಗೂ ಸದನಕ್ಕೆ ಬರುವುದಿಲ್ಲವೆಂದು 18 ಮಂದಿ ಶಾಸಕರು ನಡೆದುಕೊಳ್ಳಬೇಕು.  

ನಿಯಮ ಪಾಲಿಸದಿದ್ದರೆ ದಂಗೆಗಳಾಗುತ್ತವೆ. ಹಾಗಾಗಿ ಸೋಮವಾರದ ತೀರ್ಮಾನ ಪುನರ್ ವಿಮರ್ಶೆಯಾಗಬೇಕು. ಸರಿಯಾದ ಕ್ರಮದಲ್ಲಿ ಅಮಾನತು ರದ್ದನ್ನು ಪಾಲಿಸಿ ಸದನಕ್ಕೆ ಒಳಗೆ ಹೋಗಿ. ದೀರ್ಘಾವಧಿ ಅಮಾನತು ಸರಿಪಡಿಸಲು ಮತ್ತೊಂದು ತಪ್ಪು ಮಾಡುವುದು ಸರಿಯಲ್ಲ. ಸದನದಲ್ಲಿಯೇ ಅಮಾನತು ವಾಪಸ್ ಪಡೆಯಬೇಕು ಎಂದು ಆಯನೂರು ಮಂಜುನಾಥ್‌ ಮಾಹಿತಿ ನೀಡಿದ್ದಾರೆ. ‌

ವಿ ಆರ್‌ ಸುದರ್ಶನ್

ಮಾಜಿ ಎಂಎಲ್‌ಸಿ ವಿ ಆರ್‌ ಸುದರ್ಶನ್‌ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕರ್ನಾಟಕ ವಿಧಾನ ಮಂಡಲಕ್ಕೆ ವಿಶೇಷವಾದ ಮಹತ್ವವಿದೆ. ಕರ್ನಾಟಕದ ಪರಂಪರೆಗೂ ಮಹತ್ವವಿದೆ. ಪ್ರಜಾಪ್ರಭುತ್ವ ಜಾರಿಗೆ ಬರುವ ಮುನ್ನವೂ ಮೈಸೂರು ಸಂಸ್ಥಾನದಲ್ಲಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿತ್ತು. ಹಾಗಾಗಿ ಸದನದಲ್ಲಿ ನಡೆದಿರುವ ಘಟನೆ ಕರ್ನಾಟಕದ ವಿಧಾನ ಮಂಡಲದ ಘನತೆಯನ್ನು ಕಡಿಮೆ ಮಾಡಿದೆ. ಸ್ಪೀಕರ್‌ ಅವರಿಗೆ ಅಂದರೆ ಆ ಪೀಠಕ್ಕೆ ಛೀಮಾರಿ ಹಾಕಿರುವುದು ಖಂಡನೀಯ” ಎಂದರು.

ಈಗ ಒಂದು ಕೋರ್ಟ್‌ಗೆ ಹೋದರೆ ಕೈ ಮುಗಿದು ನಮಿಸಿ ತಲೆಬಾಗಿ ಒಳ ಹೋಗುತ್ತೇವೆ. ಇದೊಂದು ನಿಯಮ ಪದ್ದತಿ. ಹಾಗೆಯೇ ಶಾಸಕರು ಸದನಕ್ಕೆ ಸಲ್ಲಿಸುವಂತಹ ಗೌರವವೂ ಮುಖ್ಯ. ಅಭಿಪ್ರಾಯಗಳು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಒಂದು ವಿಧಾನಸಭೆ ಅಥವಾ ವಿಧಾನ ಪರಿಷತ್‌ ಯಾವುದೇ ಇರಲಿ ಆಡಳಿತ ಸದಸ್ಯರು ಎಷ್ಟು ಮುಖ್ಯವೋ, ವಿರೋಧ ಪಕ್ಷದ ನಾಯಕರೂ ಕೂಡ ಅಷ್ಟೇ ಮುಖ್ಯರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಜಂಟಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಸರ್ಕಾರ, ಪ್ರೊಸಿಡಿಂಗ್ ಆಫೀಸರ್ಸ್‌, ಸದನದ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರೆಲ್ಲರ ಜವಾಬ್ದಾರಿಯಾಗಿರುತ್ತದೆ. ಒಂದು ಸದನದ ಕೆಲಸ ನಡೆಯಬೇಕಾದರೆ ಇಷ್ಟೂ ಮಂದಿ ತಮ್ಮ ಕಾರ್ಯ ಮತ್ತು ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದರ ಮೇಲೆ ಆ ಸದನದ ಮಹತ್ವ ಮತ್ತು ಅವತ್ತು ನಡೆಸಿದಂತಹ ವಿಚಾರಗಳು ಮುಖ್ಯವಾಗುತ್ತವೆ.

ಶಾಸಕರ ಬಹಳ ಅತಿರೇಕದ ವರ್ತನೆ ಹಾಗೂ ಪೀಠಕ್ಕೆ ಅಗೌರವನ್ನು ತೋರಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈ ರೀತಿ ವರ್ತನೆಗಳನ್ನು ಆಡಳಿತ ಪಕ್ಷದ ಶಾಸಕರು ಮಾಡಿದರೂ ತಪ್ಪೇ, ವಿರೋಧ ಪಕ್ಷದ ಶಾಸಕರು ಮಾಡಿದರೂ ತಪ್ಪೇ. ಆಡಳಿತ ಪಕ್ಷ, ವಿರೋಧ ಪಕ್ಷವೆಂದು ಸಂವಿಧಾನದಲ್ಲಿ ಹೇಳುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿ ಸದನದ ಸದಸ್ಯರು ಅಂತಲೇ ಹೇಳಲಾಗುತ್ತದೆ. ವಿಧಾನಸಭೆ ಸದಸ್ಯರು, ವಿಧಾನ ಪರಿಷತ್‌ ಸದಸ್ಯರೆಂದೇ ಹೇಳಲಾಗುತ್ತದೆ.

ಸದನದಲ್ಲಿ ಕಲಾಪಗಳು ನಡೆಯುವುದರಿಂದ ಆಡಳಿತ ಪಕ್ಷದ ಜತೆಗೆ ಒಂದು ವಿರೋಧ ಪಕ್ಷವೂ ಪ್ರಮುಖ ಸ್ಥಾನದಲ್ಲಿ ಇರಬೇಕು ಅಂತ ಮಾಡಿಕೊಂಡಿರುವ ನಿಯಮವಾಗಿದೆ.

ಶಾಸಕರ ತಪ್ಪುಗಳ ಅರಿವಾಗಿ, ವಿಷಾದ ವ್ಯಕ್ತಪಡಿಸಿದ್ದು, ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ಸ್ಪೀಕರ್‌ಗೆ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರದ ಮುಖ್ಯಸ್ಥರಾದ ರಾಜ್ಯಪಾಲರಿಗೂ‌ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು, ಸರ್ಕಾರ, ಸ್ಪೀಕರ್‌, ಮುಖ್ಯಮಂತ್ರಿ ಮತ್ತು ಕಾನೂನು ಸಚಿವರಿಗೆ ಪತ್ರ ಬರೆದು, ‘ಶಾಸಕರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, 18 ಶಾಸಕರ ಅಮಾನತು ಹಿಂಪಡೆಯಬೇಕು. ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಅನುಗುಣವಾಗಿ ಜನಪ್ರತಿನಿಧಿಗಳಾದ ಶಾಸಕರು ಪ್ರತಿದಿನ ಸಾರ್ವಜನಿಕರ ಕೆಲಸಗಳನ್ನು ಮಾಡಬೇಕಾಗಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು’ ಅಂತ ಸೂಚನೆ ನೀಡಿದ್ದರು. ಈ ಆದೇಶವೂ ಮುಖ್ಯವಾಗುತ್ತದೆ.

ಸ್ಪೀಕರ್‌ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದಲ್ಲ, ಆದರೂ ಅವರಿಗೆ ಅಧಿಕಾರವಿದೆ. ಅವರು ಹೇಳುವ ಆದೇಶ, ಮಾಡುವಂಥ ನಿರ್ಣಯಗಳು ಮುಖ್ಯವಾಗುತ್ತವೆ. ರಾಜ್ಯಪಾಲರ ಆದೇಶದ ಮೇರೆಗೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಡೆಪ್ಯುಟಿ ಸ್ಪೀಕರ್‌, ಕಾನೂನು ಸಚಿವರೆಲ್ಲರನ್ನೂ ಸೇರಿಸಿಕೊಂಡು ಸಭೆ ನಡೆಸಿದ್ದಾರೆ.

ಬಿಜೆಪಿ ಶಾಸಕರ ತಪ್ಪುಗಳ ಅರಿವಾಗಿ, ‘ಸದನದಲ್ಲಿ ಹೀಗಾಗಬಾರದಿತ್ತು. ಪೀಠಕ್ಕೆ ಅವಮಾನ ಮಾಡುವಂತಹ ಉದ್ದೇಶ ನಮಗಿರಲಿಲ್ಲ. ಅಚಾನಕ್‌ ಆಗಿ ನಡೆದು ಹೋಯಿತು. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ’ ಅಂತ ವಿಷಾದ ವ್ಯಕ್ತಪಡಿಸಿರುವುದಾಗಿ ಸ್ಪೀಕರ್‌ ಹೇಳಿದ್ದಾರೆ. ಈ ಬೆಳವಣಿಗೆಗಳನ್ನು ಮತ್ತೆ ಸದನದ ಗಮನಕ್ಕೆ ತರುತ್ತಾರೆ, ತರಲೇಬೇಕು. ಈಗಾಗಲೇ ಅಧಿವೇಶನ ನಡೆದು 2 ತಿಂಗಳಾಗಿದೆ. ಇನ್ನು ಮಾನ್ಸೂನ್‌ ಅಧಿವೇಶನ ನಡೆಯುವುದು ಜುಲೈನಲ್ಲಿ. ಹಾಗಾಗಿ ಅಲ್ಲಿಯವರೆಗೂ ಕಾಯುವುದು ಬೇಡ. ಇದರಿಂದ ಶಾಸಕರ ಕೆಲಸ ಕಾರ್ಯಗಳು ಕುಂಠಿತವಾಗುತ್ತವೆಂದು ನಿರ್ಧರಿಸಿದ್ದಾರೆ. ಇದನ್ನು ಅವರು ಸದನಕ್ಕೆ ತಿಳಿಸಬೇಕು.

ಕೆಲವು ಸಂದರ್ಭ ಸನ್ನಿವೇಶಗಳ ಆಧಾರದ ಮೇಲೆಯೂ ಕೆಲಸ ಕಾರ್ಯಗಳನ್ನು ನಡೆಸಬೇಕಾಗುತ್ತದೆ. ಕಾನೂನು, ನಿಯಮ, ಸಂವಿಧಾನದ ಜತೆಗೆ ಸಂಪ್ರದಾಯಗಳೂ ಮುಖ್ಯವಾಗುತ್ತವೆ. ಸದನದಲ್ಲಿ ಅಚಾನಕ್‌ ಏನಾದರೂ ವ್ಯತ್ಯಾಸಗಳು ನಡೆದರೆ ಸ್ಪೀಕರ್‌ ಕೂಡ ಕರೆದು ಮಾತನಾಡಿ, ಸದನ ನಡೆಸಲು ಸಹಕಾರ ಮಾಡಿಕೊಡುವಂತೆ ಸಭೆ ನಡೆಸುತ್ತಾರೆ.

“ಸರ್ಕಾರದ ವಿಪಕ್ಷದ ನಾಯಕರೇ ಅವರನ್ನೆಲ್ಲ ಪ್ರತಿನಿಧಿಸುವ ಕಾರಣ, ಆರ್‌ ಅಶೋಕ್‌ ಅವರೇ ಎಲ್ಲರಲ್ಲೂ ಮನವಿ ಮಾಡಿದ್ದಾರೆ. ಶಾಸಕರೂ ವಿಷಾದ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿಗಳು‌ ರೂಲಿಂಗ್‌ ಪಾರ್ಟಿ ಅಂತ ಅಲ್ಲ, ಇಡೀ ಸದನದ ಪ್ರಮುಖರು(ಲೀಡರ್‌ ಆಫ್‌ ದಿ ಹೌಸ್‌). ಅಶೋಕ್‌ ಅವರು ಸದನದ ವಿಪಕ್ಷ ನಾಯಕರು‌(ಲೀಡರ್‌ ಆಫ್ ದಿ ಅಪೋಸಿಷನ್). ವಿಪಕ್ಷದ ಸ್ಥಾನದಲ್ಲಿ ಕೂರುವ ಎಲ್ಲ ಶಾಸಕರನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ ಸದನದ ಶಾಸಕರುಗಳನ್ನು ಪ್ರತಿನಿಧಿಸುವಂತಹ ಪ್ರಮುಖರೆಲ್ಲರೂ ಕೂಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರ ಅಮಾನತು ವಾಪಸು ನಿರ್ಣಯ ಕೈಗೊಂಡಿದ್ದಾರೆ. ಹಾಗಾಗಿ ಇದು ಬಹುದೊಡ್ಡ ತಪ್ಪೆಂದು ನನಗನಿಸುವುದಿಲ್ಲ. ಈ ನಿರ್ಣಯ ಸರಿಯಿದೆ” ಎಂದು ವಿ ಆರ್‌ ಸುದರ್ಶನ್‌ ಹೇಳಿದರು.

ಸರ್ಕಾರದ ಹಂತದಲ್ಲಿ ಕೆಲವು ಬಾರಿ ಕಾನೂನು ಮಾಡಲು ಆಗುವುದಿಲ್ಲ, ಅಜ್ಞಾಪತ್ರ(ಆರ್ಡಿನೆನ್ಸ್‌) ಮಾಡುವುದಿಲ್ಲವೇ? ಬಳಿಕ ಸದನಕ್ಕೆ ತಂದು ಮಂಜೂರು(ratify) ಮಾಡಿಕೊಳ್ಳುವುದಿಲ್ಲವಾ, ಹಾಗೆಯೇ ಈ ನಿರ್ಣಯವನ್ನು ಸದನದ ಗಮನಕ್ಕೆ ತಂದು ಅನುಮತಿ ತೆಗೆದುಕೊಳ್ಳುತ್ತಾರೆ. ‌

‌’ಓವರ್ ರೂಲಿಂಗ್ ಮಾಡಿ ಅಮಾನತು ವಾಪಸ್ ಪಡೆದಿರುವುದು ಸರಿಯಾದ ನಡೆಯಲ್ಲ. ನಿಯಮ ಉಲ್ಲಂಘನೆಯಾಗಿದೆ, ಕ್ರಮ ಅನುಸರಿಸದೆ ಅಪಚಾರವಾಗಿದೆ’ ಎಂಬ ಆಯನೂರ ಅವರ ಹೇಳಿಕೆಗೆ ಉತ್ತರಿಸಿರುವ ಸುದರ್ಶನ್, “ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಆಯನೂರು ಅವರು, ಉತ್ತಮ ಸಂಸದರಾಗಿದ್ದವರು, ವಿಧಾನಸಭೆ, ವಿಧಾನ ಪರಿಷತ್‌, ರಾಜ್ಯಸಭೆ, ಲೋಕಸಭೆಗಳಲ್ಲಿ ಕೆಲಸ ಮಾಡಿರುವಂಥವರು. ಅವರ ಅನುಭವದ ಹಿನ್ನೆಲೆಯಲ್ಲಿಯೂ ಅವರು ಹೇಳಿದ್ದಾರೆ. ಅದಕ್ಕೆ ನಾನು ಕಾಮೆಂಟ್‌ ಮಾಡುವುದಿಲ್ಲ” ಎಂದಿದ್ದಾರೆ.

ಘಟನೆ ಹಿನ್ನೆಲೆ

ಬಜೆಟ್‌ ಅಧಿವೇಶನದ ಕೊನೆ ದಿನ(ಮಾರ್ಚ್‌ 21) ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರನ್ನು ‘ಮಧುಬಲೆ’ಗೆ (ಹನಿ ಟ್ರ್ಯಾಪ್‌) ಸಿಲುಕಿಸಲು ಯತ್ನಿಸಲಾಗಿದೆ ಎಂಬ ಆರೋಪದ ಕುರಿತು ತನಿಖೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಗದ್ದಲ ನಡೆಸಿ, ಸಭಾಧ್ಯಕ್ಷರ ಪೀಠದವರೆಗೂ ನುಗ್ಗಿ ಹೋಗಿ, ಅವರ ಮುಖದ ಮೇಲೆ ಕಾಗದದ ಚೂರುಗಳನ್ನು ಎಸೆದು, ಕಲಾಪಗಳಿಗೆ ಅಡ್ಡಿಪಡಿಸಿದ್ದರು. ಈ ಕಾರಣಕ್ಕೆ 18 ಮಂದಿ ಶಾಸಕರನ್ನು ಅಮಾನತು ಮಾಡಲಾಗಿತ್ತು.

ಬಜೆಟ್‌ ಅಧಿವೇಶನದ ಕೊನೆಯ ದಿನ ನಡೆದ ಗದ್ದಲದ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಸಭಾಧ್ಯಕ್ಷ ಯು ಟಿ ಖಾದರ್‌ ಅವರು, ’18 ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ’ ಎಂದು ಪ್ರಕಟಿಸಿದ್ದರು. ಅಲ್ಲದೆ, ಸಭಾಧ್ಯಕ್ಷರು ಹೆಸರಿಸಿರುವ ಶಾಸಕರನ್ನು ಆರು ತಿಂಗಳು ಸದನದಿಂದ ಅಮಾನತುಗೊಳಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ ನಿರ್ಣಯ ಮಂಡಿಸಿದ್ದರು. ಅದನ್ನು ಧ್ವನಿಮತಕ್ಕೆ ಹಾಕಿದ್ದ ಸಭಾಧ್ಯಕ್ಷರು, ನಿರ್ಣಯ ಅಂಗೀಕಾರವಾಗುತ್ತಿದ್ದಂತೆಯೇ ’18 ಶಾಸಕರನ್ನು ಆರು ತಿಂಗಳಿಗೆ ಸದನದಿಂದ ಅಮಾನತು ಮಾಡಲಾಗಿದೆ’ ಎಂದು ರೂಲಿಂಗ್ ನೀಡಿದ್ದರು.

ಶಾಸಕರ ಅಮಾನತು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ಅಮಾನತು ವಾಪಸಿಗೆ ವಿಧಾನಸಭಾಧ್ಯಕ್ಷರಿಗೆ ಸೂಚನೆ ನೀಡಬೇಕು ಮತ್ತು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋಟ್‌ ಅವರಿಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಆರ್‌ ಅಶೋಕ ನೇತೃತ್ವದ ಶಾಸಕರ ನಿಯೋಗ ಮನವಿ ಸಲ್ಲಿಸಿತ್ತು.

ಮನವಿಗೆ ಸ್ಪಂದಿಸಿದ್ದ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಕಾನೂನು ಸಚಿವರಿಗೆ ಪತ್ರ ಬರೆದು, ‘ಶಾಸಕರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, 18 ಶಾಸಕರ ಅಮಾನತು ಹಿಂಪಡೆಯಬೇಕು. ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಅನುಗುಣವಾಗಿ ಜನಪ್ರತಿನಿಧಿಗಳಾದ ಶಾಸಕರು ಪ್ರತಿದಿನ ಸಾರ್ವಜನಿಕರ ಕೆಲಸಗಳನ್ನು ಮಾಡಬೇಕಾಗಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಸೂಚನೆ ನೀಡಿದ್ದರು.

ಜತೆಗೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮತ್ತು ಅಮಾನತುಗೊಂಡಿದ್ದ ಬಿಜೆಪಿ ಶಾಸಕರು ಅಮಾನತು ವಾಪಸಿಗೆ ಆಗ್ರಹಿಸಿ ಖಾದರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಬಿಜೆಪಿಯ 18 ಮಂದಿ ಶಾಸಕರನ್ನು ಆರು ತಿಂಗಳು ಅಮಾನತು ಮಾಡಿ ನೀಡಿದ್ದ ರೂಲಿಂಗ್‌ ಅನ್ನು ಭಾನುವಾರ ಹಿಂಪಡೆಯಲಾಗಿದೆ.

ಈ ಕುರಿತು ಚರ್ಚಿಸಲು ಸ್ಪೀಕರ್ ಅವರು ವಿಧಾನಸೌಧದಲ್ಲಿ ಭಾನುವಾರ ಕರೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಆರ್ ಅಶೋಕ ಭಾಗವಹಿಸಿದ್ದರು. ಈ ಸಭೆಯಲ್ಲಿ ಸ್ಪೀಕರ್ ನಿರ್ಣಯ ಪ್ರಕಟಿಸಿದರು.

“ಶಾಸಕರ ಅಮಾನತು ಅವಧಿಯಲ್ಲಿ ಎರಡು ತಿಂಗಳು ಕಳೆದಿವೆ. ಅಮಾನತುಗೊಂಡಿರುವ ಶಾಸಕರು ಈ ಅವಧಿಯಲ್ಲಿ ತಮ್ಮ ನಡೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಸಂವಿಧಾನಾತ್ಮಕವಾಗಿ ಸದನದ ಕಲಾಪಗಳಲ್ಲಿ ಸಂಯಮದಿಂದ ನಡೆದುಕೊಳ್ಳುವುದಾಗಿ ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಇದಕ್ಕೆ ಸಹಮತ ಸೂಚಿಸಿದರು. ಅಮಾನತು ನಿರ್ಣಯ ಹಿಂತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಮುಂದಿನ ಅಧಿವೇಶನದಲ್ಲಿ ಸದನದ ಘಟನೋತ್ತರ ಅನುಮೋದನೆ ಪಡೆಯಲೂ ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ವಿಧಾನಸಭೆ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ? ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿ 43 ಕ್ರಿಮಿನಲ್‌ ಪ್ರಕರಣ ಹಿಂಪಡೆದ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್‌

“ಅಮಾನತುಗೊಂಡಿದ್ದ ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸಲು ಮತ್ತು ವಿಧಾನ ಮಂಡಲ/ವಿಧಾನಸಭೆಯ ಸ್ಥಾಯಿ ಸಮಿತಿಗಳ ಸಭೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ. ವಿಧಾನಸಭೆ ಕಾರ್ಯಕಲಾಪಗಳ ಪಟ್ಟಿಯಲ್ಲಿ ಈ ಶಾಸಕರ ಹೆಸರಿನಲ್ಲಿ ಯಾವುದೇ ವಿಷಯ ನಮೂದು ಮಾಡಬಾರದು. ಶಾಸಕರು ಅಮಾನತು ಅವಧಿಯಲ್ಲಿ ನೀಡುವ ಯಾವುದೇ ಸೂಚನೆ ಪರಿಗಣಿಸುವುದಿಲ್ಲ. ಸಮಿತಿಗಳ ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ. ದಿನಭತ್ಯೆ ಪಡೆಯಲೂ ಅರ್ಹರಿರುವುದಿಲ್ಲ ಎಂಬ ನಿರ್ಬಂಧಗಳು ತಕ್ಷಣದಿಂದ ರದ್ದುಗೊಳ್ಳಲಿವೆ” ಎಂದೂ ಕೂಡ ಅವರು ತಿಳಿಸಿದ್ದಾರೆ.

ಅಮಾನತುಗೊಂಡಿದ್ದ ಶಾಸಕರು

ಅಮಾನತುಗೊಂಡಿದ್ದ ದೊಡ್ಡನಗೌಡ ಪಾಟೀಲ(ವಿರೋಧ ಪಕ್ಷದ ಮುಖ್ಯ ಸಚೇತಕರು), ಡಾ. ಸಿ ಎನ್‌ ಅಶ್ವತ್ಥ ನಾರಾಯಣ, ಎಸ್ ಆರ್ ವಿಶ್ವನಾಥ್, ಬೈರತಿ ಬಸವರಾಜು, ಎಸ್ ಎನ್ ಚನ್ನಬಸಪ್ಪ, ಉಮಾನಾಥ ಕೋಟ್ಯಾನ್, ಬಿ ಸುರೇಶ್ ಗೌಡ, ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಸಿ ಕೆ ರಾಮಮೂರ್ತಿ, ಯಶ್‌ ಪಾಲ್ ಸುವರ್ಣ, ಹರೀಶ್ ಬಿ ಪಿ, ಡಾ. ಭರತ್ ಶೆಟ್ಟಿ, ಬಸವರಾಜ ಮತ್ತಿಮಡು, ಧೀರಜ್ ಮುನಿರಾಜು, ಮುನಿರತ್ನ, ಡಾ. ಚಂದ್ರು ಲಮಾಣಿ ಎಂಬ 18 ಮಂದಿ ಶಾಸಕರ ಅಮಾನತು ವಾಪಸು ಪಡೆಯಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...