ಇದೆಲ್ಲ ಆದದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಂದು ಮಾತಿನಿಂದ ಅಂತಲೂ ಹೇಳಬಹುದು. ಅಥವಾ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾಗುವ ಸಂದರ್ಭಗಳು ಯಾರು ಯಾರಿಗೆ ಹೇಗೆಲ್ಲ ಲಾಭ-ನಷ್ಟಕ್ಕೆ ಕಾರಣವಾಗುತ್ತದೆ ಎಂದು ಕೂಡ ಅರ್ಥೈಸಬಹುದು.
ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಲ್ಲಿಗೆ ತೆರಳಿದ್ದಾರೆ. ದಿಲ್ಲಿಗೆ ಎಂದಾಕ್ಷಣ, ಇಲ್ಲಿ- ರಾಜ್ಯ ರಾಜಕೀಯ ವಲಯದಲ್ಲಿ- ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿಯಾಗುತ್ತದೆ. ಅದಕ್ಕೆ ಸುದ್ದಿಮಾಧ್ಯಮಗಳಿಂದ- ಅದರಲ್ಲೂ ದೃಶ್ಯ ಮಾಧ್ಯಮಗಳಿಂದ ಅದನ್ನು ಗುಡ್ಡ ಮಾಡಲಾಗುತ್ತದೆ.
ಡಿ.ಕೆ. ಶಿವಕುಮಾರ್ ಅವರ ದಿಲ್ಲಿ ಭೇಟಿ ಅಸ್ಸಾಂ ಚುನಾವಣೆಗೆ ಸಂಬಂಧಿಸಿರಬಹುದು; ಇಲಾಖೆಗೆ ಸಂಬಂಧಿಸಿ ಕೇಂದ್ರದ ಸಚಿವರನ್ನು ಭೇಟಿಯಾಗಲಿರಬಹುದು; ಮೈಸೂರಿನಲ್ಲಿ ಮಂಗಳವಾರ ರಾಹುಲ್ ಗಾಂಧಿಯವರ ಜೊತೆ ಪ್ರತ್ಯೇಕ ಚರ್ಚೆ ಮಾಡಿದ್ದರ ಮುಂದುವರಿಕೆಯಾಗಿರಬಹುದು; ಅಧಿಕಾರ ಹಂಚಿಕೆಯ ಕುರಿತಾಗಿರಬಹುದು. ಆ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನ, ಮತ್ತೊಂದು ಪ್ರಾರ್ಥನೆಯೂ ಆಗಿರಬಹುದು.
ಒಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರತಿಯೊಂದು ನಡೆಯೂ ಕುತೂಹಲ ಕೆರಳಿಸುತ್ತಿದೆ. ಅವರ ನುಡಿಯೇ ಅವರ ಪ್ರಯತ್ನಕ್ಕೆ-ಪ್ರಾರ್ಥನೆಗೆ ತೊಡಕಾಗಿರಬಹುದು, ತಣ್ಣೀರೆರಚುತ್ತಲೂ ಇರಬಹುದು ಎಂಬ ಮಾತು ಕೂಡ ಈಗ ಕೇಳಿಬರುತ್ತಿದೆ.
ಇದನ್ನು ಓದಿದ್ದೀರಾ?: ಜನಕೇಂದ್ರಿತ ಪರಿಸರವಾದಿಯಾಗಿದ್ದವರು ಮಾಧವ ಗಾಡ್ಗೀಳ್
ಮೊನ್ನೆ, ಡಿ.ಕೆ. ಶಿವಕುಮಾರ್, ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದಿದ್ದ ಮನರೇಗಾ ಯೋಜನೆಯನ್ನು ಬದಲಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಿ-ರಾಮ್-ಜಿ ಕಾಯ್ದೆ ವಿರುದ್ಧ ಮಾತನಾಡುತ್ತ, ಸಾರ್ವಜನಿಕ ಚರ್ಚೆಗೆ ಬರುವಂತೆ ಬಿಜೆಪಿಗೆ ಸವಾಲು ಹಾಕಿದರು.

ಈ ಸವಾಲನ್ನು ಸ್ವೀಕರಿಸಬೇಕಾದ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರು, ಒಂದು ಪತ್ರಿಕಾಗೋಷ್ಠಿ ಕರೆದು ಡಿಕೆಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ತಮ್ಮ ಕರ್ತವ್ಯ ಮುಗಿಯಿತು ಎಂದು ಸುಮ್ಮನಾದರು. ಸುಮ್ಮನಾಗದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಹೆಜ್ಜೆ ಮುಂದೆ ಹೋದರು. ಬುಧವಾರ ವಿಶೇಷ ಸಚಿವ ಸಂಪುಟ ಕರೆದರು.
ಮನರೇಗಾ ಬದಲಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಿ-ರಾಮ್-ಜಿ ಎಂಬ ಹೊಸ ಕಾಯ್ದೆಯನ್ನು ವಿರೋದಿಸಿ, ಜನವರಿ 22ರಿಂದ 31ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ಕರೆಯುವ ಷಡ್ಯಂತ್ರ ಹೆಣೆದರು. ಆ ಅಧಿವೇಶನದಲ್ಲಿ ಮನರೇಗಾ ವಿಷಯದ ಮೇಲೆ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು. ಇದೇ ರೀತಿಯ ನಿಲುವು ತಳೆದ ಗುಜರಾತ್ ರಾಜ್ಯವನ್ನು ಸಮರ್ಥನೆಗೆ ಬಳಸಿಕೊಂಡರು.
ಮನರೇಗಾ ಕಾಯ್ದೆ ಬದಲಿಸಿದ್ದು, ಗಾಂಧಿ ಬದಲಿಗೆ ರಾಮನನ್ನು ಮುನ್ನಲೆಗೆ ತಂದದ್ದು, ಕೇಂದ್ರ-ರಾಜ್ಯಗಳ ಅನುದಾನದಲ್ಲಿ ಏರು-ಪೇರು ಮಾಡಿದ್ದು, ಕೇಂದ್ರ ಹೇಳಿದ ಕೆಲಸ ಮಾಡಬೇಕೆಂದು ಅಧಿಕಾರ ವಿಕೇಂದ್ರೀಕರಣಕ್ಕೆ ಪೆಟ್ಟು ಕೊಟ್ಟದ್ದು, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದದ್ದು… ಇದೆಲ್ಲವನ್ನು ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿರುವುದು ಸಾಂವಿಧಾನಿಕವಾಗಿ ಸರಿಯಾಗಿಯೇ ಇದೆ. ರಾಜ್ಯ ಸರ್ಕಾರದ ಈ ನಡೆಯಲ್ಲಿ ಯಾವ ತಪ್ಪೂ ಇಲ್ಲದಾಗಿದೆ.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ನಡೆ ರಾಜಕೀಯ ವಲಯದಲ್ಲಿ, ಚಾಣಾಕ್ಷ ನಡೆ ಎಂಬ ವಿಶ್ಲೇಷಣೆಗೆ ಒಳಗಾಗಿದೆ. ಆ ನಡೆಯೊಂದಿಗೆ ಅಧಿಕಾರ ಹಂಚಿಕೆಯನ್ನು ತಳಕು ಹಾಕಲಾಗುತ್ತಿದೆ. ಅಧಿಕಾರದಲ್ಲಿ ಮುಂದುವರೆಯುವ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಗೆ ಅದು ನೀರೆರೆಯುತ್ತಿದೆ. ಹಾಗೆಯೇ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಮುಂದೂಡಿದೆ.
ರಾಜಕಾರಣವೆಂದರೆ ಅದೇ. ಅಧಿಕಾರಸ್ಥರ ಒಂದು ಮಾತು, ಯಾವಾಗ ಏನು ಬೇಕಾದರೂ ಆಗಬಹುದು. ಹಾಗೆಯೇ ಡಿಕೆಯವರ ಆ ಮಾತು ಕೂಡ ಇಷ್ಟಕ್ಕೆಲ್ಲ ಕಾರಣವಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಪ್ರಕಾರ, ಜನವರಿ 20ರಿಂದ 31ರ ಅವಧಿಯೊಳಗೆ ಅಧಿಕಾರ ಹಸ್ತಾಂತರವಾಗುತ್ತದೆ ಎಂಬ ದಟ್ಟ ವದಂತಿ ಇತ್ತು. ಅದಕ್ಕೆ ಪೂರಕವಾಗಿ, ಡಿಕೆ ಮತ್ತು ಸಿದ್ದರಾಮಯ್ಯನವರು ರಾಹುಲ್ ಗಾಂಧಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದನ್ನು ಸಮೀಕರಿಸಲಾಗಿತ್ತು. ಹೈಕಮಾಂಡ್ ಕೂಡ ಮಾತುಕತೆಗೆ ದಿಲ್ಲಿಗೆ ಕರೆದಿತ್ತು.
ಇವುಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಚಾಣಾಕ್ಷತೆ ಮೆರೆದು, ಡಿಕೆಯವರ ಆ ಮಾತನ್ನೇ ತಮ್ಮನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ವಿಶೇಷ ಸಚಿವ ಸಂಪುಟ ಸಭೆ ಕರೆದರು, ಎಲ್ಲ ಸಚಿವರ ಒಪ್ಪಿಗೆ ಪಡೆದರು, ವಿಶೇಷ ಅಧಿವೇಶನದ ದಿನಾಂಕ ಘೋಷಿಸಿದರು. ಆ ವಿಶೇಷ ಸಚಿವ ಸಂಪುಟ ಸಭೆಯಲ್ಲಿಯೂ, ಯಾರಿಗೂ ಯಾವ ಅನುಮಾನವೂ ಬಾರದಿರಲಿ ಎಂದು, ‘ಒಂದು ದಿನದಲ್ಲಿ ಮುಗಿಸೋಣ’ ಎಂಬ ಅಭಿಪ್ರಾಯ ತೇಲಿಬಿಟ್ಟರು. ಅದಕ್ಕೆ ಹಿರಿಯರಾದ ಎಚ್.ಕೆ. ಪಾಟೀಲ್, ‘ಸ್ವಲ್ಪ ಸುದೀರ್ಘ ಚರ್ಚೆಯೇ ಆಗಲಿ, ತಪ್ಪೇನಿಲ್ಲ’ ಎಂದರು. ಅದಕ್ಕೆ ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡರು ದನಿಗೂಡಿಸಿದರು. ಕೊನೆಗೆ ಸಿದ್ದರಾಮಯ್ಯನವರ ಒಳಾಸೆಯಂತೆ, 10 ದಿನಗಳ ಕಾಲದ ಅಧಿವೇಶನಕ್ಕೆ ಒಪ್ಪಿಗೆ ಸಿಕ್ಕಿತ್ತು.
ಅಧಿವೇಶನ ಎಂದಾಕ್ಷಣ, ಅಧಿಕಾರ ಹಂಚಿಕೆಯ ವಿಷಯ ಹಿನ್ನೆಲೆಗೆ ಸರಿಯುತ್ತದೆ. ವಿರೋಧಪಕ್ಷಗಳನ್ನು ಮಣಿಸುವುದು ಮುಖ್ಯವಾಗುತ್ತದೆ. ಎಲ್ಲರ ಗಮನ ಅಧಿವೇಶನದತ್ತ ಜಾರುತ್ತದೆ. ಕಾಲವೂ ಸರಿದುಹೋಗುತ್ತದೆ. ಅಲ್ಲಿಗೆ ಬೀಸುವ ಅಧಿಕಾರ ಹಂಚಿಕೆ ಎಂಬ ದೊಣ್ಣೆಯಿಂದ ಸಿದ್ದರಾಮಯ್ಯನವರು ಸದ್ಯಕ್ಕೆ ಪಾರಾಗಿರುತ್ತಾರೆ!
ಇನ್ನು ಅಧಿವೇಶನದ ನಂತರ, ಬಹಳ ಮಹತ್ವದ ರಾಜ್ಯ ಬಜೆಟ್ ಎದುರಾಗುತ್ತದೆ. ಬಜೆಟ್ ಪೂರ್ವಭಾವಿ ಸಭೆಗಳಿಗೆ ಸುಮಾರು ಸಮಯ ಹಿಡಿಯುತ್ತದೆ. ಬಜೆಟ್ ಸಿದ್ಧತೆ, ತಯಾರಿಯಲ್ಲಿಯೇ ಫೆಬ್ರವರಿ ತಿಂಗಳು ಮುಗಿದಿರುತ್ತದೆ. ಅಲ್ಲಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು 17ನೇ ಬಜೆಟ್ ಮಂಡಿಸುವುದು ಪಕ್ಕಾ ಆಗುತ್ತದೆ. ಅವರೇ ಮೈಸೂರಿನಲ್ಲಿ ಹೇಳಿದಂತೆ, ‘ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸುವ ಸಾಧ್ಯತೆ ಇದೆ’ ಎನ್ನುವುದು ನಿಜವಾಗುತ್ತದೆ. ಅಂದರೆ, ಮಾರ್ಚ್‌ವರೆಗೂ ಮುಖ್ಯಮಂತ್ರಿಯಾಗಿ ಅವರೇ ಮುಂದುವರೆದಿರುತ್ತಾರೆ.
ಇದಾದ ನಂತರ, ಸುಪ್ರೀಂ ಕೋರ್ಟಿನ ಆದೇಶ- ಸ್ಥಳೀಯ ಸಂಸ್ಥೆಗಳು ಚುನಾವಣೆಗಳನ್ನು ಜೂನ್ 30ರೊಳಗೆ ಮುಗಿಸಿ ಎಂಬ ಖಡಕ್ ಸೂಚನೆಯನ್ನು ಪಾಲಿಸುವ ‘ಮಹತ್ವದ’ ಹೊಣೆಗಾರಿಕೆ ಸರ್ಕಾರದ ಮೇಲೆ ಇದೆ. ಅದನ್ನು ಕಡೆಗಣಿಸುವಂತಿಲ್ಲ. ಕಡೆಗಣಿಸಿದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ. ಚುನಾವಣೆ ಎಂದಾಕ್ಷಣ ರಾಜಕಾರಣಿಗಳು, ಅದು ಸರ್ಕಾರದ ಮೇಲೆ ಪ್ರಭಾವ ಬೀರುವುದರಿಂದ ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ, ಚುನಾವಣೆ ಗೆಲ್ಲುವುದರತ್ತ ಮುಖ ಮಾಡುತ್ತಾರೆ. ಅಭ್ಯರ್ಥಿಗಳ ಆಯ್ಕೆ, ಚುನಾವಣೆಯಲ್ಲಿ ಮುಖ್ಯವಾಗುವ ಅಂಶಗಳು, ಸ್ಟ್ರಾಟಜಿಗಳು, ಪ್ರಚಾರ, ಖರ್ಚು-ವೆಚ್ಚಗಳಲ್ಲಿ ಮುಳುಗುತ್ತಾರೆ. ಗೆಲ್ಲುವುದು ಎಲ್ಲ ಪಕ್ಷಗಳ ಬಹುಮುಖ್ಯವಾದ ಕೆಲಸವಾಗುತ್ತದೆ.

ಇದನ್ನು ಓದಿದ್ದೀರಾ?: ಮನರೇಗಾ: ವಿಧಾನಮಂಡಲದಲ್ಲಿ ಚರ್ಚಿಸಬೇಕೇ, ಬೇಡವೇ?
ಚುನಾವಣೆಗಳನ್ನು ಮುಂದಿಟ್ಟುಕೊಂಡು ನಾಯಕತ್ವ ಬದಲಾವಣೆಗೆ ಯಾವ ರಾಜಕೀಯ ಪಕ್ಷವೂ ಕೈಹಾಕುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ರಾಜಕಾರಣದ ಸರಳ ಸತ್ಯ. ಅಲ್ಲಿಗೆ ಜೂನ್ 30ರವರೆಗೆ- ಇಲ್ಲಿಂದ ಆರು ತಿಂಗಳವರೆಗೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕುರ್ಚಿ ಅಭಾದಿತ ಎಂದಾಯಿತಲ್ಲವೇ?
ಇದೆಲ್ಲ ಆದದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಂದು ಮಾತಿನಿಂದ ಅಂತಲೂ ಹೇಳಬಹುದು. ಅಥವಾ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾಗುವ ಸಂದರ್ಭಗಳು ಯಾರು ಯಾರಿಗೆ ಹೇಗೆಲ್ಲ ಲಾಭ-ನಷ್ಟಕ್ಕೆ ಕಾರಣವಾಗುತ್ತದೆ ಎಂದು ಕೂಡ ಅರ್ಥೈಸಬಹುದು. ಕಾಂಗ್ರೆಸ್ ಎಂಬ ಬುರ್ನಾಸು ಪಕ್ಷದಲ್ಲಿ ಇದನ್ನು ಮೀರಿಯೂ- ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಂತೆ- ರಾಜಕೀಯ ಸ್ಥಿತ್ಯಂತರಗಳು ಘಟಿಸಲೂಬಹುದು.

ಲೇಖಕ, ಪತ್ರಕರ್ತ




