ಇಟಲಿಯ ಇತಿಹಾಸದಲ್ಲೇ ಅತ್ಯಂತ ಹಿಂಸಾತ್ಮಕ ಅವಧಿ 1970ರ ದಶಕ. 'ಮಾಫಿಯಾ' ಗುಂಪಿನ ದೊರೆಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಿದ, ತೀರ್ಪು ನೀಡಿದ ನ್ಯಾಯಮೂರ್ತಿಗಳು ಮತ್ತು ಪ್ರಾಸಿಕ್ಯೂಟರ್‌ಗಳ ಸರಣಿ ಹತ್ಯೆ ನಡೆದಿತ್ತು. ನ್ಯಾಯಾಂಗ ವ್ಯವಸ್ಥೆಯು ಎದೆಗುಂದದೆ ಈ 'ಮಾಫಿಯಾ' ವಿರುದ್ಧ ಹೋರಾಟ ಮುಂದುವರೆಸಿ, ಇವೆಲ್ಲವುದರ ದಮನಕ್ಕೆ ಕ್ರಮಕೈಗೊಂಡಿದ್ದರು.
ದೇಶದಲ್ಲಿ ನ್ಯಾಯಮೂರ್ತಿಗಳ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒತ್ತಡಗಳು ಹೆಚ್ಚಾಗುತ್ತಿವೆ, ನ್ಯಾಯ ಮಾರಾಟದ ಸರಕಾಗುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ನಗದುಗಳ ಕಂತೆ, ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಸೇರಿದ ಪ್ರಕರಣ ಒಂದೆಡೆ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದೆಡೆ ಬೆರಳು ಮಾಡುತ್ತದೆ. ಇನ್ನೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಯಾಗಿದ್ದ ಸೋಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ನಿಗೂಢ ಸಾವು, ಅದಾನಿ ನೇತೃತ್ವದ ಸಂಸ್ಥೆಯ ವಿರುದ್ಧವಾಗಿ ತೀರ್ಪು ನೀಡಿದ ದಿನವೇ ರಾಜಸ್ಥಾನದ ನ್ಯಾಯಾಧೀಶರು ವರ್ಗಾವಣೆಯಾಗಿರುವ ಘಟನೆ 50 ವರ್ಷಗಳ ಹಿಂದಿನ ಇಟಲಿಯ ಇತಿಹಾಸವನ್ನು ನೆನಪಿಸುತ್ತದೆ.
ದೇಶದಲ್ಲಿ ಅತ್ಯಾಚಾರ, ಕೊಲೆಯಂತಹ ಗಂಭೀರ ಅಪರಾಧ ಎಸಗಿದವರಿಗೆ ಪೆರೋಲ್ ಮೇಲೆ ಪೆರೋಲ್ ಲಭಿಸುತ್ತಿದೆ. ಹಲವು ಅಪರಾಧಿಗಳಿಗೆ ಜಾಮೀನು ನೀಡಲಾಗಿದೆ. 2017ರ ಉನ್ನಾಂವ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿ, ಶಿಕ್ಷೆ ಅಮಾನತುಗೊಳಿಸಿದ್ದರೆ (ಸುಪ್ರೀಂ ಕೋರ್ಟ್ ಆದೇಶಕ್ಕೆ ತಡೆ ನೀಡಿದೆ), ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ 15ನೇ ಬಾರಿ ಪೆರೋಲ್ ನೀಡಲಾಗಿದೆ. ಆದರೆ ಪರಿಸರವಾದಿ ಸೋನಮ್ ವಾಂಗ್‌ಚುಕ್, ಹೋರಾಟಗಾರ ಉಮರ್ ಖಾಲಿದ್‌ನಂತವರು ಇಂದಿಗೂ ಜೈಲಿನಲ್ಲಿದ್ದಾರೆ- ಹೀಗೆ ಹಲವು ಪ್ರಕರಣಗಳು ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಎತ್ತ ಸಾಗುತ್ತಿದೆ, ರಾಜಕಾರಣಿಗಳ ಒತ್ತಡದಿಂದಲೇ ನ್ಯಾಯ ಮರೀಚಿಕೆಯಾಗುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಸುತ್ತದೆ.
ಇದನ್ನು ಓದ್ದಿದ್ದೀರಾ? ಅದಾನಿ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರು ಅಂದೇ ವರ್ಗಾವಣೆ: ನ್ಯಾಯ ವ್ಯವಸ್ಥೆ ಯಾರ ಹತೋಟಿಯಲ್ಲಿ?
ಇಂತಹ ಸಂದರ್ಭದಲ್ಲಿ ನಾವು ಇಟಲಿಯಲ್ಲಿ ಹಲವು ನ್ಯಾಯಾಧೀಶರುಗಳ ಸರಣಿ ಹತ್ಯೆ ನಡೆದ ಇತಿಹಾಸವನ್ನು ನೆನೆಯಬೇಕಾಗಿದೆ. ಜತೆಗೆ ದೇಶ ಹೀಗೆಯೇ ಮುಂದುವರೆದರೆ ನ್ಯಾಯಾಂಗ ವ್ಯವಸ್ಥೆಯ ಪರಿಸ್ಥಿತಿ ಹೇಗಾದೀತು? ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿರುವ ರಾಜಕೀಯ, ಮಾಫಿಯಾ, ಕಾರ್ಪೋರೇಟ್ ಲಾಬಿಗಳನ್ನು ಕಡೆಗಣಿಸುವುದು ಸರಿಯೇ? ಇಟಲಿಯ ಇತಿಹಾಸ ಭಾರತದಲ್ಲಿ ಮರುಕಳಿಸುತ್ತಿದೆಯೇ? ಎಂಬ ಬಗ್ಗೆಯೂ ಚರ್ಚೆ ಅನಿವಾರ್ಯ.
ಏನಿದು ಇಯರ್ಸ್ ಆಫ್ ಲೀಡ್?
ಇಟಲಿಯ ಇತಿಹಾಸದಲ್ಲೇ ಅತ್ಯಂತ ಹಿಂಸಾತ್ಮಕ ಅವಧಿ 1970ರ ದಶಕ. ಈ ಕಾಲಘಟ್ಟವನ್ನು Years of Lead ಎಂದೇ ಕರೆಯಲಾಗುತ್ತದೆ. ಈ ಸಮಯದಲ್ಲಿ ‘ಮಾಫಿಯಾ’ ಗುಂಪಿನ ದೊರೆಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಿದ, ತೀರ್ಪು ನೀಡಿದ ನ್ಯಾಯಮೂರ್ತಿಗಳು ಮತ್ತು ಪ್ರಾಸಿಕ್ಯೂಟರ್‌ಗಳ ಸರಣಿ ಹತ್ಯೆ ನಡೆದಿತ್ತು. ಈ ಎಲ್ಲ ಬೆಳವಣಿಗೆ ಇಟಲಿಯನ್ನೇ ಬೆಚ್ಚಿ ಬೀಳಿಸಿತ್ತು. ಸಿಸಿಲಿಯನ್ ಮಾಫಿಯಾ (Cosa Nostra) ಹಿಡಿತದಲ್ಲಿ ಇಟಲಿಯ ನ್ಯಾಯಾಂಗ, ರಾಜಕೀಯ ವ್ಯವಸ್ಥೆ ಸಿಕ್ಕಿ ಒದ್ದಾಡಿತ್ತು. ಈ ಮಾಫಿಯಾ ದೊರೆಗಳ ವಿರುದ್ಧದ ಪ್ರಕರಣ ಕೈಗೆತ್ತಿಕೊಳ್ಳುವುದು ತಮಗೆ ಮಾತ್ರವಲ್ಲದೆ ತಮ್ಮ ಇಡೀ ಕುಟುಂಬದ ಪ್ರಾಣಕ್ಕೆ ಆಪತ್ತನ್ನು ಆಹ್ವಾನಿಸುವುದು ಆಗಿತ್ತು. ಈ ಇಟಲಿ ಮೂಲದ ‘ಮಾಫಿಯಾ’ ಎಂಬ ಸಂಘಟಿತ ಅಪರಾಧ ಎಸಗುವ ಗುಂಪಿನ ಹೆಸರು ಎಷ್ಟು ಪ್ರಚಲಿತವಾಯಿತೆಂದರೆ ಜಗತ್ತಿನಾದ್ಯಂತ ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವ ಇತರ ಗುಂಪುಗಳಿಗೂ ಈ ಪದವನ್ನೇ ಇಂದಿಗೂ ಬಳಸಲಾಗುತ್ತದೆ.
ಇವೆಲ್ಲವೂ ಮೊದಲು ಆರಂಭವಾಗಿದ್ದು 1971ರ ಮೇ 5ರಂದು ಪಲೆರ್ಮೊದ ಮುಖ್ಯ ಪ್ರಾಸಿಕ್ಯೂಟರ್ ಆಗಿದ್ದ ಪಿಯೆಟ್ರೋ ಸ್ಕಾಗ್ಲಿಯೋನ್ ಅವರ ಹತ್ಯೆಯ ಮೂಲಕ. ಈ ಮಾಫಿಯಾ ಮತ್ತು ಸಾರ್ವಜನಿಕ ಆಡಳಿತದ ನಡುವಿನ ಸಂಬಂಧಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದವರು ಸ್ಕಾಗ್ಲಿಯೋನ್. ವಿಶೇಷವಾಗಿ ಮಾಫಿಯಾ ದೊರೆ ಲೂಸಿಯಾನೋ ಲೆಗ್ಗಿಯೊ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದರು. ಅಷ್ಟು ಮಾತ್ರವಲ್ಲದೆ ಲೆಗ್ಗಿಯೊ ತಲೆಮರೆಸಿಕೊಂಡಿದ್ದಾಗ ಆತನಿಗೆ ಸಹಾಯ ಮಾಡಿದ ಆರೋಪದಲ್ಲಿ ಲೆಗ್ಗಿಯೊನ ಸಹೋದರಿಯನ್ನು ಸ್ಕಾಗ್ಲಿಯೋನ್ ಪಲೆರ್ಮೊದಿಂದ ಗಡಿಪಾರು ಮಾಡಿದ್ದರು. ಇಷ್ಟಾಗುತ್ತಿದ್ದಂತೆ ಸಿಸಿಲಿಯನ್ ಮಾಫಿಯಾ ಸ್ಕಾಗ್ಲಿಯೋನ್ ಅವರ ಹತ್ಯೆ ನಡೆಸಿತ್ತು.
ಇದನ್ನು ಓದಿದ್ದೀರಾ? ಬೆಚ್ಚಿ ಬೀಳಿಸಿದ್ದ ಉನ್ನಾಂವ್ ಅತ್ಯಾಚಾರ: ಯುಪಿಯ ಬಿಜೆಪಿ ನಾಯಕ ಕುಲದೀಪ್ ಜೀವಾವಧಿ ಶಿಕ್ಷೆ ಅಮಾನತು!
ಅದಾದ ಬಳಿಕ ರೋಮ್‌ನಲ್ಲಿ ಬಲಪಂಥೀಯ ಉಗ್ರಗಾಮಿ ಸಂಘಟನೆಯ ನಿಷೇಧಿಸುವ ಬಗ್ಗೆ ತನಿಖೆ ನಡೆಸುತ್ತಿದ್ದ ನ್ಯಾಯಾಧೀಶ ವಿಟ್ಟೋರಿಯೊ ಒಕಾರ್ಸಿಯೊ ಅವರನ್ನು 1976ರ ಜುಲೈನಲ್ಲಿ ಉಗ್ರಗಾಮಿ ಸಂಘಟನೆ ‘ಆರ್ಡಿನ್ ನುವೋವೊ’ ಹತ್ಯೆ ಮಾಡಿತ್ತು. ನಂತರ 1978ರ ಫೆಬ್ರವರಿ 14ರಂದು ಮಾಫಿಯಾಗಳ ಮೇಲೆ ಭಯ ಹುಟ್ಟಿಸುವ ಉದ್ದೇಶದಿಂದಲೇ ‘ರೆಡ್ ಬ್ರಿಗೇಡ್ಸ್’ ಎಡಪಂಥೀಯ ಸಂಘಟನೆ ರಿಕಾರ್ಡೊ ಪಾಲ್ಮಾ ಎಂಬ ಇಟಲಿಯ ಕಾರಾಗೃಹಗಳ ನಿರ್ದೇಶನಾಲಯದಲ್ಲಿನ ಅಧಿಕಾರಿಯ ಹತ್ಯೆ ಮಾಡಿತ್ತು.

ಗಿಬ್ರೆಲ್ ಟಾರ್ಟ್ಯಾಗ್ಲಿಯೋನ್, ಫೆಡೆಲೆ ಕಾಲ್ವೋಸಾ, ಎಮಿಲಿಯೊ ಅಲೆಸ್ಸಾಂಡ್ರಿನಿ, ಸೇಸಾರೆ ಟೆರಾನೋವಾ, ಗಿರೊಲಾಮೊ ಮಿನರ್ವಿನಿ – ಹೀಗೆ ಹಲವು ನ್ಯಾಯಾಧೀಶರುಗಳು, ಅಧಿಕಾರಿಗಳನ್ನು ಎಡ-ಬಲ ಸಂಘಟನೆಗಳು, ‘ಮಾಫಿಯಾ’ ಅಪರಾಧ ಗುಂಪು ಹತ್ಯೆ ಮಾಡಿತ್ತು. 1980ರವರೆಗೂ ಈ ರೀತಿಯ ಸರಣಿ ಹತ್ಯೆಗಳು ನಡೆದಿತ್ತು. ಇಟಲಿಯಲ್ಲಿ ನ್ಯಾಯಾಧೀಶರು ಮತ್ತು ಅವರ ಕುಟುಂಬದವರು ಸದಾ ಭಯದಲ್ಲೇ ಬದುಕುವಂತಾಗಿತ್ತು. ಅನೇಕರು ಬುಲೆಟ್ ಪ್ರೂಫ್ ಕಾರುಗಳಲ್ಲಿ ಮತ್ತು ಅಂಗರಕ್ಷಕರ ರಕ್ಷಣೆಯಲ್ಲಿಯೇ ಓಡಾಡುತ್ತಿದ್ದರು. ಆದರೂ ನ್ಯಾಯಾಂಗ ವ್ಯವಸ್ಥೆಯು ಎದೆಗುಂದದೆ ಈ ಮಾಫಿಯಾ, ಭಯೋತ್ಪಾದನೆ ವಿರುದ್ಧ ಹೋರಾಟ ಮುಂದುವರೆಸಿ, ಇವೆಲ್ಲವುದರ ದಮನಕ್ಕೆ ಕ್ರಮಕೈಗೊಂಡಿದ್ದರು.
ಇಟಲಿಯಲ್ಲಿ ಕೈಗೊಂಡ ಕ್ರಮವೇನು?
ವಿಶೇಷವಾಗಿ ಕಾನೂನುಗಳ ಜಾರಿ ಮಾಡಿದರು. ಲೆಗ್ಗೆ ರಿಯಲ್ (Legge Reale) ಅಥವಾ ‘ರಿಯಲ್ ಕಾನೂನು’ ಜಾರಿ ಮಾಡಲಾಯಿತು. ಈ ಕಾನೂನು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿತು. ಶಂಕಿತರ ವಿಚಾರಣೆ ಇಲ್ಲದೆಯೇ ದೀರ್ಘಕಾಲ ಬಂಧನದಲ್ಲಿಡಲು ಈ ಕಾನೂನು ಅವಕಾಶ ಮಾಡಿಕೊಟ್ಟಿತು. ಆದರೆ ಈ ಕಾನೂನು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ವಿರೋಧವೂ ವ್ಯಕ್ತವಾಗಿದೆ.
ಹಾಗೆಯೇ 1982ರಲ್ಲಿ ‘ರೋಗ್ನೋನಿ-ಲಾ ಟೊರ್ರೆ’ ಕಾನೂನು (Rognoni-La Torre Law) ಜಾರಿ ಮಾಡಲಾಯಿತು. ಇಟಾಲಿಯನ್ ಕ್ರಿಮಿನಲ್ ಕೋಡ್‌ಗೆ ಆರ್ಟಿಕಲ್ 416-ಬಿಸ್ (416-bis) ಅನ್ನು ಸೇರಿಸುವ ಮೂಲಕ ‘ಮಾಫಿಯಾ ಮಾದರಿಯ ಸಂಘಟನೆ’ಯನ್ನು ಮೊದಲ ಬಾರಿಗೆ ಕಾನೂನುಬದ್ಧವಾಗಿ ವ್ಯಾಖ್ಯಾನಿಸಲಾಯಿತು. ಮಾಫಿಯಾಗಳ ವಿರುದ್ಧ ಹೋರಾಟ ನಡೆಸಿದ ಧೀಮಂತ ಹೋರಾಟಗಾರರಾದ ಕಮ್ಯುನಿಸ್ಟ್ ಪಕ್ಷದ ಸಂಸದ ಪಿಯೋ ಲಾ ಟೊರ್ರೆ ಮತ್ತು ಆಗಿನ ಆಂತರಿಕ ಸಚಿವ ವರ್ಜಿನಿಯೊ ರೋಗ್ನೋನಿ ಈ ಕಾನೂನು ರೂಪಿಸಿದ್ದರಿಂದ ಇದಕ್ಕೆ ‘ರೋಗ್ನೋನಿ-ಲಾ ಟೊರ್ರೆ’ ಎಂದು ಹೆಸರಿಡಲಾಗಿದೆ.
ಇದನ್ನು ಓದಿದ್ದೀರಾ? ಭಾರತ 2023 | ದ್ವೇಷ ರಾಜಕಾರಣದ ಸಾಧನವೀಗ ಸರಕಾರಿ ಯೋಜನೆಯಾಗುತ್ತಿದೆ!
ಜತೆಗೆ ಹೊಸ ಕಾನೂನಿನ ಅಡಿಯಲ್ಲಿ ಮಾಫಿಯಾ ತಂಡಗಳ ಸದಸ್ಯರ ಅಕ್ರಮ ಆಸ್ತಿಗಳನ್ನು ಪತ್ತೆಹಚ್ಚಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಲಾಯಿತು. ಈ ಆಸ್ತಿಗಳನ್ನು ನಂತರ ಸಾರ್ವಜನಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ನಿಯಮ ರೂಪಿಸಲಾಯಿತು. ನ್ಯಾಯಾಧೀಶರಿಗೆ ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಹೆಚ್ಚಿನ ರಕ್ಷಣೆ ನೀಡಲು ಸರ್ಕಾರವು ಸೇನೆಯನ್ನು ಬಳಸಿಕೊಳ್ಳುವುದು ಮತ್ತು ವಿಶೇಷ ಅಂಗರಕ್ಷಕರ ನೇಮಕದಂತಹ ಕ್ರಮಗಳನ್ನೂ ಕೈಗೊಂಡಿತು.
ಭಯೋತ್ಪಾದನೆ ಮತ್ತು ಮಾಫಿಯಾ ಗುಂಪುಗಳಿಂದ ಹೊರಬಂದು ಸರ್ಕಾರಕ್ಕೆ ಮಾಹಿತಿ ನೀಡುವ ಅಪರಾಧಿಗಳಿಗೆ ಶಿಕ್ಷೆಯಲ್ಲಿ ವಿನಾಯಿತಿ ನೀಡುವ ಕಾನೂನನ್ನೂ ಜಾರಿಗೆ ತರಲಾಯಿತು. ಇದರಿಂದಾಗಿ ಅಪರಾಧ ಜಾಲವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸ್ ಪಡೆಗಳನ್ನು ಪುನರ್ ರಚನೆ ಮಾಡಲಾಯಿತು. ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗಳಿಗೆ ವಿಶೇಷ ಘಟಕಗಳನ್ನೂ ರಚಿಸಲಾಯಿತು. ಈ ಎಲ್ಲಾ ಕ್ರಮಗಳು 1980ರ ದಶಕದ ಆರಂಭದಲ್ಲಿ ಇಟಲಿಯಲ್ಲಿ ರಾಜಕೀಯ ಭಯೋತ್ಪಾದನೆ ಮತ್ತು ಮಾಫಿಯಾ ಚಟುವಟಿಕೆಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯಕವಾಯಿತು.
ಇವಿಷ್ಟು ಇಟಲಿಯ ಜಡ್ಜ್‌ಗಳ ಸರಣಿ ಹತ್ಯೆಯ ಮಾಹಿತಿಯಷ್ಟೇ ಅಲ್ಲ, ನಮ್ಮ ದೇಶದ ನೆಲೆಗಟ್ಟಿನಲ್ಲಿಯೂ ಅವಲೋಕಿಸಬೇಕಾದ ಇತಿಹಾಸ! ಸದ್ಯ ದೇಶದ ಸ್ಥಿತಿ ಇಟಲಿಯ ಹಂತಕ್ಕೆ ತಲುಪಿಲ್ಲ ಎಂದು ನೀವು ಹೇಳಬಹುದು. ಆದರೆ ಆ ಮಾರ್ಗ ದೂರವಿಲ್ಲ ಎಂಬ ವಾಸ್ತವವನ್ನು ಅಲ್ಲಗಳೆಯಲಾಗದು. ಜತೆಗೆ ಇಲ್ಲಿ ಸಂತ್ರಸ್ತರು ಯಾರು ಎಂಬ ಪ್ರಶ್ನೆಯೂ ಇದೆ. ಇಟಲಿಯಲ್ಲಿ ಮಾಫಿಯಾಕ್ಕೆ ಬಲಿಯಾಗಿದ್ದು ನ್ಯಾಯಾಧೀಶರಾದರೆ, ನಮ್ಮಲ್ಲಿ ಈ ಕಾರ್ಪೋರೇಟ್ ದೊರೆಗಳ, ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಬಲಿಯಾಗುವುದು ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋದ ಸಂತ್ರಸ್ತರು!
ಆಡಳಿತಾರೂಢ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅದಾನಿ-ಅಂಬಾನಿ ಮೊದಲಾದ ಬಂಡವಾಳಶಾಹಿಗಳ ಲಾಭಕ್ಕಾಗಿ ಕಾನೂನು ತಿದ್ದುಪಡಿ, ಕಾಯ್ದೆ ಜಾರಿಗೊಳಿಸುತ್ತಿರುವಾಗ ಇಲ್ಲಿ ಬದಲಾಗಬೇಕಾಗಿದ್ದು ಯಾವ ವ್ಯವಸ್ಥೆ? ಅಷ್ಟಕ್ಕೂ ಒತ್ತಡಕ್ಕೆ ಮಣಿದು, ಹಣದ ಮೋಹಕ್ಕೆ ಬಿದ್ದು ನ್ಯಾಯವನ್ನೇ ಮಾರಿಕೊಳ್ಳಲಾಗುತ್ತಿರುವಾಗ ಇಟಲಿಯ ನ್ಯಾಯಾಧೀಶರುಗಳು ಪ್ರಾಣತೆತ್ತು ನಡೆಸಿದ ದೀರ್ಘ ಹೋರಾಟ ನಮ್ಮ ನ್ಯಾಯಾಂಗಕ್ಕೆ ಮಾದರಿಯಾಗಬಹುದೇ? ಇಂದು ಸರ್ಕಾರವನ್ನು ಬಳಸಿಕೊಂಡು ನ್ಯಾಯಾಂಗದ ಮೇಲೆ ಕಾರ್ಪೋರೇಟ್ ದೊರೆಗಳು ಒತ್ತಡ ಹೇರುತ್ತಿದ್ದಾರೆ. ಮುಂದೊಂದು ದಿನ ಇಡೀ ವ್ಯವಸ್ಥೆಯನ್ನೇ ಬಹಿರಂಗವಾಗಿ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಬಹುದು ಅಲ್ಲವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




