ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಮುಗಿದಿವೆ. ಈ ನಡುವೆ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವ ‘ಜನ ಸುರಾಜ್ ಪಕ್ಷ’ದ (ಜೆಎಸ್‌ಪಿ) ನಾಯಕ, “ಬಿಜೆಪಿ ನಾಯಕರು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿ, ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಮಂಗಳವಾರ ಪಾಟ್ನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಈ ಬಾರಿ ಬಿಹಾರದಲ್ಲಿ ವಿಭಿನ್ನ ಆಟ ನಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಯು ಜನ್ ಸುರಾಜ್ ಅಭ್ಯರ್ಥಿಗಳನ್ನು ನಿಗ್ರಹಿಸುತ್ತಿವೆ. ಆಡಳಿತ ಪಕ್ಷವು ಈಗ ಮಹಾಘಟಬಂಧನ್ ಬದಲು ಜನ್ ಸುರಾಜ್ ಬಗ್ಗೆ ಹೆಚ್ಚು ಭಯಪಡುತ್ತಿದೆ” ಎಂದು ಹೇಳಿದ್ದಾರೆ.
ನಮ್ಮ ಮೂವರು ಅಭ್ಯರ್ಥಿಗಳ ನಾಮಪತ್ರವನ್ನು ಬಲವಂತವಾಗಿ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ. ಬಿಜೆಪಿ ಮತ್ತು ಜೆಡಿಯು ನಮ್ಮ ಅಭ್ಯರ್ಥಿಗಳನ್ನು ಬಹಿರಂಗವಾಗಿ ಗುರಿಯಾಗಿಸಿಕೊಂಡಿವೆ. ನಾವು ಈ ವಿಷಯವನ್ನು ಚುನಾವಣಾ ಆಯೋಗಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದ್ದಾರೆ.
“ದಾನಾಪುರದ ಮುತೂರ್ ಶಾ, ಬ್ರಹ್ಮಪುರದ ಸತ್ಯ ಪ್ರಕಾಶ್ ತಿವಾರಿ ಮತ್ತು ಗೋಪಾಲಗಂಜ್‌ನ ಶಶಿ ಶೇಖರ್ ಸಿಂಗ್ ಎಲ್ಲರೂ ಜನ್ ಸುರಾಜ್ ಅಭ್ಯರ್ಥಿಗಳಾಗಿದ್ದರು. ಆದರೆ, ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಒತ್ತಾಯಿಸಲಾಗಿದೆ” ಎಂದು ಆರೋಪಿಸಿದ್ದಾರೆ.
“ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿರುವ ಸ್ಥಾನಗಳಲ್ಲಿ ಬಿಜೆಪಿ-ಜೆಡಿಯು ನಾಯಕರು ಆತಂಕಗೊಂಡಿದ್ದಾರೆ. ಜನ್ ಸುರಾಜ್‌ನ ಉದ್ದೇಶ ಅಧಿಕಾರವಲ್ಲ, ಆದರೆ ವ್ಯವಸ್ಥೆಯ ಬದಲಾವಣೆ ಮತ್ತು ಇದು ಸಾಂಪ್ರದಾಯಿಕ ಪಕ್ಷಗಳನ್ನು ಆತಂಕಕ್ಕೀಡು ಮಾಡುತ್ತಿದೆ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.
“ನಮ್ಮ ಅಭ್ಯರ್ಥಿಗಳಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಶೇಕಡಾ 90ಕ್ಕೂ ಹೆಚ್ಚು ಅಭ್ಯರ್ಥಿಗಳು ಸಾರ್ವಜನಿಕರಿಂದ ಬಂದವರು” ಎಂದು ಅವರು ತಿಳಿಸಿದ್ದಾರೆ.




