ವಿಜಯಪುರದಲ್ಲಿ ಜನತಾ ಸಮಾವೇಶ: ಜೆಡಿಎಸ್‌ನ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗುವುದೇ ಉತ್ತರ ಕರ್ನಾಟಕ?

Date:

ಜೆಡಿಎಸ್ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪಕ್ಷ ಬೆಳ್ಳಿ ಹಬ್ಬ ಆಚರಿಸುತ್ತಿದೆ. ‘ಕಿತ್ತೂರು ಕರ್ನಾಟಕ ಜನತಾ ಸಮಾವೇಶ’ದ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಅದರ ಸಲುವಾಗಿ ಮೊದಲ ಹಂತ‌ದ ಬೃಹತ್ ಜನತಾ ಸಮಾವೇಶವನ್ನು ವಿಜಯಪುರದಲ್ಲಿ ಫೆಬ್ರವರಿ 27ರಂದು ಹಮ್ಮಿಕೊಳ್ಳಲಾಗಿದೆ.

ಮೈಸೂರಿನಲ್ಲಿ ಆಚರಿಸಿದ ಮುಖ್ಯ ಬೆಳ್ಳಿ ಹಬ್ಬದ ನಂತರ ಈಗ ಉತ್ತರಕ್ಕೆ ವಿಸ್ತರಣೆಯಾಗಿದೆ. ‘ಹಳೆ ಮೈಸೂರು ಭಾಗದ ಪಕ್ಷ’ ಎಂಬ ಅಣಕವನ್ನು ತೊಡೆದುಹಾಕಿ, ಕಿತ್ತೂರು ಕರ್ನಾಟಕದ 7 ಜಿಲ್ಲೆಗಳಲ್ಲಿ (ವಿಜಯಪುರ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡದ ಕೆಲವು ಭಾಗ) ಪಕ್ಷವನ್ನು ಬಲಪಡಿಸುವ ಗುರಿ ಹೊಂದಲಾಗಿದೆ.

ನಿಖಿಲ್ ಕುಮಾರಸ್ವಾಮಿ ನೇತೃತ್ವದ ಪೂರ್ವಸಿದ್ಧತೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡು ದಶಕಗಳ ಹಿಂದೆ ಜೆಡಿಎಸ್‌ಗೆ ಉತ್ತರ ಕರ್ನಾಟಕದಲ್ಲಿ ನೆಲೆಯಿತ್ತು. ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಉತ್ತರದಲ್ಲಿ ಪುನಃ ಪಕ್ಷವನ್ನು ಬಲಿಷ್ಠಗೊಳಿಸಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಮುಂದಾಗಿದ್ದು, ಫೆ.27ರಂದು ವಿಜಯಪುರದಲ್ಲಿ ಕಿತ್ತೂರು ಕರ್ನಾಟಕ ಜಿಲ್ಲೆಗಳನ್ನು ಒಳಗೊಂಡ ಬೃಹತ್ ಜನತಾ ಸಮಾವೇಶ ಆಯೋಜನೆಗೆ ಸಿದ್ಧತೆ ನಡೆಸಿದ್ದಾರೆ.

ಫೆಬ್ರವರಿ 18ರಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಜಯಪುರಕ್ಕೆ ಭೇಟಿ ನೀಡಿ ಸಮಾವೇಶದ ಸ್ಥಳವನ್ನು ಖುದ್ದು ಪರಿಶೀಲಿಸಿದ್ದು, ಪೂರ್ವಭಾವಿ ಸಭೆ ನಡೆಸಿ, ”ಯಾವುದೇ ಕೊರತೆ ಇರಬಾರದು. ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯಬೇಕು” ಎಂದು ಸೂಚನೆ ನೀಡಿದ್ದಾರೆ.

ಈ ಸಮಾವೇಶಕ್ಕೆ ಬೆಳಗಾವಿ ಜಿಲ್ಲೆಯಿಂದಲೇ 20,000 ಮಂದಿ ಬರುವ ನಿರೀಕ್ಷೆಯಿದೆ. ಲಕ್ಷಾಂತರ ಕಾರ್ಯಕರ್ತರ ಸಂಗಮವಾಗುವ ಸಾಧ್ಯತೆಯಿದೆ. ‘ಜನರೊಂದಿಗೆ ಜನತಾದಳ’ ಪ್ರವಾಸದ ಭಾಗವಾಗಿ ನಿಖಿಲ್ ಅವರು ಈ ಸಮಾವೇಶವನ್ನು ಯುವಕರಿಗೆ ಮತ್ತು ರೈತರಿಗೆ ಸಂಬಂಧಿಸಿದಂತೆ ವಿನ್ಯಾಸಗೊಳಿಸಿದ್ದಾರೆ. ಇದು ಕೇವಲ ಸಮಾವೇಶವಲ್ಲ; ಉತ್ತರ ಕರ್ನಾಟಕದಲ್ಲಿ ಪಕ್ಷದ ಪುನಶ್ಚೇತನದ ಘೋಷಣೆ ಎನ್ನಲಾಗಿದೆ.

2 ದಶಕಗಳ ಹಿಂದಿನ ಬಲ vs ಇಂದಿನ ಹಿನ್ನಡೆ

20 ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಪ್ರತಿ ಜಿಲ್ಲೆಯಲ್ಲಿ ಎರಡರಿಂದ ಮೂರು ಮಂದಿ ಶಾಸಕರು ಇದ್ದರು. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಉತ್ತರದಲ್ಲಿ ಒಂದೂ ಸೀಟು ಗೆದ್ದಿಲ್ಲ. ವೋಟ್ ಶೇರ್ ಶೇ.5ಕ್ಕಿಂತಲೂ ಕಡಿಮೆ ಇದೆ. ಲಿಂಗಾಯತರು ಹೆಚ್ಚಾಗಿರುವ ಪ್ರದೇಶದಲ್ಲಿ ಒಕ್ಕಲಿಗ ಆಧರಿತ ಪಕ್ಷ ಎಂಬ ಇಮೇಜ್, ಕುಟುಂಬ ರಾಜಕೀಯದ ಟೀಕೆಯಂತಹ ಪ್ರಮುಖ ಕಾರಣಗಳಿಂದಲೇ ಜೆಡಿಎಸ್‌ಗೆ ಹಿನ್ನಡೆಯಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಹಳೆ ಮೈಸೂರು ಭಾಗವನ್ನಷ್ಟೇ ಕೇಂದ್ರೀಕರಿಸಿ ಜೆಡಿಎಸ್ ಕಟ್ಟಲಾಗುತ್ತದೆ ಎಂಬ ಮಾತುಗಳು ಈಗಲೂ ಚಾಲ್ತಿಯಲ್ಲಿದ್ದರೂ, ‘ಪ್ರಧಾನಿಯಾಗಿದ್ದಾಗ ದೇವೇಗೌಡರು ಹಾಗೂ ಸಿಎಂ ಆಗಿದ್ದಾಗ ಕುಮಾರಸ್ವಾಮಿಯವರು ಉತ್ತರಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಅದನ್ನು ಈ ಭಾಗದ ಜನತೆಗೆ ಮನವರಿಕೆ ಮಾಡಿಕೊಟ್ಟು ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಬೆಳೆಸುವ ಲೆಕ್ಕಾಚಾರದೊಂದಿಗೆ ಸಮಾವೇಶಕ್ಕೆ ವೇದಿಕೆ ಸಿದ್ಧ ಮಾಡಲಾಗುತ್ತಿದೆ’ ಎಂಬ ವಿಶ್ಲೇಷಣೆ ನಡೆದಿದೆ.

“ದೇವೇಗೌಡರು ಪ್ರಧಾನಿಯಾಗಿದ್ದಾಗ ತ್ವರಿತ ನೀರಾವರಿ ಅನುಷ್ಠಾನ(ಎಕ್ಸಲರೇಟೆಡ್ ಇರಿಗೇಶನ್) ಸ್ಕೀಮ್ ಜಾರಿಗೊಳಿಸಿ ಕೃಷ್ಣ ಮೇಲ್ದಂಡೆ ಯೋಜನೆಗೆ 12 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಿದ್ದರು. ತುಂಡು ಗುತ್ತಿಗೆ ನೀಡಿ ನೀರಾವರಿ ಪೂರ್ಣಗೊಳ್ಳಲು ಮಹತ್ವದ ಪಾತ್ರ ವಹಿಸಿದ್ದು, ಈ ಭಾಗದ ಜನಮಾನಸದಲ್ಲಿದೆ. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೆ ಚಾಲನೆ ನೀಡಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಾಗಿಲು ತೆರೆದಿದ್ದೇ ಕುಮಾರಸ್ವಾಮಿ ಎಂಬ ವಿಚಾರವನ್ನು ಈ ಭಾಗದ ಜನರಿಗೆ ಪಕ್ಷದ ಮುಖಂಡರು ಮನವರಿಕೆ ಮಾಡಿಕೊಡಲಾಗುತ್ತದೆ” ಎನ್ನುತ್ತಾರೆ ಜೆಡಿಎಸ್ ಬೆಂಬಲಿಗರು.

ಜೆಡಿಎಸ್ ಕಾರ್ಯಕರ್ತ ರಾಘವೇಂದ್ರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪಕ್ಷ ಬಲವರ್ಧನೆಗೆ ಈ ಸಮಾವೇಶ ಪೂರಕವಾಗಿದೆ. ಜನ ರೈತಪರ ಪಕ್ಷವನ್ನು ಯಾವತ್ತೂ ಕೈಬಿಟ್ಟಿಲ್ಲ, ಈಗಲೂ ಬಿಡುವುದಿಲ್ಲ. ಅದಕ್ಕೆ ಉದಾಹರಣೆ ನಮ್ಮ ಕ್ಷೇತ್ರದ ಶಾಸಕರು” ಎನ್ನುತ್ತಾರೆ.

ಆದರೆ ಜೆಡಿಎಸ್ ನಾಯಕರು, “ಇದು ಕೇವಲ ಚುನಾವಣಾ ಫಲಿತಾಂಶಕ್ಕಾಗಿ ಅಲ್ಲ. ಜನರ ಮನಸ್ಸಿನಲ್ಲಿ ನಾವಿದ್ದೇವೆ. ದೇವೇಗೌಡ-ಕುಮಾರಸ್ವಾಮಿ ಕೊಡುಗೆಗಳು ರೈತರ ನೆನಪಿನಲ್ಲಿವೆ” ಎನ್ನುತ್ತ ಸಮಾವೇಶದಲ್ಲಿ ಜೆಡಿಎಸ್‌ ರೈತಪರ ಪಕ್ಷ ಎಂಬ ಸಂದೇಶದೊಂದಿಗೆ ಮನವರಿಕೆ ಮಾಡುವುದು ಪಕ್ಷದ ಲೆಕ್ಕಾಚಾರವಾಗಿದೆ.

ನಿಖಿಲ್ ಅವರ ತೀವ್ರ ಟೀಕೆ: ಸಮಾವೇಶಕ್ಕೆ ರಣತಂತ್ರ

ವಿಜಯಪುರ ಭೇಟಿಯ ವೇಳೆ ನಿಖಿಲ್ ಅವರು ಕಾಂಗ್ರೆಸ್ ಸರ್ಕಾರದ 1000 ದಿನಗಳ ಸಾಧನೆಯನ್ನು ಹೇಳುತ್ತ, “ಪ್ರತಿ ವರ್ಷ ಲಕ್ಷ ಕೋಟಿ ಸಾಲ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಾಧನೆ ಎಂದರೆ ಸಾಲದ ಹೊರೆಯಷ್ಟೇ” ಎಂದು ಲೇವಡಿ ಮಾಡಿದರು.

“ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಡಿಸಿಎಂ ಮಾಡದಿದ್ದರೆ ಇಂದು ಸಿಎಂ ಆಗುತ್ತಿದ್ದರಾ” ಎಂದು ಪ್ರಶ್ನಿಸಿದ ಅವರು, ಜೆಡಿಎಸ್‌,
ಬಿಜೆಪಿ ಜತೆ ವಿಲೀನ ಸಾಧ್ಯವಿಲ್ಲ, ಕಾಂಗ್ರೆಸ್ ವಿರುದ್ಧ ಒಗ್ಗಟ್ಟು ಎಂದು ಸಮರ್ಥಿಸಿಕೊಂಡಿದ್ದು, 2024ರ ಲೋಕಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಉತ್ತರದಲ್ಲಿ ಕೆಲಸ ಮಾಡಿದೆ. 2028ರ ವಿಧಾನಸಭೆಗೆ ಇದೇ ರಣತಂತ್ರ ಮುಂದುವರಿಯಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಏನು ನಿರೀಕ್ಷೆ? — ರಾಜಕೀಯ ವಿಶ್ಲೇಷಕರ ಅಭಿಪ್ರಾಯ

ಈ ಸಮಾವೇಶ ಯಶಸ್ವಿಯಾದರೆ ಉತ್ತರದಲ್ಲಿ ಜೆಡಿಎಸ್ ವೋಟ್ ಶೇರ್ 8-12%ಗೆ ಏರಬಹುದು. 2028ರಲ್ಲಿ 4-6 ಸೀಟುಗಳನ್ನು ಗೆಲ್ಲಬಹುದು. ಆದರೆ ಲಿಂಗಾಯತ-ಒಕ್ಕಲಿಗ ವಿಭಜನೆ, ಬಿಜೆಪಿ-ಕಾಂಗ್ರೆಸ್ ಧ್ರುವೀಕರಣವನ್ನು ಮೀರಬೇಕು. ಜತೆಗೆ ಫೆಬ್ರವರಿ 27ರಂದು ವಿಜಯಪುರದ ಮೈದಾನದಲ್ಲಿ ಎಷ್ಟು ಜನಸಾಗರ ಸೇರುತ್ತದೆ, ಎಷ್ಟು ಉತ್ಸಾಹ ತುಂಬುತ್ತದೆ ಎಂಬುದು ಮುಂದಿನ 7 ದಿನಗಳಲ್ಲಿ ನಿರ್ಧಾರವಾಗುತ್ತದೆ. ಆದರೆ ಒಂದು ವಿಷಯ ಸ್ಪಷ್ಟ, ಜೆಡಿಎಸ್ ಇನ್ನು ‘ದಕ್ಷಿಣದ ಪಕ್ಷ’ವಾಗಿ ಮಾತ್ರ ಉಳಿಯುವುದಿಲ್ಲ. ಉತ್ತರದಲ್ಲಿ ಬೇರು ಬಿಡುವ ಪ್ರಯತ್ನ ಆರಂಭವಾಗಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

ಇದನ್ನೂ ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್‌ ಚೇಂಜರ್’ ಆಗಬಹುದೇ?

ವಿಜಯಪುರ ಗುಮ್ಮಟ, ಗೋಲ್ ಗುಂಬಜ್‌ಗಳ ನಗರಿ. ಇಲ್ಲಿನ ಮಣ್ಣಿನಲ್ಲಿ ಇತಿಹಾಸದ ಸುಗಂಧವಿದೆ. ಆದರೆ ಈಗ ಇಲ್ಲಿ ಜೆಡಿಎಸ್ ನಡೆಸುತ್ತಿರುವ ಜನತಾ ಸಮಾವೇಶ ರಾಜಕೀಯವಾಗಿ ಮತ್ತು ಪಕ್ಷದ ಬಲವರ್ಧನೆಗೆ ಅಲ್ಲದೆ ಪಕ್ಷದ ಹೊಸ ಇತಿಹಾಸಕ್ಕೆ ಸಾಕ್ಷಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...