ಜಾರ್ಖಂಡ್‌ನ ಆಡಳಿತಾರೂಢ ಇಂಡಿಯಾ ಒಕ್ಕೂಟದ ಶಾಸಕರು ಮುಂಗಾರು ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ವಿರುದ್ಧ ನಿರ್ಣಯ ಅಂಗೀಕರಿಸಲು ನಿರ್ಧರಿಸಿದ್ದಾರೆ. ಅಧಿವೇಶನದಲ್ಲಿ ‘ವಿರೋಧ ಪಕ್ಷದ ಪ್ರಶ್ನೆಗೆ ತಾರ್ಕಿಕ ಉತ್ತರಗಳನ್ನು’ ನೀಡಲು ಮೈತ್ರಿಕೂಟ ನಿರ್ಧರಿಸಿದೆ ಎಂದು ವರದಿಯಾಗಿದೆ.
ಜಾರ್ಖಂಡ್‌ನಲ್ಲಿ ಮುಂಗಾರು ಅಧಿವೇಶನ ಶುಕ್ರವಾರ(ಆಗಸ್ಟ್ 1) ಆರಂಭವಾಗಿ ಆಗಸ್ಟ್ 7ರಂದು ಕೊನೆಯಾಗಲಿದೆ. ರಜೆಗಳನ್ನು ಹೊರತುಪಡಿಸಿ ಒಟ್ಟು ಐದು ದಿನಗಳು ಅಧಿವೇಶನ ನಡೆಯಲಿದೆ.
ಇದನ್ನು ಓದಿದ್ದೀರಾ? ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: 64 ಲಕ್ಷಕ್ಕೂ ಅಧಿಕ ಮತದಾರರ ಹೆಸರು ‘ಡಿಲೀಟ್’
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಹೇಮಂತ್ ಸೊರೇನ್, “ಸಭೆಯಲ್ಲಿ ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮಾಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಇಂಡಿಯಾ ಒಕ್ಕೂಟವು ಚುನಾವಣಾ ಆಯೋಗದ ನಿರ್ಧಾರವನ್ನು ವಿರೋಧಿಸುತ್ತದೆ” ಎಂದು ಹೇಳಿದರು.
“ಸಭೆಯಲ್ಲಿ ನಾವು ಕೇಂದ್ರವು ಸಾಂವಿಧಾನಿಕ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಬಗ್ಗೆಯೂ ಚರ್ಚಿಸಲಾಗಿದೆ. ಪ್ರತ್ಯೇಕ ಸರ್ನಾ ಧಾರ್ಮಿಕ ಸಂಹಿತೆ ಮತ್ತು ಒಬಿಸಿ ಮೀಸಲಾತಿ ಹೆಚ್ಚಳದ ಬಗ್ಗೆಯೂ ಚರ್ಚಿಸಲಾಗುವುದು” ಎಂದರು.
ಇನ್ನು ಸಂಸತ್ತಿನ ವ್ಯವಹಾರಗಳ ಸಚಿವ ರಾಧಾಕೃಷ್ಣ ಕಿಶೋರ್ ಅವರು “ಅಧಿವೇಶನದಲ್ಲಿ ಎಸ್‌ಐಆರ್ ವಿರುದ್ಧ ನಿರ್ಣಯ ಅಂಗೀಕರಿಸಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು. ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ತಾರ್ಕಿಕ ಉತ್ತರಗಳನ್ನು ನೀಡಲು ಎಲ್ಲಾ ಸದಸ್ಯರನ್ನು ಸಿದ್ಧರಾಗಿರಬೇಕು ಎಂದು ಕರೆ ನೀಡಿದರು.
ಶುಕ್ರವಾರ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಮುಂಗಾರು ಅಧಿವೇಶನಕ್ಕೆ ತಮ್ಮ ಪಕ್ಷದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ ನಿರ್ಧರಿಸಲಿದೆ. ಇದಕ್ಕೂ ಮುನ್ನ ಜಾರ್ಖಂಡ್ ಸ್ಪೀಕರ್ ರವೀಂದ್ರನಾಥ್ ಮಹಾತೋ ಸರ್ವಪಕ್ಷ ಸಭೆ ನಡೆಸಿದರು.





