ಅರಣ್ಯ ಭೂಮಿ ಗಡಿ ಗುರುತಿಸಿ, ನಿಖರ ನಕ್ಷೆ ಮಾಡುವ ಸಲುವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸರ್ವೇ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಶ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗುರುವಾರ ವಿಧಾನ ಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
“ಕರ್ನಾಟಕ ಅರಣ್ಯ ನಿಯಮದ ಪ್ರಕಾರ ಜಿಲ್ಲಾ ಅರಣ್ಯ ಅಥವಾ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ ಹಾಗೂ 100 ಮೀಟರ್ ವ್ಯಾಪ್ತಿಯಲ್ಲಿನ ಭೂಮಿ ಮಂಜೂರಾತಿ ಪೂರ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಮ್ಮತಿ ಪಡೆಯುವುದು ಕಡ್ಡಾಯವಾಗಿದೆ. ರೈತರು ಕಂದಾಯ ಇಲಾಖೆ ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಕೋರಿದಾಗ ಅರಣ್ಯ ಇಲಾಖೆಯ ದಾಖಲೆ, ಅಧಿಸೂಚನೆ ಹಾಗೂ ನಕಾಶೆಗಳೊಂದಿಗೆ ಪರಿಶೀಲಿಸಿ, ಜಾಗವು ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುತ್ತದೆ ಅಥವಾ ಇಲ್ಲವೇ ಎಂದು ಹಿಂಬರಹ ನೀಡಲಾಗುತ್ತದೆ. ಅಧಿಸೂಚಿತ ಹಾಗೂ ಡೀಮ್ಡ್ ಅರಣ್ಯ ಅರಣ್ಯ ಪ್ರದೇಶಗಳಿಗೆ ಸರ್ವೇ ನಂಬರ್‌ವಾರು ವಿವರವಾದ ಮಾಹಿತಿ ಇಲ್ಲದಂತಹ ಸಂದರ್ಭದಲ್ಲಿ ನಿರಾಕ್ಷೇಪಣಾ ಪತ್ರ ನೀಡಲು ಕಂದಾಯ ಇಲಾಖೆಯೊಂದಿಗೆ ಜಂಟಿ ಮೋಜಣಿ ಮಾಡಲಾಗುವುದು” ಎಂದರು.
ಬೆಳ್ತಂಗಡಿ ಪ್ರದೇಶದ ರಿ.ಸಂ.69ರಲ್ಲಿ ಅರಣ್ಯ ಭೂಮಿ ಬಗ್ಗೆ ಜಂಟಿ ಸರ್ವೇ ಕೈಗೊಂಡಾಗ 500 ಎಕರೆ ಅಧಿಕ ಭೂಮಿ ಅರಣ್ಯ ಇಲಾಖೆ ಭೂಮಿಯೊಂದಿಗೆ ಇರುವುದು ಕಂಡುಬಂದಿದೆ. ಸರ್ಕಾರ ಅರಣ್ಯ ಅರಣ್ಯ ಭೂಮಿ ಗಡಿ ಗುರುತಿಸಿಲು ಜಂಟಿ ಸರ್ವೇ ನಡೆಸಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆ ಮೊಜಣಿಗೆ ಕಾಲಮಿತಿ ನಿಗದಿ ಪಡಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಚಿವರಲ್ಲಿ ಕೋರಿದರು.
ಆನೆಗಳ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್
ರಾಜ್ಯದಲ್ಲಿ 6995 ಆನೆಗಳು ಇವೆ. ಒಟ್ಟು 7 ಆನೆ ಕಾರ್ಯಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಆಲ್ಡಾರಾ ಶಾಖೆಯ ಅರಣ್ಯ ಗಡಿ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 2022-23ನೇ ಸಾಲಿನಲ್ಲಿ ರೂ.1.73 ಕೋಟಿ, 2023-24ರಲ್ಲಿ ರೂ.3.59 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಒಟ್ಟು 7.152 ಕಿ.ಮೀ ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಮಾಡಬೇಕಿದೆ. ಇದರಲ್ಲಿ 1.215 ಕಿ.ಮೀ ಪೂರ್ಣಗೊಂಡಿದೆ ಎಂದು ಅರಣ್ಯ ಸಚಿವರು ಸದನಕ್ಕೆ ಮಾಹಿತಿ ನೀಡಿದರು.
“2.337 ಕಿ.ಮೀ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 3.60 ಕಿ.ಮೀ ನಿರ್ಮಾಣ ಕಾಮಗಾರಿ ಬಾಕಿ ಉಳಿದಿದೆ. ಡಿಸೆಂಬರ್ 2024ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ” ಎಂದು ಸಚಿವ ಈಶ್ವರ್ ಖಂಡ್ರೆ, ಶಾಸಕ ರಾಜೇಗೌಡ ಟಿ.ಡಿ ಅವರ ಪ್ರಶ್ನೆಗೆ ಉತ್ತರಿಸಿದರು.
ಮೈಸೂರು ಜಿಲ್ಲೆ ಹೆಗ್ಗದೇವನಕೋಟೆ ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಎಂಟು ಮಾನವ ಹಾಗೂ ವನ್ಯಪ್ರಾಣಿ ಸಂಘರ್ಷಗಳು ದಾಖಲಾಗಿವೆ. ಈ ಭಾಗದಲ್ಲಿ ಅರಣ್ಯ ಗಡಿ ಪ್ರದೇಶ ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. ಸಂಘರ್ಷ ತಡೆಯಲು ಜಂಟಿ ಸರ್ವೇ ಕಾರ್ಯವನ್ನು ಸಹ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವರು ತಿಳಿಸಿದರು.
“ರಾಜ್ಯದಲ್ಲಿ ಒಟ್ಟು ರೂ.200 ಕೋಟಿ ವೆಚ್ಚದಲ್ಲಿ ಆನೆಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಡೆಯಲು 640 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 312 ಕಿ.ಮೀ. ಬ್ಯಾರಿಕೇಡ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಮನೆ ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ, ಆನೆ ತಡೆ ಕಂದಕ ನಿರ್ಮಾಣ ಮಾಡಿ ನಿರ್ವಹಿಸಲಾಗುತ್ತಿದೆ” ಎಂದು ಸಚಿವರು, ಶಾಸಕ ಅನಿಲ್ ಚಿಕ್ಕಮಾದು ಕೇಳಿದ್ದ ಪ್ರಶ್ನೆಗೆ ಉತ್ತರಿಸುವ ವೇಳೆ ಸ್ಪಷ್ಟಪಡಿಸಿದರು.





