ಶೀಘ್ರದಲ್ಲೇ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಯುದ್ಧದಲ್ಲಿ ಭಾರತವು ಅಮೆರಿಕದ ಪರವಾಗಿ ನಿಲ್ಲಲಿದೆ, ಭಾರತದ ಪುರಾತನ ಮಿತ್ರ ಇರಾನ್‌ಗೆ ಮೋದಿ ದ್ರೋಹ ಬಗೆಯುವುದು ಖಚಿತವಾಗಿದೆ ಎನ್ನುವುದಕ್ಕೆ ಇಸ್ರೇಲಿನ ಈ ಭೇಟಿ ಮುನ್ಸೂಚನೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಫೆಬ್ರುವರಿ 25/26ರಂದು ಎರಡು ದಿನಗಳ ಇಸ್ರೇಲ್ ಪ್ರವಾಸ ಮಾಡಿದ್ದಾರೆ. ಅಲ್ಲಿ ಅವರು ಪಾರ್ಲಿಮೆಂಟ್‌ನಲ್ಲಿ ಮಾಡಿದ ಭಾಷಣದಲ್ಲಿ “ಇಸ್ರೇಲ್ ನಮ್ಮ ಪಿತೃದೇಶ: ಭಾರತ ನಮ್ಮ ಮಾತೃದೇಶ”ವೆಂದು ಹೇಳಿದ್ದಾರೆ- ಎನ್ನುವ ಇಂಗ್ಲಿಷ್ ಕೊಟೇಶನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದು ಹೀಗಿದೆ: “ಇಸ್ರೇಲ್ ತಮ್ಮ ತಂದೆಯ ಭೂಮಿ ಎಂದು ಮತ್ತು ಭಾರತ ತಮ್ಮ ತಾಯಿಯ ಭೂಮಿ ಎಂದು ಅವರು ದೃಢವಾಗಿ ನಂಬಿದ್ದಾರೆ. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ.”
ಇಲ್ಲಿ ಮೋದಿ “ಅವರು” ಎಂದು ಹೇಳಿದ್ದು ಭಾರತದಿಂದ ಇಸ್ರೇಲಿಗೆ ವಲಸೆ ಹೋದ ಯೆಹೂದಿಯರ ಬಗ್ಗೆ; ತಮ್ಮ ಬಗ್ಗೆ ಅಲ್ಲ.(ಮೋದಿಯವರು ವಿಪರೀತ ಸುಳ್ಳುಗಳನ್ನು ಹೇಳಿದ್ದಾರೆ ಅನ್ನುವುದು ನಿಜ. ಹಾಗೆಂದು ಅವರ ಹೇಳಿಕೆಯನ್ನು ನಾವೂ ತಿರುಚಿ ಬರೆಯುವುದು ಬೇಡವೆಂದು ಆರಂಭದಲ್ಲೇ ಇದನ್ನು ಸೂಚಿಸಿದ್ದೇನೆ.)
ಇರಲಿ, ಇಲ್ಲಿ ನಾನು ಹೇಳಬೇಕಾದ ಸಂಗತಿ ಅದಲ್ಲ. ಈ relegious philosophyಗಳ ಬಗ್ಗೆ ಯೋಚಿಸುವಾಗ ಯೆಹೂದಿ ಧರ್ಮ (ಜುದಾಯಿಸಂ), ಇಸ್ಲಾಂ ಧರ್ಮ ಮತ್ತು ಹಿಂದೂ ಧರ್ಮಗಳಲ್ಲಿ ಕಂಡು ಬರುವ ಹಲವು ಸಾಮ್ಯತೆಗಳ ಬಗ್ಗೆ.
ಇದನ್ನು ಓದಿದ್ದೀರಾ?: ಎಡ್ವಿನ್ ಲುಟ್ಯನ್ ಪ್ರತಿಮೆ ಕಿತ್ತೊಗೆದು ರಾಜಾಜಿ ಪ್ರತಿಮೆ ಸ್ಥಾಪನೆಯ ಹಿಂದೆ ಮೋದಿ ಚುನಾವಣಾ ಗಿಮಿಕ್?
ಮೊದಲು ಜುದಾಯಿಸಂ ಮತ್ತು ಇಸ್ಲಾಂ ಕುರಿತು ಗಮನಿಸೋಣ.
ಬನೀ ಇಸ್ರಾಯೀಲ್ ಸಂತತಿ ಮತ್ತು ಪ್ರವಾದಿಗಳ ಬಗ್ಗೆ ಕುರಾನ್‌ನಲ್ಲಿ ವಿವರವಾಗಿ ವರ್ಣಿಸಲಾಗಿದೆ. ಎರಡೂ ಅಬ್ರಹಾಮ್ ಧರ್ಮಗಳು. ಯಹೂದಿ ದೊರೆಗಳಾದ Solomon ಮತ್ತು David ಇಬ್ಬರೂ ಮುಸ್ಲಿಮರು ಒಪ್ಪಿಕೊಂಡಿರುವ ದೇವರ ಪ್ರವಾದಿಗಳು. ಸುಲೈಮಾನ್ ಮತ್ತು ದಾವೂದ್ ಎಂದು ಕುರಾನ್‌ನಲ್ಲಿ ಇವರ ವಿವರವಾದ ಪ್ರಸ್ತಾಪ ಇದೆ. ಇವರಿಬ್ಬರ ಹೆಸರನ್ನೂ ಹೇಳುವಾಗ ಮುಸ್ಲಿಮರು ಅಲೈಸ್ಸಲಾಂ ಎಂದು ಸಲಾಂ ಹೇಳುತ್ತಾರೆ.
“ಅಬ್ರಹಾಂ ಮೂಲದ ಧರ್ಮ”ಗಳ ಬಗ್ಗೆ (ಕ್ರಿಶ್ಚಿಯಾನಿಟಿ, ಜುದಾಯಿಸಂ ಮತ್ತು ಇಸ್ಲಾಂ) ಜಾಗತಿಕ ಇತಿಹಾಸದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈಗಲೂ ನಡೆಯುತ್ತಿದೆ.
ಯಹೂದಿಗಳದ್ದು ಏಕದೇವತ್ವದ ಧರ್ಮ. ಅವರ ಪ್ರಕಾರ, ದೇವರು ಒಬ್ಬನೇ, ಅವನಿಗೆ ಯಾವ ಪಾಲುದಾರರೂ ಇಲ್ಲ, ಭೌತಿಕ ರೂಪವಿಲ್ಲ (ನಿರಾಕಾರ). ಹೀಗಾಗಿಯೇ ಯಹೂದಿಯರು ಮೂರ್ತಿಪೂಜೆ ಮಾಡುವುದಿಲ್ಲ.
ಮುಸ್ಲಿಮರದ್ದೂ ಏಕದೇವತ್ವದ ಪ್ರತಿಪಾದನೆ. ದೇವರು (ಅಲ್ಲಾಹ್) ನಿರಾಕಾರ, ಸ್ವಯಂಸಂಪೂರ್ಣ, ಸರ್ವಶಕ್ತ, ಆತನಿಗೆ ಯಾವ ಪಾಲುದಾರರೂ ಇಲ್ಲ. ಮುಸ್ಲಿಮರೂ ಮೂರ್ತಿಪೂಜೆ ಮಾಡುವುದಿಲ್ಲ.

ಈ ಹಿನ್ನೆಲೆಯಲ್ಲಿ ಫೆಲಿಸ್ತೀನ್ ಮತ್ತು ಇಸ್ರೇಲ್ ನಡುವಣ ಈಗಿನ ರಾಜಕೀಯ ಘರ್ಷಣೆಯನ್ನು ವಿಶ್ಲೇಷಿಸಲಾಗುತ್ತಿದೆ. ಈಗಿನ ಇಸ್ರೇಲ್ ದೇಶದ ಭೂಭಾಗವನ್ನು ತಮಗೆ “ದೇವರು ನೀಡಿರುವ ವಾಗ್ದಾನ” ಎಂದು ಯಹೂದಿಯರು ನಂಬಿದ್ದಾರೆ. ತಮ್ಮ ಭೂಮಿಯನ್ನು ಅಮೆರಿಕದ ಮಿಲಿಟರಿ ಬಲದ ಮೂಲಕ ಇಸ್ರೇಲ್ ಅತಿಕ್ರಮಿಸಿದೆ ಎಂದು ಫೆಲಿಸ್ತೀನೀಯರು ಹೇಳುತ್ತಿದ್ದಾರೆ.
ಈ ಅತಿಕ್ರಮಣ 20/21 ನೇ ಶತಮಾನದ ವಾಸ್ತವ ಇತಿಹಾಸ. ಅದನ್ನು ಇಲ್ಲಿ ಚರ್ಚಿಸುವುದು ನನ್ನ ಉದ್ದೇಶ ಅಲ್ಲ.
*
ಇಲ್ಲಿ ನನ್ನ ಕುತೂಹಲ ಬೇರೆಯೇ ಇದೆ.
ಈ “ಅಬ್ರಹಾಮ್” ಮತ್ತು ಹಿಂದೂ ಧರ್ಮದ “ಬ್ರಹ್ಮ” ಎಂಬ ಶಬ್ದಗಳ ಸಾಮ್ಯತೆಯ ಕುರಿತು ಹಲವರು ಲೇಖಕರು ಬೆಳಕು ಚೆಲ್ಲಿದ್ದಾರೆ. ಹಾಗೆಯೇ ಪ್ರವಾದಿ ಅಬ್ರಹಾಂ (ಇಬ್ರಾಹಿಂ) ಬಗ್ಗೆ ಬೈಬಲ್ (ಕ್ರಿಶ್ಚಿಯನ್ನರ ಧರ್ಮಗ್ರಂಥ) ತೌರಾತ್ (ತೋರತ್- ಯಹೂದಿಯರ ಧರ್ಮಗ್ರಂಥ) ಮತ್ತು ಕುರಾನ್ (ಮುಸ್ಲಿಮರ ಧರ್ಮಗ್ರಂಥ)ಗಳಲ್ಲಿ ಸಾಕಷ್ಟು ವಿವರಗಳಿವೆ.
ಹಿಂದೂ ಧರ್ಮದಲ್ಲೂ ಪರಮಾತ್ಮನ ಪರಿಕಲ್ಪನೆಯ ಬಗ್ಗೆ ವಿವರಿಸುವಾಗ ಸನಾತನ, ಚಿರಂತನ, ಆಕಾರಾತೀತ, ಸ್ವಯಂಭೂ ಎನ್ನುವ ವರ್ಣನೆಗಳನ್ನು ಕೇಳಿದ್ದೇನೆ/ಓದಿದ್ದೇನೆ.
ನಮ್ಮ ಭಾರತದಲ್ಲಿ ಹತ್ತಾರು ಧರ್ಮಗಳು, ಧಾರ್ಮಿಕ ಫಿಲಾಸಫಿಗಳು, ಆಧ್ಯಾತ್ಮಿಕ ವಿಚಾರಧಾರೆಗಳ ಶ್ರೀಮಂತ ಪರಂಪರೆ ಇದೆ. ಆದರೆ ಬಲವಾದ inter faith exchange platformಗಳಿಲ್ಲ. ಇದ್ದಿದ್ದರೆ ಈ ವಿಷಯಗಳ ಬಗ್ಗೆ ಕುತೂಹಲಕರ ಚರ್ಚೆ ನಡೆಯಬಹುದಿತ್ತು. (ಇಂತಹ platformಗಳಿದ್ದರೂ ಈ ಕುರಿತು ಸಮಾಧಾನದಿಂದ ಜಿಜ್ಞಾಸೆ ಮಾಡುವ ವಾತಾವರಣ ಈಗ ಇಲ್ಲ ಅನ್ನೋದು ಬೇರೆ ವಿಷಯ.)
ಇದನ್ನು ಓದಿದ್ದೀರಾ?: ಲಡಾಖಿ ಮುಸ್ಲಿಂ ಯುವಕನೊಬ್ಬನ ಹೃದಯವಿದ್ರಾವಕ ವೃತ್ತಾಂತ
ಭಾರತ ನಿಜವಾದ ಅರ್ಥದಲ್ಲಿ ವಸುದೈವ ಕುಟುಂಬಕಂ. ಆದರೆ “ಧರ್ಮ ರಾಜಕೀಯ”ದ ರಾಡಿಯಲ್ಲಿ ಈ ವಿಷಯ ಮಾತಾಡೋದೇ ತಪ್ಪು ಎನ್ನುವಂತಹ ವಾತಾವರಣ ಈಗ ನಿರ್ಮಾಣವಾಗಿದೆ.
*
ಇರಲಿ. ಈಗ ಮೋದಿಯವರ ಇಸ್ರೇಲ್ ಭೇಟಿ ಮತ್ತು ಭಾಷಣದ ಬಗ್ಗೆ ಒಂದು ಮಾತು.
ಫೆಲಿಸ್ತೀನಿನ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 2000ಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿದರು. ಇದರಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮಿಲಿಟರಿಯು ಫೆಲಿಸ್ತೀನಿನ ಮೇಲೆ ದಾಳಿ ನಡೆಸಿ 50,000ಕ್ಕೂ ಹೆಚ್ಚು ಜನರನ್ನು ನರಮೇಧ ನಡೆಸಿತು. ಇದರಲ್ಲೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 16,000ಕ್ಕೂ ಹೆಚ್ಚು ಮಕ್ಕಳು ಫೆಲಿಸ್ತೀನ್ ನರಮೇಧದಲ್ಲಿ ಸಾವಿಗೀಡಾಗಿದ್ದಾರೆ ಎಂದು ರೆಡ್ ಕ್ರಾಸ್ ವರದಿ ಹೇಳಿದೆ.
ಮೋದಿಯವರು ಇಸ್ರೇಲಿಗೆ ಹೋಗಿ ಹಮಾಸ್ ನಡೆಸಿದ ಇಸ್ರೇಲಿಗರ ಕೊಲೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಫೆಲಿಸ್ತೀನಿಗೆ ಹೋಗಿ ಅಲ್ಲಿಯೂ ಹೀಗೆ ಅವರು ಸಂತಾಪ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ. ಏಕೆಂದರೆ ಅವರು “ವಸುದೈವ ಕುಟುಂಬಕಂ” ತತ್ವದ ಮೇಲೆ ಯಥಾರ್ಥ ನಂಬಿಕೆ ಇರುವ ವ್ಯಕ್ತಿಯಲ್ಲ. ಅವರದ್ದೇನಿದ್ದರೂ ತೋರಿಕೆಯ ಧಾರ್ಮಿಕತೆ.
ಮೋದಿಯವರ ಈ ಇಸ್ರೇಲ್ ಭೇಟಿಯ ಮೂಲಕ ಭಾರತ ತನ್ನ ಅಲಿಪ್ತ ನೀತಿಗೆ ಅಂತಿಮ ಶ್ರದ್ಧಾಂಜಲಿ ಅರ್ಪಿಸಿದೆ. ಇಸ್ರೇಲಿನ ‘ಕೊಲೆಗಡುಕ ಪ್ರಧಾನಿ’ ನೆತನ್ಯಾಹು ಅಪ್ಪುಗೆಗೆ ಮೋದಿ ಒಳಗಾಗಿದ್ದಾರೆ. ಇಲ್ಲಿ ಗುಜರಾತ್ ನರಮೇಧದ ನೆನಪು ಬೇಡವೆಂದರೂ ಬರುತ್ತಿದೆ. ಹೀಗಾಗಿ ಇದನ್ನು “ಸಮಾನ ಮನಸ್ಕರ ಭೇಟಿ” ಎಂದೇ ಹೇಳಬಹುದು.

ಈ ಭೇಟಿಯ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಇದೆ ಎನ್ನುವ ವಿಶ್ಲೇಷಣೆಯೂ ನಡೆದಿದೆ. ಟ್ರಂಪ್ ಒತ್ತಡದಿಂದ ಹೊರಬರಲು ಮೋದಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಉಭಯ ದೇಶಗಳ ಟ್ರೇಡ್ ಡೀಲ್‌ನಲ್ಲಿ ಈಗಾಗಲೇ ಸ್ಪಷ್ಟವಾಗಿದೆ.
ಈ ಮಧ್ಯೆ ‘ಎಪ್‌ಸ್ಟೀನ್ ಫೈಲ್’ನ ಕೆಸರು ಮೋದಿ ಸಂಪುಟದ ಸಚಿವರ ಮೇಲೂ ಬಿದ್ದಿದೆ. ಮೋದಿ ಗೆಳೆಯ ಅನಿಲ್ ಅಂಬಾನಿಯೂ ಈ ಕೆಸರಿನಲ್ಲಿ ಸಿಕ್ಕುಬಿದ್ದಿದ್ದಾರೆ. ಈ ಫೈಲ್‌ನಲ್ಲಿ ಭಾರತದ ಇನ್ಯಾರ ಹೆಸರು ಹೊರಬರುತ್ತದೋ ಗೊತ್ತಿಲ್ಲ. ಅನುಮಾನದ ಸುಂಟರಗಾಳಿ ಜೋರಾಗಿ ಬೀಸುತ್ತಿದೆ.
ಇದನ್ನು ಓದಿದ್ದೀರಾ?: ಬಹುತ್ವದ ಬುಡಕ್ಕೇ ಕೊಡಲಿಪೆಟ್ಟು: ಸಮಾಜವನ್ನು ಆವರಿಸುತ್ತಿರುವ ಅಸಹಿಷ್ಣುತೆಯ ಕಾರ್ಮೋಡ
ಮೋದಿ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಈ ಒತ್ತಡದ ಹಿನ್ನೆಲೆಯಲ್ಲಿ ಇಸ್ರೇಲ್ ಭೇಟಿ ನಡೆದಿದೆ ಎನ್ನುವ ಅನುಮಾನ ಬಲವಾಗಿದೆ.
ಶೀಘ್ರದಲ್ಲೇ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಮಾಡುವ ಸಾಧ್ಯತೆಯೂ ದಟ್ಟವಾಗಿದೆ. ಈ ಯುದ್ಧದಲ್ಲಿ ಭಾರತವು ಅಮೆರಿಕದ ಪರವಾಗಿ ನಿಲ್ಲಲಿದೆ ಎನ್ನುವುದಕ್ಕೆ ಇಸ್ರೇಲಿನ ಈ ಭೇಟಿ ಮುನ್ಸೂಚನೆಯಾಗಿದೆ.
ಅಂದರೆ, ತೈಲ ಸಂಕಷ್ಟದ ಕಾಲದಲ್ಲಿ ಭಾರತಕ್ಕೆ ಕಡಿಮೆ ದರದಲ್ಲಿ ನಿರಂತರವಾಗಿ ಕಚ್ಚಾ ತೈಲ ಪೂರೈಸಿದ; ಅದನ್ನೂ ಭಾರತದ ರೂಪಾಯಿ ವಿನಿಮಯದಲ್ಲೇ ನೀಡಿ ನಮ್ಮ ರೂಪಾಯಿ ಶಕ್ತಿ ಹೊಂದಲು ನೆರವಾದ ಭಾರತದ ಪುರಾತನ ಮಿತ್ರ ಇರಾನ್‌ಗೆ ಮೋದಿ ದ್ರೋಹ ಬಗೆಯುವುದು ಖಚಿತ ಎಂದು ಕಾಣಿಸುತ್ತಿದೆ.
ಎಲ್ಲಿಯ ವಸುದೈವ ಕುಟುಂಬಕಂ ಮತ್ತು ಎಲ್ಲಿಯ ಮೋದಿ?!

ಬಿ ಎಂ ಹನೀಫ್
ಹಿರಿಯ ಪತ್ರಕರ್ತ, ಲೇಖಕ




