ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ – ವಿಳಂಬವೇಕೆ?

Date:

ವಿಪಕ್ಷ ನಾಯಕ ಆರ್‌ ಅಶೋಕ್ ಆದಿಯಾಗಿ ಬಿಜೆಪಿಯಲ್ಲಿ ಮುಂಚೂಣಿಯಲ್ಲಿರುವ ಯಾವೊಬ್ಬ ನಾಯಕರಿಗೂ ಕಾಂಗ್ರೆಸ್‌ಅನ್ನು ಪ್ರಬಲವಾಗಿ ಎದುರಿಸಬಲ್ಲ, ಪಕ್ಷವನ್ನು ಸಮತೋಲನದಿಂದ ಕೊಂಡೊಯ್ಯಬಲ್ಲ ಸಾಮರ್ಥ್ಯವಿಲ್ಲ.

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯಾಧ್ಯಕ್ಷ ಹುದ್ದೆಯಿಂದ ಬಿ.ವೈ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂಬ ಒತ್ತಾಯ ಬಿಜೆಪಿಯಲ್ಲಿ ಕೇಳಿಬರುತ್ತಿರುವುದು ಹೊಸತೇನೂ ಅಲ್ಲ. ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ ಆಯ್ಕೆಯಾದ ದಿನದಿಂದಲೇ ಬಿಜೆಪಿ ಕೂಡ ವಂಶರಾಜಕಾರಣಕ್ಕೆ ಮಣೆಹಾಕಿದೆ ಎಂಬ ಆರೋಪಗಳು ಭುಗಿಲೆದ್ದಿವೆ. ನಾಯಕತ್ವ ಬದಲಾವಣೆಯ ಕೂಗು ಮುನ್ನೆಲೆಯಲ್ಲಿದೆ. ಬಿಜೆಪಿ ಹೈಕಮಾಂಡ್‌ ಕೂಡ ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ಇತ್ತೀಚಿನ ಕೆಲವು ತಿಂಗಳುಗಳಿಂದ ಕಸರತ್ತು ನಡೆಸುತ್ತಿದೆ. ಆದರೂ, ಈ ನೇಮಕವು ಬಿಜೆಪಿಗೆ ಕಗ್ಗಂಟಾಗಿಯೇ ಉಳಿದಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡ ಬಳಿಕ ನಾಯಕತ್ವ ಬದಲಾವಣೆಯ ಕೂಗು ಪ್ರಬಲವಾಗಿದೆ. ಜೊತೆಗೆ, ಪಕ್ಷವು ರಾಜಕೀಯ ತಂತ್ರಗಾರಿಕೆಯನ್ನು ಪುನರ್‌ರಚನೆ ಮಾಡಬೇಕೆಂಬ ಒತ್ತಡದಲ್ಲಿದೆ.

ಇಂತಹ ಪರಿಸ್ಥಿತಿಯಲ್ಲಿಯೂ, ರಾಜ್ಯ ಬಿಜೆಪಿಯಲ್ಲಿ ಆಂತರಿಕ ಗುಂಪುಗಾರಿಕೆ, ರಾಜಕೀಯ ಒತ್ತಡಗಳು ಹಾಗೂ ಸಾಂಸ್ಥಿಕ ಸವಾಲುಗಳು ಬಿಜೆಪಿ ಹೈಕಮಾಂಡ್‌ಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಯಲ್ಲಿ ಬಿ.ವೈ ವಿಜಯೇಂದ್ರ ಬಣ ಮತ್ತು ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಬಣಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನೇ ನಾಯಕತ್ವದಲ್ಲಿ ಮುಂದುವರೆಸಬೇಕೆಂದು ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಜೊತೆಗೆ, ವಿಜಯೇಂದ್ರಗೆ ತನ್ನ ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಲಿಂಗಾಯತ ಸಮುದಾಯದ ಪ್ರಬಲ ಬೆಂಬಲವೂ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದಾಗ್ಯೂ, ಶತಾಯ-ಗತಾಯ ವಿಜಯೇಂದ್ರ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲೇಬೇಕೆಂದು ಯತ್ನಾಳ್ ಬಣ ಹವಣಿಸುತ್ತಿದೆ. ಈ ಬಣವನ್ನು ತೆರೆಯ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಪೋಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ, ತಮ್ಮ ಬಣದಲ್ಲಿಯೇ ಯಾರನ್ನಾದರೂ ಅಧ್ಯಕ್ಷ ಹುದ್ದೆಗೇರಿಸಬೇಕೆಂದು ಯತ್ನಾಳ್ ಬಣ ಒತ್ತಾಯಿಸುತ್ತಿದೆ.

ಯಾವ ಬಣಕ್ಕೂ ಸೇರದೆ ತಟಸ್ಥವಾಗಿರುವ ಶಾಸಕ ವಿ. ಸುನಿಲ್ ಕುಮಾರ್ ಅವರಂತಹ ನಾಯಕರು ಈ ಎರಡು ಗುಂಪುಗಳ ನಡುವಿನ ಕಿತ್ತಾಟದಲ್ಲಿ ತಮ್ಮ ಬೇಳೆ ಬೇಯಿಸಿಕೊಂಡು, ಅಧ್ಯಕ್ಷ ಹುದ್ದೆಗೇರುವ ಬಯಕೆಯಲ್ಲಿದ್ದಾರೆ.

ಈಗಾಗಲೇ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಅಸ್ಸಾಂ, ಜಾರ್ಖಂಡ್, ಪಂಜಾಬ್, ಉತ್ತರಾಖಂಡ್, ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ರಾಜ್ಯಾಧ್ಯಕ್ಷರನ್ನು ಬಿಜೆಪಿ ನೇಮಿಸಿದೆ. ಆದರೂ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ದೆಹಲಿ ಹಾಗೂ ಹರಿಯಾಣದಂತಹ ಪ್ರಮುಖ ರಾಜ್ಯಗಳಿಗೆ ಇನ್ನೂ ರಾಜ್ಯಾಧ್ಯಕ್ಷರ ನೇಮಕ ಮಾಡಲು ಸಾಧ್ಯವಾಗಿಲ್ಲ.

ಕರ್ನಾಟಕಕ್ಕೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಗೊಂದಲ ಬಿಜೆಪಿ ನಾಯಕರಿಗಿದೆ. ಇತ್ತೀಚೆಗಷ್ಟೇ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿದ್ದು, ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರ ದೆಹಲಿ ಭೇಟಿಯು ಕುತೂಹಲ ಮೂಡಿಸಿದ್ದು, ರಾಜ್ಯಾಧ್ಯಕ್ಷರ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಬೊಮ್ಮಾಯಿ ಮಾತ್ರವಲ್ಲದೆ, ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿ. ಸುನಿಲ್ ಕುಮಾರ್, ರಮೇಶ್ ಜಾರಕಿಹೊಳಿ, ಸಿ.ಟಿ ರವಿ, ಪಿ. ರಾಜೀವ್, ಆರ್. ಅಶೋಕ್ ಹಾಗೂ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖರು ರೇಸ್‌ನಲ್ಲಿದ್ದಾರೆ.

ಆದರೆ, ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಲೆಕ್ಕಾಚಾರಗಳು ಬಿಜೆಪಿ ಹೈಕಮಾಂಡ್‌ನಲ್ಲಿವೆ. ಮುಖ್ಯವಾಗಿ, ಬಿಜೆಪಿಗೆ ಪ್ರಬಲ ಬೆಂಬಲವಾಗಿರುವ ಲಿಂಗಾಯತ ಸಮುದಾಯದ ವಿಶ್ವಾಸವನ್ನು ಉಳಿಸಿಕೊಳ್ಳುವುದು, ಒಕ್ಕಲಿಗರನ್ನು ಪಕ್ಷದತ್ತ ಸೆಳೆಯುವುದು ಬಿಜೆಪಿಯ ಆದ್ಯತೆಗಳಾಗಿವೆ.

ಈ ಲೇಖನ ಓದಿದ್ದೀರಾ?: ಬಿಜೆಪಿ ಭಿನ್ನಮತ ಶಮನವಾಗದಿರಲು ಬಿ ಎಲ್ ಸಂತೋಷ್ ಕಾರಣವೇ?

ಲಿಂಗಾಯತರ ವಿಶ್ವಾಸವನ್ನು ಉಳಿಸಿಕೊಂಡು, ಒಕ್ಕಲಿಗರು ಸೇರಿದಂತೆ ಒಬಿಸಿ ಸಮುದಾಯಗಳಿಗೆ ಪಕ್ಷವನ್ನು ವಿಸ್ತರಿಸುವ ಸಾಮರ್ಥ್ಯವಿರುವ ಮತ್ತು ಪಕ್ಷದಲ್ಲಿನ ಆಂತರಿಕ ಗುಂಪುಗಾರಿಕೆಯನ್ನು ಶಮನ ಮಾಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಬಹುದಾದ ನಾಯಕರಿಗಾಗಿ ಪಕ್ಷವು ಎದುರು ನೋಡುತ್ತಿದೆ.

ಮಾತ್ರವಲ್ಲದೆ, ಕಾಂಗ್ರೆಸ್‌ನ ಪ್ರಬಲ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ರಾಜಕೀಯವಾಗಿ ಪ್ರಬಲ ಪೈಪೋಟಿ ನೀಡಲು ಸಮರ್ಥ ಮತ್ತು ಜನಪ್ರಿಯ ನಾಯಕನ ಅಗತ್ಯವೂ ಬಿಜೆಪಿಗಿದೆ.

ಆದರೆ, ಅಂತಹ ಪರಿಣಾಮಕಾರಿ ನಾಯಕರ ಕೊರತೆ ಬಿಜೆಪಿಯಲ್ಲಿದೆ. ವಿಪಕ್ಷ ನಾಯಕ ಆರ್‌ ಅಶೋಕ್ ಆದಿಯಾಗಿ ಬಿಜೆಪಿಯಲ್ಲಿ ಮುಂಚೂಣಿಯಲ್ಲಿರುವ ಯಾವೊಬ್ಬ ನಾಯಕರಿಗೂ ಕಾಂಗ್ರೆಸ್‌ಅನ್ನು ಪ್ರಬಲವಾಗಿ ಎದುರಿಸಬಲ್ಲ, ಪಕ್ಷವನ್ನು ಸಮತೋಲನದಿಂದ ಕೊಂಡೊಯ್ಯಬಲ್ಲ ಸಾಮರ್ಥ್ಯವಿಲ್ಲ. ಹಾಲಿ ಅಧ್ಯಕ್ಷ ವಿಜಯೇಂದ್ರ ಕೂಡ 2023ರ ಚುನಾವಣೆಯ ಸೋಲಿನ ನಂತರ, ದುರ್ಬಲ ನಾಯಕ ಎಂಬ ಟೀಕೆಗೆ ಗುರಿಯಾಗಿದ್ದಾರೆ. ಅವರ ಸಂಘಟನಾತ್ಮಕ ವೈಫಲ್ಯಗಳನ್ನು ಬಂಡಾಯ ಬಣವು ಎತ್ತಿ ತೋರಿಸುತ್ತಿದೆ. ಪರಿಣಾಮವಾಗಿ, ಇರುವ ಅಧ್ಯಕ್ಷರನ್ನು ಮುಂದುವರೆಸಲೂ ಆಗದೆ, ಹೊಸ ಅಧ್ಯಕ್ಷರನ್ನು ನೇಮಿಸಲೂ ಆಗದೆ ಬಿಜೆಪಿ ಹೈಕಮಾಂಡ್‌ ತಿಣುಕಾಡುತ್ತಿದೆ. ಅಧ್ಯಕ್ಷರ ಆಯ್ಕೆಯನ್ನು ರಾಷ್ಟ್ರಾಧ್ಯಕ್ಷರ ನೇಮಕದಂತೆ ಮುಂದೂಡುತ್ತಲೇ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...