ಖಾಸಗಿ ಏಜೆನ್ಸಿಗಳಿಂದ ರಷ್ಯಾದ ಸೇನೆಗೆ ನೇಮಕಗೊಂಡಿರುವ ಭಾರತೀಯ ಯುವಕರನ್ನು ಸುರಕ್ಷಿತವಾಗಿ ಮರಳಿ ಕರೆ ತರುವಂತೆ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಕೋರಿ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಸೋಮವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
“ಯುದ್ಧ ವಲಯದಲ್ಲಿ ಸಿಲುಕಿರುವ ಕೇರಳದ ಮೂವರು ಯುವಕರು ಸುರಕ್ಷಿತವಾಗಿ ಮರಳುವಂತೆ ಮಾಡಲು ಕ್ರಮ ಕೈಗೊಳ್ಳಬೇಕು. ಮಾನವ ಕಳ್ಳಸಾಗಣೆ ಜಾಲದ ಭಾಗವಾಗಿರುವ ನೇಮಕಾತಿ ಏಜೆನ್ಸಿಗಳ ವಿರುದ್ಧ ತನಿಖೆ ನಡೆಸಬೇಕು” ಎಂದು ಕಾಂಗ್ರೆಸ್ ನಾಯಕ ಪತ್ರದಲ್ಲಿ ಒತ್ತಾಯಿಸಿದ್ದಾರೆ.
“ಕೇರಳದ ಕೆಲವು ಖಾಸಗಿ ನೇಮಕಾತಿ ಕಂಪನಿಗಳು ರಷ್ಯಾದಲ್ಲಿ ಲಾಭದಾಯಕ ಉದ್ಯೋಗಾವಕಾಶಗಳನ್ನು ನೀಡುವುದಾಗಿ ಆಮಿಷವೊಡ್ಡಿ, ಯುದ್ಧ ಪೀಡಿತ ಉಕ್ರೇನ್‌ಗೆ ಕಳುಹಿಸಲು ಯುವಕರನ್ನು ಬಹಿರಂಗವಾಗಿ ನೇಮಕ ಮಾಡಿಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ” ಎಂದು ಸತೀಶನ್ ಹೇಳಿದರು.
“ರಷ್ಯಾದಲ್ಲಿ ಲಾಭದಾಯಕ ಉದ್ಯೋಗದ ಭರವಸೆಯ ಆಮಿಷಕ್ಕೆ ಒಳಗಾಗಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವವರಲ್ಲಿ ಕೇರಳದ ಮೂವರು ಯುವಕರೂ ಸೇರಿದ್ದಾರೆಂಬುದನ್ನು ತಿಳಿದು ಆತಂಕವಾಗಿದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ನೇಮಕಾತಿ ಏಜೆನ್ಸಿಯು 2.5 ಲಕ್ಷ ಸಂಬಳ ನೀಡುವುದಾಗಿ ಭರವಸೆ ನೀಡಿ, ಕೇರಳದ ಯುವಕರನ್ನು ರಷ್ಯಾಕ್ಕೆ ಕರೆದೊಯ್ದಿರುವುದಾಗಿ ಅವರ ಸಂಬಂಧಿಕರು ತಿಳಿಸಿದ್ದಾರೆ” ಎಂದು ವಿ ಡಿ ಸತೀಶನ್ ಪತ್ರದಲ್ಲಿ ತಿಳಿಸಿದ್ದಾರೆ.
“ಯುವಕರು ರಷ್ಯಾಕ್ಕೆ ತೆರಳಿದ ವೇಳೆ ಅವರ ಪಾಸ್‌ಪೋರ್ಟ್ ಮತ್ತು ಮೊಬೈಲ್ ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಉಕ್ರೇನ್ ವಿರುದ್ಧ ರಷ್ಯಾಕ್ಕಾಗಿ ಹೋರಾಡಲು ಒತ್ತಾಯಿಸಿದ್ದಾರೆ. ಅವರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಯುವಕರ ಸುರಕ್ಷತೆಯ ಬಗ್ಗೆ ಆತಂಕವಿದೆ” ಎಂದು ಸತೀಶನ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿಗೆ ಈಗಲೂ ಕೇಜ್ರಿವಾಲ್ ಬಹಳ ಅಪಾಯಕಾರಿ: ಸಂಸದ ಸಂಜಯ್ ರಾವತ್
“ರಷ್ಯಾದಲ್ಲಿ ಕೆಲಸ ಮಾಡಲು ಯುವಕರನ್ನು ಪ್ರೇರೇಪಿಸಿದ್ದು, ಬಳಿಕ ಅವರನ್ನು ಯುದ್ಧಕ್ಕೆ ಕಳುಹಿಸುವ ಕಳ್ಳಸಾಗಣೆ ಜಾಲದ ಭಾಗವಾಗಿದೆ” ಎಂದು ಕಾಂಗ್ರೆಸ್ ನಾಯಕ ಸತೀಶನ್ ಆರೋಪಿಸಿದ್ದಾರೆ.





