ಕೇರಳದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಗ್ರಾಮ ಪಂಚಾಯತಿಯ ಆಡಳಿತ ರಚನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕೌನ್ಸಿಲರ್‌ಗಳು ಪರಸ್ಪರರೊಂದಿಗೆ ಕೈ ಜೋಡಿಸಿದ್ದಾರೆ. ಈ ಬೆಳವಣಿಗೆ ಕೇರಳದ ತ್ರಿಶೂರ್ ಜಿಲ್ಲೆಯ ಮತ್ತತ್ತೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಮತ್ತತ್ತೂರು ಗ್ರಾಮ ಪಂಚಾಯತಿಯ ಅಧ್ಯಕ್ಷರ ನೇಮಕದಲ್ಲಿ ಬಿಜೆಪಿ ಜೊತೆ ಕಾಂಗ್ರೆಸ್ ಕೌನ್ಸಿಲರ್‌ಗಳು ಕೈ ಜೋಡಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಟೆಸ್ಸಿ ಜೋಸ್ ಕಲ್ಲರಕ್ಕಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಮತ್ತತ್ತೂರು ಗ್ರಾಮ ಪಂಚಾಯತಿಯ ಒಟ್ಟು 24 ಸ್ಥಾನಗಳಲ್ಲಿ, ಯುಡಿಎಫ್ 8, ಎಲ್‌ಡಿಎಫ್ 10 ಹಾಗೂ ಎನ್‌ಡಿಎ 4 ಸ್ಥಾನಗಳನ್ನು ಗೆದ್ದಿದ್ದವು. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಇಬ್ಬರು ಸ್ವತಂತ್ರ ಕೌನ್ಸಿಲರ್‌ಗಳಲ್ಲಿ ಒಬ್ಬರಾದ ಔಸೆಫ್ ಎಂಬವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಎಲ್‌ಡಿಎಫ್ ನೇಮಿಸಿದರೆ, ಮತ್ತೊಬ್ಬ ಸ್ವತಂತ್ರ ಕೌನ್ಸಿಲರ್ ಟೆಸ್ಸಿ ಅವರನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಣಕ್ಕಿಸಿತ್ತು.
ಯುಡಿಎಫ್ ಬೆಂಬಲದೊಂದಿಗೆ ಕಣದಲ್ಲಿದ್ದ ಟೆಸ್ಸಿ ಅವರಿಗೆ ಯುಡಿಎಫ್‌ನ 8 ಮತ್ತು ಎನ್‌ಡಿಎ (ಬಿಜೆಪಿ) 4 ಮತಗಳು ಚಲಾವಣೆಯಾಗಿದ್ದು, ಟೆಸ್ಸಿ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್-ಬಿಜೆಪಿ ಪರಸ್ಪರ ಕೈ ಜೋಡಿಸಿವೆ.
ಇನ್ನು, 8 ಮಂದಿ ಕೌನ್ಸಿಲರ್‌ಗಳು ಕಾಂಗ್ರೆಸ್‌ಗೆ ರಾಜೀನಾಮೆ ಕೂಡ ನೀಡಿದ್ದಾರೆ. “ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕತ್ವವು ಆಂತರಿಕ ವಿವಾದಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಅಭ್ಯರ್ಥಿಗ: ಆಯ್ಕೆ ಹಂತದಿಂದಲೇ ಸಮಸ್ಯೆಗಳು ಎದುರಾಗಿದ್ದವು. ಫಲಿತಾಂಶಗಳು ಘೋಷಣೆಯಾದ ಬಳಿಕ ಬಿಕ್ಕಟ್ಟು ಮತ್ತಷ್ಟು ಮುನ್ನೆಲೆ ಬಂದಿತ್ತು. ಆದರೂ, ಸ್ಥಳೀಯ ನಾಯಕತ್ವದಿಂದ ಯಾವುದೇ ಸ್ಪಂದನೆ ದೊರೆತಿಲ್ಲ” ಎಂದು ರಾಜೀನಾಮೆ ನೀಡಿದ ಕಾಂಗ್ರೆಸ್ ಕೌನ್ಸಿಲರ್‌ಗಳಲ್ಲಿ ಒಬ್ಬರಾದ ಲಿಂಟೊ ಪಲ್ಲಿಪರಂಬಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರ ರಾಜೀನಾಮೆಗಳನ್ನು ಕಾಂಗ್ರೆಸ್ ಅಂಗೀಕರಿಸಿಲ್ಲ. ಅವರ ಮನವೊಲಿಸುವ ಪ್ರಯತ್ನದಲ್ಲಿದೆ. ಅಲ್ಲದೆ, ತ್ರಿಶೂರ್ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ ಎಂ ಚಂದ್ರನ್ ಮತ್ತು ಮಂಡಲ ಅಧ್ಯಕ್ಷ ಶಫಿ ಕಲ್ಲುಪರಂಬಿಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಹೇಳಿದ್ದಾರೆ.




