ಹೊಸದಾಗಿ ಉದ್ಘಾಟನೆಗೊಂಡ ಎರ್ನಾಕುಲಂನಿಂದ ಬೆಂಗಳೂರು ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಹಾಡು ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಈ ಬಗ್ಗೆ ಕೇರಳ ಸರ್ಕಾರ ತನಿಖೆಗೆ ಆದೇಶಿಸಿದೆ.
ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು, ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ (ಡಿಪಿಐ) ಸೂಚಿಸಿದ್ದಾರೆ. ಸರ್ಕಾರ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಶಿವನ್‌ಕುಟ್ಟಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಡಿ ಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕು: ಬಿ ಕೆ ಹರಿಪ್ರಸಾದ್ ಆಗ್ರಹ
“ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ರಾಜಕೀಯಕ್ಕೆ ಬಳಸುವುದು ಮತ್ತು ಯಾವುದೇ ನಿರ್ದಿಷ್ಟ ಗುಂಪಿನ ಕೋಮು ಭಾವನೆ ಉತ್ತೇಜಿಸಲು ಮಕ್ಕಳನ್ನು ಬಳಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ. ತನಿಖೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದೂ ಶಿವನ್‌ಕುಟ್ಟಿ ತಿಳಿಸಿದ್ದಾರೆ.
“ದೇಶದ ಜಾತ್ಯತೀತ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಸರ್ಕಾರಕ್ಕಿದೆ. ಈ ತತ್ವಗಳನ್ನು ರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.
ಆದಾಗ್ಯೂ, ಹೊಸದಾಗಿ ಉದ್ಘಾಟಿಸಲಾದ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡುವುದನ್ನು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಸಚಿವ ಸುರೇಶ್ ಗೋಪಿ ಭಾನುವಾರ ಸಮರ್ಥಿಸಿಕೊಂಡರು. “ಆ ಸಮಯದಲ್ಲಿ ಮಕ್ಕಳು ಆ ಹಾಡನ್ನು ಹಾಡಲು ಬಯಸಿದ್ದರು. ಏನಾದರೂ ಇದು ಉಗ್ರಗಾಮಿ ಕೃತ್ಯವಲ್ಲ” ಎಂದಿದ್ದಾರೆ. ಗೋಪಿ ಹೇಳಿಕೆ ತೀವ್ರ ಟೀಕೆಗೆ ಒಳಗಾಗುತ್ತಿದೆ.
“ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸಂಸ್ಥೆಯಾದ ರೈಲ್ವೆಯನ್ನು ಸಂಘ ಪರಿವಾರವು ತಮ್ಮ ಕೋಮು ರಾಜಕೀಯ ಪ್ರಚಾರಕ್ಕಾಗಿ ಬಳಸುತ್ತಿರುವುದು ಒಪ್ಪಲಾಗದು. ಧಾರ್ಮಿಕ ವಿರೋಧಿ ದ್ವೇಷ ಮತ್ತು ಕೋಮು ವಿಭಜಕ ರಾಜಕೀಯವನ್ನು ನಿರಂತರವಾಗಿ ಹರಡುವ ಆರ್‌ಎಸ್‌ಎಸ್ ಗೀತೆಯನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಹಾಡುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
The students of Saraswathi Vidyalaya beautifully performed their school song during the inaugural run of the Ernakulam–Bengaluru Vande Bharat Express pic.twitter.com/uvauXy9e6k
— Southern Railway (@GMSRailway) November 8, 2025
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. “ಸರ್ಕಾರಿ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡುವಂತೆ ಮಾಡುವುದು ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಉತ್ತರ ಭಾರತದಂತೆ ಕೇರಳದಲ್ಲಿ ವಿಭಜನೆಯ ರಾಜಕೀಯವನ್ನು ತರಲು ಬಿಜೆಪಿ ಪ್ರಯತ್ನಿಸುತ್ತಿದೆ” ಎಂದು ದೂರಿದರು.
ಈ ವಿಡಿಯೋ ಪೋಸ್ಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದಕ್ಷಿಣ ರೈಲ್ವೆ ವಿಡಿಯೋವನ್ನು ಡಿಲೀಟ್ ಮಾಡಿದೆ. ಆದರೆ ಬಳಿಕ ದಕ್ಷಿಣ ರೈಲ್ವೆ ಮತ್ತೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ವಿಡಿಯೋ ಹಾಕಿ ಅದರ ಇಂಗ್ಲಿಷ್ ಅನುವಾದವನ್ನೂ ಪೋಸ್ಟ್ ಮಾಡಿದೆ. “ಎರ್ನಾಕುಲಂ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ಸಮಯದಲ್ಲಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಶಾಲೆಯ ಗೀತೆಯನ್ನು ಸುಂದರವಾಗಿ ಹಾಡಿದರು” ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ. ಆರ್‌ಎಸ್‌ಎಸ್ ಗೀತೆ ಶಾಲೆಯ ಗೀತೆಯಾಗಿದ್ದು ಯಾವಾಗ ಎಂದು ಸದ್ಯ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.





