ದಕ್ಷಿಣ ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಸಿ ಜೆ ರಾಯ್ ಶುಕ್ರವಾರ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಕೇರಳ ಸಂಸದ, ಸಿಪಿಐ(ಎಂ) ಮುಖಂಡ ಎಎ ರಹೀಮ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರಹೀಮ್ ಉದ್ಯಮಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. “ತನಿಖೆ ನಡೆಸಿ ಈ ಘಟನೆಯ ಹಿಂದಿರುವ ನೈಜ ಸಂಗತಿಯನ್ನು ಬಹಿರಂಗಪಡಿಸಬೇಕು. ಕೇಂದ್ರ ಸಂಸ್ಥೆಗಳು ಬಳಸಿದ ಒತ್ತಡ ತಂತ್ರಗಳಿಗೆ ರಾಯ್ ಬಲಿಯಾಗಿದ್ದಾರೆಯೇ ಎಂಬುದನ್ನೂ ಸಹ ತನಿಖೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? BREAKING NEWS | ಐಟಿ ದಾಳಿಗೆ ಹೆದರಿ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ. ಸಿ ಜೆ ರಾಯ್ ಆತ್ಮಹತ್ಯೆ
ಇನ್ನು ಸೂಪರ್‌ಸ್ಟಾರ್, ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್‌ಲಾಲ್ ಸಹ ಉದ್ಯಮಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ನನ್ನ ಆತ್ಮೀಯ ಗೆಳೆಯ ಸಿಜೆ ರಾಯ್ ಅವರ ಸಾವು ಅನಿರೀಕ್ಷಿತ. ನನಗೆ ತೀವ್ರ ನೋವುಂಟಾಗಿದೆ. ಅವರ ಕುಟುಂಬಕ್ಕೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಅವರು ನನಗೆ ಸ್ನೇಹಿತನಿಗಿಂತ ಹೆಚ್ಚು. ಎಂದಿಗೂ ಪ್ರೀತಿಯಿಂದ ಅವರನ್ನು ಸ್ಮರಿಸುತ್ತೇನೆ” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಮೋಹನ್ ಲಾಲ್ ಸಿ ಜೆ ರಾಯ್ ನಿರ್ಮಾಣ ಮಾಡಿರುವ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶುಕ್ರವಾರ ಆದಾಯ ತೆರಿಗೆ (ಐಟಿ) ದಾಳಿ ನಡೆಯುತ್ತಿದ್ದಾಗ ರಾಯ್ ಬೆಂಗಳೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಯ್ ಮೂಲತಃ ಕೇರಳದವರಾಗಿದ್ದಾರೆ. ಇನ್ನು ಕೇಂದ್ರ ಸಂಸ್ಥೆಯ ಒತ್ತಡದಿಂದಾಗಿ ರಾಯ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ರಾಯ್ ಅವರ ಸಹೋದರ ಬಾಬು ಆರೋಪಿಸಿದ್ದಾರೆ.





