ಕಡು ಬಡತನವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡುವ ವಿಷಯದಲ್ಲಿ ಕೇರಳ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾದ ಬಳಿಕ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಕೇರಳ ಶೀಘ್ರ ಕಡು ಬಡತನ ಮುಕ್ತ ರಾಜ್ಯವಾಗಲಿದೆ ಎಂದು ಕೇರಳ ಸರ್ಕಾರ ಹೇಳಿದೆ.
ಕೇರಳದಲ್ಲಿ ಅತ್ಯಂತ ಬಡತನದ ಸ್ಥಿತಿಯಲ್ಲಿ ವಾಸಿಸುತ್ತಿರುವ 64,006 ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರವು ಆಹಾರ, ಆರೋಗ್ಯ ರಕ್ಷಣೆ, ಜೀವನೋಪಾಯದ ಮೂಲ ಮತ್ತು ಸುರಕ್ಷಿತ ವಸತಿಯ ನಿರಂತರ ಪೂರೈಕೆಯನ್ನು ಮಾಡುತ್ತಿದೆ. ನವೆಂಬರ್ 1ರಂದು ರಾಜ್ಯ ರಚನೆಯ ದಿನದಂದು ಕೇರಳ ದೇಶದ ಮೊದಲ ‘ಕಡು ಬಡತನ ಮುಕ್ತ ರಾಜ್ಯ’ ಎಂದು ಘೋಷಿಸಲು ಸಜ್ಜಾಗಿದೆ.
ಇದನ್ನು ಓದಿದ್ದೀರಾ? ಹೆಸರಾಯಿತು ಕರ್ನಾಟಕ, ಹಸಿರಾಯಿತೆ ಬದುಕು?
“ಈಗಿನ ಎಲ್‌ಡಿಎಫ್ ಸರ್ಕಾರದ ಮೊದಲ ಸಚಿವ ಸಂಪುಟವು ತೆಗೆದುಕೊಂಡ ಮೊದಲ ನಿರ್ಧಾರ ತೀವ್ರ ಬಡತನ ನಿರ್ಮೂಲನಾ ಯೋಜನೆ (EPEP) ಆಗಿದೆ. ತೀವ್ರ ಬಡತನವನ್ನು ನಿರ್ಮೂಲನೆ ಮಾಡುವ ಐದು ವರ್ಷಗಳ ಯೋಜನೆಯಾಗಿ ಇದನ್ನು ರೂಪಿಸಲಾಗಿತ್ತು. ಈಗ ನಾವು ನಮ್ಮ ಗುರಿಯ ಶೇ.100ರಷ್ಟು ಸಾಧಿಸಿದ್ದೇವೆ” ಎಂದು ಪಿಟಿಐಗೆ ಕೇರಳ ಗ್ರಾಮೀಣಾಭಿವೃದ್ಧಿ ಸಚಿವ ಎಂಬಿ ರಾಜೇಶ್ ಹೇಳಿದ್ದಾರೆ.
“ರಾಜ್ಯಾದ್ಯಂತ ನಡೆಸಿದ ಸಮೀಕ್ಷೆಯ ಮೂಲಕ ಅತ್ಯಂತ ಬಡವರೆಂದು ಗುರುತಿಸಲ್ಪಟ್ಟ 1,03,099 ವ್ಯಕ್ತಿಗಳನ್ನು ಒಳಗೊಂಡ 64,006 ಕುಟುಂಬಗಳಿಗೆ ಆಹಾರ, ಆರೋಗ್ಯ, ಶಿಕ್ಷಣ, ಜೀವನೋಪಾಯ ಉತ್ತಮಗೊಳಿಸಲಾಗಿದೆ. ಯೋಜನೆಯನ್ನು ರೂಪಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿವಿಧ ಇಲಾಖೆಗಳ ಕಾರ್ಯಾಚರಣೆಗಳನ್ನು ಪ್ರತಿ ಹಂತದಲ್ಲೂ ಪರಿಶೀಲಿಸಿದರು” ಎಂದು ಸಚಿವರು ಹೇಳಿದ್ದಾರೆ.
“ಅಸ್ತಿತ್ವದಲ್ಲಿರುವ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ತಿಳಿದಿಲ್ಲದ ಅಥವಾ ಅವುಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು ತಿಳಿದಿಲ್ಲದ ಅಲೆಮಾರಿಗಳು ಸೇರಿದಂತೆ ಸಮಾಜದ ಅತ್ಯಂತ ಅಂಚಿನಲ್ಲಿರುವ ಮತ್ತು ದುರ್ಬಲ ವರ್ಗಗಳನ್ನು ಗುರುತಿಸಲಾಗಿದೆ. ಈ ಯೋಜನೆಯಡಿಯಲ್ಲಿ ಒಳಗೊಳ್ಳಿಸಲಾಗಿದೆ” ಎಂದೂ ಸಚಿವರು ಹೇಳಿದ್ದಾರೆ.
“ಪ್ರತಿ ಕುಟುಂಬದ ಅಗತ್ಯಗಳಿಗೆ ಅನುಗುಣವಾಗಿ ಮೈಕ್ರೋಪ್ಲಾನ್‌ಗಳನ್ನು ಸಿದ್ಧಪಡಿಸಲಾಗಿದೆ. ಕೆಲವು ಕುಟುಂಬಗಳಿಗೆ ವೈದ್ಯಕೀಯ ಆರೈಕೆಯೇ ಆದ್ಯತೆ. ಇನ್ನು ಕೆಲವರಿಗೆ ಆಹಾರ. ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಮತ್ತು ಆದಾಯದ ಅಗತ್ಯವಿದೆ. ಆಸ್ಪತ್ರೆಗಳಿಗೆ ಹೋಗಲು ಸಹಾಯ ಕೇಳಿದ ವ್ಯಕ್ತಿಗಳು ಸಹ ಇದ್ದರು” ಎಂದು ಸಚಿವರು ವಿವರಿಸಿದ್ದಾರೆ.





